
ವಿಜಯ್ ಮಲಗಿಹಾಳ
ಬೆಂಗಳೂರು(ಏ.29): ರಾಜ್ಯ ಬಿಜೆಪಿಯಲ್ಲಿನ ಸಿಎಂ ಮೆಟೀರಿಯಲ್‌ಗಳಲ್ಲಿ, ಅಂದರೆ ಮುಖ್ಯಮಂತ್ರಿಯಾಗಬಲ್ಲ ಸಾಮರ್ಥ್ಯ ಹೊಂದಿದವರಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಒಬ್ಬರು. ಈ ಚುನಾವಣೆಯ ಭರಾಟೆಯ ಪ್ರಚಾರದ ನಡುವೆ ದಿಢೀರನೆ ‘ಮುಂದಿನ ಮುಖ್ಯಮಂತ್ರಿ ಸಿ.ಟಿ.ರವಿ ಆಗಲಿ’ ಎಂಬ ಚರ್ಚೆ ತೇಲಿಬಂದು ಆಡಳಿತಾರೂಢ ಬಿಜೆಪಿ ಪಾಳೆಯದಲ್ಲಿ ಸದ್ದಿಲ್ಲದೇ ಸಂಚಲನ ಮೂಡಿಸಿದೆ. ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿರುವ ರವಿ ಅವರಿಗೆ ಆ ಕಾರಣಕ್ಕಾಗಿಯೇ ಎಂಬಂತೆ ವರಿಷ್ಠರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಂಥ ಮಹತ್ವದ ಸ್ಥಾನವನ್ನು ಗುರುತಿಸಿ ನೀಡಿದ್ದಾರೆ. ಯಡಿಯೂರಪ್ಪ ಅವರ ನಿರ್ಗಮನದ ವೇಳೆಯೂ ಮುಖ್ಯಮಂತ್ರಿಗಳಾಗುವವರ ಪಟ್ಟಿಯಲ್ಲಿ ರವಿ ಅವರ ಹೆಸರೂ ಇತ್ತು. ಈಗ ಮತ್ತೊಮ್ಮೆ ಪ್ರಸ್ತಾಪವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾದಾಗ..
*ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಮತ್ತಷ್ಟುಹಣಾಹಣಿಯ ವಾತಾವರಣ ಸೃಷ್ಟಿಯಾದಂತಿದೆ?
ಪ್ರತಿ ಚುನಾವಣೆಯೂ ತೀವ್ರ ಹಣಾಹಣಿಯಿಂದಲೇ ಕೂಡಿರುತ್ತದೆ. ಹಿಂದಿನ 2008, 2018ರ ಚುನಾವಣೆ ನಮಗೇನು ಕೇಕ್ ವಾಕ್ ಆಗಿರಲಿಲ್ಲ. ಎರಡೂ ಬಾರಿಯೂ ನಮಗೆ ಸ್ಪಷ್ಟಬಹುಮತ ಸಿಗಲಿಲ್ಲ. ಆಗಲೂ ಕಾಂಗ್ರೆಸ್ಸಿಗೆ ಮತದಾನ ಪ್ರಮಾಣ ಕಡಮೆಯೇನೂ ಆಗಿರಲಿಲ್ಲ. ಹೀಗಾಗಿ, ಹಣಾಹಣಿ ಇರುತ್ತದೆ ಎಂಬ ನಿರೀಕ್ಷೆಯಿಂದಲೇ ಚುನಾವಣೆ ಎದುರಿಸುತ್ತೇವೆ.
KARNATAKA ELECTION 2023: ಮತಬೇಟೆಗೆ ಸ್ಟಾರ್ ನಾಯಕರ ವಾರ್!
*ಬಿಜೆಪಿ ಈ ಬಾರಿ ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದೆಯೇ?
ಎಲ್ಲ ಕಾಲದಲ್ಲೂ ನಮ್ಮದು ಅಭಿವೃದ್ಧಿ ಮತ್ತು ಹಿಂದುತ್ವದ ಅಜೆಂಡಾ ಇದ್ದೇ ಇರುತ್ತದೆ. ಜಾತಿವಾರು ಸಮಾಜವನ್ನು ಒಡೆದು ಮತ ಕೇಳುವುದಕ್ಕಿಂತ ಎಲ್ಲ ಜಾತಿಗಳು ಒಟ್ಟಾಗಿರಬೇಕು ಎಂಬ ನಿಲುವಿನೊಂದಿಗೆ ಮತ ಕೇಳುವುದು ಸಾಮರಸ್ಯದ ಸಂದೇಶವಲ್ಲವೇ.
*ಹಿಂದುತ್ವ ಮತ್ತು ಅಭಿವೃದ್ಧಿಯ ತೂಕ ಸಮನಾಗಿ ಇರುತ್ತದೆಯೇ ಅಥವಾ ಹೆಚ್ಚೂ ಕಡಮೆಯಾಗಿರುತ್ತದೆಯೇ?
ತಾತ್ವಿಕ ವಿಷಯ ಬಂದಾಗ ಹಿಂದುತ್ವ, ಅದು ಬಿಟ್ಟರೆ ಅಭಿವೃದ್ಧಿ. ಎರಡನ್ನೂ ಪ್ರತ್ಯೇಕಿಸಿ ನೋಡುವ ಅಗತ್ಯವಿಲ್ಲ. ಹಿಂದುತ್ವದ ಅಜೆಂಡಾ ಇದ್ದರೂ ಯಾವುದೇ ತಾರತಮ್ಯ ಮಾಡದೆ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದೇವೆ.
*ತಾರತಮ್ಯ ಮಾಡುವುದಿಲ್ಲ ಎನ್ನುತ್ತೀರಿ. ಮುಸ್ಲಿಮರಿಗೆ ಇದ್ದ ಮೀಸಲಾತಿ ತೆಗೆದು ಹಾಕಿದಿರಲ್ಲ. ಇದು ಅನ್ಯಾಯವಲ್ಲವೇ?
ನಾವು ಮೀಸಲಾತಿ ತೆಗೆದು ಹಾಕಿಯೇ ಇಲ್ಲ. ಮುಸ್ಲಿಂ ಸಮುದಾಯದ 17 ಉಪಜಾತಿಗಳು ಈಗಲೂ ಮೀಸಲಾತಿ ಪಡೆಯುತ್ತಿವೆ. ಬೇರೆ ಬೇರೆ ವರ್ಗಗಳಲ್ಲಿ ಅವುಗಳಿಗೆ ಮೀಸಲಾತಿ ಸಿಗುತ್ತಿದೆ. ಮತೀಯ ಆಧಾರಿತ ಮೀಸಲಾತಿಯನ್ನು ಅಂಬೇಡ್ಕರ್ ಅವರೂ ವಿರೋಧಿಸಿದ್ದರು. ಅಂಬೇಡ್ಕರ್ ಅವರು ತಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಕೊಟ್ಟಿಲ್ಲ. ಬೇರೆ ಯಾವುದೇ ರಾಜ್ಯಗಳಲ್ಲಿ ಮತೀಯ ಆಧಾರಿತ ಮೀಸಲಾತಿ ವ್ಯವಸ್ಥೆ ಇಲ್ಲ. ಜಾತಿಯ ಆಧಾರಿತ ಮೀಸಲಾತಿ, ಆರ್ಥಿಕತೆ ಆಧಾರಿತ ಮೀಸಲಾತಿ ನೀಡಲು ಅವಕಾಶವಿದೆ. ಅದನ್ನು ಕೊಟ್ಟಿದ್ದೇವೆ. ಇಲ್ಲಿ ಅನ್ಯಾಯದ ಪ್ರಶ್ನೆ ಎಲ್ಲಿಂದ ಬಂತು ಹೇಳಿ. ಮೊದಲು ನೀಡಿದ್ದು ತಪ್ಪು. ಅದನ್ನು ಸರಿಪಡಿಸಿದ್ದು ಅನ್ಯಾಯ ಹೇಗಾಗುತ್ತದೆ?
*ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇದ್ದ ಶೇ.4ರಷ್ಟುಮೀಸಲಾತಿ ಮರು ಜಾರಿಗೊಳಿಸುವುದಾಗಿ ಜೆಡಿಎಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ?
ಸಂವಿಧಾನ ಪೀಠ ಏನು ಹೇಳುತ್ತದೆ ಕಾದು ನೋಡೋಣ. ಹಿಂದೆ ಆಂಧ್ರಪ್ರದೇಶದಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಮೀಸಲಾತಿ ನೀಡುವ ನಿಲುವು ತೆಗೆದುಕೊಂಡಾಗ ಸುಪ್ರೀಂಕೋರ್ಚ್ ವ್ಯತಿರಿಕ್ತ ತೀರ್ಪು ನೀಡಿದ್ದನ್ನು ಜೆಡಿಎಸ್ ಗಮನಿಸಿದೆಯೋ ಇಲ್ಲವೋ ಗೊತ್ತಿಲ್ಲ. ಓಲೈಕೆಯ ಪರಮಾವಧಿಗೆ ಸಂವಿಧಾನವನ್ನೂ ಧಿಕ್ಕರಿಸುತ್ತೇವೆ ಎಂದರೆ ಅದನ್ನು ಜನರು ನಿರ್ಧರಿಸುತ್ತಾರೆ ಅಷ್ಟೇ.
*ನೀವು ಸ್ಪರ್ಧಿಸುತ್ತಿರುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ಚುನಾವಣಾ ಕಣ ರಂಗೇರಿದೆಯಂತೆ?
ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದೇನೆ. ಗೌರವಯುತವಾದ ನಡವಳಿಕೆ ಇಟ್ಟುಕೊಂಡಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ರಾಜಕಾರಣ ಮಾಡಿದ್ದೇನೆ. ಜನಸಾಮಾನ್ಯರಿಂದ ಯಾವುದೇ ದೂರಿಗೆ ಅವಕಾಶ ಇಲ್ಲದಂತೆ ಗಮನಹರಿಸಿ ಕೆಲಸ ಮಾಡಿದ್ದೇನೆ. ಸಾವಿರಾರು ಕೋಟಿ ರು. ಅನುದಾನ ತಂದು ಕೆಲಸ ಮಾಡಿದ್ದೇನೆ. ಜನರು ನನ್ನ ಜೊತೆ ಇದ್ದಾರೆ.
*ಈ ಬಾರಿ ನಿಮ್ಮ ಕ್ಷೇತ್ರದಲ್ಲಿ ಪರಿಸ್ಥಿತಿ ನಿಮಗೆ ಅಷ್ಟೊಂದು ಅನುಕೂಲಕರವಾಗಿಲ್ಲ, ವಿರೋಧಿ ಅಲೆ ಬಲವಾಗಿ ಬೀಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ?
ಆ ರೀತಿ ವಿರೋಧಿ ಅಲೆ ಎಲ್ಲೂ ಕಾಣುತ್ತಿಲ್ಲ. ಆದರೆ, ಕೆಲವರು ಜಾತಿಯನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲ ಶಕ್ತಿಗಳೂ ಒಟ್ಟಾಗಿ ನನ್ನ ಸೋಲಿಸುವ ಪ್ರಯತ್ನ ನಡೆಸಿದ್ದಾರೆ. ಅದು ನಾಯಕರ ಹಂತದಲ್ಲಿ ಮಾತ್ರ. ಮತದಾರರ ಹಂತದಲ್ಲಿ ಅದ್ಯಾವುದೂ ಕಂಡುಬರುತ್ತಿಲ್ಲ. ಯಾಕೆಂದರೆ ಅವರಿಗೆ ಕೆಲಸಗಾರ ಯಾರು ಎಂಬುದು ಚೆನ್ನಾಗಿ ಗೊತ್ತಿದೆ. ನಾಯಕರ ಹಂತದಲ್ಲಿ ನನ್ನ ಸೋಲಿಸಲು ದೊಡ್ಡ ಮಟ್ಟದ ಡೀಲ್ ನಡೆದಿದೆ.
*ನಾಯಕರ ಹಂತದಲ್ಲಿ ಡೀಲ್‌ನಲ್ಲಿ ನಿಮ್ಮ ಬಿಜೆಪಿಯ ನಾಯಕರೂ ಶಾಮೀಲಾಗಿದ್ದಾರಂತೆ?
ಅದನ್ನು ನಾನು ಹೇಳುವುದಿಲ್ಲ. ನನ್ನ ಸೋಲಿಸಲು ಡೀಲ್ ಕುದುರಿಸಿಕೊಂಡಿದ್ದರಿಂದಲೇ ಜೆಡಿಎಸ್ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿ ಇದ್ದರೂ ಕಾಂಗ್ರೆಸ್ಸಿಗೆ ಬೆಂಬಲಿಸುತ್ತಿದ್ದಾರೆ. ಇನ್ನು ಇದರಲ್ಲಿ ಬೇರೆ ಯಾರಾರಯರು ಇದ್ದಾರೆ ಎಂಬುದನ್ನು ಸೂಕ್ತ ಸಂದರ್ಭ ಬಹಿರಂಗಪಡಿಸುತ್ತೇನೆ.
*ಈ ಕಾರಣಕ್ಕಾಗಿಯೇ ನೀವು ರಾಜ್ಯ ಹಾಗೂ ರಾಷ್ಟ್ರ ನಾಯಕರಾದರೂ ನಿಮ್ಮ ಕ್ಷೇತ್ರಕ್ಕೆ ಹೆಚ್ಚು ಸೀಮಿತವಾಗಿದ್ದೀರಾ?
ಹಾಗೇನಿಲ್ಲ. ಕಳೆದ ಐದು ದಿನಗಳಿಂದ ರಾಜ್ಯದ ಬೇರೆ ಬೇರೆ ಕಡೆಗೆ ನಾನು ಪ್ರವಾಸಕ್ಕೆ ತೆರಳಿ ಪ್ರಚಾರ ಕೈಗೊಂಡಿದ್ದೇನೆ. ನಾಮಪತ್ರ ಸಲ್ಲಿಸಿದ ಬಳಿಕ ಎರಡು ದಿನ ಮಾತ್ರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ನಾನು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲು ಬಯಸುವುದಿಲ್ಲ. ನಮ್ಮ ಕಾರ್ಯಕರ್ತರು ಗಟ್ಟಿಯಾಗಿದ್ದಾರೆ.
*ನಿಮ್ಮ ಪರಮಾಪ್ತರಾಗಿದ್ದ ತಮ್ಮಯ್ಯ ಅವರೇ ಈಗ ಬಿಜೆಪಿ ತೊರೆದು ಕಾಂಗ್ರೆಸ್ಸಿನಿಂದ ನಿಮ್ಮ ಪ್ರಬಲ ಎದುರಾಳಿಯಾಗಿ ನಿಂತಿದ್ದಾರಲ್ಲ?
ತಮ್ಮಯ್ಯ ನಮ್ಮ ಜೊತೆ ಇದ್ದದ್ದು ಹೌದು. ಆದರೆ, ಮೂಲ ಬಿಜೆಪಿಯವರಲ್ಲ. ಜನತಾ ದಳ, ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದರು. ಸುಮಾರು 13 ವರ್ಷಗಳ ಕಾಲ ನಮ್ಮೊಂದಿಗಿದ್ದರು. ಈಗ ಮತ್ತೆ ಕಾಂಗ್ರೆಸ್ಸಿಗೆ ವಾಪಸಾಗಿದ್ದಾರೆ. ಪಕ್ಷ ಎಲ್ಲ ಸ್ಥಾನಮಾನ ನೀಡಿತ್ತು. ಈಗ ಪಕ್ಷ ತೊರೆದಿದ್ದಾರೆ. ಜನರು ನಮ್ಮ ಜೊತೆ ಇರಬೇಕಾದರೆ ಯಾರು ನಮ್ಮ ವಿರೋಧಿ ಅಭ್ಯರ್ಥಿಯಾದರೂ ಬಿಜೆಪಿ ವಿರೋಧಿಸುವ ಒಂದಿಷ್ಟುಮತಗಳು ಬರುತ್ತವೆ.
*ಏಕಾಏಕಿ ಚುನಾವಣೆಗೂ ಮುನ್ನವೇ ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿಯಾಗಲಿ ಎಂಬ ಕೂಗು ಕೇಳಿಬರುತ್ತಿದೆಯಲ್ಲ ಯಾಕೆ?
ಈಗ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತಿದ್ದೇವೆ. ಕೆಲವು ಜನರ, ನಾಯಕರ, ಕಾರ್ಯಕರ್ತರ ಆಶಯ ಇರಬಹುದು. ಆದರೆ ಆಶಯ ಬೇರೆ, ನಿರ್ಣಯ ಬೇರೆ. ಈ ಹಂತದಲ್ಲಿ ನಾನು ಗೊಂದಲ ಉಂಟುಮಾಡಲು ಬಯಸುವುದಿಲ್ಲ.
*ಅಂದರೆ, ನಿಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನಿಮಗೆ ಇಲ್ಲವೇ?
ಇನ್ಯಾವತ್ತೋ ಬರಬಹುದು. ಯಾವತ್ತು ರಾಜ್ಯದ ಉದ್ದಗಲಕ್ಕೂ ಜನರು ಸಿ.ಟಿ.ರವಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಾರೋ ಅಂದು ನಾನು ಕ್ಲೇಮ್ ಮಾಡುತ್ತೇನೆ. ಇವತ್ತಲ್ಲ.
*ಅಂದರೆ, ಬಿಜೆಪಿ ಮತ್ತೆ ಸರ್ಕಾರ ರಚಿಸುವುದಾದಲ್ಲಿ ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರಾ?
ಈಗ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಹೇಳಿದೆನಲ್ಲ.
*ಹಿಂದುತ್ವದ ಪ್ರತಿಪಾದಕರು ಮುಂದಿನ ಮುಖ್ಯಮಂತ್ರಿಯಾಗಲಿ ಎಂದು ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದರ ಮರ್ಮ ಏನು? ಈಗಿರುವ ಬೊಮ್ಮಾಯಿ ಹಿಂದುತ್ವದ ಪ್ರತಿಪಾದಕರು ಅಲ್ಲವೇ?
ನಮ್ಮ ಸರ್ಕಾರವೇ ಹಿಂದುತ್ವದ ಪ್ರತಿಪಾದಕ. ಇದರ ಬಗ್ಗೆ ಗೊಂದಲ ಬೇಡ. ಯಾರು ಮುಖ್ಯಮಂತ್ರಿಯಾದರೂ ಪಕ್ಷದ ನೀತಿ ನಿರೂಪಣೆಗೆ ತಕ್ಕಂತೆಯೇ ಕೆಲಸ ಮಾಡಬೇಕಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಕಾರ್ಯಶೈಲಿ ಭಿನ್ನವಾಗಬಹುದು. ನಮ್ಮದು ಹಿಂದುಗಳನ್ನು ಒಡೆಯುವ ಪಕ್ಷ ಅಲ್ಲ. ಹಿಂದುಗಳನ್ನು ಒಗ್ಗೂಡಿಸುವ ಪಕ್ಷ.
*ನಿಮ್ಮ ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ನಿಮಗೆ ಗೆಲುವು ಕಷ್ಟವಾಗುತ್ತಿರುವುದರಿಂದಲೇ ಮುಂದಿನ ಮುಖ್ಯಮಂತ್ರಿ ಚರ್ಚೆ ತೇಲಿಬಿಡಲಾಯಿತಂತೆ ಹೌದೆ?
(ದೇಶಾವರಿ ನಗು)..ನಾನು ಮುಖ್ಯಮಂತ್ರಿಯಾಗುವ ಚರ್ಚೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂರ್ನಾಲ್ಕು ವರ್ಷದಿಂದಲೂ ಇದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಾಗಲೂ ಆ ಚರ್ಚೆ ಕೇಳಿಬಂದಿತ್ತು. ಆದರೆ, ನಾನು ಸ್ಪಷ್ಟವಾಗಿದ್ದೇನೆ. ಪಕ್ಷದ ಆದೇಶ ಪಾಲಿಸುವುದಷ್ಟೇ ನನ್ನ ಕೆಲಸ. ವೈಯಕ್ತಿಕ ಆಕಾಂಕ್ಷೆಗಳನ್ನು ಇಟ್ಟುಕೊಂಡು ಅಡ್ಡದಾರಿ ತುಳಿಯುವ ವ್ಯಕ್ತಿ ನಾನಲ್ಲ. ನನ್ನ ಪಕ್ಷ ಅಧಿಕಾರಕ್ಕೆ ಬರಬೇಕು, ಅದರಿಂದ ನನ್ನ ದೇಶಕ್ಕೆ ಬಲ ಸಿಗಬೇಕು ಎಂಬುದಕ್ಕಿಂತ ಬೇರೆ ಯಾವ ದೊಡ್ಡ ಆಸೆಯೂ ನನಗಿಲ್ಲ.
ಕರ್ನಾಟಕದಲ್ಲಿ ಇಂದು, ನಾಳೆ ಮೋದಿ ಪ್ರಚಾರ ಅಬ್ಬರ
*ಈ ಬಾರಿಯ ಟಿಕೆಟ್ ಹಂಚಿಕೆ ಪ್ರಕ್ರಿಯೆ ಗಮನಿಸಿದರೆ ಪಕ್ಷದ ರಾಜ್ಯ ಘಟಕದ ಸಂಪೂರ್ಣ ಚುಕ್ಕಾಣಿಯನ್ನು ಹೈಕಮಾಂಡ್‌ಗೆ ನೀಡಿದಂತಿದೆ?
ಇಲ್ಲವೇ ಇಲ್ಲ. ಟಿಕೆಟ್ ಹಂಚಿಕೆ ಎಲ್ಲವೂ ವ್ಯವಸ್ಥಿತವಾಗಿಯೇ ನಡೆದಿದೆ. ತಳಹಂತದಿಂದಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಅದಕ್ಕೆ ತನ್ನ ಮುದ್ರೆ ಒತ್ತಿದೆ ಅಷ್ಟೇ. ಪ್ರಕ್ರಿಯೆಯಲ್ಲಿ ಚರ್ಚೆಗೆ ಬರದೇ ಇರುವ ಹೆಸರುಗಳಿಗೆ ಟಿಕೆಟ್ ಸಿಕ್ಕಿಲ್ಲ. ಎಲ್ಲವೂ ಮಂಡಲ, ಜಿಲ್ಲಾ ಮತ್ತು ರಾಜ್ಯ ಘಟಕದಲ್ಲಿ ಚರ್ಚೆಯಾಗಿರುವ ಹೆಸರುಗಳೇ.
ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿ ಆಗಲಿ ಎಂಬ ಕೂಗು ಕೇಳಿಬರುತ್ತಿದೆಯಲ್ಲ ಯಾಕೆ?
ಈಗ ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತಿದ್ದೇವೆ. ಕೆಲವು ಜನರ, ನಾಯಕರ, ಕಾರ್ಯಕರ್ತರ ಆಶಯ ಇರಬಹುದು. ಆದರೆ ಆಶಯ ಬೇರೆ, ನಿರ್ಣಯ ಬೇರೆ. ಈ ಹಂತದಲ್ಲಿ ನಾನು ಗೊಂದಲ ಉಂಟುಮಾಡಲು ಬಯಸುವುದಿಲ್ಲ. ಯಾವತ್ತು ರಾಜ್ಯದ ಉದ್ದಗಲಕ್ಕೂ ಜನರು ಸಿ.ಟಿ.ರವಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಾರೋ ಅಂದು ನಾನು ಕ್ಲೇಮ್ ಮಾಡುತ್ತೇನೆ. ಇವತ್ತಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.