ಕಾಂಗ್ರೆಸ್ ಸಂಸ್ಥಾಪನಾ ದಿನ: ಇಂದು ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿವ ಸಂಭ್ರಮ, ಡಿಕೆಶಿ

By Kannadaprabha NewsFirst Published Dec 28, 2023, 8:29 AM IST
Highlights

ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಕೊಂಡ ಸಂಘಟನೆ ಕಾಂಗ್ರೆಸ್‌, ಭಾರತದ ಅಭಿವೃದ್ಧಿಗೆ ಅಮೂಲಾಗ್ರ ಕೊಡುಗೆ ನೀಡಿದ ಪಕ್ಷ: ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತವು, ಬಹುಸಂಸ್ಕೃತಿಯನ್ನೊಳಗೊಂಡು ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನು ಪಸರಿಸುವ ದೇಶ. ಇಲ್ಲಿನ ರಾಜಕೀಯ ವ್ಯವಸ್ಥೆ ಬಹುತ್ವವನ್ನು ಒಳಗೊಂಡೇ ಬೆಳೆದಿದೆ. ಈ ಬಹುತ್ವದ ಬೇರನ್ನು ಕಿತ್ತೊಗೆದು ಏಕಪಕ್ಷೀಯ ವ್ಯವಸ್ಥೆಯನ್ನು ತರುವ ಪ್ರಯತ್ನ ನಡೆದಿದ್ದರೂ, ಕಾಂಗ್ರೆಸ್ ಮಾತ್ರ ಮರಳಿ ತನ್ನ ಬೇರುಗಳನ್ನು ವಿಸ್ತರಿಸಿ ಹೆಮ್ಮರವಾಗಿ ಬೆಳೆಯುತ್ತಿದೆ. ದಕ್ಷಿಣದಲ್ಲಿ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅಭೂತಪೂರ್ವವಾಗಿ ಅಧಿಕಾರ ಸ್ಥಾಪಿಸಿಕೊಂಡಿರುವ ಕಾಂಗ್ರೆಸ್, ತನ್ನ ವಿರೋಧಿಗಳು ಕೂಡ ಹುಬ್ಬೇರಿಸುವಂತೆ ಬೆಳೆಯುತ್ತಿರುವುದನ್ನು ಇತಿಹಾಸದ ಮರುಕಳಿಸುವಿಕೆ ಎನ್ನಬಹುದು. ಕಾಂಗ್ರೆಸ್ ಪಕ್ಷದ 139ನೇ ಸಂಸ್ಥಾಪನಾ ದಿನದಂದು ಈ ಅತಿದೊಡ್ಡ ಸಂಘಟನೆಯ ವೇಗವಾದ ವಿಸ್ತರಣೆಗೆ ಮರುವ್ಯಾಖ್ಯಾನ ದೊರೆಯುತ್ತಿರುವುದನ್ನು ಅವಲೋಕಿಸಬೇಕಿದೆ.

ಕಾಂಗ್ರೆಸ್‌- ಇದು ನಮ್ಮದೇ ಪಕ್ಷ

Latest Videos

1885ರ ಡಿಸೆಂಬರ್ 28ರಂದು ಮುಂಬೈಯಲ್ಲಿ ಮೊಟ್ಟಮೊದಲ ಸಮಾವೇಶ ನಡೆದಾಗ ಇದೊಂದು ದೊಡ್ಡ ಸಂಘಟನೆಯಾಗಿ ಜನರನ್ನು ತಲುಪಲಿದೆ ಎಂಬ ನಿರೀಕ್ಷೆ ಹೆಚ್ಚಿನವರಲ್ಲಿ ಇರಲಿಲ್ಲ. ದೇಶದ ಸ್ವಾತಂತ್ರ್ಯ ಹಾಗೂ ಜನರ ಬದುಕಿನ ಗುಣಮಟ್ಟವನ್ನು ಉತ್ತಮಪಡಿಸುವ ಕಾಳಜಿಯಷ್ಟೇ ಆಗ ಎಲ್ಲ ನಾಯಕರ ಕಣ್ಣ ಮುಂದೆ ಇತ್ತು. ನಂತರದ ವರ್ಷಗಳಲ್ಲಿ ಕಾಂಗ್ರೆಸ್ ವಿಸ್ತರಿಸುತ್ತಾ ಹೋದಂತೆ, ಜನರಲ್ಲಿ ಪಕ್ಷದ ಬಗ್ಗೆ ಅಪಾರ ವಿಶ್ವಾಸ ಮೂಡಿತು. ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗಿ, ಸಾಮಾಜಿಕ ಸಮಾನತೆ, ಕಂದಾಚಾರ ನಿವಾರಣೆ ಮೊದಲಾದ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದರಿಂದ ಇದು ನಮ್ಮದೇ ಪಕ್ಷ ಎಂಬ ನಂಬಿಕೆ ಜನರಲ್ಲಿ ಮೂಡಿತು. ಪಂಡಿತ್ ಜವಾಹರಲಾಲ್ ನೆಹರು ಪ್ರಧಾನಿಯಾದಾಗಲಂತೂ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಿತು. ನಂತರ ಇಂದಿರಾ ಗಾಂಧಿಯವರ ಕಾಲದಲ್ಲಿ, ‘ಇಂಡಿಯಾ ಎಂದರೆ ಇಂದಿರಾʼ ಎಂಬ ಮಾತು ಜನಜನಿತವಾಗಿತ್ತು. ಈ ನಡುವೆ ಅನೇಕ ಏಳುಬೀಳುಗಳನ್ನು ಕಂಡ ಪಕ್ಷಕ್ಕೆ ಹಿನ್ನಡೆಯಾಗಿದ್ದು ನಿಜ. ಆದರೆ ಆಗಿನ ಯುವ ನಾಯಕ ರಾಜೀವ್ ಗಾಂಧಿ ದೇಶಕ್ಕೆ ಹೊಸ ಭರವಸೆಯನ್ನು ಮೂಡಿಸಿ ರಾಜಕೀಯ ವ್ಯವಸ್ಥೆಯ ಸುಧಾರಣೆಗೆ ಹೊಸ ನೋಟ ತಂದರು. ದೇಶದೆಲ್ಲೆಡೆ ಓಡಾಡಿ ದೇಶದ ಪ್ರಗತಿಯ ದಿಕ್ಕನ್ನು ಬದಲಿಸುವ ಆಶ್ವಾಸನೆಯನ್ನು ಜನರ ಮನಸ್ಸಿನಲ್ಲಿ ಮೂಡಿಸಿದರು.

ಚಲುವರಾಯಸ್ವಾಮಿಗೆ ಲೋಕಸಭೆ ಚುನಾವಣೆ ಸವಾಲು: ಫಲಿತಾಂಶ ವ್ಯತ್ಯಾಸವಾದರೆ ಸಚಿವ ಸ್ಥಾನ ಹೋಗುತ್ತಾ?

ಮರುಕಳಿಸಿದ ಚರಿತ್ರೆ

ಆಗಲೇ ಹೇಳಿದಂತೆ ಈ ಇತಿಹಾಸ ಮರುಕಳಿಸಿದೆ. ರಾಜೀವ್ ಗಾಂಧಿಯವರ ಮಗ ರಾಹುಲ್ ಗಾಂಧಿ ‘ಭಾರತ ಜೋಡಿಸಿʼ ಯಾತ್ರೆಯ ಮೂಲಕ ಆ ಭರವಸೆಯನ್ನು ಮತ್ತೆ ಜನರ ಹೃದಯಗಳಲ್ಲಿ ನೆಲೆ ಮಾಡಿದ್ದಾರೆ. ಈ ಕುರಿತು ವಿರೋಧ ಪಕ್ಷಗಳಿಂದ ಎಷ್ಟೇ ಟೀಕೆ ಬಂದರೂ ಕೊನೆಗೆ ಜನತಾ ಜನಾರ್ದನರು ಕಾಂಗ್ರೆಸ್ಸಿನ ಕೈಹಿಡಿದರು. ಇತ್ತೀಚೆಗೆ ತೆಲಂಗಾಣದಲ್ಲೂ ಇದೇ ರೀತಿ ಚರಿತ್ರಾರ್ಹ ದಾಖಲೆಯಾಗಿದೆ. ಅಂದು ರಾಜೀವ್ ಗಾಂಧಿಯವರಂತಹ ನಾಯಕರು ಜನರ ಮನಸ್ಸುಗಳನ್ನು ಹೇಗೆ ಜೋಡಿಸಿದರೋ ಈಗ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿ ಮೊದಲಾದ ನಾಯಕರು ಜನರ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿದ್ದಾರೆ. ರಾಜಕೀಯದಲ್ಲಿ ಜನರ ಮನಸ್ಸನ್ನು ಗೆಲ್ಲುವ ಬಹಳ ಸುಲಭ ವಿಧಾನ ಎಂದರೆ, ನಿಷ್ಕಲ್ಮಶವಾಗಿ ಅವರ ಮನಸ್ಸುಗಳನ್ನು ಒಂದು ಮಾಡುವುದು. ಕಾಂಗ್ರೆಸ್ ಜನರ ಮನಸ್ಸಿನ ಒಳನೋಟ ಅರಿತು ಈ ಕಾರ್ಯಕ್ಕೆ ಕೈಹಾಕಿದ್ದು ಹಾಗೂ ಬೆಲೆ ಏರಿಕೆಯಿಂದ ನೊಂದ ಜನರಿಗೆ ನೇರವಾಗಿ ಲಾಭ ತಲುಪಿಸುವ ಗ್ಯಾರಂಟಿಗಳ ಆಶ್ವಾಸನೆ ನೀಡಿದ್ದರ ಪರಿಣಾಮ ಜನರು ಮನಃಪೂರ್ವಕವಾಗಿ ಪಕ್ಷಕ್ಕೆ ಬೆಂಬಲಿಸಿದರು. ಇದರ ಜೊತೆಗೆ ಹಿಂದಿನ ಭ್ರಷ್ಟ ಸರ್ಕಾರದ ವಿರುದ್ಧ ಜನರು ಸಿಡಿದೆದ್ದಿದ್ದು, ನಮ್ಮ ತರುಣ ಕಾರ್ಯಕರ್ತರು ಅತ್ಯುತ್ಸಾಹದಿಂದ ಮನೆಮನೆಗೆ ತಲುಪಿ ದುರಾಡಳಿತವನ್ನು ಮುಗಿಸಲು ಬೆಂಬಲ ಕೋರಿದ್ದನ್ನು ಇಲ್ಲಿ ಸ್ಮರಿಸಬೇಕು. ಸಂಸ್ಥಾಪನಾ ದಿನದ ಈ ಶುಭ ಸಂದರ್ಭದಲ್ಲಿ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ‘ದೇಶಕ್ಕೆ ದೇಣಿಗೆ ನೀಡಿ’ ಅಭಿಯಾನ ಆರಂಭಿಸಿದ್ದು, ಕನಿಷ್ಠ ₹138, ₹1,380 ಮತ್ತು ₹13,800 ನಂತೆ ದೇಣಿಗೆ ನೀಡಬಹುದು. ಈ ಮೂಲಕ ಪಕ್ಷದ ಪ್ರಗತಿಯಲ್ಲಿ ಜನರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಇದು ಮಹಾತ್ಮ ಗಾಂಧೀಜಿಯಿಂದ ದೊರೆತ ಪ್ರೇರಣೆ.

ಕಾಂಗ್ರೆಸ್ ಮಾಡಿದ್ದೇನು?

ಸ್ವಾತಂತ್ರ್ಯದ ನಂತರದಿಂದ ಆರಂಭವಾಗಿ 2014ರವರೆಗೆ ಬಹುತೇಕ ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶಕ್ಕೇನು ಮಾಡಿದೆ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳು ಉರುಹೊಡೆದುಕೊಂಡಿವೆ. 2004 - 2014ರ ಅವಧಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ, ಉದ್ಯೋಗ ಖಾತರಿ ಮೂಲಕ ಗ್ರಾಮೀಣ ಕುಟುಂಬಗಳಿಗೆ 100 ದಿನಗಳ ಕೆಲಸ ನೀಡಿತು. ಒಂದು ಅಧ್ಯಯನದ ಪ್ರಕಾರ, ಈ ಮಹತ್ವದ ಕ್ರಮದಿಂದ 2004-05 ರಿಂದ 2011-12 ರವರೆಗೆ ಬಡತನದ ಪ್ರಮಾಣ ಶೇ. 32ರಷ್ಟು ಕಡಿಮೆಯಾಗಿ, 14 ಕೋಟಿ ಜನರು ಬಡತನದ ಕೂಪಕ್ಕೆ ತಳ್ಳುವುದನ್ನು ತಡೆದಿತ್ತು. ಜನರ ಹಸಿವು ನೀಗಿಸುವ ಐತಿಹಾಸಿಕವಾದ ಆಹಾರ ಭದ್ರತಾ ಕಾಯ್ದೆಯಿಂದ ಆಹಾರ ಧಾನ್ಯಗಳ ಪಡಿತರ ವಿತರಣೆ ಜಾರಿಗೆ ಬಂತು. ವಿಶೇಷ ಆರ್ಥಿಕ ವಲಯಗಳ ಕಾಯ್ದೆಯಿಂದಾಗಿ 2012-13 ನೇ ಸಾಲಿನಲ್ಲಿ ಈ ವಲಯಗಳಲ್ಲಿ ರಫ್ತು ಪ್ರಮಾಣ ಶೇ. 31ರಷ್ಟು ಏರಿಕೆಯಾಗಿತ್ತು. ಆರ್‌ಟಿಐ ಕಾಯ್ದೆ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತಂದರೆ, ಆರ್‌ಟಿಇ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಲಿಕೆಯ ವಿಶೇಷ ಹಕ್ಕನ್ನು ನೀಡಿತು. ವಿರೋಧಪಕ್ಷಗಳು ಅಂದು ವಿರೋಧಿಸಿ ಇಂದು ಅನುಸರಿಸುತ್ತಿರುವ ಆಧಾರ್ ಗುರುತಿನ ವ್ಯವಸ್ಥೆಯನ್ನು ತಂದಿದ್ದು ಕೂಡ ಯುಪಿಎ ಸರ್ಕಾರ.

ಸಂವಿಧಾನದ ಉಳಿವಿಗೆ ಕಾಂಗ್ರೆಸ್

ಜಾತ್ಯತೀತತೆ, ಸಮಾನತೆ, ಸಾರ್ವಭೌಮತೆ ಮೊದಲಾದ ಆಶಯಗಳು ಸೇರಿದಂತೆ ಸಂವಿಧಾನವನ್ನು ಕಾಪಾಡುವ ಉದ್ದೇಶದಿಂದ ಕಾಂಗ್ರೆಸ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಹೊಸ ಕಾಲದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಾ ಬಡವರು, ದಲಿತರು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಭವಿಷ್ಯ ಕಟ್ಟಿಕೊಡುವ ಸಂಕಲ್ಪದೊಂದಿಗೆ ಪಕ್ಷ ಮುನ್ನಡೆಯುತ್ತಿದೆ. ಜಾತಿ ಹಾಗೂ ಧರ್ಮಗಳ ಆಧಾರದಲ್ಲಿ ಮನಸ್ಸುಗಳನ್ನು ಮುರಿದು ದ್ವೇಷವನ್ನು ಬಿತ್ತುವವರ ನಡುವೆ ಪ್ರೀತಿಯನ್ನು ಹಂಚುವ ಸಮಾಜಕಾರ್ಯದ ಮಹತ್ತರ ಹೊಣೆ ಕಾಂಗ್ರೆಸ್ ಪಕ್ಷಕ್ಕಿದೆ. ಇದಕ್ಕಾಗಿ ನಮ್ಮ ಪಕ್ಷಕ್ಕೆ ಸ್ಫೂರ್ತಿಯಾಗಿ ಇರುವುದು ಜನರ ಬೆಂಬಲ ಹಾಗೂ ಇತಿಹಾಸದಲ್ಲಿ ಹಿರಿಯ ನಾಯಕರು ಇಟ್ಟ ಹಿಂದಿನ ಹೆಜ್ಜೆಗಳ ಮಾದರಿ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಇನ್ನಷ್ಟು ಜನತಾ ಹಿತದೃಷ್ಟಿಯಿಂದ ಕೆಲಸ ಮಾಡಲಿದ್ದು, ನುಡಿದಂತೆ ನಡೆಯುವ ಆಶಯವನ್ನು ಗಟ್ಟಿಗೊಳಿಸಲಿದ್ದಾರೆ.

News Hour: ಭಾರತ್ ಜೋಡೋ ಬಳಿಕ ‘ಭಾರತ್ ನ್ಯಾಯ್ ಯಾತ್ರೆ’!

“ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಮೂಲಭೂತವಾಗಿ ಸಮಾಜದ ಪ್ರತಿಯೊಬ್ಬರೂ ಪರಸ್ಪರರಿಗೆ ತೋರುವ ಗೌರವಾದರ ಭಾವನೆ” ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ಇಂತಹ ವ್ಯವಸ್ಥೆಯನ್ನು ಕಟ್ಟಿಕೊಡುವ ಹಾಗೂ ಈ ವ್ಯವಸ್ಥೆಗೆ ಧಕ್ಕೆಯಾಗದಂತೆ ಕಾಪಾಡುವ ಹೊಣೆಯನ್ನು ಕಾಂಗ್ರೆಸ್ ಹೊತ್ತುಕೊಂಡಿದೆ. ಕಾಂಗ್ರೆಸ್‌ನ ಸಂಸ್ಥಾಪನಾ ದಿನವೆಂದರೆ ಕೇವಲ ವಾರ್ಷಿಕ ಆಚರಣೆಯಲ್ಲ, ಅದು ಪ್ರಜಾತಂತ್ರದ ಆಶಯಗಳನ್ನು ಎತ್ತಿಹಿಡಿಯುವ ಸಂಭ್ರಮ.

1885ರ ಡಿಸೆಂಬರ್ 28ರಂದು ಮುಂಬೈನಲ್ಲಿ ನಡೆದ ಸಮಾವೇಶದ ಮೂಲಕ ಮೊಳಕೆಯೊಡೆದ ಪುಟ್ಟ ಬೀಜವೊಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಎಂಬ ಹೆಮ್ಮರವಾಗಿ ಬೆಳೆದದ್ದು ಇತಿಹಾಸ. ದೇಶದ ಸ್ವಾತಂತ್ರ್ಯ, ಜನರ ಬದುಕಿನ ಗುಣಮಟ್ಟ ಉತ್ತಮಪಡಿಸಲು ಶುರುವಾದ ಸಂಘಟನೆ ಸಮಾಜದಲ್ಲಿನ ಕಂದಾಚಾರ, ಅಸಮಾನತೆ, ಜಾತಿಯತೆ, ಬಡತನ, ಹಸಿವು, ನಿರುದ್ಯೋಗ ಸೇರಿದಂತೆ ಸಾಲು ಸಾಲು ಸಮಸ್ಯೆಗಳನ್ನು ಸುಧಾರಿಸಿ ದೇಶವನ್ನು 7 ದಶಕಗಳ ಕಾಲ ಅಭಿವೃದ್ಧಿಪಡಿಸಿದ ಪರಿ ಸ್ಮರಣೀಯ. ಹೊಸ ಕಾಲದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಾ ಸಮಾಜದ ಎಲ್ಲ ವರ್ಗಕ್ಕೂ ಭವಿಷ್ಯ ಕಟ್ಟಿಕೊಡುವ ಸಂಕಲ್ಪದೊಂದಿಗೆ ಪಕ್ಷ ಮುನ್ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 

click me!