ಬಿಜೆಪಿ ಸದಸ್ಯತ್ವ ಪಡೆದ ರೌಡಿಶೀಟರ್ ಸೈಲೆಂಟ್ ಸುನೀಲನಿಂದ ಮುಜುಗರ ಆಗುವುದನ್ನು ತಪ್ಪಿಸಿಕೊಳ್ಳಲು ಮುಂದಾದ ಬಿಜೆಪಿ, ಸುನೀಲನಿಗೂ ಪಕ್ಷಕ್ಕೂ ಸಂಬಂಧವಿಲ್ಲ. ಒಂದು ವೇಳೆ ಸದಸ್ಯತ್ವ ಪಡೆದಿದ್ದರೆ ರದ್ದುಗೊಳಿಸಲಾಗುವುದು ಎಂದು ತಿಳಿಸಿದೆ.
ಬೆಂಗಳೂರು (ಮಾ.18): ಬೆಂಗಳೂರಿನಲ್ಲಿ ಬಿಜೆಪಿ ಹಿರಿಯ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಿದ್ದ ಹಾಗೂ ಬಿಜೆಪಿ ಸದಸ್ಯತ್ವ ಪಡೆದ ಬಗ್ಗೆ ಫೋಟೋ ವೈರಲ್ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸೈಲೆಂಟ್ ಸುನೀಲನಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಸದಸ್ಯತ್ವ ಹೊಂದಿದ್ದರೂ ಅದನ್ನು ರದ್ದುಗೊಳಿಸಲಾಗುವುದು ಎಂದು ಬಿಜೆಪಿ ತಿಳಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಅವರು, ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಒಂದು ವೇಳೆ ಸೈಲೆಂಟ್ ಸುನಿಲ್, ಬಿಜೆಪಿ ಸದಸ್ಯತ್ವ ಪಡೆದಿದ್ದರೆ ಅದನ್ನು ರದ್ದು ಮಾಡಲಾಗುವುದು. ಅವರು ಪಕ್ಷದ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರೆ ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ ಬಿಜೆಪಿ ಮಾಧ್ಯಮ ವಿಭಾಗದ ಸಂಚಾಲಕ ಕರುಣಾಕರ ಖಾಸಲೆ ಅವರು ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಬಿಜೆಪಿ ಸೇರಿದ ರೌಡಿ ಶೀಟರ್ ಪರ ಸಿ.ಟಿ. ರವಿ ಬ್ಯಾಟಿಂಗ್; ರೌಡಿಗಳಿಗೆ ಕ್ಲೀನ್ ಸರ್ಟಿಫಿಕೇಟ್!
ಸಂಸದರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿ: ಕಳೆದ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಹಾಗೂ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರೊಂದಿಗೆ ರೌಡಿಶೀಟರ್ ಸೈಲೆಂಟ್ ಸುನೀಲ ವೇದಿಕೆ ಹಂಚಿಕೊಂಡಿದ್ದನು. ಅವರೊಂದಿಗೆ ಕಾರ್ಯಕ್ರಮದ ಉದ್ಘಾಟನೆ, ಭಾಷಣದಲ್ಲಿಯೂ ಬಿಜೆಪಿ ನಾಯಕರೊಂದಿಗೆ ಚರ್ಚೆ ಮಾಡಿರುವುದು ಕಂಡುಬಂದಿತ್ತು. ಇದರ ಬೆನ್ನಲ್ಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ವಿವಿಧ ಪಕ್ಷಗಳಿಂದ ಬಿಜೆಪಿ ವಿರುದ್ಧ ಭಾರೀ ಆಕ್ರೋಶ ಉಂಟಾಗಿತ್ತು.
ಬಿಜೆಪಿ ಸದಸ್ಯತ್ವದ ಫೋಟೋ ಹಂಚಿಕೊಂಡ ಸೈಲೆಂಟ್ ಸುನೀಲ್ : ರಾಜ್ಯದಲ್ಲಿ ಇತ್ತೀಚೆಗೆ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ರೌಡಿಶೀಟರ್ ಸೈಲೆಂಟ್ ಸುನೀಲ್ ಕೂಡ ಸದಸ್ಯತ್ವ ಪಡದುಕೊಮಡಿದ್ದನು. ಆನ್‌ಲೈನ್ ಸದಸ್ಯತ್ವ ಪಡೆದ ನಂತರ ಅದನ್ನು ಮೊಬೈಲ್ ನಲ್ಲಿ ಪ್ರದರ್ಶನ ಮಾಡುವ ಮೂಲಕ ತಾನು ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿದ್ದರು. ಜೊತೆಗೆ, ಹಲವು ಬಿಜೆಪಿ ಕಾರ್ಯಕರ್ತರೊಂದಿಗೆ ಕೇಸರಿ ಶಾಲನ್ನು ಹಾಕಿಕೊಂಡು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯವನ್ನೂ ಕೈಗೊಂಡಿದ್ದರು ಎಂದು ತಿಳಿದುಬಂದಿದೆ.
ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದ ರಾಜ್ಯಾಧ್ಯಕ್ಷ: ಬೆಂಗಳೂರಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ ಬಿಜೆಪಿಯ ದೊಡ್ಡ ನಾಯಕರನ್ನೇ ಆಹ್ವಾನಿಸಿ ರಾಷ್ಟ್ರೀಯ ಪಕ್ಷ ಬಿಜೆಪಿಯಿಂದ ರಾಜಕೀಯಕ್ಕೆ ಎಂಟ್ರಿ ಕೊಡಲು ಮುಂದಾಗಿದ್ದ ಸುನೀಲನಿಗೆ ಆರಂಭದಲ್ಲಿಯೇ ವಿಘ್ನ ಉಂಟಾಗಿತ್ತು. ಕಾಂಗ್ರೆಸ್ ಸೇರಿ ವಿಪಕ್ಷಗಳಿಂದ ಭಾರಿ ಟೀಕೆ ವ್ಕ್ತವಾದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಸೈಲೆಂಟ್ ಸುನೀಲ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಬೊಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದರು. ಜೊತೆಗೆ, ಬಿಜೆಪಿ ಎಂದಿಗೂ ಅಪರಾಧ ಹಿನ್ನಲೆಯುಳ್ಳವರ ಜೊತೆಗೆ ನಿಲ್ಲುವುದಿಲ್ಲ. ಸೈಲೆಂಟ್ ಸುನೀಲನ ಜೊತೆ ವೇದಿಕೆ ಹಂಚಿಕೊಂಡಿದ್ದ ವಿಚಾರವಾಗಿ ವರದಿ ಕೇಳಿದ್ದೇನೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಬಿಜೆಪಿ ಮೂಲಕ ರಾಜಕೀಯ ಎಂಟ್ರಿಗೆ ರೌಡಿ ಸೈಲೆಂಟ್ ಸುನೀಲ ಸಿದ್ಧತೆ? ಯಾವ ಕ್ಷೇತ್ರ?
ವಿರೋಧ ತಣ್ಣಗಾದ ನಂತರ ಪಕ್ಷ ಸೇರ್ಪಡೆ: ಆದರೆ, ಸಿಟಿ ರವಿ ಸೇರಿ ಕೆಲವು ನಾಯಕರು ರೌಡಿಶೀಟರ್‌ಗಳು ಪರಿವರ್ತನೆ ಆಗಲು ಅವಕಾಶವಿದೆ ಎಂದು ಹೇಳುವ ಮೂಲಕ ಪರ, ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ, ಈ ವಿಚಾರ ತಣ್ಣಗಾಗುವವರೆಗೂ ಕಾದಿದ್ದ ಸೈಲೆಂಟ್ ಸುನೀಲ್ ಸುಮಾರು 4 ತಿಂಗಳ ನಂತರ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಆತನನ್ನು ಪಕ್ಷದಿಂದ ಹೊರಗಿಡುವುದಕ್ಕೆ ಬಿಜೆಪಿ ಮುಂದಾಗಿದೆ.