
ಮಂಗಳೂರು (ಜು.28): ಪ್ರಧಾನಿ ಮೋದಿ ಭಾನುವಾರ ತಮ್ಮ ‘ಮನ್‌ಕೀ ಬಾತ್’ ಭಾಷಣದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಅತ್ಯಾಧುನಿಕ ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಸ್ತಾಪಿಸಿ ಶ್ಲಾಘನೆ ವ್ಯಕ್ತಪಡಿಸಿದ್ದು, ಇದೊಂದು ಮಾದರಿ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಪ್ರಸ್ತುತ ಮಂಗಳೂರು ಸೇರಿದಂತೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ಯಾಜ್ಯ ನಿರ್ವಹಣೆ ಅತ್ಯಾಧುನಿಕ ರೀತಿಯಲ್ಲಿ ನಡೆಯುತ್ತಿದೆ.
ಪ್ರಸ್ತುತ ದ.ಕ. ಜಿಲ್ಲಾ ಪಂಚಾಯ್ತಿ, ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ (ಎಂಆರ್‌ಎಂಪಿಎಲ್), ವೈಷ್ಣವಿ ಕಂಪನಿ ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಒಡ್ಡೂರು ಫಾರ್ಮ್ಸ್ ಸಂಸ್ಥೆಗಳಲ್ಲಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ. ಇವುಗಳನ್ನೆಲ್ಲ ಒಟ್ಟಾಗಿ ಸೇರಿಸಿ ಪ್ರಧಾನಿ ಮನ್‌ಕೀ ಬಾತ್‌ನಲ್ಲಿ ಮಂಗಳೂರು ತ್ಯಾಜ್ಯ ನಿರ್ವಹಣೆ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನುವುದು ಎಂಆರ್‌ಎಂಪಿಎಲ್ ಅಧ್ಯಕ್ಷ ದಿಲ್‌ರಾಜ್ ಆಳ್ವ ಅಭಿಪ್ರಾಯ.
ಜಿಪಂ ವತಿಯಿಂದ ನಾಲ್ಕು ಎಂಆರ್‌ಎಫ್ (ಮೆಟೀರಿಯಲ್ ರಿಕವರಿ ಫೆಸಿಲಿಟಿ) ಅಡಿಯಲ್ಲಿ ಎಂಆರ್‌ಎಂಪಿಎಲ್ ವತಿಯಿಂದ ಎಡಪದವು, ಕೆದಂಬಾಡಿ, ಬಂಟ್ವಾಳ ಹಾಗೂ ಉಡುಪಿ ಜಿಲ್ಲೆಯ ನಿಟ್ಟೆ, ವೈಷ್ಣವಿ ಕಂಪನಿಯಿಂದ ಉಜಿರೆ ತ್ಯಾಜ್ಯ ಘಟಕದ ನಿರ್ವಹಣೆ ನಡೆಯುತ್ತಿದೆ. ಇದಲ್ಲದೆ ಜಿ.ಪಂ. ಅಡಿಯಲ್ಲಿ ಎಲ್ಲ 250 ಹಳ್ಳಿಗಳಲ್ಲಿ ಕೂಡ ತ್ಯಾಜ್ಯ ವಿಲೇವಾರಿ ನಡೆಯುತ್ತದೆ. ಒಡ್ಡೂರು ಫಾರ್ಮ್‌ನಲ್ಲಿ ಹಸಿ ತ್ಯಾಜ್ಯ ಬಳಸಿ ಸಿಎಮನ್‌ಜಿ ಬಯೋ ಗ್ಯಾಸ್ ಉತ್ಪಾದಿಸಲಾಗುತ್ತಿದೆ.
ಎಂಆರ್‌ಎಂಪಿಎಲ್‌ನಿಂದ ಹಸಿ ತ್ಯಾಜ್ಯ ಹೊರತು ಪಡಿಸಿ ಬೇರೆ ಎಲ್ಲ ಒಣ ತ್ಯಾಜ್ಯಗಳನ್ನು ಮರು ಬಳಕೆ ಮಾಡುವ ಯೋಜನೆ ಕಾರ್ಯಗತಗೊಂಡಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಪ್ಲಾಸ್ಟಿಕ್ ಉತ್ಪನ್ನವನ್ನು ಬಳಸಿಕೊಂಡು ತಲಪಾಡಿಯಿಂದ ನಂತೂರು ಹಾಗೂ ಮುಕ್ಕದಿಂದ ಸಾಸ್ತಾನ ವರೆಗೆ ಹೆದ್ದಾರಿಯ ಸರ್ವಿಸ್ ರಸ್ತೆಗಳಿಗೆ ಡಾಂಬರೀಕರಣ ನಡೆಸಲಾಗಿದೆ. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿ ಇರಿಸಿಕೊಂಡೇ ಪ್ರಧಾನಿ ಮನ್‌ಕೀ ಬಾತ್‌ನಲ್ಲಿ ಮಂಗಳೂರಿನಲ್ಲಿ ಅತ್ಯಾಧುನಿಕ ತ್ಯಾಜ್ಯ ನಿರ್ವಹಣೆ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ.
ಕಲಬುರಗಿ, ಚಿತ್ರದುರ್ಗ ಕೋಟೆ ಸ್ಮರಿಸಿದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ಮನ್ ಕೀ ಬಾತ್ ರೇಡಿಯೋ ಭಾಷಣದಲ್ಲಿ ಕರ್ನಾಟಕದ ಕಲಬುರಗಿ ಕೋಟೆ (ಗುಲಬರ್ಗಾ ಕೋಟೆ) ಹಾಗೂ ಚಿತ್ರದುರ್ಗ ಕೋಟೆಯನ್ನು ಸ್ಮರಿಸಿದ್ದಾರೆ ಹಾಗೂ ಮಂಗಳೂರಿನ ತ್ಯಾಜ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಾತನಾಡಿದ ಅವರು, ‘ನಾವೆಲ್ಲರೂ ಹೆಮ್ಮೆ ಪಡುವಂತಹ ಮತ್ತೊಂದು ಸುದ್ದಿ ಯುನೆಸ್ಕೋದಿಂದ ಬಂದಿದೆ. 12 ಮರಾಠಾ ಕೋಟೆಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಿದೆ. ದೇಶದ ಇತರ ಭಾಗಗಳಲ್ಲಿಯೂ ಸಹ ಅಂತಹ ಅದ್ಭುತ ಕೋಟೆಗಳಿವೆ.
ದಾಳಿಗಳನ್ನು ಎದುರಿಸಿದರೂ, ಹವಾಮಾನ ವೈಪರೀತ್ಯಕ್ಕೆ ಒಳಗಾದರೂ ತಮ್ಮ ಸ್ವಾಭಿಮಾನವನ್ನು ಎಂದಿಗೂ ಕುಗ್ಗದಂತೆ ತಲೆ ಎತ್ತಿ ನಿಂತಿವೆ. ರಾಜಸ್ಥಾನದ ಚಿತ್ತೋರ್‌ಗಢ ಕೋಟೆ, ಕುಂಭಲ್‌ಗಢ ಕೋಟೆ, ರಣಥಂಬೋರ್ ಕೋಟೆ, ಆಮೇರ್ ಕೋಟೆ, ಅದರಲ್ಲೂ ಜೈಸಲ್ಮೇರ್ ಕೋಟೆ ವಿಶ್ವಪ್ರಸಿದ್ಧವಾಗಿವೆ. ಕರ್ನಾಟಕದ ಗುಲ್ಬರ್ಗ ಕೋಟೆ ಕೂಡ ತುಂಬಾ ದೊಡ್ಡದಾಗಿದೆ. ಚಿತ್ರದುರ್ಗ ಕೋಟೆಯ ವಿಶಾಲತೆಯು ಆ ಕಾಲದಲ್ಲಿ ಈ ಕೋಟೆಯನ್ನು ಹೇಗೆ ನಿರ್ಮಿಸಲಾಯಿತು ಎಂದು ನಿಮ್ಮಲ್ಲಿ ಕುತೂಹಲವನ್ನು ಕೆರಳಿಸುತ್ತದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.