
ಭಾರತದ ಸಂವಿಧಾನ ಅನುಚ್ಛೇದ-1ರಲ್ಲಿ ಪ್ರಸ್ತಾಪಿಸಿದಂತೆ India that is Bharat shall be aof States.
ಈ ಒಕ್ಕೂಟ ರಾಷ್ಟ್ರ ವ್ಯವಸ್ಥೆಯಲ್ಲಿ ಭಾವನಾತ್ಮಕ ಅಂಶ, ಸಮಾನತೆ, ನ್ಯಾಯ, ಅಭಿವೃದ್ಧಿ, ಹಂಚಿಕೆ ಹಾಗೂ ಒಗ್ಗೂಡುವಿಕೆ ಅತಿ ಮಹತ್ವದ ಅಂಶಗಳಾಗುತ್ತವೆ. ಈ ಅಂಶಗಳನ್ನು ಅತ್ಯಂತ ಹಂಸಕ್ಷೀರ ನ್ಯಾಯದಂತೆ ವ್ಯವಹರಿಸಿದರೆ ಒಕ್ಕೂಟ ವ್ಯವಸ್ಥೆಯ ವಿಶ್ವಾಸಾರ್ಹತೆ ಗಟ್ಟಿಯಾಗುತ್ತದೆ.
ಕೇಂದ್ರ ಸರಕಾರ ಎಲ್ಲಾ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರ ಬದಲಿಗೆ ವಚನ ಭ್ರಷ್ಟತೆ, ಉಡಾಫೆತನ, ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿ ಅದರಂತೆ ನಡೆಯದಿರುವಿಕೆ, ಕೆಲವು ಬೇಕಾದ ರಾಜ್ಯಗಳಿಗೆ ಎಲ್ಲ ನೀತಿ ಗಾಳಿಗೆ ತೂರಿ ಹಣ ಹಂಚಿಕೆ ಹಾಗೂ ಬಿಡುಗಡೆ ಮಾಡುವಿಕೆ ಮಾಡುತ್ತಿದೆ. ಇನ್ನೊಂದೆಡೆ ತೆರಿಗೆ ಹಂಚಿಕೆಯಲ್ಲಿ ಅವೈಜ್ಞಾನಿಕ ಹಂಚಿಕೆ, ರಾಷ್ಟ್ರದ ಕಾರ್ಯಕ್ರಮಕ್ಕೆ ಗೌರವಿಸಿ ತಮ್ಮ ತ್ಯಾಗ, ಶಿಸ್ತು ತೋರಿದ ಹಲವು ರಾಜ್ಯಗಳಿಗೆ ಅಗೌರವ ತೋರಿ ಆಘಾತಕರ ಪೆಟ್ಟು ಕೊಡುವ ನೀತಿ ರೂಪಿಸುತ್ತಿರುವುದರಿಂದ ಒಕ್ಕೂಟ ವ್ಯವಸ್ಥೆಯಲ್ಲಿ ದಕ್ಷಿಣ ಭಾಗದ ರಾಜ್ಯಗಳ ಭಾವನೆಗೆ ತೀವ್ರ ಪೆಟ್ಟು ಬಿದ್ದಿದೆ. ದಕ್ಷಿಣ ರಾಜ್ಯಗಳು ಅನುಭವಿಸುತ್ತಿರುವ ಅನ್ಯಾಯದ ಕಾರಣ ಈ ರಾಜ್ಯಗಳ ಜನರಿಗೆ ಸಹಜವಾದ ಸಾತ್ವಿಕ ಆಕ್ರೋಶ ಹೊರಹೊಮ್ಮುತ್ತಿದೆ.
ಮಾನವಿಕ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಉತ್ತಮ ಸಾಧನೆ ಮಾಡಿ ಒಕ್ಕೂಟದ ಆಶಯಗಳನ್ನು ಎತ್ತಿಹಿಡಿದಿರುವ ದಕ್ಷಿಣ ಭಾರತದ ರಾಜ್ಯಗಳಿಗೆ ‘ಸಾಧನೆಗಾಗಿಯೇ ಶಿಕ್ಷಿಸುವ ನೀತಿʼ ಘೋರವಾದ ಅನ್ಯಾಯವಾಗಿದೆ. ಸಾಧನೆಗಳಿಗೆ ಅಗತ್ಯ ಮಾನ್ಯತೆ ಕೊಡಬೇಕು. ಇತರೆ ರಾಜ್ಯಗಳೂ ಅದೇ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸುವ ಕೆಲಸಕ್ಕೆ ಮುಂದಾಗಬೇಕು. ಜನಸಂಖ್ಯೆ ಆಧಾರದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಗಡಿ ಮತ್ತು ಸ್ಥಾನಗಳ ಪುನರ್ ವ್ಯವಸ್ಥೆಯಾದ ಡಿ-ಲಿಮಿಟೇಷನ್ (ಕ್ಷೇತ್ರ ಮರು ವಿಂಗಡಣೆ) ಅನ್ನು ಸಾಮಾನ್ಯವಾಗಿ ಜನಗಣತಿ ನಂತರ ಮಾಡಲಾಗುತ್ತದೆ. ಭಾರತದಲ್ಲಿ 2002ರಲ್ಲಿ ಕೊನೆಯ ಡಿ-ಲಿಮಿಟೇಷನ್ ನಡೆದಿತ್ತು. 1971ರ ಜನಗಣತಿ ಆಧಾರದಲ್ಲಿ ನಡೆದ ಪ್ರಕ್ರಿಯೆ ಇದು. ಇದೀಗ 2026 ನಂತರ ಮತ್ತೆ ಡಿಲಿಮಿಟೇಷನ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಆತಂಕ ಏನೆಂದರೆ, ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾಗಿದ್ದು, ಉತ್ತರ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣ ವಿಫಲವಾಗಿದೆ. ಇದರಿಂದ ಉತ್ತರ ರಾಜ್ಯಗಳಿಗೆ ಲೋಕಸಭಾ ಸ್ಥಾನಗಳು ಹೆಚ್ಚಾಗಲಿವೆ. ದಕ್ಷಿಣ ರಾಜ್ಯಗಳಿಗೆ ಸ್ಥಾನಗಳು ನಿರೀಕ್ಷೆಗಿಂತ ಕಡಿಮೆಯಾಗಲಿವೆ. ಇದರಿಂದ ದಕ್ಷಿಣ ಭಾರತಕ್ಕೆ ಪ್ರಭುತ್ವದಲ್ಲಿ ಧ್ವನಿ ಕ್ಷೀಣವಾಗಲಿದೆ.
ಕೇವಲ ಜನಸಂಖ್ಯೆ ಆಧಾರದಿಂದ ಸ್ಥಾನ ಹಂಚಿಕೆ ಮಾಡುವುದು ನ್ಯಾಯ ಸಮ್ಮತವಲ್ಲ. ಅಭಿವೃದ್ಧಿ, ಮಾನವ ಸಂಪನ್ಮೂಲ, ಜನಸಂಖ್ಯೆ ನಿಯಂತ್ರಣದ ಸಾಧನೆಗಳನ್ನೂ ಪರಿಗಣಿಸಬೇಕು. ದಕ್ಷಿಣ ರಾಜ್ಯಗಳ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಕ್ಷೇತ್ರ ಮರು ವಿಂಗಡಣೆ ಮತ್ತು ಒಕ್ಕೂಟ ವ್ಯವಸ್ಥೆಯ ಅಸಮತೋಲನವಾಗದಂತೆ ಎಚ್ಚರಿಕೆ ವಹಿಸಬೇಕು.
ಎಲ್ಲಾ ರಾಜ್ಯಗಳಿಗೂ ಸಮಾನ ಗೌರವ, ಅವಕಾಶ ಮತ್ತು ಸಮತೋಲನದ ಪ್ರಾತಿನಿಧ್ಯವನ್ನು ನೀಡಬೇಕು. ಇತ್ತೀಚಿನ ಕ್ಷೇತ್ರ ಮರುವಿಂಗಡಣೆ ಕುರಿತ ಚರ್ಚೆಗಳು ದಕ್ಷಿಣ ಭಾರತದ ರಾಜ್ಯಗಳಲ್ಲಿ ಆಳವಾದ ಆತಂಕ, ಅಸಮಾಧಾನ ಮತ್ತು ನೋವನ್ನು ಉಂಟುಮಾಡಿವೆ. ಇದರಿಂದ ದೇಶದ ಸಮಗ್ರ ಹಿತಾಸಕ್ತಿಗೆ ಸೇವೆ ಸಲ್ಲಿಸಿದ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆಯನ್ನು ಒಳಗೊಂಡಿದೆ. ಇದು ಕೇವಲ ರಾಜಕೀಯ ಪ್ರಶ್ನೆಯಲ್ಲ ಇದು ನ್ಯಾಯ, ಸಮಾನತೆ ಮತ್ತು ಒಕ್ಕೂಟ ವ್ಯವಸ್ಥೆಯ ಆತ್ಮವನ್ನು ಉಳಿಸುವ ಪ್ರಶ್ನೆಯಾಗಿದೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ದೇಶದ ಮುಂಚೂಣಿಯಲ್ಲಿದ್ದು, ಇವು ರಾಷ್ಟ್ರದ ನೀತಿಗಳನ್ನು ಪ್ರಾಮಾಣಿಕವಾಗಿ ಅನುಸರಿಸಿ, ಜನಸಂಖ್ಯೆ ಸ್ಥಿರೀಕರಣದಲ್ಲಿ ಯಶಸ್ಸು ಕಂಡಿವೆ. ಕೇವಲ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರು ವಿಂಗಡಿಸಬಾರದು. ಇದರಿಂದ ಹೆಚ್ಚಿನ ಜನಸಂಖ್ಯೆ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಸಿಗುತ್ತವೆ. ಇದರ ಪರಿಣಾಮವಾಗಿ, ಅಭಿವೃದ್ಧಿ ಸಾಧಿಸಿದ ರಾಜ್ಯಗಳ ರಾಜಕೀಯ ಧ್ವನಿ ಕುಗ್ಗುವ ಅಪಾಯ ಇದ್ದು, ಇದೊಂದು ಗಂಭೀರ ಪ್ರಶ್ನೆಯಾಗಿದೆ. ಕ್ಷೇತ್ರ ಮರುವಿಂಗಡಣೆ ಒಂದು ಆಡಳಿತಾತ್ಮಕ ಕ್ರಮವಾಗಿರದೆ, ಒಕ್ಕೂಟದ ನೆಲೆಯನ್ನು ದುರ್ಬಲಗೊಳಿಸುವ ಸಾಧನವಾಗುವ ಅಪಾಯವಿದೆ ಎನ್ನುವುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ.
ಮರು ವಿಂಗಡಣೆಯಿಂದಾಗಿ ಪ್ರಸ್ತುತ ದೇಶದಲ್ಲಿರುವ 543 ಲೋಕಸಭಾ ಸ್ಥಾನಗಳ ಸಂಖ್ಯೆ 850ಕ್ಕೆ ಏರಿಕೆಯಾಗಲಿದೆ. ಉತ್ತರ ಪ್ರದೇಶದ ಲೋಕಸಭಾ ಸ್ಥಾನಗಳ ಸಂಖ್ಯೆ ಪ್ರಸ್ತುತ ಇರುವ 80 ರಿಂದ 120 ಸ್ಥಾನಗಳಿಗೆ ಏರಿಕೆ ಕಂಡರೆ ಉತ್ತರ ಪ್ರದೇಶದಲ್ಲಿ ಮತ್ತೊಂದು ಕರ್ನಾಟಕ ಸೃಷ್ಟಿಯಾದಂತೆ.(+40), ಬಿಹಾರ 60ಕ್ಕೆ ಹೆಚ್ಚಳವಾದರೆ, ಬಿಹಾರದಲ್ಲಿ ಮತ್ತೊಂದು ಕೇರಳ ಸೃಷ್ಟಿಯಾದಂತೆ.
ಪ್ರತಿಯಾಗಿ ಜನಸಂಖ್ಯಾ ನಿಯಂತ್ರಣವನ್ನು ಯಶಸ್ವಿಯಾಗಿ ಜಾರಿಗೊಳಿಸಿರುವ ದಕ್ಷಿಣ ರಾಜ್ಯಗಳಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಸಾಧಾರಣ ಹೆಚ್ಚಳ ಮಾತ್ರ ಕಾಣಲಿದೆ. ರಾಷ್ಟ್ರೀಯ ನೀತಿಗಳನ್ನು ಪಾಲಿಸಿದ ರಾಜ್ಯಗಳಿಗೆ ಇದು ಶಿಕ್ಷೆಯೇ ಆಗಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ದೇಶದ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿವೆ. ಒಟ್ಟು ಜಿಡಿಪಿಯಲ್ಲಿ ಸುಮಾರು 30% ಪಾಲು ನೀಡುವ ಈ ರಾಜ್ಯಗಳು, ತೆರಿಗೆ ಸಂಗ್ರಹದಲ್ಲಿಯೂ ಮುಂಚೂಣಿಯಲ್ಲಿವೆ. ಹಣಕಾಸು ಹಂಚಿಕೆ ಮತ್ತು ಜಿಎಸ್ಟಿ ವ್ಯವಸ್ಥೆಯ ಬದಲಾವಣೆಗಳಿಂದ ಈ ರಾಜ್ಯಗಳ ಸ್ಥಿತಿ ಕುಂದಿದೆ. ಈಗ ಕ್ಷೇತ್ರ ಮರುವಿಂಗಡಣೆಯ ಮೂಲಕ ರಾಜಕೀಯ ಪ್ರಾತಿನಿಧ್ಯವೂ ಕಡಿಮೆಯಾದರೆ, ಅದು ರಾಷ್ಟ್ರೀಯ ನೀತಿಗಳಿಗೆ ಮನ್ನಣೆ ನೀಡುವ ರಾಜ್ಯಗಳಿಗೆ ಆಘಾತವನ್ನುಂಟುಮಾಡುತ್ತವೆ. ಇದು ಕೇವಲ ಅಸಮತೋಲನ ಅಷ್ಟೆ ಅಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ಮರ್ಮಾಘಾತವಾಗಲಿದೆ.
ದಕ್ಷಿಣದ ರಾಜ್ಯಗಳು ಅನುಭವಿಸುವ ಇನ್ನೂ ಕೆಲವು ಅನ್ಯಾಯದ ಪರಿ ಎಂದರೆ ಹಣಕಾಸಿನ ಹಂಚಿಕೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ರಾಷ್ಟ್ರದ ತೆರಿಗೆ ಸಂಗ್ರಹದಲ್ಲಿ ಈ ರಾಜ್ಯಗಳ ಕೊಡುಗೆಯನ್ನು ನಿರ್ಲಕ್ಷಿಸಿ ಶೇ. 13ರಷ್ಟು ಮಾತ್ರ ತೆರಿಗೆ ಹಂಚಿಕೆಯಾದರೆ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಶೇ. 80ರಷ್ಟು ಹಣಕಾಸಿನ ಹಂಚಿಕೆಯಾಗುತ್ತದೆ. ಬಿಹಾರದಲ್ಲಿ 40 ಈಗಿರುವ ಸೀಟುಗಳು 60ಕ್ಕೆ ಹೆಚ್ಚಳವಾದರೆ ಉತ್ತರ ಪ್ರದೇಶದಲ್ಲಿ 80 ರಿಂದ 138ಕ್ಕೆ ಏರಿಕೆಯಾಗಿ ಬಹುತೇಕ ಲೋಕಸಭಾ ಸ್ಥಾನಗಳ ಸಂಖ್ಯೆ ದ್ವಿಗುಣಗೊಳ್ಳಲಿದೆ. ಕರ್ನಾಟಕದ ಸ್ಥಾನಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆಯಾದರೆ, ತಮಿಳುನಾಡು ರಾಜ್ಯದಲ್ಲಿ 39 ರಿಂದ 50 ಸ್ಥಾನಗಳಿಗೆ ಏರಿಕೆಯಾಗಲಿದೆ. ಇದು ಬಹುದೊಡ್ಡ ಅಸಮತೋಲನವನ್ನು ಸೃಷ್ಟಿಸಲಿದೆ.
ಹಲವಾರು ಬಾರಿ ಒಕ್ಕೂಟ ವ್ಯವಸ್ಥೆಯ ಮಹತ್ವವನ್ನು ಸರ್ವೋಚ್ಚ ನ್ಯಾಯಾಲಯವು ಒತ್ತಿಹೇಳಿದೆ. ‘ಒಬ್ಬ ವ್ಯಕ್ತಿ-ಒಂದು ಮತ’ ಎಂಬ ತತ್ವವು ಮಹತ್ವದ್ದಾಗಿದ್ದರೂ, ಅದು ಸಂಪೂರ್ಣವಾಗಿ ಗಣಿತದ ಲೆಕ್ಕಾಚಾರವಾಗಬಾರದು. ದೇಶದ ವೈವಿಧ್ಯತೆ, ಐತಿಹಾಸಿಕ ಹಿನ್ನೆಲೆ ಮತ್ತು ಪ್ರಾದೇಶಿಕ ಸಮತೋಲನ ಕೂಡ ಪರಿಗಣನೆಗೆ ತೆಗೆದುಕೊಳ್ಳಬೇಕು. ಒಕ್ಕೂಟ ವ್ಯವಸ್ಥೆಯು ಸಂವಿಧಾನದ ಮೂಲ ಸಂರಚನೆಯ ಭಾಗವಾಗಿದ್ದು, ಇದರಿಂದ ಒಂದು ಭಾಗ ದುರ್ಬಲಗೊಳಿಸಿದರೆ, ಅದು ರಾಷ್ಟ್ರದ ಏಕತೆಯ ಮೇಲೆಯೇ ಪರಿಣಾಮ ಬೀರುತ್ತದೆ. ಹೀಗಾಗಿ ಕ್ಷೇತ್ರ ಮರುವಿಂಗಡಣೆ ಕೇವಲ ಜನಸಂಖ್ಯೆಯ ಆಧಾರದ ಮೇಲೆ ಆಗಬಾರದು. ಅಭಿವೃದ್ಧಿ ಸೂಚ್ಯಂಕಗಳು, ತೆರಿಗೆ ಕೊಡುಗೆ ಮತ್ತು ಆಡಳಿತ ಕಾರ್ಯಕ್ಷಮತೆಗೂ ಮಹತ್ವ ನೀಡಬೇಕು, ರಾಜ್ಯಸಭೆಯ ಮೂಲಕ ರಾಜ್ಯಗಳಿಗೆ ಸಮಾನ ಧ್ವನಿ ನೀಡಬೇಕು. ಹೆಚ್ಚಿನ ಜನಸಂಖ್ಯೆಯ ರಾಜ್ಯಗಳಿಗೆ ಸೀಮಿತ ಪ್ರಾತಿನಿಧ್ಯ ಮಿತಿಯನ್ನು ಪರಿಗಣಿಸಬೇಕು. ಒಕ್ಕೂಟ ಗಟ್ಟಿಗೊಳ್ಳಬೇಕಾದರೆ ಸಮತೋಲನ ಅಗತ್ಯ ಎನ್ನುವುದನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಬಾರದು. ಈ ಕಾರಣಗಳಿಂದ ರಾಜಕೀಯ ಲೆಕ್ಕಾಚಾರದ ತರಾತುರಿಯ ಕ್ಷೇತ್ರ ಮರುವಿಂಗಡಣೆ ಬದಲಾಗಿ ಇತಿಹಾಸ, ಒಗ್ಗೂಡುವಿಕೆ, ಭಾವನಾತ್ಮಕ ಬೆಸುಗೆ, ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಪಾಲು ನೀಡುವ ವೈಜ್ಞಾನಿಕ ಕ್ಷೇತ್ರ ಮರುವಿಂಗಡಣೆ ಆಗಬೇಕು.
ರಾಜರು, ಸಾಮಂತ ಅರಸರು, ಸಂಸ್ಥಾನಿಕರು ಇರುವಾಗ ಇತರ ರಾಜ್ಯಗಳ ಪ್ರಭಾವ ಅಥವಾ ಹಿಡಿತ ಕಡಿಮೆಗೊಳಿಸಲು ರಾಜರ ಅಧಿಕಾರ ಕಡಿಮೆ ಮಾಡುವುದಕ್ಕೆ ಆಕ್ರಮಣ ಮಾಡಿ ಹಿಡಿತ ಕಡಿಮೆಗೊಳಿಸುತ್ತಿದ್ದರು. ಅದೇ ಧಾಟಿಯಲ್ಲಿ ಪ್ರಜಾಪ್ರಭುತ್ವದಲ್ಲಿ ರಾಜ್ಯಗಳ ಹಿಡಿತ ಕಡಿಮೆಗೊಳಿಸಿ ಜನರ ಪ್ರತಿನಿಧಿಗಳ ಸಂಖ್ಯೆ ಕಡಿಮೆಗೊಳಿಸಿ ಅಶಕ್ತ ಮಾಡಿ ಸದಾ ಕಾಲ ಅವರ ಮೇಲೆ ಪ್ರಭುತ್ವ ನಡೆಸುವ ಹುನ್ನಾರ, ಉತ್ತರ ಭಾರತದ ಪರ ನಿಲುವು ಇರುವ ಈ ನಾಯಕರಿಗೆ ಇದ್ದಂತಿದೆ. ಆದರೆ ಇದು ಅಪಾಯಕಾರಿ. ವಿರೋಧಗಳಿಗೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ. ಇರುವ ರಾಜಕೀಯ ಬಲದಿಂದ ವಿರೋಧಿ ಶಕ್ತಿಗಳನ್ನು ದಮನಿಸಿ ಮುಂದುವರೆಯುವುದೊಂದೇ ಗುರಿ ಇಟ್ಟುಕೊಂಡಂತೆ ಕಾಣುತ್ತದೆ. ಕೇಂದ್ರ ಸರ್ಕಾರ ಕ್ಷೇತ್ರ ವಿಂಗಡಣೆ ತರಾತುರಿ ಬಿಟ್ಟು ಎಚ್ಚರಿಕೆಯಿಂದ, ವಿವೇಕದಿಂದ ಹೆಜ್ಜೆಗಳನ್ನು ಇರಿಸಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.