
ಬೆಂಗಳೂರು (ಆ.16): ಕಾಂಗ್ರೆಸ್ ಪಕ್ಷ ಕಮ್ಯೂನಿಸ್ಟ್ ಪಕ್ಷವಾಗಿದ್ದು, ಧಾರ್ಮಿಕ ಸ್ಥಳ ಧರ್ಮಸ್ಥಳದ ವಿಚಾರದಲ್ಲಿ ಕಮ್ಯೂನಿಸ್ಟ್ ಚಿಂತನೆಗಳನ್ನು ಬಿತ್ತಲಾಗುತ್ತಿದೆ. ಅನಾಮಿಕ ವ್ಯಕ್ತಿ ಮಾತು ಕೇಳಿ ಧರ್ಮಸ್ಥಳದಲ್ಲಿ ಎಲ್ಲೆಂದರಲ್ಲಿ ಅಗೆದು ಜನರ ಧಾರ್ಮಿಕ ಭಾವನಗೆ ಧಕ್ಕೆ ಉಂಟು ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ಜನತೆ ಕ್ಷಮೆ ಕೇಳಿ, ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನದಲ್ಲಿ’ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅಲ್ಲಿ ಏನೂ ಸಿಗದ ಕಾರಣ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಿದ್ದಾರೆ. ಅವರ ಸಹೋದರ ಡಿ.ಕೆ ಸುರೇಶ್ ಧರ್ಮಸ್ಥಳ ಧಾರ್ಮಿಕ ಭಾವನೆಗಳ ಕ್ಷೇತ್ರ, ಈ ರೀತಿಯ ಘಟನೆ ಆಗಬಾರದಾಗಿತ್ತು ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ಧರ್ಮಸ್ಥಳದಲ್ಲಿ ತನಿಖೆ ನಡೆಸಿದರೂ ಏನೂ ಸಿಗಲಿಲ್ಲ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದೇವೆ. ಅದಕ್ಕಾಗಿ ನಿರೀಕ್ಷಣಾ ಜಾಮೀನು ಪಡೆಯುವ ರೀತಿಯಲ್ಲಿ ಧರ್ಮಸ್ಥಳ ಪ್ರಕರಣ ಒಂದು ಷಡ್ಯಂತ್ರ. ಇದಕ್ಕೆ ಕಮ್ಯುನಿಸ್ಟರು ಕಾರಣ. ಅವರ ಒತ್ತಾಯದ ಮೇಲೆ ನಾವು ಎಸ್‍ಐಟಿಯನ್ನು ರಚಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ರಾಜ್ಯ ಸರ್ಕಾರ ಆರ್‌ಸಿಬಿ ಕಪ್ ಗೆದ್ದಾಗ ಮುಂದಾಲೋಚನೆ ಇಲ್ಲದೆ ತಪ್ಪು ಮಾಡಿ ಕಾಲ್ತುಳಿತದಿಂದ 11 ಜನರ ಮರಣಕ್ಕೆ ಕಾರಣವಾಯಿತು. ಇಂತಹ ತಪ್ಪು ಮಾಡಿದ್ದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಮತ್ತೊಂದು ಎಡವಟ್ಟನ್ನು ಮಾಡುವುದಕ್ಕೆ ಹೊರಟಿದೆ ಎಂದು ಆಕ್ಷೇಪಿಸಿದರು.
ಧರ್ಮಸ್ಥಳ ಒಂದು ಪವಿತ್ರ ಧಾರ್ಮಿಕ ಸ್ಥಳ. ಇಡೀ ರಾಜ್ಯದ ಸಾಮಾನ್ಯ ಜನರೂ ಶ್ರೀ ಮಂಜುನಾಥನ ಕೃಪೆಗೆ ಪಾತ್ರರಾಗಿ ಭಕ್ತಿಯಿಂದ ದರ್ಶನ ಪಡೆಯುವ ಕಾರ್ಯವನ್ನು ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಆದರೆ ಒಂದು ಧಾರ್ಮಿಕ ಸ್ಥಳದ ವಿಚಾರದಲ್ಲಿ ತಪ್ಪು ಕಲ್ಪನೆ ಮತ್ತು ಅಪವಾದ ಮಾಡಲು ಇಂದು ಕೆಲವರು ಪ್ರಚೋದನೆಯನ್ನು ಮಾಡುತ್ತಿದ್ದಾರೆ. ಇದೇ ಗುಂಪು ಶಬರಿಮಲೆಯಲ್ಲೂ ಅಪಪ್ರಚಾರದ ಕೆಲಸ ಮಾಡಿತ್ತು. ಅಲ್ಲಿ ಏನೂ ಪ್ರಯೋಜನವಾಗಲಿಲ್ಲ. ಇನ್ನಷ್ಟು ಭಕ್ತರು ಹೆಚ್ಚಾದರು. ಪ್ರಸ್ತುತ ಅದೇ ಗುಂಪು ಧರ್ಮಸ್ಥಳದ ವಿರೋಧವಾಗಿ ಕೂಡ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಆರೋಪ ಮಾಡಿದರು.
ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವಾಗಿ ಉಳಿದಿಲ್ಲ. ಅದು ಕಮ್ಯುನಿಸ್ಟ್ ಕಾಂಗ್ರೆಸ್ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಪ್ರಾರಂಭಿಸಿದೆ. ಕಮ್ಯುನಿಸ್ಟ್ ಚಿಂತನೆಗಳನ್ನು ಕಾಂಗ್ರೆಸ್ ನಾಯಕರು ಪೈಪೋಟಿಗೆ ಬಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಮಾಡಿಸುವುದಕ್ಕೆ ಹೊರಟಿದ್ದಾರೆ. ಈ ಕಾರಣದಿಂದ ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ಹುಟ್ಟಿಕೊಂಡಿದ್ದಾನೆ. ಅನಾಮಿಕ ವ್ಯಕ್ತಿಯನ್ನು ಮುಂದಿಟ್ಟು ಧರ್ಮಸ್ಥಳದಲ್ಲಿ 13 ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ನಾವು ಹೆಣಗಳನ್ನು ಹೂತು ಹಾಕಿದ್ದೇವೆ. ಇದೆಲ್ಲವನ್ನು ಅಗೆದು ತೆಗೆದರೆ ನಾವು ಸಾಕ್ಷಿ ತೋರಿಸುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಒಬ್ಬ ಅನಾಮಿಕ ವ್ಯಕ್ತಿ ದೂರು ನೀಡಿದಾಗ ಮೊದಲು ಅವನನ್ನು ಬಂಧಿಸಿ ಎಫ್‍ಐಆರ್ ಹಾಕಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವನನ್ನು ಜೈಲಿಗೆ ಕಳುಹಿಸಬೇಕು. ಅವಶ್ಯಕತೆ ಇದ್ದರೆ ಅವನನ್ನು ವಿಚಾರಣೆಗೆ ಒಳಪಡಿಸಬೇಕು. ಆದರೆ ಈ ಸರ್ಕಾರ ಅನಾಮಿಕ ವ್ಯಕ್ತಿಯನ್ನು ಚಾಂಪಿಯನ್‌ನನ್ನಾಗಿ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಎಸ್‍ಐಟಿ ಮುಖ್ಯಸ್ಥರು ಪೊಲೀಸ್ ಅಧಿಕಾರಿಗಳು ಅಲ್ಲ. ಎಸ್‍ಐಟಿಗೆ ಅನಾಮಿಕನೇ ಮುಖ್ಯಸ್ಥನಾಗಿದ್ದಾನೆ. ಇಡೀ ಎಸ್‍ಐಟಿ ಅನಾಮಿಕನ ಕೈಕೆಳಗೆ ಕೆಲಸವನ್ನು ಮಾಡುತ್ತಿದೆ ಎನ್ನುವಂತೆ, ಅನಾಮಿಕ ಹೇಳಿದಂತೆ ನಡೆದುಕೊಳ್ಳುತ್ತಿದೆ. ಇಂತಹ ವಾತಾವರಣವನ್ನು ಸರ್ಕಾರ ಹುಟ್ಟಿಹಾಕಿದೆ. ಆರೆಸ್ಸೆಸ್ ಅನ್ನು ಪ್ರಧಾನಿಯವರು ಮೆಚ್ಚಿಕೊಂಡ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿಯವರ ಕಾರ್ಯವನ್ನು ಸಮರ್ಥಿಸಿದರು. ನಮಗೆ ದೇಶ ಮೊದಲು; ದೇಶ ಮೊದಲು ಎಂಬುದು ಕಾಂಗ್ರೆಸ್ಸಿನವರ ರಕ್ತದಲ್ಲೇ ಇಲ್ಲ; ಯಾವುದೇ ದೇಶಭಕ್ತ ಸಂಘಟನೆಯನ್ನು ನಾವು ಶ್ಲಾಘಿಸುತ್ತೇವೆ. ಬಾಂಬ್ ಹಿಡಿದು ಓಡಾಡುವವರು, ದೇಶದ್ರೋಹದ ಕೆಲಸ ಮಾಡುವವರ ಜೊತೆ ಕಾಂಗ್ರೆಸ್ಸಿನವರು ಸಂಪರ್ಕವಿದ್ದು, ಅವರ ಮೇಲೆ ಪ್ರೀತಿ ಇಟ್ಟುಕೊಂಡವರು ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.