ಮತಾಂತರ ನಿಷೇಧ ಕಾಯಿದೆ ವಾಪಾಸ್‌ ನಿರ್ಧಾರ ಸರಿಯಲ್ಲ: ಕೆಎಸ್‌ ಈಶ್ವರಪ್ಪ ಆಕ್ರೋಶ

By Kannadaprabha News  |  First Published Jun 17, 2023, 2:50 PM IST

  ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್‌ ತೆಗೆದುಕೊಳ್ಳುವ ನಿರ್ಧಾರದ ಮೂಲಕ ಕಾಂಗ್ರೆಸ್‌ ಸರ್ಕಾರ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.


ಶಿವಮೊಗ್ಗ (ಜೂ.17) :  ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್‌ ತೆಗೆದುಕೊಳ್ಳುವ ನಿರ್ಧಾರದ ಮೂಲಕ ಕಾಂಗ್ರೆಸ್‌ ಸರ್ಕಾರ ದ್ವೇಷದ ರಾಜಕಾರಣಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ(KS Eshwarappa) ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್‌ ತೆಗೆದುಕೊಳ್ಳುವ ನಿರ್ಧಾರ ಮಾಡಿರುವುದು ಖಂಡನೀಯ. ಇದು ನಮ್ಮ ಹಿಂದೂ ಹೆಣ್ಣು ಮಕ್ಕಳಿಗೆ ತೊಂದರೆಯಾಗುತ್ತದೆ. ಲವ್‌ ಜಿಹಾದ್‌ನಂತಹ ಘಟನೆಗಳು ಹೆಚ್ಚುತ್ತವೆ. ನಿಮ್ಮ ಮನೆಯ ಹೆಣ್ಣು ಮಕ್ಕಳು ಮತಾಂತರಗೊಂಡರೆ ಏನು ಮಾಡುತ್ತೀರಿ? ಕೂಡಲೇ ಇಂತಹ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಚ್ಚರವಹಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

Tap to resize

Latest Videos

ಶಿವಮೊಗ್ಗ: ನನ್ನ ರಾಜಕೀಯ ಪ್ರವೇಶಕ್ಕೆ ಈಶ್ವರಪ್ಪನವರೇ ಕಾರಣ -ತಾರಾ

ಬಡ ಜನರಿಗೆ 10ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಈಗ ಬಡವರ ಹೊಟ್ಟೆಮೇಲೆ ಬರೆ ಎಳೆಯಲು ಹೊರಟಿದೆ. ಇದಕ್ಕೆ ಕೇಂದ್ರ ಸರ್ಕಾರ ಅಕ್ಕಿ ಕೊಡುವುದನ್ನು ನಿಲ್ಲಿಸಿದೆ ಎಂದು ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿದೆ. ಇವರು ಗ್ಯಾರಂಟಿ ಕೊಡುವಾಗ ಮೋದಿಯವರನ್ನು ಕೇಳಿದ್ದರೇನು? ಅವರು ಒಪ್ಪಿದ್ದರೇನು? ಈಗ ಕೇಂದ್ರ ಸರ್ಕಾರ ಐದು ಕೆಜಿ ಅಕ್ಕಿ ಕೊಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡಲಾಗದವರು ಇನ್ನೊಬ್ಬರ ಮೇಲೆ ಆರೋಪ ಹೊರಿಸುವುದಲ್ಲ. ಹೇಳಿದಂತೆ ಅಕ್ಕಿ ಕೊಡಿ, ಆಗದಿದ್ದರೆ ಅಷ್ಟೇ ಮೊತ್ತದ ಹಣಕೊಡಿ. ಇಲ್ಲದಿದ್ದರೆ ಬಡವರ ಶಾಪ ನಿಮ್ಮನ್ನು ತಟ್ಟದೆ ಬಿಡುವುದಿಲ್ಲ ಎಂದು ಹರಿಹಾಯ್ದರು.

ವಿದ್ಯುತ್‌ ಉಚಿತ ಕೊಡುವುದಾಗಿ ಹೇಳಿದ ಸರ್ಕಾರ ಈಗ ಯದ್ವಾ ತದ್ವಾ ವಿದ್ಯುತ್‌ ದರ ಏರಿಸಿದೆ. ಇದರಿಂದ ಸಣ್ಣ ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈಗಾಗಲೇ ಸಣ್ಣ ಕೈಗಾರಿಕೆಗಳ ಸಂಘ ಸರ್ಕಾರವನ್ನು ಎಚ್ಚರಿಸಿದೆ. ಪದವೀಧರರಿಗೂ ಗ್ಯಾರಂಟಿ ನೀಡಿದ ಸರ್ಕಾರ ಈ ವರ್ಷ ಪಾಸಾದವರಿಗೆ ಮಾತ್ರ ಎಂದು ಹೇಳಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಬಿಜೆಪಿ ಈಶ್ವರಪ್ಪ ಕೈಬಿಡಲ್ಲ, ಮುಂದೆ ಉನ್ನತ ಹುದ್ದೆ ಸಿಗಲಿದೆ: ಕಾಶಿ ಪೀಠದ ಶ್ರೀಗಳು

ಉಚಿತ ಪ್ರಯಾಣದ ಗ್ಯಾರಂಟಿ ಕೂಡ ಹಲವರ ಬದುಕನ್ನು ಕಿತ್ತುಕೊಂಡಿದೆ. ಖಾಸಗಿ ಬಸ್‌ಗಳು, ಆಟೋ ಚಾಲಕರು, ಕ್ಯಾಬ್‌ ಚಾಲಕರು ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಅವರ ಹೊಟ್ಟೆಯ ಮೇಲೆ ಬರೆ ಹಾಕಲಾಗಿದೆ. ಹಾಗೆಯೇ ಮನೆಯ ಯಜಮಾನಿಗೆ 2 ಸಾವಿರ ಕೊಡುವುದಾಗಿ ಹೇಳಿದ್ದ ಸರ್ಕಾರ ಈಗ ಅದನ್ನು ಮುಂದೆ ಹಾಕಿದೆ. ಅರ್ಜಿ ಹಾಕಲು ಕೂಡ ಇನ್ನೂ ಆಗುತ್ತಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಿನಲ್ಲಿಯೇ ಜನರು ಗ್ಯಾರಂಟಿಯ ಗೊಂದಲದಲ್ಲಿದ್ದಾರೆ. ಮುಂದೆ ಜಿಪಂ, ತಾಪಂ, ಲೋಕಸಭಾ ಚುನಾವಣೆಗಳು ಬರುತ್ತವೆ. ಕಾಂಗ್ರೆಸ್‌ ಬಗ್ಗೆ ಇಟ್ಟನಂಬಿಕೆಗಳೆಲ್ಲಾ ಹುಸಿಯಾಗಿವೆ. ಯಾಕಾದರೂ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತೋ ಎಂದು ಜನರೇ ಗೊಣಗುತ್ತಿದ್ದಾರೆ. ಹೀಗಾಗಿ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಜಯಭೇರಿ ಬಾರಿಸುತ್ತದೆ. ಕಾಂಗ್ರೆಸ್‌ ಮತ್ತೆ ಮನೆಗೆ ಹೋಗುತ್ತದೆ ಎಂದು ಭವಿಷ್ಯ ನುಡಿದರು.

click me!