ಜನತೆಗೆ ಯೋಜನೆ ತಲುಪಿಸಿ, ರಾಜಕೀಯ ಲಾಭ ಪಡೀರಿ: ಪ್ರಧಾನಿ ಮೋದಿ

By Kannadaprabha News  |  First Published Sep 3, 2022, 10:09 AM IST

ಡಬಲ್‌ ಎಂಜಿನ್‌ ಸರ್ಕಾರ, ಅಭಿವೃದ್ಧಿ ಮಂತ್ರ ಮುಂದಿಟ್ಟು ಕಾರ್ಯ, ಕೋರ್‌ ಕಮಿಟಿ ಸದಸ್ಯರ ಮಾರ್ಗದರ್ಶನ ಸಭೆಯಲ್ಲಿ ಪ್ರಧಾನಿ ಕರೆ


ಮಂಗಳೂರು(ಸೆ.03):  ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಭಿವೃದ್ಧಿ ಯೋಜನೆಗಳನ್ನು ಜನತೆಗೆ ತಲುಪಿಸಿ. ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ವಿಪಕ್ಷಗಳ ಟೀಕೆಯನ್ನು ಸಮರ್ಥವಾಗಿ ಎದುರಿಸಬೇಕು. ಡಬ್ಬಲ್‌ ಎಂಜಿನ್‌ ಸರ್ಕಾರ, ಅಭಿವೃದ್ಧಿ ಮಂತ್ರ ಇದರಿಂದಲೇ ರಾಜಕೀಯ ಲಾಭ ತೆಗೆದುಕೊಳ್ಳಬೇಕು’ ಇದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸದಸ್ಯರಿಗೆ ನೀಡಿದ ಕಿವಿಮಾತು. ಬಂಗ್ರಕೂಳೂರಿನಲ್ಲಿ ಶುಕ್ರವಾರ ಬೃಹತ್‌ ಸಮಾವೇಶ ಮುಗಿಸಿದ ಕೂಡಲೇ ನವಮಂಗಳೂರು ಬಂದರು ಪ್ರಾಧಿಕಾರದ ಹೆಲಿಪ್ಯಾಡ್‌ ಬಳಿ ಸುಮಾರು 45 ನಿಮಿಷಗಳ ಕಾಲ ಚಹಾ ವಿರಾಮದಲ್ಲಿ ಕೋರ್‌ ಕಮಿಟಿ ಸದಸ್ಯರಿಗೆ ಮಾರ್ಗದರ್ಶನ ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಪರಾಮರ್ಶೆ ನಡೆಸಿದ ಪ್ರಧಾನಿ ಮೋದಿ, ಇದನ್ನು ಸಾಧ್ಯವಾದಷ್ಟುಜನತೆಗೆ ತಲುಪಿಸಬೇಕು. ಎಲ್ಲ ಯೋಜನೆಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು, ಇದರಿಂದಲೇ ರಾಜಕೀಯ ಲಾಭ ಪಡೆದುಕೊಳ್ಳಬೇಕು ಎಂದಿದ್ದಾರೆ.

Tap to resize

Latest Videos

KARNATAKA POLITICS: ಮಂಗಳೂರು ಸಮಾವೇಶದ ಮೊದಲ ಸಾಲಲ್ಲೇ ಬಿಎಸ್‌ವೈಗೆ ಮೋದಿ ಸ್ಥಾನ..!

ಪ್ರಧಾನಿ ಅನೌಪಚಾರಿಕ ಮಾತು:

ಪ್ರಧಾನಿ ಅವರು ಕೋರ್‌ ಕಮಿಟಿ ಸದಸ್ಯರ ಜೊತೆ ಪರಿಚಯಾತ್ಮಕವಾಗಿ ಮಾತನಾಡಿದ್ದಾರೆ. ಎಲ್ಲರನ್ನೂ ಪರಿಚಯ ಮಾಡಿ ಕೆಲವು ಹೊತ್ತು ಮಾತನಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಮನೆಮನೆಗೆ ತಲುಪಿಸಲು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಹೇಳಿದ್ದಾರೆ. ಪ್ರತಿಯೊಬ್ಬ ಫಲಾನುಭವಿಗೆ ಸೌಲಭ್ಯ ಸಿಗಬೇಕು ಮತ್ತು ಜಾಗೃತಿಯಾಗಬೇಕು. ಸರ್ಕಾರದ ಅಂಕಿಅಂಶ ಆಗಿರದೇ ನಿಜವಾದ ಫಲಾನುಭವಿಗಳಿಗೆ ತಲುಪಲು ಯತ್ನಿಸಿ ಎಂದಿದ್ದಾರೆ. ಒಟ್ಟಾರೆ ಅನೌಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ ಮೋದಿ ಎಂದು ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

8ರಂದು ಜನೋತ್ಸವ ಸಮಾವೇಶ:

ರಾಜ್ಯದಲ್ಲಿ ಅಸೆಂಬ್ಲಿ ಚುನಾವಣಾ ತಯಾರಿ ಈಗಾಗಲೇ ಮಾಡಿದ್ದೇವೆ. ಸೆ. 8ರಂದು ಜನೋತ್ಸವ ಸಮಾವೇಶ ಇದೆ. ಇದಲ್ಲದೆ ರಾಜ್ಯದ ಏಳು ಕಡೆ ದೊಡ್ಡ ಸಮಾವೇಶ ಮಾಡುತ್ತಿದ್ದೇವೆ. ಪಕ್ಷದಲ್ಲಿ ಯಾವುದೇ ಬದಲಾವಣೆ ಬಗ್ಗೆ ಚರ್ಚೆ ನಡೆದಿಲ್ಲ. ಇದು ಕೇವಲ ಪರಿಚಯಾತ್ಮಕ ಸಭೆ ಅಷ್ಟೇ. ಮಂಗಳೂರು ಸಮಾವೇಶ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಖುಷಿಯಾಗಿದೆ ಎಂದು ಕಟೀಲ್‌ ಹೇಳಿದರು.

ಡಬಲ್‌ ಎಂಜಿನ್‌ ಸರ್ಕಾರದಿಂದಲೇ ಇಷ್ಟೆಲ್ಲ ಅಭಿ​ವೃದ್ಧಿ ಸಾಧ್ಯ​ವಾ​ಯ್ತು: ಸಿಎಂ ಬೊಮ್ಮಾಯಿ

ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ, ಬಿ.ಎಸ್‌.ಯಡಿಯೂರಪ್ಪ, ಪ್ರಹ್ಲಾದ್‌ ಜೋಷಿ, ಜಗದೀಶ್‌ ಶೆಟ್ಟರ್‌, ಗೋವಿಂದ ಕಾರಜೋಳ, ಡಿ.ವಿ.ಸದಾನಂದ ಗೌಡ, ಅರುಣ್‌ ಸಿಂಗ್‌, ಸಿ.ಟಿ.ರವಿ, ಕೆ.ಎಸ್‌.ಈಶ್ವರಪ್ಪ, ಶ್ರೀರಾಮುಲು, ಡಾ.ಅಶ್ವಥ್‌ ನಾರಾಯಣ…, ಡಿ.ಕೆ.ಅರುಣಾ, ನಿರ್ಮಲ್‌ ಕುಮಾರ್‌ ಸುರಾನಾ, ಆರ್‌.ಅಶೋಕ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ ಕುಂತೂರು ಇದ್ದರು.

ಹರಟೆ, ತಮಾಷೆಯಲ್ಲೇ ಮೋದಿ ಮಾರ್ಗದರ್ಶನ

ಅಭೂತಪೂರ್ವ ಸಮಾವೇಶ ಯಶಸ್ಸಿನ ಜೋಶ್‌ನಲ್ಲಿದ್ದ ನರೇಂದ್ರ ಮೋದಿ ಅವರು ಕೋರ್‌ ಕಮಿಟಿ ಸಭೆಯಲ್ಲಿ ಗಂಭೀರವಾಗಿರದೆ, ಹರಟೆ, ತಮಾಷೆಯಲ್ಲಿ ನಿರಾಳವಾಗಿದ್ದು ಮಾರ್ಗದರ್ಶನ ಮಾಡಿದ್ದು ವಿಶೇಷವಾಗಿತ್ತು. ಬಂಗ್ರಕೂಳೂರು ಸಮಾವೇಶ ಸರ್ಕಾರಿ ಕಾರ್ಯಕ್ರಮವಾಗಿದ್ದ ಕಾರಣ ಅಲ್ಲಿ ಬಿಜೆಪಿ ಮುಖಂಡರಿಗೆ ಸಕ್ರಿಯವಾಗಿ ಪಾಲ್ಗೊಳ್ಳಲು, ಭೇಟಿ ಮಾಡಲು ಅವಕಾಶ ಇರಲಿಲ್ಲ. ಹೀಗಾಗಿ ಅದಕ್ಕಾಗಿಯೇ ಹೆಲಿಪ್ಯಾಡ್‌ ಬಳಿ ಪ್ರತ್ಯೇಕ ಔಪಚಾರಿಕ ಭೇಟಿಯನ್ನು ನಿಗದಿಪಡಿಸಲಾಗಿತ್ತು. ಕೋರ್‌ ಕಮಿಟಿ ಸಭೆ ಬದಲು ಕೋರ್‌ ಕಮಿಟಿ ಸದಸ್ಯರಿಗೆ ಪ್ರಧಾನಿ ಮಾರ್ಗದರ್ಶನ ಮಾಡಿದರು. ಇಲ್ಲಿ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಅಲ್ಲಿಂದ ಕೊನೆಗೆ ಹೊರಡುವ ಮುನ್ನ ಪ್ರಧಾನಿ ಮೋದಿ ತಮ್ಮ ಕಚೇರಿ ಸಿಬ್ಬಂದಿ ಕರೆಸಿ ಕೋರ್‌ ಕಮಿಟಿ ಸದಸ್ಯರ ಜತೆ ಗ್ರೂಪ್‌ ಫೋಟೋ ತೆಗೆಸಿಕೊಂಡರು.
 

click me!