ಬಾಗಲಕೋಟೆ ಬಿಜೆಪಿ ಸೋಲಿಗೆ 'ಕೈ' ಅಲ್ಲ, ಈ ಮೂವರು ನಾಯಕರ 'ನಾಲಗೆ'ಗಳೇ ಕಾರಣ; ಆ ಒಂದು ಫೋನ್ ಕರೆಯಲ್ಲಿ ಬಯಲು!

Published : May 05, 2026, 04:35 PM IST
Did Pratap Simha CC Patil and Yatnal s Remarks Cost BJP the Bagalkot Bypoll

ಸಾರಾಂಶ

ಬಾಗಲಕೋಟೆಯಲ್ಲಿ ಬಿಜೆಪಿಯ ಸೋಲಿಗೆ ವಿರೋಧ ಪಕ್ಷಕ್ಕಿಂತ ಸ್ವಪಕ್ಷದ ನಾಯಕರ ವಿವಾದಾತ್ಮಕ ಹೇಳಿಕೆಗಳೇ ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಪ್ರಚಾರದ ವೇಳೆ ಸಿ.ಸಿ. ಪಾಟೀಲ್, ಪ್ರತಾಪ್ ಸಿಂಹ, ಮತ್ತು ಯತ್ನಾಳ್ ಅವರ ಮಾತುಗಳು ಕುರುಬ, ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಸಮುದಾಯಗಳ ಮತಗಳು ಕೈತಪ್ಪಲು ಕಾರಣವಾದವ?

ಬಾಗಲಕೋಟೆ:(ಮೇ.5) ಸುಲಭವಾಗಿ ಗೆಲ್ಲಬಹುದಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ ಮಕಾಡೆ ಮಲಗಿದ್ದು ಯಾಕೆ? ಭದ್ರಕೋಟೆಯಲ್ಲೇ ಕಮಲ ಬಾಡಲು ಕಾರಣವೇನು? ಪ್ರಚಾರದ ಹಾದಿಯಲ್ಲಿ ಆದ ಎಡವಟ್ಟುಗಳೇನು? – ಹೀಗೆ ಸಾಲು ಸಾಲು ಪ್ರಶ್ನೆಗಳನ್ನಿಟ್ಟುಕೊಂಡು ಬಾಗಲಕೋಟೆ ಬಿಜೆಪಿ ಪಾಳಯದಲ್ಲಿ ಈಗ ತೀವ್ರ ಆತ್ಮಾವಲೋಕನ ಶುರುವಾಗಿದೆ.

ವಿಶೇಷವೆಂದರೆ, ಈ ಸೋಲಿಗೆ ವಿರೋಧ ಪಕ್ಷದವರ ಅಬ್ಬರದ, ಪ್ರಚಾರಕ್ಕಿಂತಲೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಸ್ವಪಕ್ಷದ ಸ್ಟಾರ್ ನಾಯಕರ ಆಕ್ಷೇಪಾರ್ಹ ಹೇಳಿಕೆಗಳೇ ಅಹಿಂದ ಮತಗಳನ್ನು ಕೆರಳಿಸಿ, ಬಿಜೆಪಿಯ ಕೈ ಹಿಡಿಯಬೇಕಿದ್ದ ಮತಗಳನ್ನು ದೂರ ಮಾಡಿವೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಮೂವರ ನಾಯಕರ ಹೇಳಿಕೆಗಳಿಂದಲೇ ಸೋಲು?

ಈ ಮೂವರು ನಾಯಕರ ಹೇಳಿಕೆಗಳೇ ತಮ್ಮ ಅಭ್ಯರ್ಥಿ ಸೋಲಿಗೆ ಕಾರಣವಾಯ್ತಾ?

ಪ್ರಚಾರದ ವೇಳೆ ಪ್ರತಾಪ್ ಸಿಂಹ, ‌ಸಿಸಿ‌ ಪಾಟೀಲ್, ಯತ್ನಾಳ್ ಹೇಳಿಕೆಗಳೇ ಮುಳುವಾಯ್ತಾ ಮೂವರು ‌ನಾಯಕರು ಕೊಟ್ಟ‌ ಹೇಳಿಕೆಗಳೇ‌ ಪ್ರಬಲ ಸಮುದಾಯದ ಮತಗಳ ಒಡಕಿಗೆ ಕಾರಣವಾಯ್ತಾ? ಹಾಗಾದರೆ ಈ ಮೂವರು ನಾಯಕರು ಪ್ರಚಾರದ ವೇಳೆ ಹೇಳಿದ್ದೇನು?

ಸಿಎಂ ಸಿದ್ದರಾಮಯ್ಯಗೆ ಟುರ್.. ಎಂದಿದ್ದ ಸಿಸಿ ಪಾಟೀಲ್

ಪ್ರಚಾರದ ವೇಳೆ ಮಾಜಿ ಸಚಿವ ಸಿಸಿ ಪಾಟೀಲ್ ನೀಡಿದ ಹೇಳಿಕೆಗಳು ಎರಡು ಪ್ರಬಲ ಸಮುದಾಯಗಳನ್ನು ಬಿಜೆಪಿಯ ವಿರುದ್ಧ ತಿರುಗಿಬೀಳುವಂತೆ ಮಾಡಿದೆ ಎಂಬ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಪರೋಕ್ಷವಾಗಿ 'ಟುರ್..' ಎಂದು ಉದ್ಗರಿಸಿದ್ದು ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾದ್ರೆ, 'ಗಡ್ಡದವರನ್ನ ಸೋಲಿಸಬೇಕು' ಎನ್ನುವ ಮೂಲಕ ಅಲ್ಪಸಂಖ್ಯಾತ ಸಮುದಾಯವನ್ನು ನೇರವಾಗಿ ನಿಂದಿಸಿದ್ದು ಕೂಡ ಪೆಟ್ಟು ನೀಡಿದೆ. ಪಂಚಮಸಾಲಿ ಸಭೆಯಲ್ಲಿ ಸಿಸಿ ಪಾಟೀಲ್ ನೀಡಿದ ಇಂತಹ ಪೀಕಲಾಟದ ಹೇಳಿಕೆಗಳು ಮತಗಳ ಒಡಕಿಗೆ ನೇರ ಕಾರಣವಾಯ್ತು ಎಂದು ಸ್ಥಳೀಯ ನಾಯಕರು ದೂರಿದ್ದಾರೆ.

ಪ್ರತಾಪ್ ಸಿಂಹ ಹೇಳಿಕೆಯಿಂದ 35 ಸಾವಿರ ಕುರುಬ ಮತಗಳಿಗೆ ಬಿತ್ತು ಕತ್ತರಿ?

ಕ್ಷೇತ್ರದಲ್ಲಿ ಸರಿಸುಮಾರು 35 ಸಾವಿರದಷ್ಟಿರುವ ಕುರುಬ ಸಮುದಾಯದ ಮತಗಳು ಬಿಜೆಪಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬೇಕಿತ್ತು. ಆದರೆ, ಪ್ರತಾಪ್ ಸಿಂಹ ಅವರು ಸಿದ್ದರಾಮಯ್ಯನವರ ಬಗ್ಗೆ ನೀಡಿದ 'ತುದಿ ಕಟ್ ಮಾಡಿಸಿಕೊಳ್ಳಲಿ' ಎಂಬ ಅಶ್ಲೀಲ ಹಾಗೂ ವೈಯಕ್ತಿಕ ನಿಂದನೆಯ ಹೇಳಿಕೆ ಇಡೀ ಸಮುದಾಯವನ್ನು ಬಿಜೆಪಿ ವಿರುದ್ಧ ಕೆರಳಿಸಿತು.

ಈ ಹೇಳಿಕೆಯಿಂದ ಬೇಸತ್ತ ಸಮುದಾಯದ ಮತದಾರರು ಬಿಜೆಪಿಯನ್ನು ಕೈಬಿಟ್ಟು ಒಗ್ಗಟ್ಟಾಗಿ ಕಾಂಗ್ರೆಸ್ ಪರ ನಿಂತರು. ಒಬ್ಬ ನಾಯಕನ ಅತಿರೇಕದ ಮಾತುಗಳು ಪಕ್ಷಕ್ಕೆ ಬರಬೇಕಿದ್ದ ಮತಗಳನ್ನು ಹೇಗೆ ಗುಡಿಸಿ ಹಾಕುತ್ತವೆ ಎಂಬುದಕ್ಕೆ ಪ್ರತಾಪ್ ಸಿಂಹ ಅವರ ಈ ಹೇಳಿಕೆಯೇ ಸಾಕ್ಷಿಯಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.

ಸ್ವಪಕ್ಷೀಯರನ್ನೇ ಟೀಕಿಸಿ ಗೆಲುವಿನ ಹಾದಿಗೆ ಮುಳ್ಳಾದ್ರೆ ಯತ್ನಾಳ್?

ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಡಾಫೆಯ ನಡೆ ಕೂಡ ಪಕ್ಷದ ಒಳಗೆ ದೊಡ್ಡ ಬಿರುಕು ಮೂಡಿಸಿದೆ. ಪ್ರಚಾರಕ್ಕೆ ಬಂದಿದ್ದ ಸ್ವಪಕ್ಷದ ನಾಯಕರನ್ನೇ 'ಸೋತವರೆಲ್ಲಾ ಇಲ್ಲಿಗೆ ಮತ ಕೇಳಲು ಬಂದಿದ್ದಾರೆ' ಎಂದು ಲೇವಡಿ ಮಾಡಿದ್ದು ಮತದಾರರಲ್ಲಿ ತಪ್ಪು ಸಂದೇಶ ರವಾನಿಸಿದೆ. ವಿಜಯಪುರದಿಂದ ಬಂದಿದ್ದ ನಾಯಕರನ್ನು ಅವಮಾನಿಸಿದ್ದು ಮಾತ್ರವಲ್ಲದೆ, ಪ್ರಚಾರದುದ್ದಕ್ಕೂ ಬಿಎಸ್ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ವಿರುದ್ಧ ಕಿಡಿಕಾರಿದ್ದು ಲಿಂಗಾಯತ ಮತಗಳ ಮೇಲೆ ಹೊಡೆತ ಬಿದ್ದಿದೆ. ತನ್ನದೇ ಪಕ್ಷದ ಹಿರಿಯ ನಾಯಕರನ್ನು ಬೈದುಕೊಂಡು ಓಡಾಡಿದ ಯತ್ನಾಳ್ ವರ್ತನೆಯಿಂದಾಗಿ ಮತದಾರರು ಬಿಜೆಪಿಯಿಂದ ಅಂತರ ಕಾಯ್ದುಕೊಂಡರು ಎಂಬ ಅಸಮಾಧಾನ ವ್ಯಕ್ತವಾಗಿದೆ.

ಸ್ಥಳೀಯ ನಾಯಕರ ಆಕ್ರೋಶ, ಫೋನ್ ಕರೆಯಲ್ಲಿ ಬಯಲು!

ಕಳೆದ ರಾತ್ರಿ ಕ್ಷೇತ್ರದ ಸ್ಥಳೀಯ ನಾಯಕರು ಮತ್ತು ಪ್ರಮುಖ ಮುಖಂಡರು ಫೋನ್ ಮೂಲಕ ನಡೆಸಿದ ಸಂಭಾಷಣೆಯಲ್ಲಿ ಈ ಎಲ್ಲಾ ಕಹಿ ಸತ್ಯಗಳು ಹೊರಬಂದಿವೆ. 'ನಾಯಕರು ಬಂದು ಗೆಲುವಿಗೆ ದಾರಿಯಾಗುವ ಬದಲು, ಅವರ ನಾಲಿಗೆಯಿಂದಾಗಿಯೇ ನಾವು ಸೋಲುವಂತಾಯ್ತು' ಎಂದು ಮುಖಂಡರು ಬೇಸರ ಹೊರಹಾಕಿದ್ದಾರೆ. ಸದ್ಯ ಬಾಗಲಕೋಟೆ ಬಿಜೆಪಿಯಲ್ಲಿ ಈ 'ಸೆಲ್ಫ್ ಗೋಲ್' ಗಳ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.

ಈ ಸೋಲಿನ ನಂತರ ಪಕ್ಷದ ಹೈಕಮಾಂಡ್ ಈ ನಾಯಕರ ಹೇಳಿಕೆಗಳ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ.ಬಂಗಾಳದಲ್ಲಿ 21 ವರ್ಷದಿಂದ ಮುಚ್ಚಿದ್ದ ಬಸ್ಟಿನ್ ಬಜಾರ್ ದುರ್ಗಾ ಮಂದಿರ; ಬಿಜೆಪಿ ಗೆದ್ದ ಒಂದೇ ನಿಮಿಷದಲ್ಲಿ ಓಪನ್!
ರಾಜೇಗೌಡ ಗೆದ್ದಾಗ ಅಂದು ಬಿಜೆಪಿ ಸರ್ಕಾರ ಇತ್ತು, ಈಗ ನೀವಿರುವಾಗ್ಲೇ ಜೀವರಾಜ್ ಗೆದ್ರಲ್ಲ, ಹಾಗಾದ್ರೆ ವೋಟ್ ಚೋರಿ ಮಾಡಿದ್ಯಾರು? ಸಿಎಂಗೆ ಸಿಟಿ ರವಿ ಪ್ರಶ್ನೆ