
ಬೆಂಗಳೂರು (ಆ.09): ಸಚಿವರು ಹಾಗೂ ಶಾಸಕರ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಕೂಡ ಗೃಹ ಕಚೇರಿ ಕೃಷ್ಣಾದಲ್ಲಿ ಸರಣಿ ಸಭೆಗಳನ್ನು ನಡೆಸಿದ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಕಾಂಗ್ರೆಸ್ ಶಾಸಕರು ಹಾಗೂ ಸಚಿವರ ಜೊತೆ ಬ್ರೇಕ್ ಫಾಸ್ಟ್ ಸಭೆ ನಡೆಸಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಕುಮಾರಕೃಪ ಅತಿಥಿ ಗೃಹದಲ್ಲಿ ಮಂಗಳವಾರ ಬೆಳಗ್ಗೆ ಬೆಂಗಳೂರು ಸಚಿವ, ಶಾಸಕರ ಬ್ರೇಕ್ ಫಾಸ್ಟ್ ಸಭೆ ಆಯೋಜಿಸಿದ್ದರು.
ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹಮದ್, ಬೈರತಿ ಸುರೇಶ್, ರಾಮಲಿಂಗರೆಡ್ಡಿ, ದಿನೇಶ್ ಗುಂಡೂರಾವ್, ಶಾಸಕರಾದ ರಿಜ್ವಾನ್ ಅರ್ಷದ್, ಶರತ್ ಬಚ್ಚೇಗೌಡ ಮತ್ತಿತರರು ಭಾಗಿಯಾಗಿದ್ದರು. ಸಭೆಯಲ್ಲಿ ಪ್ರಮುಖವಾಗಿ ಬಿಬಿಎಂಪಿ ಚುನಾವಣೆ, ಬ್ರ್ಯಾಂಡ್ ಬೆಂಗಳೂರು ನಿರ್ಮಾಣ, ಬೆಂಗಳೂರು ರಸ್ತೆ ಮೂಲಸೌಕರ್ಯ ಅಭಿವೃದ್ಧಿ ವಿವಿಧೆಡೆ ಸುರಂಗ ರಸ್ತೆಗಳ ನಿರ್ಮಾಣ, 150 ಕಿ.ಮೀ. ಉದ್ದದ ಸುರಂಗ ರಸ್ತೆ, ಫ್ಲೈಓವರ್‌ಗಳ ನಿರ್ಮಾಣದ ಬಗ್ಗೆ ಸಾರ್ವಜನಿಕವಾಗಿ ಬಂದಿರುವ ಸಲಹೆಗಳು, ಈ ಸಂಬಂಧ ಕೇಂದ್ರ ಸರ್ಕಾರದೊಂದಿಗೆ ಆಗಿರುವ ಚರ್ಚೆ, ಮಾಸ್ಟರ್ ಪ್ಲಾನ್ ತಯಾರಿ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ.
ಬಿಬಿಎಂಪಿ ಕಾಮಗಾರಿ ಬಿಲ್ ಪಾವತಿಗೆ ಕಮಿಷನ್: ಸಿಎಂಗೆ ದೂರು
ಸಭೆ ಬಳಿಕ ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರು ನಗರದ ರಸ್ತೆ ಮೂಲಸೌಕರ್ಯ ಹೇಗೆ ಅಭಿವೃದ್ಧಿಪಡಿಸುವುದು ಎಂಬ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಈ ವಿಚಾರವಾಗಿ ಸರ್ಕಾರ ಸಾರ್ವಜನಿಕವಾಗಿ ಸಲಹೆಗಳನ್ನು ಆಹ್ವಾನಿಸಿತ್ತು. ಶಾಲಾ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಇದನ್ನು ವರ್ಗೀಕರಣ ಮಾಡಿ ಕೊಡಲು ಕೆಲ ಸಂಸ್ಥೆಗಳಿಗೆ ವಹಿಸಿದ್ದೇವೆ ಎಂದು ತಿಳಿಸಿದರು.
ನಗರ ರಸ್ತೆ ಅಭಿವೃದ್ಧಿಗೆ ಪ್ಲಾನ್ ಸಿದ್ಧಪಡಿಸಲು ಕೇಂದ್ರ ಸಲಹೆ: ನಗರದ ರಸ್ತೆ ಮೂಲಸೌಕರ್ಯದ ವಿಚಾರವಾಗಿ ಕೇಂದ್ರದ ಭೂ ಸಾರಿಗೆ ಸಚಿವರನ್ನೂ ಭೇಟಿಯಾಗಿ ಚರ್ಚಿಸಲಾಗಿದೆ. ತುಮಕೂರು, ಬಳ್ಳಾರಿ, ಹೊಸೂರು, ಮೈಸೂರು ಹೆದ್ದಾರಿಗಳನ್ನು ತಂದು ಬೆಂಗಳೂರು ನಗರಕ್ಕೆ ನಾಲ್ಕೂ ದಿಕ್ಕುಗಳಿಂದ ಸಂಪರ್ಕಿಸಿ ಬಿಡಲಾಗಿದೆ. ಇದರಿಂದ ನಗರದಲ್ಲಿ ಹೆಚ್ಚಾಗುತ್ತಿರುವ ತೀವ್ರವಾದ ವಾಹನ ದಟ್ಟಣೆ ಕಡಿಮೆ ಮಾಡಲು ಯೋಜನೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರವೂ ಗಮನ ಹರಿಸಬೇಕು ಮನವಿ ಮಾಡಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಆ ಪ್ರಕಾರ, ಸಂಚಾರ ದಟ್ಟಣೆ ಕಡಿಮೆ ಮಾಡಲು ಕೆಲ ಭಾಗಗಳಿಗೆ ಯೋಜನೆಗಳಿವೆ, ಇನ್ನು ಕೆಲವೆಡೆಗೆ ಯೋಜನೆಗಳು ಆಗಬೇಕಿದೆ.
ಬಿಜೆಪಿ ಅವಧಿಯ ಬಿಬಿಎಂಪಿ ಕಾಮಗಾರಿ ತನಿಖೆಗೆ ರಾಜ್ಯ ಸರ್ಕಾರ ಆದೇಶ
ಹಾಗಾಗಿ ಎಲ್ಲ ಕಡೆಗೂ ಪ್ಲಾನ್ ಸಿದ್ಧಪಡಿಸಿಕೊಂಡು ಬರಲು ಕೇಂದ್ರ ಸರ್ಕಾರದವರು ಹೇಳಿದ್ದಾರೆ. ಅವರು ನಗರದಲ್ಲಿ 150 ಕಿ.ಮೀ. ಸುರಂಗ ರಸ್ತೆ ನಿರ್ಮಾಣ, ಫ್ಲೈ ಓವರ್‌ಗಳ ನಿರ್ಮಾಣಕ್ಕೆ ಸಲಹೆ ನೀಡಿದ್ದಾರೆ. ನಾವೂ ಕೆಲ ಸಲಹೆಗಳನ್ನು ನೀಡಿದ್ದೇವೆ. ಈ ಬಗ್ಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿಕೊಂಡು ಬರಲು ಸೂಚಿಸಿದ್ದಾರೆ. ಸುರಂಗ ರಸ್ತೆ ಕನಿಷ್ಠ ಎರಡು ವಾಹನ ಓಡಾಡುವಷ್ಟಿರಬೇಕು. ಈ ಬಗ್ಗೆ ಅಧ್ಯಯನ ಮಾಡಿ ವರದಿ ನೀಡಲು ಗ್ಲೋಬರ್ ಟೆಂಡರ್ ಕರೆದಿದ್ದೇವೆ. ವರದಿ ನೀಡಲು ಕೆಲ ಸಂಸ್ಥೆಗಳು ಮುಂದೆ ಬರುತ್ತಿವೆ. ಈ ಎಲ್ಲವುಗಳ ಬಗ್ಗೆ ನಗರದ ಸಚಿವ, ಶಾಸಕರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.