ಜಾತಿ ಜನಗಣತಿ ವರದಿ ಆ.19ರಂದು ಸಚಿವ ಸಂಪುಟದಲ್ಲಿ ಮಂಡನೆ: ಸಚಿವ ಬೋಸರಾಜು

Published : Aug 15, 2025, 05:54 PM IST
NS Boseraju

ಸಾರಾಂಶ

ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಸರ್ಕಾರ ಎಲ್ಲರ ಅಭಿಪ್ರಾಯ ಪಡೆಯಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಆ.15): ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಸರ್ಕಾರ ಎಲ್ಲರ ಅಭಿಪ್ರಾಯ ಪಡೆಯಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ. ವರದಿಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಎಲ್ಲರ ಒತ್ತಾಯದಂತೆ ಜಾತಿ ಜನಗಣತಿ ಮಾಡಿಸಲಾಗಿದೆ. ಸಮಿತಿ ಈಗಾಗಲೇ ವರದಿಯನ್ನು ಸಲ್ಲಿಸಿದ್ದಾರೆ. 19ರಂದು ಸಂಪುಟ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಜಾತಿ ಜನಗಣತಿ ವರದಿ ಕುರಿತು ಎಲ್ಲರೂ ಅಭಿಪ್ರಾಯ ತಿಳಿಸಲಿದ್ದಾರೆ. ಅದರಂತೆ ಸರ್ಕಾರ ವರದಿಯನ್ನು ಜಾರಿಗೊಳಿಸಲಿದೆ, ಅದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದಿದ್ದಾರೆ.

ಎಲ್ಲಾ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಂಕಿ ಅಂಶಗಳು ಅದರಲ್ಲಿ ಇವೆ. ಈಗಾಗಲೇ ಗೃಹ ಸಚಿವ ಪರಮೇಶ್ವರ ನೇತೃತ್ವದಲ್ಲಿ ಎರಡು ಸಭೆ ಮಾಡಿದ್ದಾರೆ. ಮುಂದೆ ವರದಿ ಜಾರಿ ಮಾಡಲಾಗುತ್ತದೆ. ಸದನದಲ್ಲಿ ಘೋಷಣೆ ಆದ ಬಳಿಕ ವರದಿ ಜಾರಿಯಾಗಲಿದೆ ಎಂದು ಸಚಿವ ಭೋಸರಾಜ್ ಹೇಳಿದ್ದಾರೆ. ರಾಜಣ್ಣನನ್ನ ಆಗಲಿ ಇಲ್ಲ ಭೋಸರಾಜ್ ಅವರನ್ನಾಗಲಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ಅಥವಾ ಕೈಬಿಡುವುದು ಪಕ್ಷದ ನಿರ್ಧಾರ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಭೋಸರಾಜ್ ಹೇಳಿದ್ದಾರೆ. ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ಬಂದಿದ್ದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಯಾರನ್ನೇ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವುದಾಗಲಿ ಅಥವಾ ಬಿಡುವುದಾಗಲಿ ಅದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟಿರುತ್ತದೆ. ಅದರಂತೆ ರಾಜಣ್ಣ ಅವರನ್ನು ಕೈಬಿಡಲಾಗಿದೆ. ಜೊತೆಗೆ ಪಕ್ಷದ ಆದೇಶದಂತೆ ಕೈಬಿಡಲಾಗಿದೆ ಎಂದಿದ್ದಾರೆ. ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದರ ಹಿಂದೆ ಕೆಲವರ ಕುತಂತ್ರವಿದೆ ಎಂಬ ರಾಜಣ್ಣ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಯಾರು ಏನೇ ಮಾತನಾಡಲಿ, ಇದರಲ್ಲಿ ಕುತಂತ್ರದ ಪ್ರಶ್ನೆಯೇ ಇಲ್ಲ. ಇದೆಲ್ಲಾ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುವ ವಿಷಯ. ಯಾವ ಕಾರಣಕ್ಕಾಗಿ ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.

ಪಕ್ಷದ ನಿರ್ಧಾರದಂತೆ ರಾಜಣ್ಣ ಅವರನ್ನು ಕೈಬಿಡಲಾಗಿದೆ ಎಂದು ಭೋಸರಾಜ್ ಹೇಳಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿರುವ ಉತ್ಖನನ ವಿರೋಧಿಸಿ ನಡೆಯುವ ಸಮಾವೇಶದಲ್ಲಿ ಬಿಜೆಪಿ ಭಾಗವಹಿಸುತ್ತಿರುವುದಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್. ಭೋಸರಾಜ್ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಸದನದ ಒಳಗೆ ಮತ್ತು ಹೊರಗೆ ಮಾತನಾಡುವುದಕ್ಕೆ ಅವರಿಗೆ ವಿಚಾರವೇ ಇಲ್ಲ. ಕಾರಣಗಳಿಲ್ಲದೆ ದಿನ ನಿತ್ಯ ಮಾತನಾಡುತ್ತಾರೆ ಎಂದಿದ್ದಾರೆ.ಧರ್ಮಸ್ಥಳದಲ್ಲಿ ಯಾರೋ ಬಂದು ದೂರು ಕೊಟ್ಟರು, ನ್ಯಾಯಾಲಯ ದೂರನ್ನು ತೆಗೆದುಕೊಂಡು ತನಿಖೆ ಆದೇಶಿಸಿತು.

ನ್ಯಾಯಾಲಯದ ಆದೇಶದಂತೆ ಸರ್ಕಾರ ಎಸ್ಐಟಿ ರಚನೆ ಮಾಡಿದೆ ಅದಷ್ಟೇ. ಯಾವುದೇ ಆರೋಪಗಳು ಬಂದಾಗ ಅದನ್ನು ಪರಿಶೀಲಿಸುವುದು ಸರ್ಕಾರದ ಕೆಲಸ. ಅದು ನಮ್ಮ ಸರ್ಕಾರವೇ ಆಗಲಿ, ಇಲ್ಲವೇ ಬೇರೆಯೇ ಸರ್ಕಾರವೇ ಆಗಲಿ ಆ ಕೆಲಸ ಮಾಡುತ್ತದೆ. ಅದರಂತೆ ಎಸ್ಐಟಿಯಿಂದ ತನಿಖೆ ನಡೆಯುತ್ತಿದೆ. ತನಿಖಾ ವರದಿ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ. ಉತ್ಖನನ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಡಿಜಿ, ಐಜಿಗೆ ಯಾರ್ಯಾರೋ ಮತ್ತೆ ಅರ್ಜಿ ಕೊಡುತ್ತಿದ್ದಾರೆ. ಹೀಗಾಗಿ ಧರ್ಮಸ್ಥಳದಲ್ಲಿ ತನಿಖೆ ಮುಂದುವರಿದಿದೆ ಎಂದಿದ್ದಾರೆ.

ಇದಕ್ಕೂ ಮೊದಲು 79 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿ ಕೊಡಗು ಉಸ್ತುವಾರಿ ಸಚಿವ ಎನ್.ಎಸ್. ಭೋಸರಾಜ್ ಅವರು ಧ್ವಜಾರೋಹಣ ನೆರವೇರಿಸಿದರು. ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಚಿವ ಭೋಸರಾಜ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಥ ಸಂಚಲನದ ಪರಿವೀಕ್ಷಣೆ ಮಾಡಿದ ಸಚಿವ ಭೋಸರಾಜ್ ಅವರು ಧ್ವಜವಂದನೆ ಸ್ವೀಕರಿಸಿದರು. ಜಿಲ್ಲಾ ಸಶಸ್ತ್ರಪಡೆ, ಪೊಲೀಸ್, ಗೃಹರಕ್ಷಕ ಇಲಾಖೆ, ಅಗ್ನಿಶಾಮಕ ದಳ, ಎನ್ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲ ನಡೆಯಿತು. ಬಳಿಕ ಸಚಿವ ಎನ್.ಎಸ್. ಭೋಸರಾಜ್ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ಸಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!