ಧರ್ಮಸ್ಥಳದ ಪಾವಿತ್ರ್ಯ ಎತ್ತಿ ಹಿಡಿಯಲು ನಿಷ್ಪಕ್ಷಪಾತ ತನಿಖೆ: ಸಚಿವ ಚಲುವರಾಯಸ್ವಾಮಿ

Published : Aug 25, 2025, 10:19 AM IST
N Chaluvarayaswamy

ಸಾರಾಂಶ

ಸೌಜನ್ಯ ಎಂಬ ಯುವತಿಯ ಸಾವಿನ ಪ್ರಕರಣವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಹಲವು ವರ್ಷಗಳಿಂದ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು ಎಂದರು.

ಮದ್ದೂರು (ಆ.25): ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯತೆ ಎತ್ತಿ ಹಿಡಿಯಲು ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರ ಬಂದಿದೆ. ಸರ್ಕಾರದ ಅಪಪ್ರಚಾರದಿಂದ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಲೇವಡಿ ಮಾಡಿದರು. ತಾಲೂಕಿನ ಮೂಡ್ಯ, ಕೊಪ್ಪ ಗ್ರಾಮಗಳಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿ, ಸೌಜನ್ಯ ಎಂಬ ಯುವತಿಯ ಸಾವಿನ ಪ್ರಕರಣವನ್ನಿಟ್ಟುಕೊಂಡು ಕೆಲ ಕಿಡಿಗೇಡಿಗಳು ಹಲವು ವರ್ಷಗಳಿಂದ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದರು ಎಂದರು.

ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಐಟಿ ತಂಡ ರಚಿಸಿ ಸಮಗ್ರ ತನಿಖೆ ನಡೆಸಿದ ಪರಿಣಾಮ ಸತ್ಯಾಂಶ ಹೊರ ಬಂದಿದೆ. ಶ್ರೀಕ್ಷೇತ್ರದ ಮೇಲೆ ಇದ್ದಂತ ಕಳಂಕ ಈಗ ಮುಕ್ತವಾಗಿದೆ. ಹೀಗಾಗಿ ಬಿಜೆಪಿ ನಾಯಕರು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದರು. ಬಿಜೆಪಿ ಸರ್ಕಾರವಿದ್ದಾಗಲೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಆರ್.ಅಶೋಕ್ ಉಪ ಮುಖ್ಯಮಂತ್ರಿ, ಗೃಹ ಸಚಿವರಾಗಿದ್ದರು. ಆದರೆ, ಅವರ ಸರ್ಕಾರವಿದ್ದಾಗಲೇ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಪ್ರಕರಣ ಮುಕ್ತಾಯಗೊಳಿಸಬಹುದಿತ್ತು.

ಅವರಿಗೆ ಕ್ಷೇತ್ರದ ಮೇಲೆ ಬದ್ಧತೆ ಹಾಗೂ ಗೌರವವಿಲ್ಲ ಎಂದು ಟೀಕಿಸಿದರು. ಈಗ ಕಾಂಗ್ರೆಸ್ ಸರ್ಕಾರ ಕ್ರಮ ತಗೋಬೇಕು ಎಂದು ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಾ ಶ್ರೀಕ್ಷೇತ್ರದ ಭಕ್ತಾದಿಗಳು ಮತ್ತು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಿದೆ. ಇದರಿಂದ ಸರ್ಕಾರದ ವಿರುದ್ಧ ಅಪಪ್ರಚಾರಕ್ಕಿಳಿದಿರುವ ಬಿಜೆಪಿ ನಾಯಕರಿಗೆ ತೀವ್ರ ಮುಖಭಂಗವಾಗಿದೆ ಎಂದು ಲೇವಡಿ ಮಾಡಿದರು.

ಡಿಕೆಶಿ ಬಿಜೆಪಿಗೆ ಹೋಗಲ್ಲ: ಕೆಪಿಸಿಸಿ ಅಧ್ಯಕ್ಷರಾದ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಯಾಕೆ ಹೋಗುತ್ತಾರೆ. ಹೋಗುವುದಾಗಿದ್ದರೆ ಎಂದೋ ಹೋಗುತ್ತಿದ್ದರು. ಡಿಕೆಶಿ ಕಾಂಗ್ರೆಸ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದಾರೆ. ರಾಷ್ಟ್ರದಲ್ಲಿ ಒಳ್ಳೆಯ ಅಧ್ಯಕ್ಷರಾಗಿ ಪ್ರಶಂಶೆ ಪಡೆದಿದ್ದಾರೆ. ಅವರು ಏಕೆ ಬಿಜೆಪಿಗೆ ಹೋಗುತ್ತಾರೆ. ಸಂದರ್ಭ ಬಂದಾಗ ಅವರು ಸಿಎಂ ಆಗುತ್ತಾರೆ. ಅವರನ್ನು ಪಕ್ಷದ ವರಿಷ್ಠರು ಸಿಎಂ ಮಾಡೋ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.

ವಿಪಕ್ಷಗಳ ನಿಯಂತ್ರಣದಲ್ಲಿಡಲು ಷಡ್ಯಂತ್ರ: ಕೇಂದ್ರದ ಬಿಜೆಪಿ ಸರ್ಕಾರ ಇ.ಡಿ., ಐಟಿ ಹಾಗೂ ಸಿಬಿಐ ತನಿಖೆ ಸಂಸ್ಥೆಗಳಿಂದ ವಿರೋಧ ಪಕ್ಷಗಳನ್ನು ನಿಯಂತ್ರಣದಲ್ಲಿಡಲು ಷಡ್ಯಂತ್ರ ನಡೆಸುತ್ತಿದೆ. ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆಯೂ ಕಾಂಗ್ರೆಸ್ ಸಂಸದರು, ಶಾಸಕರು ಹಾಗೂ ನಾಯಕರ ಮನೆ, ಕಚೇರಿ ಸೇರಿದಂತೆ ವಿವಿಧೆಡೆ ದಾಳಿ ಮಾಡಿಸಲಾಗಿದೆ. ಈ ಸಂಸ್ಥೆಗಳಿಗೆ ಬಿಜೆಪಿ, ಜೆಡಿಎಸ್ ನಾಯಕರು ಕಾಣೋಲ್ಲ. ಈ ದ್ವೇಷ ರಾಜಕಾರಣ ಎಲ್ಲಿಯವರೆಗೂ ನಡೆಯುತ್ತೋ ನೋಡೋಣ ಎಂದು ಸವಾಲು ಹಾಕಿದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ: ಮೈಸೂರು ದಸರಾ ಉದ್ಘಾಟನೆವನ್ನು ಈ ಬಾರಿ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್‌ ಉದ್ಘಾಟಿಸಲಿದ್ದಾರೆ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಭಾರತ ಜಾತ್ಯತೀತ ರಾಷ್ಟ್ರ. ಸಾಹಿತ್ಯ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿರುವವರನ್ನು ಗುರುತಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಪರಂಪರೆ. ಈ ಹಿಂದೆಯೂ ಖ್ಯಾತ ಸಾಹಿತಿಗಳಾದ ಕೆ.ಎಸ್.ನಿಸಾರ್ ಅಹಮದ್ ಅವರಿಂದ ದಸರಾ ಉದ್ಘಾಟನೆ ಮಾಡಿಸಲಾಗಿದೆ. ಇಲ್ಲಿ ಜಾತಿ ಮುಖ್ಯವಲ್ಲ ಸಾಧನೆ ಮುಖ್ಯ. ಇಂತಹ ಕಾರ್ಯಗಳಲ್ಲಿಯೂ ಜಾತಿ ತರುವುದು ಶೋಭೆಯಲ್ಲ ಎಂದು ಕಿಡಿಕಾರಿದರು. ಈ ವೇಳೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ತಾಪಂ ಮಾಜಿ ಉಪಾಧ್ಯಕ್ಷ ಬೆಕ್ಕಳಲೆ ರಘು, ತಾಪಂ ಮಾಜಿ ಅಧ್ಯಕ್ಷ ಎಚ್.ಜಿ.ರಾಮಚಂದ್ರ, ತಾಪಂ ಮಾಜಿ ಸದಸ್ಯರಾದ ತೋಯಜಾಕ್ಷ, ಕೆ.ಆರ್.ಮಹೇಶ್ ಮತ್ತಿತರರು ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು