ದಕ್ಷಿಣಕ್ಕೆ ಬರುವಂತೆ ಪ್ರಿಯಾಂಕ ಗಾಂಧಿಗೆ ಆಹ್ವಾನ: ಡಿ.ಕೆ.ಶಿವಕುಮಾರ್‌

By Girish GoudarFirst Published May 20, 2022, 6:57 AM IST
Highlights

*   ಉತ್ತರ ಭಾರತ ರೀತಿ ದಕ್ಷಿಣದಲ್ಲೂ ಚುನಾವಣೆ ಹೋರಾಟಕ್ಕೆ ಮನವಿ
*  ಇದರಿಂದ ಕಾಂಗ್ರೆಸ್‌ಗೆ ಅನುಕೂಲ
*  ರಾಜ್ಯಸಭೆ ಹೈಕಮಾಂಡ್‌ ನಿರ್ಧಾರ
 

ಬೆಂಗಳೂರು(ಮೇ.20): ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಉತ್ತರ ಭಾರತದ ಚುನಾವಣೆಗಳಲ್ಲಿ ಪಕ್ಷದ ಪರ ತುಂಬಾ ಹೋರಾಟ ಮಾಡಿದ್ದಾರೆ. ಹೀಗಾಗಿ ದಕ್ಷಿಣ ಭಾಗದಲ್ಲೂ ಕೂಡ ಅವರ ಗಮನ ಹರಿಸಿದರೆ ನಮ್ಮ ಚುನಾವಣೆಗಳಿಗೆ ಅನುಕೂಲವಾಗುತ್ತದೆ ಎಂದು ಕೇಳಿದ್ದೇವೆ. ಆದರೆ, ಇನ್ನೂ ಯಾವುದೇ ಚರ್ಚೆ, ತೀರ್ಮಾನ ಆಗಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯಸಭೆ ಚುನಾವಣೆಯಲ್ಲಿ ರಾಜ್ಯದಿಂದ ಸ್ಪರ್ಧಿಸಲು ಆಹ್ವಾನ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ‘ಆ ಥರ ಏನೂ ಇಲ್ಲ. ಇತ್ತೀಚೆಗೆ ಉತ್ತರ ಭಾರತದ ಚುನಾವಣೆಗಳಲ್ಲಿ ಅವರು ನಡೆಸಿರುವ ಹೋರಾಟವನ್ನು ನೋಡಿದ್ದೇವೆ. ಅದೇ ರೀತಿ ದಕ್ಷಿಣದಲ್ಲೂ ಗಮನ ಹರಿಸಬೇಕು ಎಂದು ನಾವೆಲ್ಲಾ ಕೇಳಿಕೊಂಡಿದ್ದೇವೆ. ನಾವು ಪ್ರಸ್ತಾಪವನ್ನಿಟ್ಟಿದ್ದು, ಇನ್ನೂ ಯಾವುದೇ ಚರ್ಚೆ, ತೀರ್ಮಾನ ಆಗಿಲ್ಲ’ ಎಂದಷ್ಟೇ ಹೇಳಿದರು.
‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ?’ ಎಂಬ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಹಾಗೂ ಶಾಸಕಾಂಗ ಪಕ್ಷದ ನಾಯಕರು ಒಂದು ಸುತ್ತಿನ ಮಾತುಕತೆ ನಡೆಸಿದ್ದು, ನಾನು ಮಂಗಳೂರಿನಿಂದ ವಾಪಸು ಬಂದ ಬಳಿಕ ಇನ್ನೊಂದು ಸುತ್ತು ಚರ್ಚೆ ಮಾಡುತ್ತೇವೆ. ನಮಗೆ ಕೇವಲ 2 ಸ್ಥಾನಗಳಿಗೆ ಮಾತ್ರ ಅವಕಾಶವಿದ್ದು, ಆಯ್ಕೆಗಳೂ ತುಂಬಾ ಕಡಿಮೆ ಇವೆ. ಹೀಗಾಗಿ ಪಕ್ಷಕ್ಕೆ ಅನುಕೂಲವಾಗುವ ರೀತಿಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.

ಪ್ರಿಯಾಂಕ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಿದರೆ ಸ್ವಾಗತ: ಶೋಭಾ ಕರಂದ್ಲಾಜೆ

ರಾಜ್ಯಸಭೆ ಹೈಕಮಾಂಡ್‌ ನಿರ್ಧಾರ:

ರಾಜ್ಯಸಭೆ ಚುನಾವಣೆ ಸಂಬಂಧ ಕೇಳಿದ ಪ್ರಶ್ನೆಗೆ, ರಾಜ್ಯಸಭೆ ವಿಚಾರದಲ್ಲಿ ನಮ್ಮಲ್ಲಿ ಒಂದು ಪದ್ಧತಿ ಇದೆ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಕೇಂದ್ರ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದನ್ನು ಪಾಲಿಸುತ್ತೇವೆ. ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಪಕ್ಷ ಯಾವ ತೀರ್ಮಾನ ಮಾಡುತ್ತದೆಯೋ ಅವರನ್ನು ಅಂತಿಮಗೊಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
 

click me!