ಅಶ್ಲೀಲ ವೀಡಿಯೋಗಳು ಬಹಿರಂಗವಾಗಿರುವುದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಸ್ಟರ್ ಮೈಂಡ್ ಎಂಬುದು ಜಗಜ್ಜಾಹೀರಾಗಿದೆ. ಮಹಿಳೆಯರ ಮಾನ ಹರಾಜಾಗಿ ರಾಜ್ಯ ತಲೆತಗ್ಗಿಸುವಂತಾಗಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದರು.
ರಾಮನಗರ (ಮೇ.09): ಅಶ್ಲೀಲ ವೀಡಿಯೋಗಳು ಬಹಿರಂಗವಾಗಿರುವುದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಸ್ಟರ್ ಮೈಂಡ್ ಎಂಬುದು ಜಗಜ್ಜಾಹೀರಾಗಿದೆ. ಮಹಿಳೆಯರ ಮಾನ ಹರಾಜಾಗಿ ರಾಜ್ಯ ತಲೆತಗ್ಗಿಸುವಂತಾಗಿದೆ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆಗ್ರಹಿಸಿದರು. ನಗರದ ಐಜೂರು ವೃತ್ತದಲ್ಲಿ ಪೆನ್ ಡ್ರೈವ್ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಡಿಸಿಎಂ ರಾಜೀನಾಮೆಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈಗ ಡಿ.ಕೆ.ಶಿವಕುಮಾರ್ ಅವರ ನಿಜ ಬಣ್ಣ ಬಯಲಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣ ವೈಯಕ್ತಿಕವಾದ್ದದ್ದು, ಆದರೂ ಅದನ್ನು ಯಾರು ಸಮರ್ಥಿಸಿಕೊಳ್ಳುವುದಿಲ್ಲ. ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರು ಪ್ರಜ್ವಲ್ ಪರವಹಿಸಿ ಮಾತನಾಡಿಲ್ಲ. ಆತನ ಕೃತ್ಯ ಖಂಡನೀಯ. ಆದರೆ ಖಾಸಗಿ ವಿಚಾರವನ್ನು ಬಹಿರಂಗಗೊಳಿಸಿ ಹೆಣ್ಣು ಮಕ್ಕಳ ಮರ್ಯಾದೆ ತೆಗೆದಿದ್ದಾರೆ. ಹೀಗೆ ಅಶ್ಲೀಲ ವೀಡಿಯೋಗಳನ್ನು ಬಹಿರಂಗ ಮಾಡಿ ದೇವೇಗೌಡರು, ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡಲು ಹೋಗಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ ಎಂದು ಡಿಕೆಶಿ ವಿರುದ್ದ ಹರಿಹಾಯ್ದರು.
ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ಒಪ್ಪಿಸಿ: ಆರಗ ಜ್ಞಾನೇಂದ್ರ ಒತ್ತಾಯ
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ದೇವೇಗೌಡರ ಕುಟುಂಬ ರಾಜಕೀಯವಾಗಿ ಪ್ರಬಲವಾಗುತ್ತಿದೆ. ಹೀಗಾಗಿ ಅವರ ಮುಖಕ್ಕೆ ಮಸಿ ಬಳಿಯುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ಈ ಷಡ್ಯಂತ್ರ ರೂಪಿಸಿದ್ದಾರೆ. ರಮೇಶ್ ಜಾರಕಿ ಹೊಳಿ, ಈಶ್ವರಪ್ಪ ಅವರ ಪ್ರಕರಣಗಳಲ್ಲು ಇವರ ಕೃತ್ಯ ಸಾಬೀತಾಗಿದೆ. ಇವರ ನಡವಳಿಕೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಗಂಭೀರವಾಗಿ ರಾಜಕಾರಣ ಮಾಡಬೇಕು. ಆದರೆ, ಡಿಕೆ ಸಹೋದರರು ಅಡ್ಡ ಕಸುಬು ಮಾಡಿಕೊಂಡು ಬಂದವರು. ಈ ಹಿಂದೆ ಕನಕಪುರದಲ್ಲಿ ಸಿನಿಮಾ ತೋರಿಸಿರುವ ವೃತ್ತಿಯನ್ನು ಈಗಲೂ ಮುಂದುವರೆಸುತ್ತಿದ್ದಾರೆ ಎಂದು ಟೀಕಿಸಿದರು.
ದೇವರಾಜೇಗೌಡರನ್ನು ತಾವು ಸಂಪರ್ಕಿಸಿದಾಗ, ಅವರ ಪ್ರಕಾರ ದೇವೇಗೌಡ ಮತ್ತು ಜೆಡಿಎಸ್ ಬಗ್ಗೆ ಸುಮಾರು 2 ಗಂಟೆ ಡಿ.ಕೆ.ಶಿವಕುಮಾರ್ ಮಾತನಾಡಿರುವ ಆಡಿಯೋ ಇದೆ ಎಂದು ಗೊತ್ತಾಗಿದೆ. ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಆಡಿಯೋವನ್ನು ಸಿಬಿಐಗೆ ಕೊಡುವುದಾಗಿ, ಆಗ ಸಿದ್ದರಾಮಯ್ಯ ಸರ್ಕಾರ ಉರುಳುತ್ತದೆ ಎಂದು ದೇವರಾಜೇಗೌಡರು ತಿಳಿಸಿದ್ದಾರೆ ಎಂದರು. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಡಿ.ಕೆ.ಸಹೋದರರ ಹಣೆ ಬರಹ ಗೊತ್ತಾಗಿದೆ. ಅವರೆ, ತೋಡಿದ ಗುಂಡಿಯಲ್ಲಿ ಅವರೇ ಬಿದ್ದಿದ್ದಾರೆ.
ದೇವೇಗೌಡರ ಕುಟುಂಬದ ಮೇಲಿನ ಹಗೆತನಕ್ಕೆ ಖಾಸಗಿ ವೀಡಿಯೋಗಳನ್ನು ಬಟಾಬಯಲು ಮಾಡಿ ಇಡೀ ರಾಜ್ಯ, ದೇಶವೇ ತಲೆತಗ್ಗಿಸುವಂತೆ ಮಾಡಿದ್ದಾರೆ. ಡಿಕೆಶಿ ಅವರ ಬಗ್ಗೆ ಜನ ಅಸಹ್ಯ ಪಡುತ್ತಿದ್ದಾರೆ. ಡಿಕೆಶಿ ಅವರಿಗೆ ಆತ್ಮಸಾಕ್ಷಿ ಇದ್ದರೆ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅವರಿಗೆ ಬೇಕಾದಂತೆ ತನಿಖೆ ಮಾಡಿಸುತ್ತಿದ್ದಾರೆ. ಹಾಗಾಗಿ ನ್ಯಾಯಂಗ ತನಿಖೆ ಅಥವಾ ಸಿಬಿಐ ತನಿಖೆ ಮಾಡುವಂತೆ ನಾವು ಕೂಡ ಆಗ್ರಹಿತ್ತಿದ್ದೇವೆ ಎಂದು ಹೇಳಿದರು.
ದೇಶದ ಸಂವಿಧಾನ ಅರಿಯದೇ ವರ್ತಿಸುವ ಪ್ರಧಾನಿ ಮೋದಿ: ಸಚಿವ ಮಹದೇವಪ್ಪ
ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಮಾತನಾಡಿ, ಡಿ.ಕೆ.ಶಿವಕುಮಾರ್ ಅಶ್ಲೀಲ ವೀಡಿಯೋಗಳನ್ನು ಬಹಿರಂಗ ಮಾಡಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ವೀಡಿಯೋಗಳನ್ನು ಹೊಂದಿದ್ದ ಪ್ರಜ್ವಲ್ ಕಾರು ಚಾಲಕ ಕಾರ್ತಿಕ್, ಖಾಸಗಿ ವಾಹಿನಿಗೆ ಸಿಕ್ಕಿದ್ದಾನೆ. ಎಸ್‌ಐಟಿಗೆ ಸಿಗುವುದಿಲ್ಲವೇ. ಅಶ್ಲೀಲ ವೀಡಿಯೋಗಳ ಬಹಿರಂಗ ವಿಚಾರದಲ್ಲಿ ಡಿಕೆಶಿ ಅವರ ಪಾತ್ರವಿದೆ. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರನ್ನು ಡಿಸಿಎಂ ಸ್ಥಾನದಿಂದ ತೆಗೆಯಬೇಕು ಎಂದರು.