
ಮೈಸೂರು (ಏ.20): ತಾತ ಈ ಹಿಂದೆ ಐದು ವರ್ಷ ಸಿಎಂ ಆಗಿ ಒಳ್ಳೆಯ ಆಡಳಿತ ನೀಡಿದ್ದಾರೆ. ಈಗಲೂ ಜನ ಅವರೇ ಸಿಎಂ ಆಗ್ಬೇಕು ಎನ್ನುತ್ತಿದ್ದಾರೆ. ತಾತ ಮತ್ತೆ ಚೀಫ್ ಮಿನಿಸ್ಟರ್ ಆಗ್ಬೇಕು. ಕ್ಷೇತ್ರದ ಜನ ತಾತನನ್ನು ಬೆಂಬಲಿಸಬೇಕು ಎಂದು ಸಿದ್ದರಾಮಯ್ಯ ಅವರ ಮೊಮ್ಮಗ ಧವನ್ ರಾಕೇಶ್ ಮನವಿ ಮಾಡಿದರು. ವರುಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇಲ್ಲಿಗೆ ಆಗಮಿಸಿದ ಧವನ್, ಉಮೇದುವಾರಿಕೆ ಪ್ರಕ್ರಿಯೆಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿದುಕೊಳ್ಳಲು ಮಂಗಳವಾರವೇ ಸಿದ್ದರಾಮಯ್ಯ ಅವರ ಜೊತೆ ವಿಶೇಷ ವಿಮಾನದಲ್ಲಿ ಮೈಸೂರಿಗೆ ಬಂದಿದ್ದರು. ಬುಧವಾರ ಕೂಡ ಬೆಳಗ್ಗೆ ಯಿಂದ ತಾತನಿಗೆ ಜೊತೆಯಾದರು.
ಆಸಕ್ತಿ ಇದೆ: ಏತನ್ಮಧ್ಯೆ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ರಾಜಕೀಯದ ಬಗ್ಗೆ ಆಸಕ್ತಿ ಇದೆ. ನನಗೀಗಿನ್ನೂ 17 ವರ್ಷ, ಸೆಕೆಂಡ್ ಪಿಯಸಿ ಓದುತ್ತಿದ್ದೇನೆ. ತಾತನಂತೆ ಲಾ ಮಾಡಿ ನಂತರ ರಾಜಕೀಯಕ್ಕೆ ಬರ್ತೇನೆ ಎಂದ ಧವನ್, ನಾನು ಕೂಡ ತಾತನಂತೆ ಸ್ಪಷ್ಟವಾಗಿ ಮಾತನಾಡಬೇಕು. ಇದೇ ಮೊದಲ ಬಾರಿ ಮಾತನಾಡುತ್ತಿರುವುದರಿಂದ ಹಿಂಜರಿಕೆ ಆಗುತ್ತಿದೆ. ಮುಂದೆ ಸರಿಪಡಿಸಿಕೊಳ್ಳುತ್ತೇನೆ. ನನಗೆ ತಾತನೇ ಸ್ಫೂರ್ತಿ. ಚಿಕ್ಕಪ್ಪ (ಡಾ.ಯತೀಂದ್ರ) ಕೂಡ ಉತ್ತೇಜನ ನೀಡುತ್ತಿದ್ದಾರೆ ಎಂದರು.
ಅಶೋಕ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಸ್ಫರ್ಧಿಸ್ತಾರಾ?: ಇಂದು ನಿರ್ಧಾರ
‘ಮರಿ ಹುಲಿಯಾಗೆ ಜೈ’: ಬಿಳಿ ಜುಬ್ಬಾ, ಪೈಜಾಮ ಧರಿಸಿ ಹುಟ್ಟೂರು ಸಿದ್ದರಾಮನಹುಂಡಿ, ಚಾಮುಂಡಿಬೆಟ್ಟ, ಉತ್ತನಹಳ್ಳಿ, ನಂಜನಗೂಡಿನಲ್ಲಿ ಕಾಣಿಸಿಕೊಂಡರು. ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ಮೆರ ವಣಿಗೆಯಲ್ಲಿ ತಾತನ ಕಾರನ್ನೇರಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರತ್ತ ಕೈಬೀಸಿದರು. ಜನ ಕೂಡ ಮರಿ ಹುಲಿ ಧವನ್ ರಾಕೇಶ್‌ಗೆ ಜೈ ಎಂಬ ಘೋಷಣೆ ಮೊಳಗಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ರಾಜಕೀಯಕ್ಕೆ ಸಿದ್ದು ಮೊಮ್ಮಗ ‘ಧವನ್’ ಎಂಟ್ರಿ: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಂಬದ ಮೂರನೇ ತಲೆಮಾರು, ಸಿದ್ದರಾಮಯ್ಯನವರ ಮೊಮ್ಮಗ ‘ಧವನ್’ ಅವರು ರಾಜಕೀಯ ಅಖಾಡಕ್ಕೆ ಇಳಿಯಲು ಉತ್ಸುಕರಾಗಿದ್ದು, ಖುದ್ದು ಸಿದ್ದರಾಮಯ್ಯನವರೇ ಮೊಮ್ಮಗನಿಗೆ ರಾಜಕೀಯ ಟ್ರೈನಿಂಗ್ ಆರಂಭಿಸಿದ್ದಾರೆ. ಸಿದ್ದರಾಮಯ್ಯನವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯನವರ ಪುತ್ರ ಇವರು. ಸಿದ್ದರಾಮಯ್ಯನವರು ಬುಧವಾರ ವರುಣದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಅವರು ಮೈಸೂರಿಗೆ ಆಗಮಿಸಿದರು.
ನಮ್ಮ ಜೀವನಾಡಿ ‘ನಂದಿನಿ’ ಮೇಲೇಕೆ ಕೇಂದ್ರ ಕಣ್ಣು?: ಟಿ.ಎ.ನಾರಾಯಣಗೌಡ
ಅವರು ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರ ಜೊತೆ ಧವನ್ ಕೂಡ ಆಗಮಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ, ‘ಧವನ್‌ಗೆ ರಾಜಕೀಯದಲ್ಲಿ ಬಹಳ ಆಸಕ್ತಿ ಇದೆ. ನಾಮಪತ್ರ ಸಲ್ಲಿಕೆ, ಪ್ರಚಾರ ವೈಖರಿ ಎಲ್ಲವನ್ನೂ ತಿಳಿದುಕೊಳ್ಳಲು ಸ್ವ-ಆಸಕ್ತಿಯಿಂದ ನನ್ನ ಜೊತೆ ಬಂದಿದ್ದಾನೆ. ಆತನಿಗೆ ಇನ್ನೂ 17 ವರ್ಷ, ರಾಜಕೀಯಕ್ಕೆ ಬರಲು ಬಹಳ ಸಮಯವಿದೆ. ಈಗ ಆಸಕ್ತಿಯಿಂದ ಎಲ್ಲವನ್ನೂ ನೋಡಿಕೊಳ್ಳಲು ಬರುತ್ತಿದ್ದಾನೆ. ಮೊಮ್ಮಗನಿಗೆ ರಾಜಕೀಯದಲ್ಲಿ ಆಸಕ್ತಿ ಇರುವುದು ತಾತನಾಗಿ ನನಗೆ ಖುಷಿ ಇದೆ. ಪ್ರಚಾರಕ್ಕೆ ಅವನು ಇಷ್ಟಪಟ್ಟು ಬಂದರೆ ಬರಲಿ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.