
ಬೆಂಗಳೂರು(ಮಾ.04): ಬ್ರಿಟಿಷರ ವಂಶಾವಳಿಯನ್ನು ಬೇರು ಸಮೇತ ಕಿತ್ತೊಗೆಯಬೇಕಾದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರಿಗೆ ಕರೆ ನೀಡಿದರು.
ಶುಕ್ರವಾರ ದೇವನಹಳ್ಳಿಯ ಜೂನಿಯರ್ ಕಾಲೇಜು ಮೈದಾನದಲ್ಲಿ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ಕೊನೆಯ ವಿಧಾನಸಭಾ ಚುನಾವಣೆಯನ್ನು ಕರ್ನಾಟಕದಲ್ಲಿ ಎದುರಿಸುತ್ತಿದೆ. ಎಲ್ಲ ಕಡೆಯಲ್ಲಿಯೂ ಸೋತು ಧೂಳಿಪಟವಾಗಿರುವ ಕಾಂಗ್ರೆಸ್ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸೋತರೆ ದೇಶಾದ್ಯಂತ ಬೇರು ಸಮೇತ ಕಿತ್ತು ಹಾಕಿದಂತಾಗಲಿದೆ. ಬ್ರಿಟಿಷರ ವಂಶಾವಳಿ ಪಕ್ಷವನ್ನು ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕಿದೆ ಎಂದು ವಾಗ್ದಾಳಿ ನಡೆಸಿದರು.
ಲೋಕಾಯುಕ್ತ ಇಲ್ಲದ ಕಾರಣ ಕಾಂಗ್ರೆಸ್ ಆಳ್ವಿಕೆಯಲ್ಲಿ ಇಂತಹ ಹಲವು ಕೇಸ್ ಮುಚ್ಚಿಹೋಗಿವೆ: ಸಿಎಂ ಬೊಮ್ಮಾಯಿ
ಬಿಜೆಪಿಯ ವಿಜಯ ಪತಾಕೆಗೆ ಉತ್ತರ ಪೂರ್ವ ರಾಜ್ಯಗಳು ಸೇರಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಅಮಿತ್ ಶಾ ಅವರ ಸಂಘಟನಾ ಶಕ್ತಿಗೆ ಉತ್ತರ ಪೂರ್ವದಲ್ಲಿ ಕೇಸರಿ ಮತ್ತು ಕಮಲ ಅರಳಿದೆ. ದೇಶದ ಎಲ್ಲಾ ಕಡೆ ಗೆಲ್ಲುತ್ತಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಕಾಂಗ್ರೆಸ್‌ನ ವರಿಷ್ಠ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದರು. ಆದರೆ ನಿಜವಾಗಿಯೂ ಭಾರತವನ್ನು ಇಬ್ಭಾಗ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶವನ್ನು ಜೋಡಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿಕೊಂಡು ಬಂದಿದ್ದಾರೆ. ಕಿಸಾನ್ ಸಮ್ಮಾನ್, ಆಯುಷ್ಮಾನ್ ಭಾರತ್ ಯೋಜನೆಗಳನ್ನು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮೀ, ಸಂಧ್ಯಾ ಸುರಕ್ಷಾ ಯೋಜನೆಗಳನ್ನು ನೀಡಿದ್ದರೆ, ನಮ್ಮ ಸರ್ಕಾರ ರೈತರು ಸೇರಿದಂತೆ ಹಲವು ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ,ರೈತರಿಗೆ 10ಎಚ್‌ಪಿವರೆಗೆ ಉಚಿತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳನ್ನು ನೀಡಲಾಗಿದೆ ಎಂದರು.
ನವ ಬೆಂಗಳೂರು ನಿರ್ಮಾಣಕ್ಕೆ ಸಂಕಲ್ಪ
ದೇವನಹಳ್ಳಿ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದ್ದು, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿ ನವ ಬೆಂಗಳೂರು ನಿರ್ಮಾಣ ಮಾಡಲಾಗುವುದು. ಕೈಗಾರಿಕಾ ಪಾರ್ಕ್, ಸಾಫ್ಟ್‌ವೇರ್ ಪಾರ್ಕ್, ಸ್ಟಾರ್ಟ್ ಆಪ್ ಪಾರ್ಕ್ ದೇವನಹಳ್ಳಿಯ ಅಕ್ಕಪಕ್ಕದಲ್ಲಿ ಆಗುತ್ತಿವೆ. ಇಷ್ಟುವರ್ಷ ಸುಳ್ಳು ಭರವಸೆ ನೀಡಿ ಕಾಂಗ್ರೆಸ್ ಮೋಸ ಮಾಡಿದೆ. ನಿಜವಾದ ಅಭಿವೃದ್ಧಿ ಬಿಜೆಪಿ ಸರ್ಕಾರ ಮಾಡಿದೆ. ಬೆಂಗಳೂರು ಗ್ರಾಮೀಣ ಜಿಲ್ಲೆಗಳನ್ನು ಅಭಿವೃದ್ಧಿ ಮಾಡುವ ಗುರಿ ನಮ್ಮದಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.