ನಮ್ಮ ಜೀವನಾಡಿ ‘ನಂದಿನಿ’ ಮೇಲೇಕೆ ಕೇಂದ್ರ ಕಣ್ಣು?: ಟಿ.ಎ.ನಾರಾಯಣಗೌಡ
- ಕನ್ನಡದ ಸಂಸ್ಥೆ ಉಳಿಸಿಕೊಳ್ಳದಿದ್ದರೆ ರೈತರು ಗುಜರಾತಿಗಳ ಗುಲಾಮಗಿರಿಗೆ.
- ಈಗಾಗಲೇ ಅನೇಕ ಕನ್ನಡ ಸಂಸ್ಥೆಗಳು ಆಪೋಶನ, ಈಗ ನಂದಿನಿ ಸರದಿ.
- ಇದು ಭಾರತದ ಒಕ್ಕೂಟ ವ್ಯವಸ್ಥೆ ಮೇಲೆ ಆಗುತ್ತಿರುವ ವ್ಯವಸ್ಥಿತ ದಾಳಿ.
ಲೇಖನ: ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ
‘ನಂದಿನಿ ಉಳಿಸಿ’ ಎನ್ನುವ ಅಭಿಯಾನ ಮೇಲ್ನೋಟಕ್ಕೆ ಕೆಎಂಎಫ್ ಉಳಿಸಿಕೊಳ್ಳುವ ಹೋರಾಟವಾಗಿ ಕಂಡರೂ, ಇದು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ ಆಗುತ್ತಿರುವ ವ್ಯವಸ್ಥಿತ ದಾಳಿಯ ವಿರುದ್ಧ ನಮ್ಮದು ಕೀರಲು ಧ್ವನಿಯಾಗಿ ಕೇಳಿಸುತ್ತಿದೆ. ಕನ್ನಡಿಗರು ಕಟ್ಟಿದ ಸಂಸ್ಥೆಯನ್ನು ನಾವು ಉಳಿಸಿಕೊಳ್ಳದಿದ್ದರೆ ನಮ್ಮ ರೈತರನ್ನು ಗುಜರಾತಿಗಳ ಗುಲಾಮಗಿರಿಗೆ ತಳ್ಳಿದಂತಾಗುತ್ತದೆ. ರಾಷ್ಟ್ರೀಯತೆಯ ಅಮಲಿನಲ್ಲಿರುವ ಜನರಿಗೆ ತಮ್ಮ ಮೇಲೆ ಆಗುತ್ತಿರುವ ಆಕ್ರಮಣಗಳು ಅರ್ಥವೇ ಆಗುತ್ತಿಲ್ಲ. ಭಾರತ ಒಕ್ಕೂಟ ವ್ಯವಸ್ಥೆಗೂ ‘ನಂದಿನಿ ಉಳಿಸಿ’ ಅಭಿಯಾನಕ್ಕೂ ಏನು ಸಂಬಂಧ ಎಂದು ಕೇಳುವವರೇ ಹೆಚ್ಚು.
‘ಅಮುಲ್’ ಹಾಗೂ ‘ನಂದಿನಿ’ ವಿಲೀನವಾದರೆ ಕೆಎಂಎಫ್ ಕನ್ನಡಿಗರ ಸಂಸ್ಥೆಯಾಗಿ ಉಳಿಯುವುದಿಲ್ಲ, ಕನ್ನಡಿಗರ ಹಿಡಿತದಲ್ಲೂ ಇರುವುದಿಲ್ಲ. ಕನ್ನಡಿಗರು ಕಟ್ಟಿದ ಸಂಸ್ಥೆಗಳನ್ನು ಒಂದೊಂದಾಗಿ ಆಪೋಷನ ತೆಗೆದುಕೊಂಡಿದ್ದಾಗಿದೆ. ಈಗ ನಂದಿನಿಯ ಸರದಿ! ನಮ್ಮ ನಾಡಿನ ಪ್ರಾತಃಸ್ಮರಣೀಯರು ಕಟ್ಟಿದ ಬ್ಯಾಂಕುಗಳ ಗತಿ ಏನಾಯಿತು? ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಮೈಸೂರು ಬ್ಯಾಂಕ್‌ನ್ನು ಸ್ಟೇಟ್ ಬ್ಯಾಂಕ್ ಇಂಡಿಯಾ ಜೊತೆ ವಿಲೀನಗೊಳಿಸಲಾಗಿದೆ. ಅತ್ತಾವರ ಬಾಲಕೃಷ್ಣಶೆಟ್ಟಿಕಟ್ಟಿದ ವಿಜಯ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ಸೇರಿಸಲಾಗಿದೆ.
ಕಾಂಗ್ರೆಸ್‌ನ ಬೈರತಿ ಸುರೇಶ್ ಆಸ್ತಿ 649 ಕೋಟಿ: ಸಿಎಂ ಬೊಮ್ಮಾಯಿ ಆಸ್ತಿ 3 ಪಟ್ಟು ಹೆಚ್ಚಳ
ಹಾಜಿ ಅಬ್ದುಲ್ಲಾ ಕಟ್ಟಿದ ಕಾರ್ಪೊರೇಷನ್ ಬ್ಯಾಂಕ್‌ನ್ನು ಯೂನಿಯನ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಹೀಗೆ ಉತ್ತರ ಭಾರತದ ದಿವಾಳಿಯಾದ ಬ್ಯಾಂಕ್‌ಗಳೊಂದಿಗೆ ಲಾಭದಲ್ಲಿದ್ದ ನಮ್ಮ ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ. ಈಗೇನಾಗಿದೆ? ಕೆಲವು ಬ್ಯಾಂಕುಗಳ ಪ್ರಧಾನ ಕಚೇರಿಯಲ್ಲಿ ಅಳವಡಿಸಲಾಗಿದ್ದ ಈ ಬ್ಯಾಂಕುಗಳ ಸ್ಥಾಪಕರ ಫೆäಟೋಗಳನ್ನು ತೆಗೆದು ಹಾಕಲಾಗಿದೆ. ನಮ್ಮ ಅಸ್ಮಿತೆಗಳನ್ನು, ನಮ್ಮ ಹಿರಿಯರನ್ನು ಮರೆತು, ನಾವು ಕಟ್ಟುವ ನಾಡಾದರೂ ಹೇಗಿರಲು ಸಾಧ್ಯ? ವಿಲೀನಗೊಳಿಸಲಾದ ಬ್ಯಾಂಕುಗಳನ್ನು ಆಳುತ್ತಿರುವವರು ಯಾರು? ಎಲ್ಲರೂ ಉತ್ತರ ಭಾರತೀಯರು. ಅವರಿಗೆ ಕನ್ನಡವೂ ಬೇಕಿಲ್ಲ, ಕನ್ನಡಿಗರ ಸಂಸ್ಕೃತಿಯೂ ಬೇಕಿಲ್ಲ. ಮುಂದಿನ ದಿನಗಳಲ್ಲಿ ‘ನಂದಿನಿ’ ಕಥೆಯೂ ಹೀಗೆ ಆಗಲಿದೆ.
ಸಹಕಾರಿ ಮಾರುಕಟ್ಟೆ ನಿಯಂತ್ರಣ: ರಾಜ್ಯಪಟ್ಟಿಯಲ್ಲಿದ್ದ ಹಲವು ವಿಷಯಗಳನ್ನು ಕೇಂದ್ರ ಸರ್ಕಾರ ಯಾವ ಮುಲಾಜು ನೋಡದೆ ಕೇಂದ್ರ ಪಟ್ಟಿಗೆ ಸೇರಿಸಿಕೊಂಡಿದೆ. ಅದೇ ರೀತಿ ರಾಜ್ಯ ಪಟ್ಟಿಯಲ್ಲಿದ್ದ ಸಹಕಾರಿ ಇಲಾಖೆಯನ್ನು ಕೇಂದ್ರ ಸರ್ಕಾರ ಕೇಂದ್ರ ಪಟ್ಟಿಗೆ ತೆಗೆದುಕೊಂಡಿದೆ. ಇಡೀ ದೇಶದ ಸಹಕಾರಿ ಮಾರುಕಟ್ಟೆನಿಯಂತ್ರಿಸುವ ಸಲುವಾಗಿ 2021 ಜುಲೈ 6ರಂದು ಕೇಂದ್ರ ಸರ್ಕಾರದ ಅಡಿಯಲ್ಲಿ ಸಹಕಾರಿ ಇಲಾಖೆಯನ್ನು ಹೊಸದಾಗಿ ಸ್ಥಾಪಿಸಲಾಗಿದೆ. ಜುಲೈ 7ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಗಿದೆ.
ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್ ಶಾ ಮತ್ತೊಂದು ಹೇಳಿಕೆ ನೀಡಿ, ‘ಅಮುಲ್’ ಜೊತೆಗೆ ಐದು ಸಹಕಾರಿ ಸಂಸ್ಥೆಗಳನ್ನು ವಿಲೀನಗೊಳಿಸಿ ಬಹುರಾಜ್ಯ ಸಹಕಾರಿ ಸಂಸ್ಥೆ ಆರಂಭಿಸಲಾಗುವುದು ಎಂಬ ಹೇಳಿಕೆ ನೀಡಿದ್ದರು. ಡಿಸೆಂಬರ್ 30ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್ ಶಾ, ಕರ್ನಾಟಕದಲ್ಲಿ ‘ಅಮುಲ್’ ಮತ್ತು ‘ನಂದಿನಿ’ ಸಂಸ್ಥೆಗಳು ಒಟ್ಟಾಗಿ ಪ್ರತಿ ಹಳ್ಳಿಗಳಲ್ಲಿ ಪ್ರೈಮರಿ ಡೈರಿಗಳನ್ನು ತೆರೆಯಲಿವೆ. ಇನ್ನು ಮೂರು ವರ್ಷಗಳಲ್ಲಿ ಕರ್ನಾಟಕದ ಒಂದೂ ಹಳ್ಳಿಯನ್ನೂ ಬಿಡದಂತೆ ಎಲ್ಲ ಹಳ್ಳಿಗಳಲ್ಲೂ ಅಮುಲ್ ಮತ್ತು ನಂದಿನಿಗಳು ಒಂದಾಗಿ ಪ್ರೈಮರಿ ಡೈರಿಗಳನ್ನು ತೆರೆಯಲಿವೆ ಎಂದು ಹೇಳಿಕೆ ನೀಡಿದರು.
ಇದರ ಬೆನ್ನಲ್ಲೇ, 2023ರ ಜನವರಿ 11ರಂದು ಕೇಂದ್ರ ಸಚಿವ ಸಂಪುಟ ಬಹುರಾಜ್ಯ ಸಹಕಾರಿ ಸಂಸ್ಥೆ ಸ್ಥಾಪನೆಗೆ ಒಪ್ಪಿಗೆ ನೀಡಿತು. ಗುಜರಾತ್‌ನ ಗಾಂಧಿನಗರದಲ್ಲಿ 2023ರ ಮಾಚ್‌ರ್ 18ರಂದು ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್ ಶಾ ಹೇಳಿಕೆ ನೀಡಿ, ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕ ಸಹಕಾರ ಸಂಘಟನೆಗಳನ್ನು ಬಹುರಾಜ್ಯ ಸಹಕಾರ ಸಂಸ್ಥೆಯಡಿಯಲ್ಲಿ ತರುವುದಾಗಿ ಘೋಷಿಸಿದರು. ಇಷ್ಟೆಲ್ಲ ನಡೆದ ಮೇಲೂ ಅಮುಲ್-ನಂದಿನಿ ವಿಲೀನದ ಮಾತು ಕೇವಲ ಊಹಾಪೋಹ ಎನ್ನುವ ಬಿಜೆಪಿ ನಾಯಕರ ಮಾತನ್ನು ನಂಬಲು ಸಾಧ್ಯವೇ?.
ನಂದಿನಿ ವಿಲೀನವೇಕೆ?: ಕೆಎಂಎಫ್ ಅಡಿಯಲ್ಲಿ 17,014 ನೋಂದಾಯಿತ ಸಂಘಗಳು ಇದ್ದು, 27,000 ಹಳ್ಳಿಗಳಲ್ಲಿ ಈ ಸಂಘಗಳು ಕಾರ್ಯನಿರ್ವಹಿಸುತ್ತಿವೆ. 15,043 ಸಂಘಗಳು ಸಕ್ರಿಯವಾಗಿವೆ. ಇಷ್ಟುದೊಡ್ಡ ಜಾಲವನ್ನು ಹೊಂದಿರುವ ಕೆಎಂಎಫ್ ಪ್ರತಿನಿತ್ಯ 70 ರಿಂದ 80 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದೆ. ಈಗಾಗಲೇ ಪ್ರತಿ ಆರ್ಥಿಕ ವರ್ಷದಲ್ಲಿ ಸರಿಸುಮಾರು 5 ಸಾವಿರ ಕೋಟಿ ರು. ಆದಾಯವನ್ನು ಕೆಎಂಎಫ್ ಗಳಿಸುತ್ತಿದೆ. ಕೆಎಂಎಫ್ ವಹಿವಾಟು 20 ಸಾವಿರ ಕೋಟಿಯ ಸನಿಹ ತಲುಪಿದೆ. ಒಟ್ಟಾರೆಯಾಗಿ ಸುಮಾರು 26 ಲಕ್ಷ ರೈತ ಕುಟುಂಬಗಳು ಹೈನುಗಾರಿಕೆಯನ್ನು, ಕೆಎಂಎಫ್ ನಂಬಿಕೊಂಡು ಬದುಕು ಕಟ್ಟಿಕೊಂಡಿವೆ. ಇಂಥ ಸಂಸ್ಥೆಯನ್ನು ಇನ್ಯಾವುದೋ ಸಂಸ್ಥೆ ಜೊತೆ ಯಾಕೆ ವಿಲೀನ ಮಾಡಬೇಕು? ಅದರ ಅಗತ್ಯವಾದರೂ ಏನು?
ಇತ್ತೀಚಿಗೆ ಬಹುರಾಜ್ಯ ಸಹಕಾರಿ ಸಂಸ್ಥೆ ತಿದ್ದುಪಡಿ ವಿಧೇಯಕವನ್ನು ಕೇಂದ್ರ ಗೃಹ-ಸಹಕಾರಿ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಮಂಡಿಸಿದ್ದು, ಅದು ಜಾರಿಯಾಗುವ ಹಂತದಲ್ಲಿದೆ. ಇದರ ಪ್ರಕಾರ ಹೈನುಗಾರಿಕೆಗೆ ಸಂಬಂಧಿಸಿದ ಎಲ್ಲ ಸಹಕಾರಿ ಸಂಘಗಳೂ ಕೇಂದ್ರ ಸರ್ಕಾರದ ನೇರ ನಿಯಂತ್ರಣಕ್ಕೆ ಬರಲಿದೆ. ಕೆಎಂಎಫ್‌ನಂಥ ಮಹಾಮಂಡಳದ ಚುನಾವಣೆಗಳನ್ನು ಕೇಂದ್ರ ಸರ್ಕಾರವೇ ನಡೆಸಲಿದ್ದು, ಕೇಂದ್ರ ಸರ್ಕಾರದ ನಾಮನಿರ್ದೇಶಿತ ಸದಸ್ಯರೂ ಸಹ ಮಂಡಳವನ್ನು ಸೇರಲಿದ್ದಾರೆ. ಅಲ್ಲಿಗೆ ಕೆಎಂಎಫ್ ಕರ್ನಾಟಕ ಸರ್ಕಾರದ ಕೈ ತಪ್ಪಲಿದೆ.
ಕೆಎಂಎಫ್ ಮೇಲೆ ಅಮುಲ್ ಹಿಡಿತ?: ಕೆಎಂಎಫ್ ಡಿಸೆಂಬರ್ ನಲ್ಲಿ ನಡೆಸಿದ ವಿವಿಧ ವೃಂದಗಳ ಸುಮಾರು 487 ಹುದ್ದೆಗಳ ನೇಮಕಾತಿಯನ್ನು ನಡೆಸಲು ಗುಜರಾತ್‌ನ ಇನ್ಸಿ$್ಟಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಆನಂದ್ (ಐಆರ್ ಎಂಎ) ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಕನ್ನಡಿಗರು ಕಟ್ಟಿದ ಕೆಎಂಎಫ್‌ನಲ್ಲಿ ಉದ್ಯೋಗ ನೇಮಕಾತಿಯನ್ನು ಗುಜರಾತಿ ಸಂಸ್ಥೆ ಯಾಕೆ ಮಾಡಬೇಕು? ನೇಮಕಾತಿ ನಡೆಸಲು ಕರ್ನಾಟಕದ ಯಾವುದೇ ಸಂಸ್ಥೆ ಇಲ್ಲವೇ? ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಅಮುಲ್ ಸಂಸ್ಥೆಯವರು ಕೆಎಂಎಫ್ ಒಳಗೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ ಎಂಬ ಅನುಮಾನ ಮೂಡಿದೆ.
ಬೇರೆ ಸಂಸ್ಥೆಗಳಿಂದ ಹುನ್ನಾರವಿಲ್ಲ: ಕರ್ನಾಟಕದಲ್ಲಿ ನಂದಿನಿ ಅಲ್ಲದೇ ಬೇರೆ ಹಾಲು ಬರುತ್ತಿಲ್ಲವೇ? ಅಮುಲ್‌ಗೆ ಮಾತ್ರ ಯಾಕೆ ವಿರೋಧ ಎಂದು ಹಲವರು ಪ್ರಶ್ನಿಸುತ್ತಾರೆ. ಕರ್ನಾಟಕದಲ್ಲಿ ದೊಡ್ಲಾ, ಹೆರಿಟೇಜ್, ಆರೋಗ್ಯ ಇತ್ಯಾದಿ ಹಾಲುಗಳು ಮಾರಾಟವಾಗುತ್ತಿರುವುದು ನಿಜ. ಅಷ್ಟೇ ಯಾಕೆ ಅಮುಲ್ ಸಹ ಮಹಾರಾಷ್ಟ್ರಕ್ಕೆ ಗಡಿಭಾಗದಲ್ಲಿರುವ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಹಾಲು ಮಾರುತ್ತಿರುವುದು ನಿಜ. ಆದರೆ ಇತರ ಸಂಸ್ಥೆಗಳು ಅಮುಲ್‌ನಷ್ಟುದೈತ್ಯ ಸಂಸ್ಥೆಗಳಲ್ಲ. ಅವು ಕರ್ನಾಟಕದಲ್ಲಿ ಡೈರಿಗಳನ್ನು ಸ್ಥಾಪಿಸಿ, ಇಲ್ಲಿನ ರೈತರಿಂದ ಹಾಲು ಸಂಗ್ರಹಿಸುತ್ತಿಲ್ಲ. ಕೇಂದ್ರದ ನೀತಿಯನ್ನು ನಮ್ಮ ಮೇಲೆ ಹೇರುತ್ತಿಲ್ಲ.
ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ 24 ಗಂಟೆಯಲ್ಲೇ ಬದಲು
ಅಮುಲ್ ಕರ್ನಾಟಕಕ್ಕೆ ಬಂದಿರುವುದು ಒಂದು ವ್ಯವಸ್ಥಿತ ಸಂಚಿನ ರೂಪದಲ್ಲಿ. ಆ ಸಂಚನ್ನು ರೂಪಿಸುತ್ತಿರುವುದೇ ಕೇಂದ್ರ ಸರ್ಕಾರದ ಆಯಕಟ್ಟಿನ ಜಾಗದಲ್ಲಿ ಕುಳಿತಿರುವ ಗುಜರಾತಿ ರಾಜಕಾರಣಿಗಳು. ‘ಅಮುಲ್’, ‘ನಂದಿನಿ’ ಸೇರಿದಂತೆ ಆರು ಬಹುದೊಡ್ಡ ಹೈನುಗಾರಿಕೆಯ ಸಹಕಾರಿಗಳು ವಿಲೀನಗೊಂಡರೆ ಏಕೀಕೃತಗೊಂಡ ಸಂಸ್ಥೆಯನ್ನು ನಡೆಸುವವರು ಗುಜರಾತಿ ಉದ್ಯಮಿಗಳೇ ಆಗಿರುತ್ತಾರೆ. ಸಹಕಾರಿ ಸಂಸ್ಥೆಗಳನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಧಾರೆಯೆರೆಯಲು ಕಾನೂನು ಸಮ್ಮತಿಸುವುದಿಲ್ಲ ಎಂದು ಹೇಳಬಹುದು. ಆದರೆ ಕೇಂದ್ರ ಸರ್ಕಾರ ಕಾರ್ಪೊರೇಟ್‌ಗಳಿಗಾಗಿ ಕಾನೂನನ್ನೇ ಬದಲಿಸಿದೆ. ಉದಾಹರಣೆಗೆ ಅದಾನಿ ಸಂಸ್ಥೆಗೆ ಏರ್‌ಪೋರ್ಚ್‌ಗಳನ್ನು ನೀಡಲು ಕಾನೂನನ್ನೇ ಬದಲಾಯಿಸಲಿಲ್ಲವೇ?.
‘ಅಮುಲ್’ ಸಂಸ್ಥೆ ಬಗ್ಗೆ ನಮಗೆ ಯಾವುದೇ ದ್ವೇಷ, ಪೂರ್ವಾಗ್ರಹವಾಗಲೀ ಇಲ್ಲ. ನಮ್ಮ ‘ನಂದಿನಿ’ಯಂತೆ ಅದನ್ನು ಬೆಳೆಸಿದವರೂ ಕೂಡ ರೈತರೇ. ಆದರೆ ಹಾಲು ಮಾತ್ರವಲ್ಲದೆ ಹಾಲಿನ ಉಪ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್, ಸಿಹಿತಿಂಡಿಗಳು, ಚಾಕಲೇಟ್ ಇತ್ಯಾದಿ ಉತ್ಪನಗಳ ಸಂಸ್ಕರಣೆ, ಮಾರಾಟದ ಬೃಹತ್ ಜಾಗತಿಕ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿರುವ ಕಾರ್ಪೊರೇಟ್ ಸಂಸ್ಥೆಗಳ ಸಂಚಿನ ಭಾಗವಾಗಿ ನಾವು ಹೊಡೆದಾಡಿಕೊಳ್ಳುವ ಸ್ಥಿತಿ ತಲುಪಿದೆ. ಸ್ವಾತಂತ್ರ್ಯ ನಂತರ ಕರ್ನಾಟಕದ ದೊರೆಗಳು ಭಾರತ ಒಕ್ಕೂಟದಲ್ಲಿ ಸೇರುವಾಗ ಭಾರತ ಒಕ್ಕೂಟವು ಜನರನ್ನು ಗೌರವದಿಂದ ನೋಡಿಕೊಳ್ಳುತ್ತದೆ ಎಂಬ ವಿಶ್ವಾಸ ಹೊಂದಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲೂ ಕನ್ನಡಿಗರು ಪ್ರಾಣ ಒತ್ತೆಯಿಟ್ಟು ಹೋರಾಡಿದರು. ಆದರೆ ಭಾರತ ಸರ್ಕಾರ ಕನ್ನಡಿಗರನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆಯೇ? ಈ ಪ್ರಶ್ನೆಗೆ ಉತ್ತರಿಸುವವರು ಯಾರು?