Karnataka Politics: ಮಂಗಳೂರು ಸಮಾವೇಶದ ಮೊದಲ ಸಾಲಲ್ಲೇ ಬಿಎಸ್‌ವೈಗೆ ಮೋದಿ ಸ್ಥಾನ..!

By Kannadaprabha NewsFirst Published Sep 3, 2022, 7:55 AM IST
Highlights

ಯಡಿಯೂರಪ್ಪ ಬಗ್ಗೆ ಮಂಗಳೂರು ಸಮಾವೇಶದಲ್ಲಿ ಹೆಚ್ಚು ಮುತುವರ್ಜಿ ತೋರುವ ಮೂಲಕ ಗಮನ ಸೆಳೆದ ಪ್ರಧಾನಿ ನರೇಂದ್ರ ಮೋದಿ

ಮಂಗಳೂರು(ಸೆ.03):  ಬಿಜೆಪಿಯಲ್ಲಿ ಪ್ರಮುಖ ನೀತಿ ನಿರೂಪಣೆ ಕೈಗೊಳ್ಳುವ ಸಂಸದೀಯ ಮಂಡಳಿಯ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಗ್ಗೆ ಶುಕ್ರವಾರ ನಡೆದ ಮಂಗಳೂರು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಮುತುವರ್ಜಿ ತೋರುವ ಮೂಲಕ ಗಮನ ಸೆಳೆದಿದ್ದಾರೆ. ಇದು ಬಿಜೆಪಿ ವಲಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಸಕ್ರಿಯವಾಗಿ ಬಳಸಿಕೊಳ್ಳುವುದಕ್ಕೆ ಸಮಾವೇಶ ಪರೋಕ್ಷವಾಗಿ ಚಾಲನೆ ನೀಡಿದಂತಿದೆ ಎಂಬ ವಿಶ್ಲೇಷಣೆ ಪ್ರಾರಂಭವಾಗಿದೆ.

ಎನ್‌ಎಂಪಿಎ ಹೆಲಿಪ್ಯಾಡ್‌ಗೆ ಪ್ರಧಾನಿ ಮೋದಿ ಆಗಮಿಸಿದಾಗ ಯಡಿಯೂರಪ್ಪ ಅವರು ಆತ್ಮೀಯವಾಗಿ ನಮಸ್ಕರಿಸಿದರು. ಆಗ ಮೋದಿ ಅವರು ಯಡಿಯೂರಪ್ಪ ಅವರ ಹೆಗಲು ಮುಟ್ಟಿಪ್ರತಿ ನಮಸ್ಕರಿಸಿದರು. ಬಳಿಕ ಯಡಿಯೂರಪ್ಪ ಅವರು ಎನ್‌ಎಂಪಿಎ ಗೆಸ್ಟ್‌ಹೌಸ್‌ಗೆ ತೆರಳಲು ಅಣಿಯಾದರು. ಆಗ ಯಡಿಯೂರಪ್ಪ ಅವರನ್ನು ಸಮಾವೇಶಕ್ಕೆ ತಮ್ಮ ಜತೆ ಆಗಮಿಸುವಂತೆ ಪ್ರಧಾನಿಯೇ ಆಹ್ವಾನ ನೀಡಿದರು. ಮಾತ್ರವಲ್ಲದೆ ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿ ತಮ್ಮ ಸಮೀಪದಲ್ಲೇ ಕುಳಿತುಕೊಳ್ಳುವಂತೆ ಕೇಳಿಕೊಂಡರು. ಇದು ಅಲ್ಲಿದ್ದ ಬಿಜೆಪಿ ನಾಯಕರ ಅಚ್ಚರಿಗೆ ಕಾರಣವಾಯಿತು.

ಡಬಲ್‌ ಎಂಜಿನ್‌ ಸರ್ಕಾರದಿಂದಲೇ ಇಷ್ಟೆಲ್ಲ ಅಭಿ​ವೃದ್ಧಿ ಸಾಧ್ಯ​ವಾ​ಯ್ತು: ಸಿಎಂ ಬೊಮ್ಮಾಯಿ

ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಕುಳಿತುಕೊಂಡ ಪ್ರಥಮ ಸಾಲಿನ ಮೂರನೇ ಆಸನದಲ್ಲಿ ಯಡಿಯೂರಪ್ಪ ವಿರಾಜಮಾನರಾಗಿದ್ದರು. ಅವರ ಪಕ್ಕದಲ್ಲಿ ರಾಜ್ಯಪಾಲರು ಇದ್ದರು.

ಸಭಿಕರಿಂದ ಭರ್ಜರಿ ಚಪ್ಪಾಳೆ:

ಪ್ರಧಾನಿಯವರು ತಮ್ಮ ಭಾಷಣದಲ್ಲಿ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಹೆಸರನ್ನು ಮಾತ್ರ ಉಲ್ಲೇಖಿಸಿದರು. ಆದರೆ ಸ್ವಾಗತ ಭಾಷಣ, ಮುಖ್ಯಮಂತ್ರಿಯವರು ಮಾತನಾಡುವಾಗ ಯಡಿಯೂರಪ್ಪ ಅವರ ಹೆಸರು ಉಲ್ಲೇಖಿಸಿದಾಗ ಸಭಿಕರಿಂದ ಭರ್ಜರಿ ಚಪ್ಪಾಳೆ, ಶಿಳ್ಳೆ, ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸಮಾವೇಶದಲ್ಲಿ ಯಡಿಯೂರಪ್ಪ ಅಧಿಕೃತವಾಗಿ ಅತಿಥಿಯಾಗಿಲ್ಲದಿದ್ದರೂ ಪ್ರಧಾನಿಯವರು ಯಡಿಯೂರಪ್ಪ ಅವರಿಗೆ ಮಹತ್ವ ನೀಡಿದ್ದು, ಮಾತ್ರವಲ್ಲ ಕಾರ್ಯಕ್ರಮ ಮುಗಿದ ನಂತರ ವೇದಿಕೆಯಿಂದ ನಿರ್ಗಮಿಸುವಾಗ ಯಡಿಯೂರಪ್ಪರೊಂದಿಗೆ ಲಘು ಸಂಭಾಷಣೆ ನಡೆಸಿದರು. ಅದಕ್ಕೂ ಮೊದಲು ವೇದಿಕೆ ಹಿಂಭಾಗ ಎನ್‌ಎಂಪಿಎ ಯೋಜನೆಗಳ ತ್ರಿಡಿ ಮೋಡೆಲ್‌, ಯೋಜನೆಗಳ ಪಕ್ಷಿನೋಟ ಚಿತ್ರಣವನ್ನು ಮೋದಿ ವೀಕ್ಷಿಸುತ್ತಿದ್ದಾಗಲೂ ಯಡಿಯೂರಪ್ಪ ಅವರ ಜತೆಯಲ್ಲೇ ಇದ್ದದ್ದು ಗಮನಾರ್ಹ.
 

click me!