ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ, ಎಲ್ಲಾ ಅಧಿಕಾರಿಗಳು ಇದ್ದಾರೆ. ಭ್ರಷ್ಟಾಚಾರ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಅಂತ ಸರ್ಕಾರದ ಕಡೆಯಿಂದ ನಿರ್ದೇಶನ ಹೋಗಿದೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಮಾ.03): ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ, ಎಲ್ಲಾ ಅಧಿಕಾರಿಗಳು ಇದ್ದಾರೆ. ಭ್ರಷ್ಟಾಚಾರ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಅಂತ ಸರ್ಕಾರದ ಕಡೆಯಿಂದ ನಿರ್ದೇಶನ ಹೋಗಿದೆ. ಹೀಗಾಗಿ ಪೂರ್ಣ ಮಾಹಿತಿಯೊಂದಿಗೆ ಲೋಕಾಯುಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುತ್ತದೆ. ಅದರ ಸತ್ಯಾಸತ್ಯತೆ ಹೊರ ಬರುತ್ತದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ. ಮಡಿಕೇರಿಯಲ್ಲಿ ನಡೆದ ಕಾರ್ಯಕರ್ತರ ಸಮ್ಮಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾತನಾಡಿದರು.
undefined
ಲೋಕಾಯುಕ್ತ ದಾಳಿ ಮಾಡಿದ್ದು ಕಾನೂನಿನಲ್ಲಿ ಏನು ಕ್ರಮ ಇದೆಯೋ ಅದನ್ನು ಕೈಗೊಳ್ಳುತ್ತದೆ ಎಂದಿದ್ದಾರೆ. ಇನ್ನು ಸರ್ಕಾರ 40 ಪರ್ಸೆಂಟ್ ಲಂಚ ಪಡೆಯುತ್ತದೆ ಎನ್ನುವುದಕ್ಕೆ ಸಾಕ್ಷ್ಯ ನೀಡಲಿ ಎಂದು ಹೇಳುತ್ತಿದ್ದ ಬಿಜೆಪಿಗೆ ಲೋಕಾಯುಕ್ತವೇ ಸಾಕ್ಷ್ಯ ನೀಡಿದೆ ಎಂದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕ ಕೆ.ಜಿ. ಬೋಪಯ್ಯ ತಿರುಗೇಟು ನೀಡಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ಡಿ.ಕೆ. ಶಿವಕುಮಾರ್‌ಗೆ ಯಾವ ನೈತಿಕತೆಯೂ ಇಲ್ಲ. ಭ್ರಷ್ಟಾಚಾರದಲ್ಲಿ ಡಿ.ಕೆ. ಶಿವಕುಮಾರ್ ಗಿನ್ನೀಸ್ ದಾಖಲೆ ಮಾಡಿದ್ದಾರೆ. ತಿಹಾರ್ ಜೈಲಿಗೆ ಹೋಗಿ ಬಂದವರು.
ಕಾಂಗ್ರೆಸ್ ಅಂದರೆ ಜಾತಿ ಮಧ್ಯೆ ಒಡೆದಾಳುವ ಪಕ್ಷ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಅವರು ಮೊದಲು ಅವರ ಮನೆಯನ್ನು ಸರಿಮಾಡಿಕೊಳ್ಳಲಿ, ನಂತರ ಬೇರೆಯವರ ಮನೆ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು. ಇದೇ ವಿಚಾರವಾಗಿ ಮಾತನಾಡಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭ್ರಷ್ಟಾಚಾರ ಕೇಸಿನಲ್ಲಿ ತಿಹಾರ್ ಜೈಲಿಗೆ ಹೋಗಿ ಬಂದ ಡಿ.ಕೆ. ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿಕೊಂಡಿದೆ, ಅವರಿಗೆ ನಾಚಿಕೆ ಆಗಬೇಕು ಎಂದು ಡಿ.ಕೆ. ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ತಾನೂ ಪಡೆಯುತ್ತಿರುವ 40 ಪರ್ಸೆಂಟ್ ಕಮಿಷನ್ ಬಗ್ಗೆ ದಾಖಲೆ ನೀಡಲಿ ಎಂದು ಕೇಳುವ ಬಿಜೆಪಿ ಸರ್ಕಾರಕ್ಕೆ ಲೋಕಾಯುಕ್ತವೇ ದಾಖಲೆ ನೀಡಿದೆ ಎಂದಿದ್ದ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಅಪ್ಪಚ್ಚು ರಂಜನ್ ಕಟುವಾಗಿ ಟೀಕಿಸಿದ್ದಾರೆ.
ಡಿ.ಕೆ.ಶಿ ಅವರು ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರದಲ್ಲಿ ಸಿಬಿಐ ಮತ್ತು ಇಡಿ ವಿಚಾರಣೆಗೆ ಒಳಪಟ್ಟು ಎರಡು ತಿಂಗಳ ಕಾಲ ತಿಹಾರ್ ಜೈಲಿನಲ್ಲಿ ಇದ್ದು ಬಂದವರು. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಕ್ಕೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದರು. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿ ಕೋಟಿ ಕೋಟಿ ಅಕ್ರಮ ಹಣ ಪತ್ತೆ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಅಪ್ಪಚ್ಚು ರಂಜನ್ ಯಾರೆ ಭ್ರಷ್ಚಾರ ಮಾಡಿದ್ದರೂ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ
ಅದಕ್ಕೆ ನಾವು ಸೊಪ್ಪು ಹಾಕುವ ಕೆಲಸ ಮಾಡುವುದಿಲ್ಲ. ವಿಚಾರಣೆ ಮಾಡಿ, ಅದು ಭ್ರಷ್ಟಾಚಾರದ ದುಡ್ಡ ಹೇಗೆ ಎನ್ನುವುದನ್ನು ಲೋಕಾಯುಕ್ತ ಪರಿಶೀಲನೆ ಮಾಡುತ್ತದೆ. ಅದನ್ನು ಮಟ್ಟ ಹಾಕುವಂತ ಕೆಲಸವನ್ನು ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ಲೋಕಾಯುಕ್ತವನ್ನು ರದ್ದುಪಡಿಸಿತ್ತು. ಆದರೆ ನಮ್ಮ ಸರ್ಕಾರ ಲೋಕಾಯುಕ್ತಕ್ಕೆ ಸಂಪೂರ್ಣ ಬಲ ತುಂಬುವ ಕೆಲಸ ಮಾಡಿದೆ. ಭ್ರಷ್ಟಾಚಾರ ಮುಚ್ಚಿಹಾಕುವುದಾಗಿದ್ದರೆ ನಾವು ಲೋಕಾಯುಕ್ತಕ್ಕೆ ಬಲ ತುಂಬುತ್ತಿರಲಿಲ್ಲ ಎಂದು ಅಪ್ಪಚ್ಚು ರಂಜನ್ ಹೇಳಿದರು.