ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ದರ್ಶನಕ್ಕಾಗಿ ಶಾಸಕರ ಶಿಫಾರಸು ಪತ್ರಗಳನ್ನು ಸ್ವೀಕರಿಸಿ ಅವಕಾಶ ನೀಡುವ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಚಿಂತನೆಯಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನ ಪರಿಷತ್ತು (ಮಾ.21): ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ದರ್ಶನಕ್ಕಾಗಿ ಶಾಸಕರ ಶಿಫಾರಸು ಪತ್ರಗಳನ್ನು ಸ್ವೀಕರಿಸಿ ಅವಕಾಶ ನೀಡುವ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿಯವರಿಗೆ ಮನವಿ ಮಾಡುವ ಚಿಂತನೆಯಿದ್ದು, ಈ ಬಗ್ಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಜೆಡಿಎಸ್ ಸದಸ್ಯ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟಿಟಿಡಿಯಲ್ಲಿ ವಿಶೇಷ ದರ್ಶನಕ್ಕೆ ತೆಲಂಗಾಣ ಶಾಸಕರ ಶಿಫಾರಸು ಪತ್ರ ಪರಿಗಣಿಸುವಂತೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೂಚಿಸಿರುವುದು ಗಮನಕ್ಕೆ ಬಂದಿದೆ. ಅಂತೆಯೇ ನಮ್ಮ ರಾಜ್ಯದ ಶಾಸಕರ ಶಿಫಾರಸು ಪತ್ರ ಸ್ವೀಕರಿಸಬೇಕೆನ್ನುವ ಶಾಸಕರ ಮನವಿ ಕುರಿತು ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದರು.
ಮೇನಲ್ಲಿ ತಿರುಮಲದ ಕರ್ನಾಟಕ ಭವನ ಕಾಮಗಾರಿ ಪೂರ್ಣ: ಆಂಧ್ರದ ತಿರುಮಲದಲ್ಲಿರುವ ರಾಜ್ಯ ಧಾರ್ಮಿಕ ದತ್ತಿಗೆ ಸೇರಿದ ಕರ್ನಾಟಕ ರಾಜ್ಯ ಭವನದ ನವೀಕರಣ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಮೇ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ತಿರುಮಲದ 7.5 ಎಕರೆ ಜಾಗದಲ್ಲಿ ಕರ್ನಾಟಕ ಭವನ ನಿರ್ಮಿಸಲಾಗಿದೆ. ಭವನದ ಹಳೆಬೀಡು, ಐಹೊಳೆ ಬ್ಲಾಕ್‌ನಲ್ಲಿ ಒಟ್ಟು 322 ಕೊಠಡಿಗಳಿದ್ದು, ನವೀಕರಣ ಕಾರ್ಯ ಮುಗಿದಿದೆ. ಶ್ರೀಕೃಷ್ಣದೇವರಾಯ ಬ್ಲಾಕ್ ನಲ್ಲಿ 36 ವಿವಿಐಪಿ ಕೊಠಡಿಗಳು ಹಾಗೂ ಶ್ರೀಕೃಷ್ಣರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪದ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಮೇ ತಿಂಗಳೊಳಗೆ ಪೂರ್ಣಗೊಳಲಿದೆ.
58 ಸಾವಿರ ಶಿಕ್ಷಕರ ಬಡ್ತಿಗೆ ಶೀಘ್ರ ತಿದ್ದುಪಡಿ: ಸಚಿವ ಮಧು ಬಂಗಾರಪ್ಪ
ಇದರಲ್ಲಿ ಶೇ. 60 ಕೊಠಡಿಗಳು ಇತರೆ ರಾಜ್ಯದವರಿಗೆ ಹಾಗೂ ಶೇ. 40 ನಮ್ಮ ರಾಜ್ಯದವರಿಗೆ ಮೀಸಲಿಟ್ಟಿದ್ದೇವೆ. ಛತ್ರ ಮತ್ತು 36 ಕೊಠಡಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇಲ್ಲಿ 4 ಸ್ಟಾರ್ ಹೊಟೇಲ್ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇದರ ನಿರ್ವಹಣೆಯನ್ನು ಅನುಭವಿ ಗುತ್ತಿಗೆದಾರರಿಗೆ ನೀಡಲಾಗುವುದು. ಸಿಬ್ಬಂದಿಗೆ ಸಮವಸ್ತ್ರ ಧರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು. ವಾರಾಣಸಿಯಲ್ಲಿರುವ ಕರ್ನಾಟಕ ರಾಜ್ಯ ಅತಿಥಿಗೃಹ ಬಿದ್ದು ಹೋಗಿದ್ದು, ತಡೆಗೋಡೆ ಮತ್ತು ಹಳೆಯ ಕಟ್ಟಡ ತೆರವುಗೊಳಿಸಿ ಹೊಸದಾಗಿ ಅತಿಥಿ ಗೃಹ ನಿರ್ಮಿಸಲು ತೀರ್ಮಾನಿಸಲಾಗಿದೆ. ನಿರ್ಮಾಣ ಕಾಮಗಾರಿಗೆ ಒಟ್ಟಾರೆ 36 ಕೋಟಿ ರು. ಖರ್ಚಾಗುವ ಅಂದಾಜಿದೆ ಎಂದು ತಿಳಿಸಿದರು.