
ಬೆಂಗಳೂರು (ಆ.25): ರಾಜ್ಯ ಸರ್ಕಾರ ಕೈಗೊಳ್ಳುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವೇಳೆ ಧರ್ಮದ ಕಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಏನೆಂದು ಬರೆಸಬೇಕು ಎಂಬ ಕುರಿತು ಹತ್ತು ದಿನದಲ್ಲಿ ಸಭೆ ನಡೆಸಿ ನಿರ್ಧರಿಸುತ್ತೇವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಲಿಂಗಾಯತ ನಾಯಕರ ಸಭೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲ ಸಭೆ ಸೇರಿ ಚರ್ಚೆ ಮಾಡಿದ್ದೇವೆ. ಸಭೆಗೆ ಸ್ವಾಮೀಜಿಗಳು, ವಿಶೇಷವಾಗಿ ಉಪ ಪಂಗಡದ ಸ್ವಾಮೀಜಿಗಳು ಆಗಮಿಸಿದ್ದರು.
ಧರ್ಮದ ಕಲಂನಲ್ಲಿ ಏನು ಬರೆಸಬೇಕು ಎಂಬ ಕುರಿತು ಚರ್ಚೆಯಾಯಿತು. ಕೆಲವರು ವೀರಶೈವ ಎಂದು ಬರೆಸುತ್ತಾರೆ, ಕೆಲವರು ಲಿಂಗಾಯತ ಎಂದು ಬರೆಸುತ್ತಾರೆ. ಇದರ ಬಗ್ಗೆ ಮುಂದೆ ಮತ್ತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಮುಂದಿನ 10 ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ. ಸಮೀಕ್ಷೆಗೆ ಯಾರನ್ನು ಬಳಸಿಕೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆಯಾಗುತ್ತದೆ. ಕೇಂದ್ರ ಸರ್ಕಾರ ಜಾತಿಗಣತಿ ನಡೆಸುತ್ತದೆ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತುಮಕೂರು ವಿವಿಗೆ ಶಿವಕುಮಾರ ಸ್ವಾಮೀಜಿ ಹೆಸರು ಸೂಕ್ತ: ತುಮಕೂರು ವಿಶ್ವವಿದ್ಯಾಲಯಕ್ಕೆ ಸಿದ್ಧಗಂಗಾ ಮಠದ ಶಿವಕುಮಾರಸ್ವಾಮಿ ಅವರ ಹೆಸರು ಇಡಬೇಕು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಕಾರಣರಾದವರು ಅವರು. ಹೀಗಾಗಿ ಅವರ ಹೆಸರು ಸೂಕ್ತ. 12ನೇ ಶತಮಾನದಲ್ಲಿ ಬಸವಣ್ಣ ಅವರು ಮಾಡಿದ್ದನ್ನು ಪಾಲಿಸಿ, ಅನುಷ್ಠಾನ ಮಾಡಿದವರು ಸಿದ್ಧಗಂಗಾ ಶ್ರೀಗಳು.
ಅವರ ಹೆಸರು ತುಮಕೂರು ವಿವಿಗೆ ಇಡುವ ಬಗ್ಗೆ ಸಂಪುಟ ಸಭೆಯಲ್ಲಿ ಬಂದಾಗ ಚರ್ಚೆಯಾಗುತ್ತದೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೆಟ್ರೋ ನಿಲ್ದಾಣಕ್ಕೆ ಬಸವಣ್ಣ ಹೆಸರು ಇಡಬೇಕು ಎಂಬ ಪ್ರಸ್ತಾವನೆಯೂ ಜೀವಂತವಾಗಿದೆ. ಕೆಂಪೇಗೌಡ ಅವರ ಹೆಸರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ಹೀಗಾಗಿ ಮೆಟ್ರೋಗೆ ಬಸವಣ್ಣ ಅವರ ಹೆಸರು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.