ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು: ಸಚಿವ ದಿನೇಶ್‌ ಗುಂಡೂರಾವ್‌

Published : Jul 28, 2025, 09:29 AM ISTUpdated : Jul 29, 2025, 06:20 PM IST
Dinesh Gundurao

ಸಾರಾಂಶ

ದೇವಾಲಯಗಳಲ್ಲಿ ರಾಜಕೀಯ ದುರುದ್ದೇಶ ಈಡೇರಿಸಲು ಧಾರ್ಮಿಕತೆ ಬಳಕೆ ಮಾಡುವ ಕೆಲಸ ಆಗಬಾರದು ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸಲಹೆ ನೀಡಿದ್ದಾರೆ.

ಮಂಗಳೂರು (ಜು.28): ದೇವಾಲಯಗಳಲ್ಲಿ ಯಾವುದೇ ರೀತಿಯ ದುರ್ಬಳಕೆಗೆ ವ್ಯವಸ್ಥಾಪನಾ ಸಮಿತಿಗಳು ಅವಕಾಶ ನೀಡಬಾರದು. ಅದೇ ರೀತಿ ದೇವಾಲಯಗಳಲ್ಲಿ ರಾಜಕೀಯ ದುರುದ್ದೇಶ ಈಡೇರಿಸಲು ಧಾರ್ಮಿಕತೆ ಬಳಕೆ ಮಾಡುವ ಕೆಲಸ ಆಗಬಾರದು ಎಂದು ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಸಲಹೆ ನೀಡಿದ್ದಾರೆ. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ವತಿಯಿಂದ ನಗರದ ಪುರಭವನದಲ್ಲಿ ಶುಕ್ರವಾರ ದ.ಕ. ಜಿಲ್ಲೆಯ ಇಲಾಖಾ ವ್ಯಾಪ್ತಿಗೊಳಪಡುವ ದೇವಾಲಯಗಳ ವ್ಯವಸ್ಥಾಪನಾ ಸಮಿತಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ದೇವಾಲಯ ಎಲ್ಲರಿಗೂ ಸೇರಿದ್ದು. ಯಾರದ್ದೋ ವೈಯಕ್ತಿಕ ಸ್ವಾರ್ಥಗಳಿಗೆ ಬಳಕೆ ಆಗಬಾರದು. ದೇವಾಲಯಗಳು ಧಾರ್ಮಿಕ, ಸಾಮಾಜಿಕ ಹಿತದೃಷ್ಟಿಯಿಂದ ಬಳಕೆ ಆಗಬೇಕೇ ಹೊರತು, ರಾಜಕೀಯ ದುರುದ್ದೇಶಕ್ಕೆ ಬಳಕೆಯಾಗಬಾರದು. ಧಾರ್ಮಿಕತೆಯಲ್ಲಿ ರಾಜಕೀಯ ಸೇರಿಸುವುದು ಆಗಬಾರದು ಎಂದು ತಿಳಿಸಿದರು.

ಮಸೂದೆ ತಡೆಹಿಡಿದಿದ್ದಾರೆ: ಆದಾಯ ಹೆಚ್ಚಿರುವ ದೇವಾಲಯಗಳ ಆದಾಯದಲ್ಲಿ ಶೇ.5ರಿಂದ 10ರಷ್ಟನ್ನು ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಸಣ್ಣ ದೇವಾಲಯಗಳ ಅಭಿವೃದ್ಧಿಗೆ ಬಳಕೆ ಮಾಡುವುದು, ಅರ್ಚಕ ವರ್ಗದ ಕಲ್ಯಾಣ, ಅವರ ಮಕ್ಕಳಿಗೆ ಸ್ಕಾಲರ್‌ಶಿಪ್‌ ಇತ್ಯಾದಿ ವಿಚಾರಗಳನ್ನೊಳಗೊಂಡ ಮಸೂದೆಯನ್ನು ರಾಜ್ಯ ಸರ್ಕಾರ ಪಾಸ್‌ ಮಾಡಿದ್ದು, ಅದಕ್ಕೂ ವಿರೋಧ ಮಾಡಿ ಈಗ ಅನವಶ್ಯಕವಾಗಿ ತಡೆಹಿಡಿದಿದ್ದಾರೆ. ಈ ಮಸೂದೆ ಈಗ ರಾಷ್ಟ್ರಪತಿ ಬಳಿಯೇ ಇದೆ ಎಂದು ದಿನೇಶ್‌ ಗುಂಡೂರಾವ್‌ ಅಸಮಾಧಾನ ವ್ಯಕ್ತಪಡಿಸಿದರು.

ಅರ್ಚಕರ ತಸ್ತೀಕ್‌ ಏರಿಕೆ: ಅರ್ಚಕರ ವಾರ್ಷಿಕ ತಸ್ತೀಕ್‌ನ್ನು ಆರಂಭಿಸಿದ್ದು ಮಾಜಿ ಮುಖ್ಯಮಂತ್ರಿ ಗುಂಡೂರಾವ್‌. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ ವಾರ್ಷಿಕ 24 ಸಾವಿರ ರು. ಇದ್ದ ತಸ್ತೀಕ್‌ನ್ನು 36 ಸಾವಿರ ರು.ಗೆ ನಂತರ 48 ಸಾವಿರ ರು.ಗೆ ಏರಿಕೆ ಮಾಡಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಮ್ಮೆ ಮಾತ್ರ ಏರಿಕೆ ಮಾಡಿದ್ದರು. ಇದೀಗ ಮತ್ತೆ ಕಾಂಗ್ರೆಸ್‌ ಸರ್ಕಾರ ಕಳೆದ ವರ್ಷ ತಸ್ತೀಕ್‌ ಮೊತ್ತವನ್ನು 72 ಸಾವಿರ ರು.ಗೆ ಏರಿಕೆ ಮಾಡಿದೆ. ಆದರೆ ಕೆಲವು ಜನ ಹಾಗೂ ಸಂಘಟನೆಗಳು ಕಾಂಗ್ರೆಸ್‌ನ್ನು ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡುತ್ತಾರೆ ಎಂದು ಆಕ್ಷೇಪಿಸಿದರು.

ದೇವಾಲಯ ಹಣ ಸರ್ಕಾರಕ್ಕೂ ಹೋಗ್ತಿಲ್ಲ: ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ದೇವಾಲಯ ಅಂಗಳದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಯಾವ ಚಟುವಟಿಕೆಗಳೂ ನಡೆಯಕೂಡದು. ಪ್ರತಿ ಕ್ಷೇತ್ರದ ಧಾರ್ಮಿಕ ಪಾವಿತ್ರ್ಯತೆಯನ್ನು ಕಾಪಾಡುವ ಜವಾಬ್ದಾರಿ ವ್ಯವಸ್ಥಾಪನಾ ಸಮಿತಿಗಳ ಮೇಲಿದೆ ಎಂದು ಸಲಹೆ ನೀಡಿದರು.

ದೇವಾಲಯಗಳ ಹಣ ಇತರ ಉದ್ದೇಶಗಳಿಗೆ ಬಳಕೆ ಮಾಡಲಾಗುತ್ತಿದೆ ಎನ್ನುವುದು ಅಪ್ಪಟ ಸುಳ್ಳು. ದೇವಾಲಯದ ಹಣದಲ್ಲಿ ಒಂದು ಪೈಸೆ ಕೂಡ ಸರ್ಕಾರಕ್ಕೂ ಹೋಗುತ್ತಿಲ್ಲ. ಈ ಹಣ ಶೇ.100ರಷ್ಟು ದೇವಾಲಯಗಳಿಗೇ ಉಪಯೋಗವಾಗುತ್ತಿದೆ. ಈ ಕುರಿತು ದೇವಾಲಯಗಳಲ್ಲಿ ಫಲಕಗಳನ್ನು ಅಳವಡಿಸಿ ಜನರಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದು ಭಂಡಾರಿ ಹೇಳಿದರು.ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿದರು. ಧಾರ್ಮಿಕ ಪರಿಷತ್‌ ಜಿಲ್ಲಾ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರಾಘವ ಎಚ್‌. ಅವರು ವ್ಯವಸ್ಥಾಪನಾ ಸಮಿತಿಗಳ ಜವಾಬ್ದಾರಿಗಳ ಕುರಿತು ತಿಳಿಸಿದರು.

ಮಾಜಿ ಸಚಿವ ರಮಾನಾಥ ರೈ, ಮಾಜಿ ಎಂಎಲ್ಸಿ ಹರೀಶ್‌ ಕುಮಾರ್‌, ಗೇರು ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್‌, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ., ಜಿಪಂ ಸಿಇಒ ಡಾ.ನಾರ್ವಡೆ ವಿನಾಯಕ ಕರ್ಬಾರಿ, ಧಾರ್ಮಿಕ ದತ್ತಿ ಇಲಾಖೆ ಸದಸ್ಯೆ ಮಲ್ಲಿಕಾ ಪಕ್ಕಳ ಮತ್ತಿತರರು ಇದ್ದರು.

ಕುಕ್ಕೆ ದೇವಸ್ಥಾನ ನಂ.1: ರಾಜ್ಯದಲ್ಲಿ ಕಳೆದ ವರ್ಷ 155 ಕೋಟಿ ರು. ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಕೊಲ್ಲೂರು ದೇವಾಲಯವಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಆದಾಯ 35 ಕೋಟಿ ರು. ಇದ್ದರೆ, ಪೊಳಲಿ ದೇವಾಲಯ 9.50 ಕೋಟಿ ರು., ಸೌತಡ್ಕ ದೇವಾಲಯ 13 ಕೋಟಿ ರು., ಕದ್ರಿ ದೇವಾಲಯ 8.50 ಕೋಟಿ ರು., ಪುತ್ತೂರು ಮಹಾಲಿಂಗೇಶ್ವರ ದೇವಾಲಯ 7.50 ಕೋಟಿ ರು., ಮಂಗಳಾದೇವಿ ದೇವಾಲಯಕ್ಕೆ 4.50 ಕೋಟಿ ರು. ಆದಾಯ ಬಂದಿದೆ ಎಂದು ಬಪ್ಪನಾಡು ದೇವಾಲಯ ಸಿಇಒ ಶ್ವೇತಾ ಪಳ್ಳಿ ಸಭೆಗೆ ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!