ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಯ ಬಾಕಿ ಬಿಲ್ ಪಾವತಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರ ಹೆಸರಿನಲ್ಲಿ (ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ) ಶೇ.10ರಿಂದ 15ರಷ್ಟು ಕಮಿಶನ್ ಕೇಳಲಾಗುತ್ತಿದೆ.
ಬೆಂಗಳೂರು: ‘ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಯ ಬಾಕಿ ಬಿಲ್ ಪಾವತಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರ ಹೆಸರಿನಲ್ಲಿ (ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ) ಶೇ.10ರಿಂದ 15ರಷ್ಟುಕಮಿಶನ್ ಕೇಳಲಾಗುತ್ತಿದೆ. ಕಳೆದ 28 ತಿಂಗಳಿನಿಂದ ಬಾಕಿ ಬಿಲ್ ಪಾವತಿ ಮಾಡಿಲ್ಲ. ಈ ಬಗ್ಗೆ ಹಣ ಬಿಡುಗಡೆಗೆ ಸರ್ಕಾರಕ್ಕೆ ಸೂಚಿಸಿ ಇಲ್ಲವೇ, ದಯಾಮರಣಕ್ಕೆ ಅವಕಾಶ ನೀಡಿ’ ಎಂದು ‘ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ’ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ. ಮಂಗಳವಾರ ಸಂಘದ ಅಧ್ಯಕ್ಷ ಕೆ.ಟಿ.ಮಂಜುನಾಥ್ ನೇತೃತ್ವದಲ್ಲಿ ಪದಾಧಿಕಾರಿಗಳು ರಾಜಭವನಕ್ಕೆ ತೆರಳಿ ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲೇನಿದೆ?: ‘ನಗರದಲ್ಲಿ 750ಕ್ಕೂ ಅಧಿಕ ಗುತ್ತಿಗೆದಾರರು ರಸ್ತೆ, ಕಾಲುವೆ ಕಾಮಗಾರಿ ಸೇರಿದಂತೆ ವಿವಿಧ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಆದರೆ ಈ ಕಾಮಗಾರಿಗಳಿಗೆ ಬಿಬಿಎಂಪಿ ಬಿಲ್ ಪಾವತಿ ಮಾಡುತ್ತಿಲ್ಲ. ಯಾವುದೇ ಕಾಮಗಾರಿ ನಿರ್ವಹಿಸಿದ 60 ದಿನಗಳಲ್ಲಿ ಬಿಲ್ ಪಾವತಿ ಮಾಡಬೇಕು ಎಂಬ ನಿಯಮವಿದೆ. ಆದರೆ, ಬಿಬಿಎಂಪಿಯಲ್ಲಿ ಕಳೆದ 2 ವರ್ಷಕ್ಕಿಂತ ಹೆಚ್ಚು ಕಾಲದಿಂದ ನಮಗೆ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿಗೆ ಕೋರಿಕೆ ಸಲ್ಲಿಸಿದರೆ ತಿರಸ್ಕರಿಸಲಾಗುತ್ತಿದೆ. ಬಿಲ್ ಪಾವತಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರ ಪರವಾಗಿ ಶೇ.10ರಿಂದ 15ರಷ್ಟುಕಮಿಷನ್ ಕೇಳುತ್ತಿದ್ದಾರೆ ಎಂದು ಕೆಲವು ಗುತ್ತಿಗೆದಾರರಿಂದ ಸಂಘಕ್ಕೆ ಮಾಹಿತಿ ಬಂದಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆ ಶೀಘ್ರ ಅನುಷ್ಠಾನಗೊಳಿಸಿ: ಸಚಿವ ನಾರಾಯಣಸ್ವಾಮಿ
‘ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ವಹಿಸುತ್ತಿರುವ ವಿಶೇಷ ಯೋಜನೆಗಳು, ನಗರೋತ್ಥಾನ, ನವ ನಗರೋತ್ಥಾನ ಕಾಮಗಾರಿಗಳಿಗಾಗಿ 1,500 ಕೋಟಿ ರು. ಇಡಲಾಗಿತ್ತು. ಇದರಲ್ಲಿ 675 ಕೋಟಿ ರು. ಪ್ರಥಮ ಕಂತಿನಲ್ಲಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಗುವುದು ಎಂದು ವಿಶೇಷ ಆಯುಕ್ತರು ತಿಳಿಸಿದ್ದರು. ಆದರೆ, ಈಗ ಬಿಡುಗಡೆ ಮಾಡಲು ಹಿಂದೇಟು ಹಾಕಲಾಗುತ್ತಿದೆ. ರಾಜಕೀಯ ಒತ್ತಡಗಳಿಗೆ ಬಿಬಿಎಂಪಿ ಅಧಿಕಾರಿಗಳು ಮಣಿದು ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಪಾವತಿ ಮಾಡುತ್ತಿಲ್ಲ. ಕಾಮಗಾರಿಗಳಿಗಾಗಿ ಸಾಲ ಮಾಡಲಾಗಿದ್ದು, ಅದನ್ನು ತೀರಿಸಲು ಸಾಧ್ಯವಾಗುತ್ತಿಲ್ಲ’ ಎಂದು ಮನವಿಯಲ್ಲಿ ತಿಳಿಸಲಾಗಿದೆ.
‘ಗುತ್ತಿಗೆ ಕಾಮಗಾರಿಗಾಗಿ ಸರ್ಕಾರದ ಅನುದಾನ 3 ಸಾವಿರ ಕೋಟಿ ರು., ಬಿಬಿಎಂಪಿ ಅನುದಾನ 2,500 ಕೋಟಿ ರು. ಬಿಲ್ ಪಾವತಿ ಮಾಡದೆ ಸ್ಥಗಿತ ಮಾಡಲಾಗಿದೆ. ಕಳಪೆ ಕಾಮಗಾರಿ ಎಂದು ಯಾವುದೇ ಕಾಮಗಾರಿಯ ಬಿಲ್‌ಗಳನ್ನು ಪಾವತಿ ಮಾಡುತ್ತಿಲ್ಲ. ಪ್ರಾಮಾಣಿಕವಾಗಿ ಆಗಿರುವ ಕಾಮಗಾರಿಗಳಿಗಾದರೂ ಬಿಲ್ ನೀಡುವಂತೆ ಕೋರಿದರೂ ಅದಕ್ಕೂ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ನಮ್ಮ ಮುಂದೆ ಇರುವುದು ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಮಾತ್ರ ಉಳಿದಿದೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರದಿಂದ ಬಾಕಿ ಬಿಲ್ ಪಾವತಿ ಮಾಡುವಂತೆ ಸೂಚನೆ ನೀಡಬೇಕು. ಇಲ್ಲವಾದಲ್ಲಿ ನಮಗೆ ದಯಾಮರಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.
ತ್ವರಿತವಾಗಿ ಹಣ ಬಿಡುಗಡೆ: ಬಿಬಿಎಂಪಿ ಗುತ್ತಿಗೆದಾರರಿಗೆ ಕಾಮಗಾರಿಯ ಬಾಕಿ ಹಣವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಾಲಿಕೆ ಮುಖ್ಯ ಆಯುಕ್ತರೊಂದಿಗೆ ಚರ್ಚಿಸಿ ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.ಬಾಕಿ ಹಣ ಬಿಡುಗಡೆ ಸಂಬಂಧ ಮಂಗಳವಾರ ತಮ್ಮನ್ನು ಭೇಟಿಯಾದ ‘ಬಿಬಿಎಂಪಿಯ ಗುತ್ತಿಗೆದಾರರ ಸಂಘ’ದ ಪದಾಧಿಕಾರಿಗಳಿಗೆ ಅವರು ಈ ಆಶ್ವಾಸನೆ ನೀಡಿದ್ದಾರೆ.
ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕಳೆದ 28 ತಿಂಗಳಲ್ಲಿ ಕೈಗೊಂಡ ಕಾಮಗಾರಿಯ ಬಿಲ್ ಪಾವತಿ ಬಾಕಿ ಇದೆ. ಕಳೆದ 8 ತಿಂಗಳಿನಿಂದ ನಯಾಪೈಸೆ ಹಣ ಬಿಡುಗಡೆ ಆಗಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಮನವಿ ಮಾಡಿದರು. ಸಂಘದ ಕಾರ್ಯಾಧ್ಯಕ್ಷ ಜಿ.ಎಂ.ರವೀಂದ್ರ, ಪ್ರಧಾನ ಕಾರ್ಯದರ್ಶಿ ಜಿ.ಎಂ.ನಂದಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಗುತ್ತಿಗೆದಾರರ ಅಳಲು
- ಕಳೆದ 28 ತಿಂಗಳಿನಿಂದ ನಮಗೆ ಬಿಲ್ ಬಾಕಿ ಪಾವತಿ ಮಾಡಿಲ್ಲ
- ಹಣ ಕೇಳಿದರೆ 10-15% ಕಮಿಷನ್ ಕೊಡಿ ಎಂದು ಕೇಳುತ್ತಾರೆ
- ಬೆಂಗಳೂರು ನಗರಾಭಿವೃದ್ಧಿ ಸಚಿವರ ಹೆಸರಲ್ಲಿ ಹಣ ಕೇಳುತ್ತಾರೆ
- ನಮಗೆ ಬಾಕಿ ಕೊಡಿಸಿ, ಇಲ್ಲಾ ದಯಾಮರಣಕ್ಕೆ ಅನುಮತಿ ನೀಡಿ
- ಸಾಲ ಮಾಡಿ ಕಾಮಗಾರಿ ನಡೆಸಿದ್ದೇವೆ, ಈಗ ತೀರಿಸಲು ಆಗುತ್ತಿಲ್ಲ
ನಿರ್ದೇಶಕ ಟಿ.ಎಸ್.ನಾಗಾಭರಣಗೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್!
ಬಿಬಿಎಂಪಿ, ಬಿಡಿಎನಲ್ಲಿ ಕೆಲಸಗಳಾಗಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆ ಮಾಡಿಸಲಾಗುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ