* ಯಡಿಯೂರಪ್ಪ ರಾಜೀನಾಮೆಗೆ ದಿಂಗಾಲೇಶ್ವರ ಸ್ವಾಮೀಜಿ ಆಕ್ರೋಶ
* ಬಿಜೆಪಿ ಹೈಕಮಾಂಡ್‌ಗೆ ಖಡಕ್ ಎಚ್ಚರಿಕೆ ಕೊಟ್ಟ ಶ್ರೀಗಳು
* ವೀರಶೈವ ಲಿಂಗಾಯತ ಸಮಾಜವನ್ನು ಬಿಜೆಪಿ ಒಡೆದಿದೆ ಎಂದ ಸ್ವಾಮೀಜಿ
ಬೆಂಗಳೂರು, (ಜು.26): ಬಿ.ಎಸ್.ಯಡಿಯೂರಪ್ಪ ರಾಜೀನಾಮೆಗೆ ಹಲವು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಮಠಾಧೀಶರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಬಿಎಸ್‌ವೈ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಬಾಳೆಹೊಸೂರು ದಿಂಗಾಲೇಶ್ವರ ಸ್ವಾಮೀಜಿ, ಅವರ ಕಣ್ಣೀರನ್ನು ನಾವು ಮಠಾಧೀಶರೆಲ್ಲ ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಇದು ಬಿಎಸ್‌ವೈ ಕಣ್ಣೀರಲ್ಲ, ಇದು ಕರುನಾಡಿನ ಕಣ್ಣೀರು. ಬಿಜೆಪಿ ಯಡಿಯೂರಪ್ಪ ಅವರ ಕಣ್ಣೀರಿನಲ್ಲಿ ತೇಲಿ ಹೋಗಲಿದೆ ಎಂದು ಭವಿಷ್ಯ ನುಡಿದರು.
'ಬಿಎಸ್‌ವೈ ಕೆಜೆಪಿ ಕಟ್ಟಿದಾಗಲೂ ಲಿಂಗಾಯತರು ಬಿಜೆಪಿಗೆ ಬೆಂಬಲಿಸಿದ್ರು, ಈಗ ಏನು ಸಮಸ್ಯೆ ಆಗಲ್ಲ'
ಬಿಜೆಪಿಯ ವರಿಷ್ಠರು ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪಗೆ ಬ್ಲ್ಯಾಕ್ಮೇಲ್ ಮಾಡಲಾಗಿದೆ. ಮುಂದಿನ 2 ವರ್ಷ ಬಿಎಸ್ವೈರನ್ನೇ ಸಿಎಂ ಮಾಡಬೇಕು. ಇಲ್ಲದಿದ್ದರೆ ಬಿಎಸ್‌ವೈ ಕಣ್ಣೀರಿನಲ್ಲಿ ಬಿಜೆಪಿ ತೇಲಿ ಹೋಗಲಿದೆ. ನಮ್ಮ ಸಮಾಜದ ಎಲ್ಲರೂ ಕಣ್ಣೀರು ಹಾಕುವಂತೆ ಮಾಡಲಾಗಿದೆ. ನಮಗೆ ಕಣ್ಣೀರು ಹಾಕಿಸಿದವರಿಗೆ ಮುಂದಿನ ದಿನಗಳಲ್ಲಿ ನಾವು ಕೂಡ ಕಣ್ಣೀರು ಹಾಕಿಸುತ್ತೇವೆ ಎಂದರು.
ಬಿಜೆಪಿಯನ್ನು ಮತ್ತೆ ಕಟ್ಟಿ ಬೆಳೆಸಲು ಆಗದಷ್ಟು ಕೆಟ್ಟ ಪರಿಸ್ಥಿತಿ ಬರಲಿದೆ. ಬಿಜೆಪಿಯ ಸಾಧನಾ ಸಮಾವೇಶ ವೇದನಾ ಸಮಾವೇಶ ಆಗಲಿದೆ ಎಂದು ಬೆಂಗಳೂರಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪಕ್ಷ ಹಿಂದೆ ನಮ್ಮ ಸಮಾಜವನ್ನು ಒಡೆಯುಲು ಪ್ರಯತ್ನ ಮಾಡಿತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇಂದು ವೀರಶೈವ ಲಿಂಗಾಯತ ಸಮಾಜವನ್ನು ಒಡೆದಿದೆ. ಯಡಿಯೂರಪ್ಪ ಅವರು ರಾಜಿನಾಮೆ ಕೊಟ್ಟಿಲ್ಲ, ರಾಜೀನಾಮೆ ಕೊಡಿಸುವ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.