ಬರ್ತ್ ಡೇ ಹೆಸರಲ್ಲಿ ಬೇರೊಂದು ಕ್ಷೇತ್ರದಲ್ಲಿ ಬಲ ಪ್ರದರ್ಶನ, ಶಿವನಗೌಡ ರಾಜಕೀಯ ನಡೆ ಕುತೂಹಲ

By Ramesh BFirst Published Jul 14, 2022, 8:52 PM IST
Highlights

ಶಿವಾಭಿಮಾನ ಹೆಸರಿನಲ್ಲಿ ದೇವದುರ್ಗ ಶಾಸಕ ಕೆ. ಶಿವನಗೌಡ ‌ನಾಯಕ್ ಅವರು ಬೇರೊಂದು ಕ್ಷೇತ್ರದಲ್ಲಿ ಅದ್ಧೂರಿಯಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇದು ರಾಜ್ಯಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಶಿವನಗೌಡರ ರಾಜಕೀಯ ನಡೆ ಮುಖಂಡರಿಗೆ ಕುತೂಹಲ ಮೂಡಿಸಿದೆ.

ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್‌, ರಾಯಚೂರು

ರಾಯಚೂರು, (ಜುಲೈ.14):
ದೇವದುರ್ಗ ಬಿಜೆಪಿ ಶಾಸಕ ಕೆ. ಶಿವನಗೌಡ ನಾಯಕ್ ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ ಶಿವನಗೌಡ ನಾಯಕ್ ಅವರು ನಾಯಕರ ಮೇಲೆ ಮುನಿಸಿಕೊಂಡು ಸೈಲೆಂಟ್ ಆಗಿದ್ದರು. ಅಷ್ಟೇ ಅಲ್ಲದೇ ಅವರು ಕಾಂಗ್ರೆಸ್‌ ಸೇರುತ್ತಾರೆ ಎನ್ನುವ ಚರ್ಚೆಗಳು ಸಹ ಕ್ಷೇತ್ರದಲ್ಲಿ ನಡೆದಿದ್ದವು.ಆದ್ರೆ, ಇದೀಗ ಶಿವನಗೌಡ ಅವರು ತಮ್ಮ ವರಸೆ ಬದಲಿಸಿದ್ದು, ದೇವದುರ್ಗ ಬಿಟ್ಟು ಮಾನವಿ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನವ ಮಾತುಗಳು ಕೇಳಿಬರುತ್ತಿವೆ.

ಹೌದು...ಮುಂದಿನ ವಿಧಾನಸಭೆ ಚುನಾವಣೆಗೆ  ಕೆ ಶಿವನಗೌಡ ನಾಯಕ್  ಅವರು ಮಾನವಿಯಿಂದ ಸ್ಪರ್ಧೆ ಮಾಡ್ತಾರೆ ಎನ್ನುವ ಗುಸು-ಗುಸು ಶುರುವಾಗಿದೆ. ಇದೀಗ ಅದಕ್ಕೆ ಪುಷ್ಠಿ ನೀಡುವಂತೆ ಶಿವನಗೌಡ ನಾಯಕ್ ಅವರು ಸ್ವಕ್ಷೇತ್ರ ದೇವದುರ್ಗ ಬಿಟ್ಟು ಮಾನವಿಯಲ್ಲಿ ಇಂದು(ಜುಲೈ14) ಅದ್ಧೂರಿಯಾಗಿ ತಮ್ಮ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಮೂಲಕ ಬರ್ತ್‌ ಡೇ ಹೆಸರಲ್ಲಿ ಮಾನವಿ ಕ್ಷೇತ್ರದಲ್ಲಿ ಬಲ ಪ್ರದರ್ಶನ ಮಾಡಿದ್ದಾರೆ. ಇದು ಜಿಲ್ಲೆಯ ರಾಜಕಾರಣದಲ್ಲಿ ಅಚ್ಚರಿ ಮಾತ್ರವಲ್ಲದೇ ಕುತೂಹಲಕ್ಕೆ ಕಾರಣವಾಗಿದೆ.

ಮುಂದಿನ ಚುನಾವಣೆಗಾಗಿ ಶಾಸಕ ಶಿವನಗೌಡ ‌ನಾಯಕ ಭರ್ಜರಿ ತಯಾರಿ!

ಬೇರೊಂದು ಕ್ಷೇತ್ರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಶಿವನಗೌಡ

ಯೆಸ್... ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕರ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡರು.ಶಿವಾಭಿಮಾನ ಹೆಸರಿನಲ್ಲಿ ದೇವದುರ್ಗ ಶಾಸಕ ಕೆ. ಶಿವನಗೌಡ ‌ನಾಯಕರ 45ನೇ ಬರ್ತ್ ಡೇ  ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹತ್ತಾರು ಮಠಗಳ ಸ್ವಾಮೀಜಿಗಳು ಹಾಗೂ ನಾಲ್ಕು ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು. ಅಲ್ಲದೇ ನಾಲ್ವರು ಸಚಿವರು ಸಹ ಭಾಗಿಯಾಗಿರುವುದು ವಿಶೇಷ. ಈ ಮೂಲಕ ಶಿವನಗೌಡ ನಾಯಕರ್ ಅವರು ಮಾನವಿಯಲ್ಲೂ ಸಹ ಪರೋಕ್ಷವಾಗಿ ಶಕ್ತಿ ಪ್ರದರ್ಶನ ಮಾಡಿದರು. ಇನ್ನು ಅವರು ಮಾತನಾಡಿದ ಮಾತುಗಳನ್ನ ಗಮನಿಸಿದ್ರೆ ಶಿವನಗೌಡ ನಾಯಕ್ ಮುಂದಿನ ಚುನಾವಣೆಯಲ್ಲಿ ಮಾನವಿಯಿಂದ ಕಣಕ್ಕಿಳಿಯುವುದು ಪಕ್ಕಾ ಎನ್ನುವಂತಿವೆ. ಹಾಗಾದ್ರೆ, ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ...

ನನ್ನ ಜೀವ ಇರುವರೆಗೂ ಮಾನ್ವಿ ಜನತೆ ಜತೆ ಇರುವೆ!

ಸನ್ಮಾನ ಸ್ವೀಕರಿಸಿ ‌ಮಾತನಾಡಿದ ಶಾಸಕ ಕೆ.ಶಿವನಗೌಡ ನಾಯಕ, ನಾನು ಎಲ್ಲಿಯೇ ಶಾಸಕರು ಆಗಿದ್ರೂ ಮಾನ್ವಿ ‌ಕ್ಷೇತ್ರಕ್ಕಾಗಿ ಕೆಲಸ ಮಾಡುವೆ. ಏಕೆಂದರೆ ನನ್ನ ಹೆಸರಿನಲ್ಲಿ ‌ಕೆ ಇದೇ ಅಲ್ವಾ. ಕೆ ಅಂದ್ರೆ ಕಸನದೊಡ್ಡಿ ಗ್ರಾಮ. ನಾನು ಮಾನವಿ ತಾಲೂಕಿನ ಕಸನದೊಡ್ಡಿ ಗ್ರಾಮದವನು. ಕೂಲಿ ಕೆಲಸ ಮಾಡುತ್ತಾ ನಮ್ಮ ತಾತಾ ಅರಕೇರಾಗೆ ವಲಸೆ ಹೋಗಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಚಿವ ಶ್ರೀರಾಮುಲು ಅವರು ನನಗೆ ತಂದೆ ಸಮಾನರು.ಜಿ.ಪಂ. ಟಿಕೆಟ್ ಸಿಗದಕ್ಕೆ ನಾನು ಈ ಸ್ಥಾನದಲ್ಲಿ ಬರಲು ಸಾಧ್ಯವಾಯ್ತು. ರಾಜ್ಯದಲ್ಲಿ 70 ವರ್ಷಗಳ ಬಳಿಕ ಸರಳ ಮುಖ್ಯಮಂತ್ರಿ ನಾವು ನೋಡುತ್ತಿದ್ದೇವೆ ಅವರೇ ನಮ್ಮ ‌ಕಾಮಾನ್ ಸಿಎಂ ಬಸವರಾಜ್ ಬೊಮ್ಮಾಯಿ. ಮಾನವಿ ಕ್ಷೇತ್ರಕ್ಕೆ 300 ಕೋಟಿ ಯೋಜನೆಯ ಚಿರಪರ್ವಿಗೆ ಸೇತುವೆ ಮಾಡುವೆ. ಮಾನವಿ ತಾಲೂಕಿಗೆ ಸಂಪೂರ್ಣ ನೀರಾವರಿ ಮಾಡುವ ಕನಸು ನನಗೆ ಇದೆ. ಪರಿಶಿಷ್ಟ ಪಂಗಡದವರು ಮುಂದಿನ ದಿನಗಳಲ್ಲಿ ಸಿಎಂ ಆಗುತ್ತಾರೆ. ಮುಂದಿನ ದಿನಗಳಲ್ಲಿ ಶ್ರೀರಾಮುಲು ಸಿಎಂ ಆಗಬಹುದು. ಶ್ರೀರಾಮುಲುಗೆ ಡಿಸಿಎಂ ಬೇಡ ಸಿಎಂ ಆದ್ರೆ ಸಾಕು. ಸಂವಿಧಾನ ತಿದ್ದುವ ಪರಿಸ್ಥಿತಿ ಬಂದ್ರೆ ನಾವು ರಕ್ತ‌ನೀಡಲು ನಾವು ರೆಡಿ ಇದ್ದೇವೆ. ಮಾನ್ವಿ ವಿಧಾನಸಭಾ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.  ಈ ಮೂಲಕ ಪರೋಕ್ಷವಾಗಿ ಮುಂದೆ ಮಾನ್ವಿಗೆ ಬರುವೆ ಎನ್ನವು ಸುಳಿವು ಕೊಟ್ಟರು.

Birthday Politics: ಬರ್ತ್ ಡೇ ಹೆಸರಿನಲ್ಲಿ ಸುರಪುರ ನಾಯಕರ ಬಲ ಪ್ರದರ್ಶನ

ಮುನೇನಕೊಪ್ಪ ಮಾತು
ರಾಯಚೂರು ಉಸ್ತುವಾರಿ ಸಚಿವ ಬಿ.ಪಾಟೀಲ್ ಮುನೇನಕೊಪ್ಪ ಮಾತನಾಡಿ. ಇದು ಜನರ ವಿಶ್ವಾಸ ಗಳಿಸಿದ ಹುಟ್ಟು ಹಬ್ಬವಾಗಿದೆ. ಶಾಸಕ ಶಿವನಗೌಡ ನಾಯಕ ಅಭಿಮಾನಿಗಳ ಹೃದಯ ಗೆದ್ದ  ಮುಖಂಡರಾಗಿದ್ದಾರೆ. ಹಲವು ವರ್ಷಗಳಿಂದ ಶಿವನಗೌಡಗೆ ನೋಡುತ್ತಾ ಬಂದಿದ್ದೇನೆ. ಶಿವನಗೌಡ ‌ನಾಯಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ಬಂದಿದ್ದಾರೆ. ಶಿವನಗೌಡ ನಾಯಕ ಕೇವಲ ರಾಯಚೂರು ಜಿಲ್ಲೆಗೆ ಸೀಮಿತವಾಗಿಲ್ಲ. ಶಿವನಗೌಡ ನಾಯಕಗೆ ಮತ್ತಷ್ಟು ಹೆಚ್ಚಿನ ಸ್ಥಾನಮಾನ ಸಿಗಲಿ ಎಂದು ತಿಳಿಸಿದರು. 

ಇನ್ನೂ ಆ ಬಳಿಕ ಮಾತನಾಡಿದ ‌ಸಚಿವ ಆನಂದ ಸಿಂಗ್ ನಾನು ವಿಜಯನಗರ ಇತಿಹಾಸ ಸೃಷ್ಟಿ ಮಾಡಿದ ಭೂಮಿಯಿಂದ ಬಂದವನು ನಾನು..ಶಿವನಗೌಡ ಶಾಸಕ ಅಂತ ನಾನು ಇಲ್ಲಿಗೆ ಬಂದಿಲ್ಲ. ಶಿವನಗೌಡನ ಸ್ನೇಹಿತನಾಗಿ ಇಲ್ಲಿಗೆ ಬಂದಿದ್ದೇನೆ. ಅಷ್ಟೇ ಅಲ್ಲದೆ ‌ಈ ಬರ್ತ್ ಡೇಗೆ ನಾನು ಸರ್ಕಾರಿ ಕಾರು ಕೂಡ ತಂದಿಲ್ಲ. ನನ್ನ ‌ಸ್ನೇಹಿತನ ಬರ್ತ್ ಗಾಗಿ ಸ್ಕಾರ್ಪಿಯೋದಲ್ಲಿ ಬಂದಿದ್ದೇನೆ. ಶಿವನಗೌಡಗೆ ದೇವರು ಆರೋಗ್ಯ, ಐಶ್ವರ್ಯ ಬರಲಿ..ಬಂದ ಐಶ್ವರ್ಯ ಜನರಿಗೆ ಉಪಯೋಗ ಮಾಡಿ ಎಂದು ಕಿವಿಮಾತು ಹೇಳಿದ ಸಚಿವ ಆನಂದ್ ಸಿಂಗ್.

7.5 ಮೀಸಲಾತಿ ‌ಬಗ್ಗೆ ಶ್ರೀರಾಮುಲು ಭರವಸೆ

ಶಾಸಕ ಕೆ.ಶಿವನಗೌಡ ನಾಯಕರ 45ನೇ ಹುಟ್ಟು ಹಬ್ಬದ ವೇದಿಕೆ ಉದ್ದೇಶಿಸಿ ಮಾತನಾಡಿದ ಸಚಿವ ಶ್ರೀ ರಾಮುಲು ಎಸ್ ಟಿಗೆ 7.5 ಮೀಸಲಾತಿ ನೀಡುವ ವಿಚಾರವಾಗಿ ಕೆಲವರು ಮಾತನಾಡುತ್ತಿದ್ದಾರೆ. ಈ ಶಿವಾಭಿಮಾನ ‌ಕಾರ್ಯಕ್ರಮದಲ್ಲಿ ನಾನು ಹೇಳುತ್ತಿದ್ದೇನೆ. ನನಗೆ ಡಿಸಿಎಂ ಸ್ಥಾನ ಬೇಡ..ಎಸ್ಟಿಗೆ 7.5 ಮೀಸಲಾತಿ ಸಿಕ್ಕಿರೆ ಸಾಕು. ಕಳೆದ 153 ದಿನಗಳಿಂದ ನಮ್ಮ ‌ ಶ್ರೀಗಳು ಧರಣಿ ಕುಳಿತ್ತಿದ್ದಾರೆ. ಅವರ ಮನವೊಲಿಸುವ ಪ್ರಯತ್ನ ನಾವು ಮಾಡಿದ್ದೇವೆ. ಆದ್ರೂ ಶ್ರೀಗಳು ಹೋರಾಟ ಮುಂದುವರೆಸಿದ್ದಾರೆ ಎಂದರು.

 ಮೂರು ದಶಕಗಳಿಂದ 7.5 ಮೀಸಲಾತಿಗಾಗಿ ಹೋರಾಟ ನಡೆಸಿದ್ದೇವೆ. 75 ವರ್ಷಗಳಿಂದ 7.5 ಮೀಸಲಾತಿ ನೀಡಿಲ್ಲ. ಶ್ರೀರಾಮುಲು ಹೋರಾಟ ನೋಡಿ‌ ಕಾಂಗ್ರೆಸ್ ನಾಯಕರು ಹುಳಿ ಹಿಡಿಯಲು ಬರುತ್ತಿದ್ದಾರೆ. ಕೆಲವೇ ದಿನಗಳಲ್ಲಿ 7.5 ಮೀಸಲಾತಿ ‌ಕೊಡಿಸುವ ಪ್ರಯತ್ನ ಮಾಡುತ್ತೇನೆ. ಎಸ್ ಟಿಗೆ 7.5 ಮೀಸಲಾತಿ ‌ಕೊಡಿಸುತ್ತೇನೆ. ಆಗ ನನಗೆ ಬೈಯುವ ನಾಯಕರು ರಾಜಕೀಯ ‌ನಿವೃತ್ತಿ ಪಡೆಯಬೇಕು. ಎಸ್ ಸಿ ಮತ್ತು ಎಸ್ ಟಿ ಸಮುದಾಯದ ಜನರು ನನಗೆ ಬಿಟ್ಟು ಕೊಡಲ್ಲ. ವಾಲ್ಮೀಕಿ ಸಮುದಾಯದ ಸೇವಕನಾಗಿ ಕೆಲಸ ಮಾಡುವೆ ಎಂದ ಸಚಿವ ಶ್ರೀರಾಮುಲು‌ ಹೇಳಿದರು.

ಇನ್ನೂ ಶಿವಾಭಿಮಾನ ಕಾರ್ಯಕ್ರಮದಲ್ಲಿ ಸಚಿವ ಶ್ರೀ ರಾಮುಲು, ಸಚಿವ ಆನಂದ ಸಿಂಗ್, ಸಚಿವ ಶಂಕರ್.ಬಿ. ‌ಪಾಟೀಲ್ ಮುನೇನಕುಪ್ಪ ಹಾಗೂ ಕಲಬುರಗಿ ಸಂಸದ ಉಮೇಶ್ ಜಾಧವ್, ರಾಯಚೂರು ಸಂಸದ ರಾಜಾ ಅಮರೇಶ್ವರ ‌ನಾಯಕ ಹಾಗೂ ಕೊಪ್ಪಳ ‌ಸಂಸದ ಸಂಗಣ್ಣ ಕರಡಿ ಸೇರಿದಂತೆ ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು ಹಾಗೂ ‌ಮಾಜಿ ಶಾಸಕರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

click me!