
-ಎಂ.ಡಿ. ಲಕ್ಷ್ಮೀನಾರಾಯಣ್, ಮಾಜಿ ಶಾಸಕರು, ಬಿಜೆಪಿ ಮುಖಂಡರು
ಯಡಿಯೂರಪ್ಪ ಅವರಂತಹ ವಿಭಿನ್ನ ವ್ಯಕ್ತಿತ್ವ, ದೂರಾಲೋಚನೆ, ಬದ್ಧತೆ, ಸ್ಪಷ್ಟ ರಾಜಕೀಯ ನಿಲುವು, ಅಭಿವೃದ್ಧಿ ವಿಚಾರಗಳು ಉಳ್ಳ ಮತ್ತೊಬ್ಬ ರಾಜಕಾರಣಿ ನಮಗೆ ಹುಡುಕಿದರೂ ಸಿಗಲಾರರು. ಯಡಿಯೂರಪ್ಪನವರು ಕರ್ನಾಟಕದ ಯಶಸ್ವಿ ಮುಖ್ಯಮಂತ್ರಿ ಎನಿಸಿಕೊಂಡಿದ್ದರೂ, ಅವರಲ್ಲೊಬ್ಬ ಕಾರ್ಯಕರ್ತನಿದ್ದ. ಸಮಾಜದಲ್ಲಿನ ವಾಸ್ತವಿಕತೆಯನ್ನು ಸಂಪೂರ್ಣವಾಗಿ ಅರಿತ ಜವಾಬ್ದಾರಿಯುತ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಾರ್ಯಕರ್ತರೊಂದಿಗೆ ಯಡಿಯೂರಪ್ಪ ಅವರ ಸಂಬಂಧ ಹೃದಯಸ್ಪರ್ಶಿಯಾಗಿದೆ.
ಯಡಿಯೂರಪ್ಪ ಅವರ ಪ್ರತಿಯೊಂದು ಹೆಜ್ಜೆಯಲ್ಲೂ ನಮಗೆ ಪರಿಶ್ರಮದ ಸುಗಂಧ ಅನುಭವಿಸಲು ಸಾಧ್ಯ. ಏಕೆಂದರೆ ಅವರು ತಳಮಟ್ಟದಿಂದ ಬೆಳೆದು ಬಂದವರು. ಶಿಕಾರಿಪುರ ಪುರಸಭೆಯ ಸದಸ್ಯನಿಂದ ಆರಂಭಿಸಿ, ಜನಪ್ರತಿನಿಧಿ ಎಂಬ ಸಾರ್ವಜನಿಕ ಜೀವನ ಅವರನ್ನು ರಾಜ್ಯದ ಮುಖ್ಯಮಂತ್ರಿ ಗಾದಿಯವರೆಗೆ ಕರೆದುಕೊಂಡು ಬಂದಿದೆ. ಕಾರ್ಯಕರ್ತನಿಂದ ಪ್ರಾರಂಭವಾದ ಅವರ ರಾಜಕೀಯ ಯಾತ್ರೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಸಾಮಾಜಿಕ ಬದುಕಿನ ಪರಿಶ್ರಮ, ಸಮರ್ಪಣೆ, ಎಲ್ಲರೊಂದಿಗೆ ಬೆರೆಯುವ ರೀತಿ, ಪಕ್ಷದ ಬಗೆಗಿನ ಕಾಳಜಿ, ದೇಶಭಕ್ತಿ ಇವು ಇಂದಿನ ಕಾರ್ಯಕರ್ಯ ಪೀಳಿಗೆಗೆ ಅನುಕರಣೀಯ. ಬಿಜೆಪಿಯ ಅಧ್ಯಕ್ಷರಾಗಿ ಪಕ್ಷವನ್ನು ಬಲಪಡಿಸಿದ ಕೀರ್ತಿಯೂ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಜನಸಂಘ ಕಾಲದಿಂದ ಇಂದಿನವರೆಗೆ ಪಕ್ಷದ ಬೆಳವಣಿಗೆಗೆ ಭಾರೀ ದೊಡ್ಡ ಕೊಡುಗೆ ನೀಡಿದ್ದಾರೆ. ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು ಎಂದು ಕರ್ನಾಟಕ ಕರೆಸಿಕೊಳ್ಳುವಲ್ಲಿ ಯಡಿಯೂರಪ್ಪನವರ ಕೊಡುಗೆ ಮಹತ್ವದ್ದಾಗಿದೆ.
ಯಡಿಯೂರಪ್ಪ ಅವರು ಸಾಮಾಜಿಕ ಹೋರಾಟಗಳನ್ನೆಂದಿಗೂ ತನ್ನ ವೈಯುಕ್ತಿಕ ಜೀವನದ ಲಾಭಕ್ಕೆ ಬಳಸಿಕೊಂಡಿಲ್ಲ. ಜನಪರ ಕಾಳಜಿ ಹೊತ್ತೇ ಹೋರಾಟಕ್ಕಿಳಿಯುತ್ತಿದ್ದರು, ಜನಪರವಾಗಿಯೇ ಹೋರಾಡುತ್ತಿದ್ದರು. ಅನೇಕ ಹೋರಾಟಗಳು ಯಡಿಯೂರಪ್ಪ ಅವರ ವೈಯುಕ್ತಿಕ ಜೀವನಕ್ಕೆ ಕೆಟ್ಟ ಪರಿಣಾಮ ಬೀರಿದೆ, ಆಗಲೂ ಕೂಡಾ ಬಿಎಸ್‌ವೈ ಅವರು ಹೋರಾಟದ ಬದುಕಿನ ಬಗ್ಗೆ ಎರಡು ಮಾತು ಆಡುತ್ತಿರಲಿಲ್ಲ. ವೈಯಕ್ತಿಕ ಲಾಭಕ್ಕಾಗಿ ಯಾವುದನ್ನೂ ತೆಗೆದುಕೊಳ್ಳದೆ ಸಮಾಜದ ಹಿತಕ್ಕಾಗಿ ಹೋರಾಟ ಮಾಡುವ ಗುಣ ಸ್ವಭಾವ ಯಡಿಯೂರಪ್ಪನವರದ್ದಾಗಿದೆ. ಸಾಮಾನ್ಯ ಜನರಿಗೆ ನ್ಯಾಯ ಒದಗಿಸಲು ಅನೇಕ ಜನರ ದ್ವೇಷ ಕಟ್ಟಿಕೊಂಡ ಉದಾರಣೆಗಳಿವೆ, ಆದರೆ ಯಡಿಯೂರಪ್ಪ ಅವರಿಗೆ ಸಂತ್ರಸ್ತರಿಗೆ ನ್ಯಾಯ ಒದಗಿಸುವುದೇ ಪರಮಗುರಿಯಾಗಿತ್ತು. ಯಡಿಯೂರಪ್ಪ ಅವರು ತನ್ನ ಬದುಕಿನಲ್ಲಿ ಎಲ್ಲವನ್ನೂ ಕಂಡಿದ್ದಾರೆ, ಎಲ್ಲವನ್ನೂ ಅನುಭವಿಸಿದ್ದಾರೆ. ಹೊಗಳಿಕೆ, ತೆಗಳಿಕೆ, ಅವಮಾನ, ಅನುಮಾನ, ಸನ್ಮಾನ ಇವೆಲ್ಲವನ್ನೂ ನೋಡಿದ್ದಾರೆ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತು ಜನಜನಿತವಾಗಿದೆ. ಈ ಮಾತು ಸುಮ್ಮನೆ ಹುಟ್ಟಿಕೊಂಡಿಲ್ಲ, ಯಡಿಯೂರಪ್ಪ ಅವರ ನಡೆ ಅಕ್ಷರಶಃ ಅದೇ ರೀತಿ ಇತ್ತು.
ರಾಜಕೀಯ ಜೀವನದಲ್ಲಿ ಅಧಿಕಾರದಲ್ಲಿದ್ದಾಗಲೂ, ಅಧಿಕಾರ ಇಲ್ಲದಿದ್ದಾಗಲೂ ಯಡಿಯೂರಪ್ಪ ಅವರು ಅತೀ ಹೆಚ್ಚು ಚಿಂತೆ ಮತ್ತು ಚಿಂತನೆ ಮಾಡುತ್ತಿದ್ದದ್ದು ರೈತರ ಕುರಿತಾಗಿ. ರೈತರ ಬಗ್ಗೆ ವಿಶೇಷ ಒಲವು ಹೊಂದಿದ್ದರು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರೈತ ಬಜೆಟ್ ಮಂಡಿಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.
ಒಂದೊಮ್ಮೆ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿ ಆಗಿದ್ದಾಗ ಕಂದಾಯ ಸಚಿವರಾದ ರಾಚಯ್ಯನವರು ಮಸೂದೆಯೊಂದನ್ನು ಮಂಡಿಸುತ್ತಾರೆ. ಈ ಮಸೂದೆ ರೈತರಿಗೆ ಮಾರಕವಾಗಲಿದೆ ಎಂದು ಅರಿತುಕೊಂಡ ಬಿಜೆಪಿ ಶಾಸಕ ಯಡಿಯೂರಪ್ಪನವರು ಸದನದಲ್ಲಿ ರೈತರ ಪರವಾಗಿ ಹೋರಾಟ ಮಾಡಿ ಬಿಲ್ ಹಿಂಪಡೆಯುವಂತೆ ಆಗ್ರಹಿಸುತ್ತಾರೆ. ಸರಕಾರ ಯಡಿಯೂರಪ್ಪ ಅವರ ಮನವಿಗೆ ಒಪ್ಪದಿದ್ದಾಗ, ಯಡಿಯೂರಪ್ಪ ಅವರು ಕಣ್ಣೀರು ಹಾಕಿ ಅವರ ಆಸನದ ಕೆಳಗಡೆ ಕೂರುತ್ತಾರೆ. ಮೌನ ಪ್ರತಿಭಟನೆ ಮಾಡುತ್ತಾರೆ. ಕೊನೆಗೂ ಯಡಿಯೂರಪ್ಪ ಅವರ ಹೋರಾಟಕ್ಕೆ ಮಣಿದ ಕಂದಾಯ ಸಚಿವ ರಾಚಯ್ಯ ಅವರು ತಮ್ಮ ಮಸೂದೆಯನ್ನು ಹಿಂಪಡೆಯುತ್ತಾರೆ. ಮರುದಿನ ಪತ್ರಿಕೆಗಳ ಮುಖಪುಟದಲ್ಲಿ ‘ಯಡಿಯೂರಪ್ಪನವರ ಏಕಾಂಗಿ ಹೋರಾಟಕ್ಕೆ ಸಿಕ್ಕ ಜಯ’ ಎಂದು ಸುದ್ದಿಯಾಗಿತ್ತು. ಜನ ಪ್ರತಿನಿಧಿಗಳು ಹೇಗೆ, ಯಾವ ರೀತಿ ಹೋರಾಟ ಮಾಡಬಹುದೆನ್ನುವುದಕ್ಕೆ ಇದೊಂದು ನಿದರ್ಶನವಷ್ಟೇ, ಇಂತಹ ನೂರಾರು ನಿದರ್ಶನಗಳು ನನ್ನ ಸ್ಮೃತಿಪಟಲದಲ್ಲಿದೆ.
ಈ ಘಟನೆ ನಡೆದು ನಾಲ್ಕು ಐದು ವರ್ಷಗಳ ನಂತರ ರಾಮಚಂದ್ರಗೌಡ ಮತ್ತು ಯಡಿಯೂರಪ್ಪನವರು ಕಾರಲ್ಲಿ ಹೋಗುತ್ತಿರುವಾಗ ರಸ್ತೆ ಬದಿಯ ಒಂದು ಹೋಟೆಲ್ ಬಳಿ ನಿಲ್ಲಿಸಿ, ಚಹಾ ಕುಡಿಯುತ್ತಿರುತ್ತಾರೆ. ಆ ಹೋಟೆಲ್ ಬಾಗಿಲ ಬಳಿ ನಿಂತ ರಾಮಚಂದ್ರಗೌಡ ಅವರು ಯಡಿಯೂರಪ್ಪನವರನ್ನು ತೋರಿಸಿ ಇವರು ಯಾರು ಗೊತ್ತಾ ಎಂದಾಗ, ಹೊಟೇಲ್‌ನಲ್ಲಿದ್ದ ಇಬ್ಬರು ಕೈ ಮುಗಿದು ಯಾಕೆ ಸ್ವಾಮಿ ಹಾಗೆ ಕೇಳುತ್ತೀರಿ, ಇವರು ನಮ್ಮ ಜಮೀನು ಉಳಿಸಿಕೊಟ್ಟ ದೇವರೆಂದು ಎರಡು ಕೈ ಎತ್ತಿ ನಮಸ್ಕರಿಸುತ್ತಾರೆ. ಇದು ಹೋರಾಟಗಾರನೊಬ್ಬ ಜನಮಾನಸದಲ್ಲಿ ಅಚ್ಚಳಿಯದೆ ಉಳಿದ ಕಥೆ.
ಯಡಿಯೂರಪ್ಪ ಅವರು ಯಾವುದೇ ರೀತಿಯ ಸಮಸ್ಯೆಯನ್ನು ಬೇಗ ಗ್ರಹಿಸಬಲ್ಲರು ಮತ್ತು ಅದಕ್ಕೆ ಸರಿಯಾದ ತೀರ್ಮಾನವನ್ನು ಅತಿಶೀಘ್ರವಾಗಿ ತೆಗೆದುಕೊಳ್ಳುತ್ತಿದ್ದರು. ಕರ್ನಾಟಕದ ಗರಿಷ್ಠ ಸಂಖ್ಯೆಯ ಹಳ್ಳಿಗಳಿಗೆ ಭೇಟಿ ನೀಡಿರುವ ಏಕೈಕ ರಾಜಕಾರಣಿ ನಮ್ಮ ಯಡಿಯೂರಪ್ಪ. ಯಡಿಯೂರಪ್ಪ ಬರುತ್ತಾರೆಂದರೆ ಹಳ್ಳಿ ಹಳ್ಳಿಗಳಲ್ಲಿ ಮಧ್ಯರಾತ್ರಿಯವರೆಗೂ ರೈತರು ಮಹಿಳೆಯರಾದಿಯಾಗಿ ಕಾಯುತ್ತಿದ್ದಿದ್ದನ್ನು ಸ್ವತಃ ನಾನೇ ನೋಡಿದ್ದೇನೆ.
ಬಜೆಟ್ ಎಂದಕೂಡಲೇ ಮರುದಿನದ ಪತ್ರಿಕೆಗಳಲ್ಲಿ ಹಾಲಿನ ಬೆಲೆ ಏರಿಕೆ, ಕಾರು, ಚಿನ್ನದ ಬೆಲೆ ಏರಿಕೆ, ಸಿಮೆಂಟ್ ತುಟ್ಟಿ, ಕೈಗೆಟುಕದ ಟಿವಿ ಎಂದು ಸುದ್ದಿಯಾಗುತ್ತಿದ್ದವು. ಅಂದರೆ ಬಜೆಟ್ ಜನರಿಗೆ ಹೊರೆ ಎಂಬ ರೀತಿಯ ವಾತಾವರಣವಿತ್ತು. ಅದನ್ನು ಸಂಪೂರ್ಣವಾಗಿ ಬದಲಾಯಿಸಿದ್ಧೇ ಬಿಎಸ್‌ವೈ. ಅರ್ಥ ಸಚಿವರಾಗಿದ್ದಾಗ ಯಡಿಯೂರಪ್ಪ ಅವರು ನೀಡಿದ ಬಜೆಟ್ ಜನಸಮಾನ್ಯರಲ್ಲಿ ಜೀವನದ ಭರವಸೆ ಹೆಚ್ಚಿಸಿತು.
ಬಿ.ಎಸ್.ಯಡಿಯೂರಪ್ಪ ಅವರು ಮಹಿಳಾ ಸಮುದಾಯಕ್ಕೆ ವಿಶೇಷ ಒತ್ತು ನೀಡುತ್ತಿದ್ದರು. ರಾಮಕೃಷ್ಣ ಹೆಗಡೆಯವರು ಮೊದಲ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ಬಿಜೆಪಿ ಬಾಹ್ಯ ಬೆಂಬಲ ನೀಡಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಬಿಜೆಪಿ ಕಡೆಯಿಂದ ಸಲಹೆ ಸೂಚನೆಗಳನ್ನು ಕೇಳಿದಾಗ, ಯಡಿಯೂರಪ್ಪ ಅವರು ಬಡ ಹೆಣ್ಣು ಮಕ್ಕಳ ಕೊರಳಿನಲ್ಲೂ ಬಂಗಾರ ಇರಬೇಕು, ಅದಕ್ಕಾಗಿ ಬಡಹೆಣ್ಣು ಮಕ್ಕಳಿಗೆ ತಾಳಿಭಾಗ್ಯ ಯೋಜನೆ ಜಾರಿಗೊಳಿಸಿ ಎಂದು, ಕೋರಿಕೊಂಡಿದ್ದರು. ಅದರಂತೆ ಯೋಜನೆ ಜಾರಿಯಾಯಿತು, ತಾಳಿ ಭಾಗ್ಯ ಯೋಜನೆಯು ಯಡಿಯೂರಪ್ಪ ಅವರು ಹೆಣ್ಣು ಮಕ್ಕಳಿಗೆ ನೀಡಿದ ಮೊದಲ ಯೋಜನೆಯಾಗಿದೆ ಎನ್ನುವುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ನಾರಿಯರ ಸಬಲೀಕರಣಕ್ಕಾಗಿ ಹಲವಾರು ಉಪಕ್ರಮ, ಯೋಜನೆ ಜಾರಿಗೊಳಿಸಿದ್ದಾರೆ. ಗರ್ಭಿಣಿ ಹೆಣ್ಣು ಮಗಳಿಗೆ ತವರಿನ ಆತಿಥ್ಯವನ್ನು ನೆನಪು ಮಾಡಿಸುವಂತಹ ಮಡಿಲು ಯೋಜನೆ ಜಾರಿಗೊಳಿಸಿದರು. ಮಡಿಲು ಯೋಜನೆ ಮೂಲಕ ತವರು ಮನೆಯಲ್ಲಿ ನೀಡುವ ವಸ್ತುಗಳನ್ನು ಸರ್ಕಾರವೇ ಮಡಿಲು ಕಿಟ್ ಮಾದರಿ ನೀಡಲಾಗುತ್ತಿತ್ತು. ಗರ್ಭಿಣಿಯ ಹೊಟ್ಟೆಯಿಂದ ಮಗು ಹೆಣ್ಣಾಗಿ ಹೊರಬಂದರೆ ಆ ಮಗುವನ್ನು ಭಾಗ್ಯಲಕ್ಷ್ಮಿ ಮೂಲಕ ಸ್ವಾಗತಿಸಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸಿದರು. ಆ ಯೋಜನೆ ಇಂದು ಲಕ್ಷಾಂತರ ಹೆಣ್ಣು ಮಕ್ಕಳ ಶಿಕ್ಷಣ, ವೈವಾಹಿಕ ಜೀವನಕ್ಕೆ ನೆರವಾಗಿದೆ. ಅಲ್ಲದೆ ಭಾಗ್ಯಲಕ್ಷ್ಮಿ ಫಲಾನುಭವಿಗೆ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ರೂಪಿಸಿದ್ದರು. ಹೆಣ್ಣು ಮಕ್ಕಳು ಸುಶಿಕ್ಷತರಾಗಬೇಕು, ಶಾಲೆಯಿಂದ ದೂರ ಇರಬಾರದು, ಹೈಸ್ಕೂಲ್ ಹಂತವನ್ನು ದಾಟಬೇಕು ಎಂದು ಹೆಣ್ಣುಮಕ್ಕಳಿಗೆ ಸೈಕಲ್ ವಿತರಿಸಿದರು, ಅದನ್ನು ಗಂಡು ಮಕ್ಕಳಿಗೂ ವಿಸ್ತರಿಸಿದರು. ಕಾರ್ಯಕ್ರಮ ಒಂದರಲ್ಲಿ ವಿಧವೆಯೊಬ್ಬರು ಯಡಿಯೂರಪ್ಪರ ಮುಂದೆ ಜೀವನದ ಸಂಕಷ್ಟ ಹೇಳಿಕೊಂಡು ಕಣ್ಣೀರು ಸುರಿಸಿದಾಗ ಅವಳಿಗೆ ಒಂದು ಆಕಳು ತೆಗೆದುಕೊಟ್ಟು ಜೀವನ ನಿರ್ವಹಣೆಯ ಹಾದಿ ಕಲ್ಪಿಸಿದರು. ಸ್ತ್ರೀ ಶಕ್ತಿ ಗುಂಪುಗಳಿಗೆ ಬಡ್ಡಿ ರಹಿತ ಸಾಲ ನೀಡಿದ್ದೂ ಇದೇ ಯಡಿಯೂರಪ್ಪ. ದೇವದಾಸಿಯರಿಗೆ ಮಾಸಾಶನ ನೀಡುವ ಮೂಲಕ ಅವರ ಬದುಕನ್ನು ಭದ್ರಗೊಳಿಸಿದರು.
ಹೆಣ್ಣು ಮಕ್ಕಳ ರಕ್ಷಕ:
ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ನೆರವಾಗಿದ್ದಾರೆ. ಜನಮನದಲ್ಲಿ ಒಂದು ಮಾತಿದೆ, ‘ಯಡಿಯೂರಪ್ಪನವರ ಬಜೆಟ್ ಜೋಳಿಗೆ, ಯೋಜನೆಗಳ ಹೋಳಿಗೆ’. ಇದರ ಹಿಂದೆ ಎಲ್ಲರಿಗೂ ಸಮಾಧಾನ ಪಡಿಸುವಂತಹ ಬಜೆಟ್ ನೀಡುತ್ತಿದ್ದ ಕಾರಣವಿದೆ. ಯಡಿಯೂರಪ್ಪ ಅವರು ಯಾರಿಗೂ ನಿರಾಸೆ ಮಾಡುತ್ತಿರಲಿಲ್ಲ. ಜನಮಾನಸದಲ್ಲಿ ಯಡಿಯೂರಪ್ಪ ಇಂದಿಗೂ ಹಿಂದಿನಷ್ಟೇ ಜನಪ್ರಿಯರಾಗಿದ್ದಾರೆ.
ಬಡವರಿಗೆ ಮನೆ ನಿರ್ಮಿಸಿ, ಅದನ್ನು ಮನೆಯೊಡತಿಯ ಹೆಸರಿನಲ್ಲಿ ನೋಂದಾಯಿಸುವ ಕಾನೂನು ಜಾರಿಗೊಳಿಸಿದ್ದರು. ವಿಧವಾ ವೇತನ ಹೆಚ್ಚಳ, ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಗಂಡಹೆಂಡತಿರಿಬ್ಬರಿಗೂ ಅವಕಾಶ, ಒಂದು ಮನೆಗೆ ಒಂದೇ ಯೋಜನೆ ಎಂಬ ಸರ್ಕಾರಿ ನಿಯಮ ಬದಲಾಯಿಸಿ ಅನೇಕ ಯೋಜನೆಗಳನ್ನು ಒಂದೇ ಮನೆಗೆ ಸಿಗುಂತೆ ಮಾಡಿದ್ದು, ಮದುವೆಯಾಗದೆ ಉಳಿದು 50 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳಿಗೂ ಮಾಸಾಶನ ವ್ಯವಸ್ಥೆ ಮಾಡಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಹಾಯವಾಗಲೆಂದು ವಿದ್ಯಾ ಸಿರಿ ಯೋಜನೆ ಜಾರಿಗೊಳಿಸಿ, ಯೋಜನೆ ಮೂಲಕ ಹಾಸ್ಟೆಲ್ ಸೌಲಭ್ಯ ಇಲ್ಲದ ವಿದ್ಯಾರ್ಥಿನಿಯರಿಗೆ ಆಹಾರ/ಸ್ಟೈಪೆಂಡ್ ನೀಡುವ ಉಪಕ್ರಮ ಜಾರಿಗೊಳಿಸಿದ್ದರು ಮತ್ತು ವಿದ್ಯಾರ್ಥಿನಿಯರ ಉನ್ನತ ಶಿಕ್ಷಣದ ಕನಸಿಗೆ ಪೂರಕವಾಗಿ ಕರ್ನಾಟಕ ಉಚಿತ ಲ್ಯಾಪ್‌ಟಾಪ್ ವಿತರಣೆ ಯೋಜನೆ ಜಾರಿಗೊಳಿಸಿದ್ದರು. ಮಹಿಳೆಯರಿಗೆ ಆರ್ಥಿಕ ಸಹಾಯ ಮತ್ತು ಸ್ವಾವಲಂಬಿ ಜೀವನ ನಡೆಸಲು ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳಿಗೆ ಸಾಲ, ಸಬ್ಸಿಡಿ ನೀಡಿ ತರಬೇತಿ ಒದಗಿಸುವ ಕಾರ್ಯಕ್ರಮ ರೂಪಿಸಿದ್ದರು. ಸ್ವ-ಸಹಾಯ ಸಂಘಗಳಿಗೆ ಬ್ಯಾಂಕ್ ಲಿಂಕೇಜ್ ಮತ್ತು ಮಾರ್ಕೆಟಿಂಗ್ ಸಪೋರ್ಟ್ ಹೆಚ್ಚಿಸಿದರು. ಬಡ ಮಹಿಳೆಯರಿಗೆ ಮನೆ ನಿರ್ಮಾಣಕ್ಕಾಗಿ ಬಸವ ವಸತಿ ಯೋಜನೆ ಜಾರಿಗೊಳಿಸಿದ್ದರು ಮತ್ತು ನಗರ ಪ್ರದೇಶಗಳಲ್ಲಿ ಮಹಿಳಾ ಸುರಕ್ಷತೆಗೆ ಹೆಚ್ಚುವರಿ ಕ್ರಮ ಅನುಸರಿಸಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದರು. ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಯೋಜನೆ ಮತ್ತು ಸಣ್ಣ ಉದ್ಯಮ ಕೈಗೊಳ್ಳಲು ಆರ್ಥಿಕ ಸಹಾಯ ನೀಡಲು ಯೋಜನೆ ರೂಪಿಸಿದ್ದರು. ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಒದಗಿಸಲು ಮಾತೃ ಪೂರ್ಣ ಯೋಜನೆ ಜಾರಿಗೊಳಿಸಿದ್ದರು.
ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾಧ್ಯನತೆ:
ಇವೆಲ್ಲಾ ಯಡಿಯೂರಪ್ಪ ಅವರ ಸಾಧನೆಯಾಗಿದೆ. ಆಡಳಿತಾತ್ಮಕವಾಗಿ ಮಹಿಳೆಯರು ಬಲಾಢ್ಯರಾಗಬೇಕೆಂದು ಕೇಂದ್ರ ಸರ್ಕಾರ ಸ್ತಳೀಯ ಸಂಸ್ಥೆಗಳಲ್ಲಿ ಶೇಕಡ 33 ಮೀಸಲಾತಿ ಒದಗಿಸಿದ್ದರೆ, ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಅದನ್ನು ಶೇ.50ಕ್ಕೆ ಏರಿಸಿ ಮಹಿಳೆಯರನ್ನು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್, ಪಟ್ಟಣ ಪಂಚಾಯತ್, ನಗರ ಸಭೆ, ಪರಸಭೆಗಳ ನೀತಿ ನಿರೂಪಣೆಯಲ್ಲಿ ಮಹಿಳೆಯರ ಪಾಲನ್ನು ಹೆಚ್ಚಿಸಿದ್ದು ನಮ್ಮ ಬಿಎಸ್‌ವೈ, ಇದಕ್ಕೆ ಮಹಿಳಾ ಸಮುದಾಯ ಯಡಿಯೂರಪ್ಪ ಅವರನ್ನು ಮೆಚ್ಚಲೇಬೇಕು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಎಲ್ಲರಿಗೂ ಲಭ್ಯವಿರುತ್ತಿದ್ದ ಏಕೈಕ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಬೆಳಗ್ಗೆ 4.30ಕ್ಕೆ ಅವರ ದಿನಚರಿ ಪ್ರಾರಂಭವಾಗುತ್ತಿತ್ತು. ರಾತ್ರಿಯ ಸಮಯದಲ್ಲೂ ಫೋನ್ ಬಂದರೂ ಸ್ವೀಕರಿಸುತ್ತಿದ್ದರು. ಬಜೆಟ್ ಮಂಡಿಸುವ ಮುನ್ನ ಎಲ್ಲಾ ಇಲಾಖೆಗಳ, ಸಾಮಾಜಿಕ ಸಂಸ್ಥೆಗಳ ಅಭಿಪ್ರಾಯ ಪಡೆಯುತ್ತಿದ್ದರು. ಮಹಿಳೆಯರ ಬಗ್ಗೆಯಂತೂ ಬಜೆಟ್ ಪೂರ್ವದಲ್ಲಿ ವಿಶೇಷವಾಗಿ ಚಿಂತನೆ ನಡೆಸುತ್ತಿದ್ದರು. ಮಹಿಳಾ ಅಧಿಕಾರಿ, ಚಿಂತಕರು, ರಾಜಕೀಯ ಪ್ರತಿನಿಧಿ, ಮಹಿಳಾ ಸಂಘಟಕರನ್ನು ಕರೆದು ಅಭಿಪ್ರಾಯ ಸಂಗ್ರಹಿಸಿ ಅದಕ್ಕೆ ಪೂರಕವಾಗಿ ಬಜೆಟ್‌ನಲ್ಲಿ ವಿಶೇಷ ಕಾರ್ಯಕ್ರಮ ರೂಪಿಸುತ್ತಿದ್ದರು. ಇದಕ್ಕೆಲ್ಲಾ ನಾನು ಸಾಕ್ಷಿಯಾಗಿದ್ದು ನನ್ನ ಸೌಭಾಗ್ಯ. ಇನ್ನು ಯಾವುದೇ ಕಾರ್ಯಕ್ರಮದ ವೇದಿಕೆಗಳಲ್ಲಿ ಮಹಿಳೆಯರ ಉಪಸ್ಥಿತಿಯನ್ನು ಖಚಿತಪಡಿಸಿಕೊಳ್ಳುತ್ತಿದ್ದರು, ಹಿಂದಿನ ಆಸನದಲ್ಲಿದ್ದರೆ ಮುಂದಿನ ಸಾಲಿಗೆ ಕರೆದು ಗೌರವ ನೀಡುತ್ತಿದ್ದರು. ಕಾರ್ಯಕ್ರಮ ಮುಗಿದ ಬಳಿಕವೂ ಮಹಿಳೆಯರ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದರು. ಮಹಿಳೆಯರು ಸಾಮಾಜಿಕವಾಗಿ ಮುಂದುವರೆಯುವ ಬಗ್ಗೆ ಮಾರ್ಗದರ್ಶನ ಕೂಡಾ ಮಾಡುತ್ತಿದ್ದರು. ಸಣ್ಣಪುಟ್ಟ ಸಂಗತಿಗಳ ಬಗ್ಗೆಯೂ ವಿಶೇಷ ಆಸಕ್ತಿ ವಹಿಸುತ್ತಿದ್ದರು, ಸಿಡುಕುತನ ಮೂಲ ಸ್ವಭಾವವಾಗಿದ್ದರೂ ಅಷ್ಟೇ ತಾಳ್ಮೆ ಕೂಡಾ ಹೊಂದಿದ್ದರು. ಕ್ಷಮಾಮಯಿ ಕೂಡಾ ಆಗಿದ್ದರು. ಮಾತು ತಪ್ಪುವ ವ್ಯಕ್ತಿತ್ವ ಕೂಡಾ ಅವರದ್ದಲ್ಲ.
ಬದುಕಿನ ಹೆಚ್ಚಿನ ಸಮಯವನ್ನು ಸಮಾಜಕ್ಕೆ ಮೀಸಲಿರಿಸಿದ ಪರಿಣಾಮ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಿಲ್ಲ. ಆದರೂ ಧರ್ಮಪತ್ನಿ ಮೈತ್ರಾದೇವಿ ಅವರು ಯಡಿಯೂರಪ್ಪ ಅವರಿಗೆ ಬೆಂಗಾವಲಾಗಿ ನಿಂತಿದ್ದರು. ಇದರಿಂದ ಯಡಿಯೂರಪ್ಪ ಅವರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಯಿತು. ಈ ಕ್ಷಣದಲ್ಲಿ ಮೈತ್ರಾದೇವಿ ಅವರನ್ನೂ ಕೂಡಾ ನೆನಪಿಸಿಕೊಳ್ಳುವುದು ನಮ್ಮ ಧರ್ಮ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.