ಮತದಾನದ ದಿನ ಸಮೀಪಿಸುತ್ತಿದ್ದಂತೆ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ಸ್ಪರ್ಧಿಸಿರುವ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಅಭ್ಯರ್ಥಿಗಳು ಸೇರಿದಂತೆ ಅವರೊಂದಿಗೆ ಪ್ರಚಾರದಲ್ಲಿ ತೊಡಗಿರುವವರಿಗೆ ಬಿಸಿಲಿನ ಧಗೆ ಮಾತ್ರ ದಂಗು ಬಡಿಸಿದೆ.
ಬಸವರಾಜ ಹಿರೇಮಠ
ಧಾರವಾಡ (ಏ.27) : ಮತದಾನದ ದಿನ ಸಮೀಪಿಸುತ್ತಿದ್ದಂತೆ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದೆ. ಸ್ಪರ್ಧಿಸಿರುವ ಅಭ್ಯರ್ಥಿಗಳು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಅಭ್ಯರ್ಥಿಗಳು ಸೇರಿದಂತೆ ಅವರೊಂದಿಗೆ ಪ್ರಚಾರದಲ್ಲಿ ತೊಡಗಿರುವವರಿಗೆ ಬಿಸಿಲಿನ ಧಗೆ ಮಾತ್ರ ದಂಗು ಬಡಿಸಿದೆ.
ಧಾರವಾಡದಂತಹ ಊರಿನಲ್ಲೂ ಮಧ್ಯಾಹ್ನದ ಹೊತ್ತು 37 ರಿಂದ 39 ಡಿಗ್ರಿ ಸೆಲ್ಸಿಯಸ್ ವರೆಗೆ ಬಿಸಿಲಿನ ಕಾವು ಅಕ್ಷರಶಃ ಪ್ರಚಾಕರ ನೆತ್ತಿ ಸುಡುತ್ತಿದೆ. ಮತದಾನಕ್ಕೆ 15 ದಿನಗಳು ಮಾತ್ರ ಬಾಕಿ ಉಳಿದಿದ್ದು, ಅಭ್ಯರ್ಥಿಗಳು ಶತಾಯ-ಗತಾಯ ಗೆಲುವಿಗಾಗಿ ಶ್ರಮ ಪಡುತ್ತಿದ್ದಾರೆ. ಆದರೆ, ಅಬ್ಬರದ ಪ್ರಚಾರಕ್ಕೆ ಬಿಸಿಲು ಅಡ್ಡಿ ಮಾಡುತ್ತಿದೆ. ಆದ್ದರಿಂದ ಬೆಳಗ್ಗೆ 6ರಿಂದ 11ರ ವರೆಗೆ ಹಾಗೂ ಸಂಜೆ 4 ರಿಂದ 8ರ ವರೆಗೆ ಮಾತ್ರ ಮನೆ ಮನೆ ಪ್ರಚಾರ ಮಾಡುವಂತಾಗಿದೆ. ಮಧ್ಯಾಹ್ನದ ಹೊತ್ತು ಸುಸ್ತಾಗಿ ಅಭ್ಯರ್ಥಿಗಳು ಮನೆ ಹಿಡಿದು ಕೂರುವಂತಾಗಿದೆ.
ಬಿಸಿಲಿಗೆ 12 ಮಂದಿ ಸಾವು, ಮಾರಣಾಂತಿಕ ಹೀಟ್‌ಸ್ಟ್ರೋಕ್‌ನಿಂದ ಬಚಾವ್ ಆಗೋದು ಹೇಗೆ?
ಸಿಗುತ್ತಿಲ್ಲ ಪ್ರಚಾರಕರು
ಹುಬ್ಬಳ್ಳಿ-ಧಾರವಾಡ(Hubballi-dharwad) ಅವಳಿ ನಗರದ ಕ್ಷೇತ್ರಗಳಲ್ಲಿ ತಮ್ಮ ಪರವಾಗಿ ಪ್ರಚಾರ ಮಾಡಲು ಅಭ್ಯರ್ಥಿಗಳು ಸ್ಥಳೀಯವಾಗಿ ಜನರನ್ನು ನೇಮಿಸಿಕೊಂಡಿದ್ದು, ದಿನಕ್ಕೆ .400 ರಿಂದ .600 ಕೊಡುತ್ತಿದ್ದಾರೆ. ಇಷ್ಟಾಗಿಯೂ ಸಮರ್ಪಕವಾಗಿ ಪ್ರಚಾರಕರು ಸಿಗುತ್ತಿಲ್ಲ. ಸಿಕ್ಕ ಪ್ರಚಾರಕರಿಗೆ ಕಡ್ಡಾಯವಾಗಿ ಟೋಪಿ, ಕುಡಿಯಲು ನೀರು ಹಾಗೂ ಮಜ್ಜಿಗೆ ಹಾಗೂ ಐಸಕ್ರೀಮ್ ವ್ಯವಸ್ಥೆ ಸಹ ಅಭ್ಯರ್ಥಿಗಳು ಮಾಡುವ ಸ್ಥಿತಿ ಬಂದಿದೆ.
ಗ್ರಾಮೀಣದಲ್ಲೂ ಇದೇ ಸ್ಥಿತಿ. ನಗರಕ್ಕಿಂತ ಹೆಚ್ಚು ಬಿಸಿಲು. ಬಯಲು ಸೀಮೆಯಲ್ಲಿ ಗಿಡಗಳ ಸಂಖ್ಯೆ ಕಡಿಮೆ. ಹೀಗಾಗಿ ಗಾಳಿಯೂ ಇಲ್ಲದೇ ಬಿಸಿ ಗಾಳಿಗೆ ಜನರು ನಲುಗಿ ಹೋಗುತ್ತಿದ್ದಾರೆ. ಮಲೆನಾಡಿನ ಕಲಘಟಗಿ ಹಾಗೂ ಅಳ್ನಾವರ ಭಾಗದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.
ಸಂಜೆಯೇ ಸಮಾವೇಶ:
ಹಾಗೆಯೇ, ರಾಜಕೀಯ ಪಕ್ಷಗಳು ನಿತ್ಯವೂ ಬಹಿರಂಗ ಸಮಾವೇಶ ಹಮ್ಮಿಕೊಳ್ಳುತ್ತಿದ್ದಾರೆ. ಆಯಾ ಪಕ್ಷಗಳ ನಾಯಕರನ್ನು ಕರೆಯಿಸಿ ದೊಡ್ಡ ಪ್ರಮಾಣದಲ್ಲಿ ಜನರನ್ನು ಸೇರಿಸಿ ಪ್ರಚಾರ ಮಾಡಬೇಕೆಂದರೆ ಸಂಜೆಯೇ ಮಾಡುವ ಸ್ಥಿತಿ. ಬೆಳಿಗ್ಗೆ, ಮಧ್ಯಾಹ್ನದ ಸಮಾವೇಶಗಳಿಗೆ ಜನರು ಸೇರುತ್ತಿಲ್ಲ. ಕಾರಣ ಬಿಸಿಲು.
ಎರಡು ದಿನಗಳ ಹಿಂದಷ್ಟೇ ಧಾರವಾಡ ತಾಲೂಕು ಕರಡಿಗುಡ್ಡದಲ್ಲಿ ಮುಖ್ಯಮಂತ್ರಿಗಳ ಜಯವಾಹಿನಿ ಯಾತ್ರೆ ನಡೆಯಿತು. ಬೆಳಗ್ಗೆ 11ಕ್ಕೆ ಜನರು ಸೇರಿದ್ದು ಮುಖ್ಯಮಂತ್ರಿಗಳು ಮಧ್ಯಾಹ್ನ 1ಕ್ಕೆ ಆಗಮಿಸಿದರು. ಬಿಸಿಲಿನ ಬೇಗೆಗೆ ಬೆಂದ ಗ್ರಾಮೀಣ ಜನತೆ ಸುಸ್ತಾಗಿ ಹೋದರು. ಸಂಜೆ 8ರ ವರೆಗೆ ಪ್ರಚಾರ ಮಾಡಲು ಚುನಾವಣಾ ಆಯೋಗದ ನಿರ್ದೇಶನ.
ಕಲಘಟಗಿ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಸಂತೋಷ ಲಾಡ್ ದೇವರ ಹುಬ್ಬಳ್ಳಿಯಲ್ಲಿ ಸಂಜೆ 5ಕ್ಕೆ ಸಮಾವೇಶ ಆಯೋಜಿಸಿದ್ದರು. ಜನರು ಸೇರಿದ್ದು 8 ಗಂಟೆಗೆ. ಆಯೋಗಕ್ಕೆ ಮನವಿ ಸಲ್ಲಿಸಿ ಒಂದು ಗಂಟೆ ಸಮಯ ವಿಸ್ತರಣೆ ಮಾಡಿಕೊಳ್ಳಲು ಹರಸಾಹಸ ಪಡಬೇಕಾಯಿತು.
ವಿಪರೀತ ಬಿಸಿಲೇರುತ್ತಿರುವ ಕಾರಣ ಪ್ರಚಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನರು ಸಿಗುತ್ತಿಲ್ಲ. ಅನಿವಾರ‍್ಯವಾಗಿ ಕಾರ್ಯಕರ್ತರನ್ನೇ ಹೆಚ್ಚು ಬಳಸಿಕೊಳ್ಳಲಾಗುತ್ತಿದೆ. ಹಾಗೆಯೇ ನಿತ್ಯ ಬೆಳಗ್ಗೆ 5ಕ್ಕೆ ಎದ್ದು ವಾಯುವಿಹಾರಿಗಳಿಂದ ಪ್ರಚಾರ ಕಾರ‍್ಯ ಶುರು ಮಾಡಿ 11ಕ್ಕೆ ಮುಕ್ತಾಯ ಮಾಡುತ್ತಿದ್ದೇನೆ. ಸಂಜೆ 4 ರಿಂದ 8ರ ವರೆಗೆ ಪ್ರಚಾರ ಮಾಡುತ್ತಿದ್ದು, ಮಧ್ಯಾಹ್ನ ಹೊತ್ತಿನಲ್ಲಿ ಚುನಾವಣಾ ತಂತ್ರಗಳನ್ನು ಮಾತ್ರ ಮಾಡುವ ಸ್ಥಿತಿ ಉಂಟಾಗಿದೆ ಎಂದು ಹು-ಧಾ ಪಶ್ಚಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ ಚಿಂಚೋರೆ ಬಿಸಿಲಿನ ಪರಿಣಾಮಗಳನ್ನು ಹೇಳಿದರು.
ದೇಶದ ಹಲವು ರಾಜ್ಯಗಳಿಗೆ ಬಿಸಿಗಾಳಿ ಹೊಡೆತ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಈ ಬಿಸಿಲಿನಿಂದ ಸನ್ ಸ್ಟೊ್ರೕಕ್ ಆಗುವ ಸಾಧ್ಯತೆಗಳು ಹೆಚ್ಚಿವೆ. ಅದರಲ್ಲೂ ಮಕ್ಕಳು ಮತ್ತು ವಯಸ್ಸಾದವರಿಗೆ ಹೆಚ್ಚು ಪ್ರತಿಕೂಲ. ಬಿಸಿಲಿಗೆ ಬೇಗ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ ಅನೇಕ ತೊಂದರೆಗಳು ಆಗುತ್ತವೆ. ಆದ್ದರಿಂದ ಬಿಸಿಲಿನ ಹೊತ್ತು ಹೊರ ಹೋಗದಂತೆ ಎಚ್ಚರಿಕೆ ಕ್ರಮಗಳನ್ನು ಹವಾಮಾನ ಇಲಾಖೆ ನೀಡಿದೆ.