
ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ, ಅಲ್ಪಸಂಖ್ಯಾತ ನಾಯಕ ಜಬ್ಬರ್ ರಾಜೀನಾಮೆ ಇವೆಲ್ಲ ಬೆಳವಣಿಗೆಯಿಂದ ಈಗ ಕಣ್ಣು ಬಿದ್ದಿರುವುದು ಈಗ ಸಚಿವ ಜಮೀರ್ ಅಹ್ಮದ್ ಖಾನ್ ಮೇಲೆ. ರಾಜ್ಯ ರಾಜಕೀಯದಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ಪಷ್ಟನೆ ನೀಡಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವ ಊಹಾಪೋಹಗಳಿಗೆ ತಕ್ಕ ಉತ್ತರ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇರಳದಲ್ಲಿ ಈ ತಿಂಗಳ 7ರವರೆಗೆ ಇರಲು ಸೂಚನೆ ನೀಡಲಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ಮಾಡಿ ಪ್ರಚಾರದಲ್ಲಿ ಭಾಗವಹಿಸಲು ಸೂಚಿಸಿದರು. ಅದರಂತೆ ನಾನು ಬಾಗಲಕೋಟೆಗೂ ಹೋಗಿ, ದಾವಣಗೆರೆಯಲ್ಲೂ ಪ್ರಚಾರ ನಡೆಸಿದ್ದೇನೆ. ಮತ್ತೆ ಕರೆದಿದ್ದರೆ ಮತ್ತಷ್ಟು ಕಡೆಗಳಿಗೂ ಹೋಗುತ್ತಿದ್ದೆ ಎಂದು ಹೇಳಿದರು.
ಇದಲ್ಲದೆ, ನಿನ್ನೆ ಮುಖ್ಯಮಂತ್ರಿಯವರ ಜೊತೆ ಚರ್ಚೆ ನಡೆಸಿದ್ದೇನೆ. ಮಾಧ್ಯಮಗಳಲ್ಲಿ ಮುಂದಿನ ಟಾರ್ಗೆಟ್ ನಾನು ಎಂಬಂತೆ ಸುದ್ದಿಗಳು ಬರುತ್ತಿವೆ. ಈ ಬಗ್ಗೆ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜೊತೆಯೂ ಚರ್ಚೆ ಮಾಡಿದ್ದೇನೆ. ನಾಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲಿದ್ದೇನೆ ಎಂದು ತಿಳಿಸಿದರು.
ತಮಿಳುನಾಡಿನ ಕೃಷ್ಣಗಿರಿ, ಹೊಸೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರಚಾರಕ್ಕಾಗಿ ಆಹ್ವಾನ ಬಂದಿದೆ. ಅದಕ್ಕೂ ತಯಾರಿ ನಡೆಸುತ್ತಿದ್ದೇನೆ ಎಂದು ಅವರು ಹೇಳಿದರು. ಇನ್ನು, ಪಕ್ಷದ ಹಿರಿಯ ನಾಯಕ ನಸೀರ್ ಅಹಮದ್ ಅವರನ್ನು ವಜಾ ಮಾಡಿದ ವಿಚಾರವಾಗಿ ಮಾತನಾಡಿದ ಅವರು, “ಅವರು ತುಂಬಾ ಹಿರಿಯರು. ಅವರನ್ನು ವಜಾ ಮಾಡಿರುವುದು ನನಗೂ ಬೇಸರ ತಂದಿದೆ. ಅವರೊಂದಿಗೆ ಸಮಾಧಾನ ಸಾಧಿಸಲು ಪ್ರಯತ್ನಿಸಿದ್ದೇನೆ,” ಎಂದು ಹೇಳಿದರು.
ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾನು ಸಣ್ಣ ಕಾರ್ಯಕರ್ತ. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಯಾರಾದರೂ ಆರೋಪ ಮಾಡುವುದಾದರೆ ಸ್ಪಷ್ಟವಾಗಿ ಹೆಸರು ಹೇಳಬೇಕು. ಹೆಸರು ಹೇಳದೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಜಬ್ಬಾರ್ ಉಚ್ಚಾಟನೆ ಕುರಿತು ಪ್ರತಿಕ್ರಿಯಿಸಿ, ಈ ವಿಷಯವನ್ನು ನಾನು ಇನ್ನೂ ಸಂಪೂರ್ಣವಾಗಿ ಗಮನಿಸಿಲ್ಲ. ಪರಿಶೀಲಿಸಿ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಏಕೆ ಉಚ್ಚಾಟನೆ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ. ದೆಹಲಿಗೆ ಹೋಗುವ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ದೆಹಲಿಗೆ ಹೋಗುವುದಿಲ್ಲ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಮಾತ್ರ ಭೇಟಿ ಮಾಡುತ್ತೇನೆ,” ಎಂದು ಸ್ಪಷ್ಟಪಡಿಸಿದರು.
ರಾಜಕೀಯ ವಿರೋಧಿಗಳ ಬಗ್ಗೆ ತಿರುಗೇಟು ನೀಡಿದ ಜಮೀರ್ ಅಹಮದ್, “ನಾನು ಕಾಂಗ್ರೆಸ್ ಪಕ್ಷದ ಸಣ್ಣ ಕಾರ್ಯಕರ್ತನಷ್ಟೇ. ರಾಜಕಾರಣದಲ್ಲಿ ಜಾತಿ ರಾಜಕಾರಣ ಇರಬಾರದು. ಜಾತಿ ಮನೆಯಲ್ಲಿ ಇರಬೇಕು. ರಾಜಕೀಯದಲ್ಲಿ ಜಾತಿ ಆಧಾರಿತ ರಾಜಕಾರಣ ಮಾಡಿದರೆ ಅದು ಒಳ್ಳೆಯದಕ್ಕೆ ದಾರಿ ಮಾಡಿಕೊಡುವುದಿಲ್ಲ,” ಎಂದು ಅಭಿಪ್ರಾಯಪಟ್ಟರು.
ಮುಂದುವರಿದು, “ನಾನು ಎಲ್ಲ ಬಡವರ ಪರ ಇರುವವನು. ನನ್ನ ಹಣೆಬರಹವನ್ನು ದೇವರು ಬರೆದಿದ್ದಾನೆ. ಅದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ನನಗೆ ಈಗ 62 ವರ್ಷ. ರಾಜಕಾರಣದಲ್ಲಿ ಯಾರೂ ಶಾಶ್ವತವಾಗಿ ಉಳಿಯುವುದಿಲ್ಲ. ಯುವಕರು ಬೆಳೆಯುವುದನ್ನು ನೋಡಿದರೆ ನನಗೆ ಸಂತೋಷವೇ,” ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.