ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ: ಸಿದ್ದರಾಮಯ್ಯ

By Kannadaprabha NewsFirst Published Mar 17, 2023, 11:40 PM IST
Highlights

ಕರ್ನಾಟಕ ಗಡಿಭಾಗದ 865 ಹಳ್ಳಿಗಳ ಜನತೆಗೆ ಆರೋಗ್ಯ ಯೋಜನೆ ಜಾರಿಗೊಳಿಸಲು ತೀರ್ಮಾನಿಸುವ ಮೂಲಕ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. 

ಬೆಳಗಾವಿ (ಮಾ.17): ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರದಲ್ಲಿ ಮಹಾಜನ ವರದಿಯೇ ಅಂತಿಮ. ಕರ್ನಾಟಕ ಗಡಿಭಾಗದ 865 ಹಳ್ಳಿಗಳ ಜನತೆಗೆ ಆರೋಗ್ಯ ಯೋಜನೆ ಜಾರಿಗೊಳಿಸಲು ತೀರ್ಮಾನಿಸುವ ಮೂಲಕ ಸಂವಿಧಾನಾತ್ಮಕ ಬಿಕ್ಕಟ್ಟು ಸೃಷ್ಟಿಸುತ್ತಿರುವ ಮಹಾರಾಷ್ಟ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. 

ನಗರದ ಕಾಂಗ್ರೆಸ್‌ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರ ಈಗಾಗಲೇ ಕರ್ನಾಟಕ ಗಡಿಭಾಗದ 865 ಹಳ್ಳಿಗಳ ಜನತೆಗೆ ಆರೋಗ್ಯ ಯೋಜನೆ ಘೋಷಣೆ ಮಾಡಿ, . 54 ಕೋಟಿ ಬಿಡುಗಡೆ ಮಾಡಿದೆ. ಇನ್ನೊಂದು ರಾಜ್ಯದ ಜನತೆಗೆ ಇಂತಹ ಯೋಜನೆ ಬೇರೆ ರಾಜ್ಯ ಸರ್ಕಾರ ಮಾಡುವುದು ಸಂವಿಧಾನಾತ್ಮಕ ಬಿಕ್ಕಟ್ಟು ಮಾಡಲು ಹೊರಟಿದ್ದಾರೆ. ಒಂದು ಕಡೆ ಕನ್ನಡಿಗರ ಸ್ವಾಭಿಮಾನ ಕೆಣಕುತ್ತಿರುವುದು, ಇನ್ನೊಂದು ಕಡೆ ಕನ್ನಡಿಗರ ಸಾರ್ವಭೌಮತ್ವವನ್ನು ಕೆಣಕುತ್ತಿರುವುದು, ಒಕ್ಕೂಟದ ವ್ಯವಸ್ಥೆ ಬುಡಮೇಲೆ ಮಾಡಲು ಹೊರಟಿದ್ದಾರೆ. ಇದನ್ನು ನಾವು ಕಟುವಾಗಿ ಖಂಡಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾರಾಯಣಗೌಡ ನಮ್ಮ ಪಕ್ಷದ ಸೂಪರ್‌ ಸ್ಟಾರ್‌, ಅವರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಸಚಿವ ಅಶ್ವತ್ಥ ನಾರಾಯಣ

ಮಹಾರಾಷ್ಟ್ರ ಸರ್ಕಾರ ಅನಗತ್ಯವಾಗಿ ಕಾಲು ಕೆದರುವ ಕೆಲಸ ಮಾಡುತ್ತಿದೆ. ಇದೊಂದು ಷಡ್ಯಂತ್ರ. ಆರುವರೆ ಕೋಟಿ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸ ಮಾಡುತ್ತಿದೆ. ನಮ್ಮ ದೇಶದಲ್ಲಿ ಸ್ವಾತಂತ್ರ ಬಂದ ಮೇಲೆ ಭಾಷಾವಾರು ಪ್ರಾಂತ ವಿಂಗಡಣೆಯಾಗಿ ಭಾಷೆಗಳ ಆಧಾರದ ಮೇಲೆ ರಾಜ್ಯಗಳು ನಿರ್ಮಾಣವಾಗಿವೆ. ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಕ್ಯಾತೆ ತೆಗೆದು ಮಹಾಜನ ಆಯೋಗವನ್ನು ನೇಮಕ ಮಾಡಿತು. ಮಹಾಜನ ವರದಿ ಕೂಡ ಬಂದಿದೆ. ಅದೇ ಅಂತಿಮ ಎಂದು ನಾವು ಒಪ್ಪಿಕೊಂಡಿದ್ದೇವೆ. ಮಹಾಜನ ಅವರು ಮಹಾರಾಷ್ಟ್ರದಲ್ಲಿ ನ್ಯಾಯಮೂರ್ತಿಯಾಗಿದ್ದು. ಮಹಾಜನ ವರದಿ ಕೊಟ್ಟಮೇಲೆಯೂ ಮಹಾರಾಷ್ಟ್ರ ಇದನ್ನು ಒಪ್ಪಿಕೊಳ್ಳಲಿಲ್ಲ. ನಮ್ಮ ಪ್ರಕಾರ ಕರ್ನಾಟಕಕ್ಕೆ ಅನ್ಯಾಯ ಆದರೂ ನಾವು ಆಯೋಗದ ವರದಿ ಒಪ್ಪಿಕೊಂಡಿದ್ದೇವೆ. ಅದೇ ಅಂತಿಮ ಎಂದರು.

ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ: ಕರ್ನಾಟಕ ಜನ ಮೌನವಾಗಿದ್ದಾರೆ, ಶಾಂತವಾಗಿದ್ದಾರೆ ಎಂದರೆ ಅದರ ಅರ್ಥ ವೀಕ್‌ ಆಗಿದ್ದೇವೆ ಅಂತಲ್ಲ. ಕನ್ನಡಿಗರು ನೆಲ, ಜಲ ಭಾಷೆ ರಕ್ಷಣೆ ಮಾಡಲು ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ಕೊಡಲು ಸಿದ್ಧರಿಲ್ಲ. ಒಂದು ರಾಜ್ಯದಲ್ಲಿ ಇನ್ನೊಂದು ರಾಜ್ಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಗಡಿಭಾಗದ ಜನರು ಶಾಂತಿ ನೆಮ್ಮದಿಯಿಂದ ಬದುಕಬೇಕು. ಗಡಿ ವಿವಾದ ಕೆದಕಬಾರದು. ಆದರೂ ಮಹಾರಾಷ್ಟ್ರ ಗಡಿ ವಿವಾದ ಸೃಷ್ಟಿಸಲು ಇಂತಹ ಯೋಜನೆ ಮಾಡುತ್ತಿದೆ. ಮಹಾರಾಷ್ಟ್ರ ಸರ್ಕಾರ ಇಷ್ಟೆಲ್ಲ ಯೋಜನೆ ಘೋಷಿಸಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡಿಗರ ರಕ್ಷಣೆ ಮಾಡುವಲ್ಲಿ, ಕರ್ನಾಟಕದ ಹಕ್ಕನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬೊಮ್ಮಾಯಿ ಈ ಬಗ್ಗೆ ಧ್ವನಿ ಎತ್ತಿಲ್ಲ. ಅದನ್ನು ತಡೆಗಟ್ಟುವ ಕೆಲಸ ಮಾಡಿಲ್ಲ. 

ರಾಜ್ಯದ ಸಿಎಂ ಆಗಿ ಕರ್ನಾಟಕದ ರಕ್ಷಣೆ ಮಾಡಲು ಆಗದಿದ್ದರೂ ಅಧಿಕಾರದಲ್ಲಿ ಏಕೆ ಇರಬೇಕು? ರಕ್ಷಣೆ ಮಾಡಲಾಗಿಲ್ಲ ಎಂದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದು ಒಬ್ಬ ವ್ಯಕ್ತಿ ಪ್ರಶ್ನೆಯಲ್ಲ. ಒಂದು ಜಿಲ್ಲೆ ಪ್ರಶ್ನೆಯಲ್ಲ. ಇಡೀ 6.5 ಕೋಟಿ ಕನ್ನಡಿಗರ ಪ್ರಶ್ನೆ. ಮಹಾರಾಷ್ಟ್ರ ಸರ್ಕಾರ ಕೂಡಲೇ ತನ್ನ ಕಾರ್ಯಕ್ರಮ ವಾಪಸ್‌ ಪಡೆಯಬೇಕು. ಒಕ್ಕೂಟ ವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಮಹಾರಾಷ್ಟ್ರದವರು ಬುದ್ಧಿ ಕಲಿಯುವುದಿಲ್ಲ ಎಂಬುದು ಗೊತ್ತಾಗಿದೆ. ಹಾಗಾಗಿ, ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವರು, ಪ್ರಧಾನ ಮಂತ್ರಿಯನ್ನು ಅವರು ಒತ್ತಾಯಿಸಿದರು.

ಮಹಾರಾಷ್ಟ್ರ ಷಡ್ಯಂತ್ರ ಮಾಡಿ 865 ಹಳ್ಳಿಗಳಲ್ಲಿ ಆರೋಗ್ಯ ಯೋಜನೆ ಘೋಷಣೆ ಮಾಡಿ .54 ಕೋಟಿ ಬಿಡುಗಡೆಗೆ ಮುಂದಾಗಿದೆ. ಮುಖ್ಯಮಂತ್ರಿ ಆದವರಿಗೆ ಜವಾಬ್ದಾರಿ ಇಲ್ಲವೇ? ಮಹಾರಾಷ್ಟ್ರ ಅನಗತ್ಯವಾಗಿ ಕಾಲು ಕೆದರುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಅಲ್ಲವೇ? ಕನ್ನಡಿಗರಿಗೆ ಅವಮಾನ ಅಲ್ಲವೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮುಖ್ಯಮಂತ್ರಿ ಬೊಮ್ಮಾಯಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕದಿದ್ದರೆ, ಮುಖ್ಯಮಂತ್ರಿ ಕುರ್ಚಿಯಲ್ಲಿರಲು ಅವರು ನಾಲಾಯಕರು ಎಂದರು.

ದೆಹಲಿಯಲ್ಲಿ ಮಂಡ್ಯ ಕಾಂಗ್ರೆಸ್‌ ಟಿಕೆಟ್‌ ಸರ್ಕಸ್‌: ಖರ್ಗೆ ಬೆಂಬಿಡದ ಮೂಲ ಕಾಂಗ್ರೆಸ್ಸಿಗರು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ನೆರೆ ರಾಜ್ಯದವರು ಕರ್ನಾಟಕದ ಜನತೆಗೆ ಆರೋಗ್ಯ ಯೋಜನೆ ಘೋಷಿಸಿ, ಕನ್ನಡಿಗರ ಸ್ವಾಭಿಮಾನ ಕೆದಕಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು. ಮಹಾರಾಷ್ಟ್ರ ಕ್ಯಾತೆ ತೆಗೆದಿರುವ ವಿಚಾರ ಸಣ್ಣ ವಿಷಯವಲ್ಲ. ರಾಜ್ಯದಲ್ಲಿ 26 ಸಂಸದರಿದ್ದಾರೆ. ಮಂತ್ರಿಗಳಿದ್ದಾರೆ, ಇವರಾರ‍ಯರೂ ಕರ್ನಾಟಕ, ಕನ್ನಡಿಗರ ಸ್ವಾಭಿಮಾನ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿಲ್ಲ. ಎಲ್ಲರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಎಂ.ಬಿ.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

click me!