
ಮೈಸೂರು(ಡಿ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಸಿದ್ದರಾಮಯ್ಯನವರ ಬೆಂಬಲಿಗರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪ್ರತಾಪ್ ಫೇಸ್ ಬುಕ್ ಲೈವ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವರ ಬೆಂಬಲಿಗರು, ಬಾಲಬಡುಕರು ನನ್ನ ಹೇಳಿಕೆಯನ್ನು ತಿರುಚಿದ್ದಾರೆ. ‘ಸೋಮಾರಿ ಸಿದ್ದ’’ ಎಂಬ ಮಾತು ವ್ಯಕ್ತಿ ನಿರ್ದಿಷ್ಟವಾದದ್ದಲ್ಲ. ಒಂದು ಪರಿಸ್ಥಿತಿಯನ್ನು ಸೂಚಿಸುವ ಪದ. ಸಿದ್ದರಾಮಯ್ಯನವರಿಗೆ ನಾನೆಷ್ಟು ಗೌರವ ಕೊಡುತ್ತೇನೆ ಎಂಬುದು ಅವರಿಗೆ ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ಸಹಿತವಾಗಿ ನಮ್ಮ ನಾಡಿನ ಯಾರೇ ಹಿರಿಯರು ಸಿಕ್ಕರೂ ಕೊಡಗಿನ ಸಂಸ್ಕೃತಿಗೆ ಪೂರಕವಾಗಿ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದಬಳಕೆ: ಸಂಸದ ಪ್ರತಾತ್ ಸಿಂಹ ವಿರುದ್ಧ ಎಫ್ಐಅರ್
ಸಿದ್ದರಾಮಯ್ಯ ಅವರು ಯಾರನ್ನಾದರೂ ಬಹುವಚನದಲ್ಲಿ ಮಾತನಾಡಿಸಿದ ಉದಾಹರಣೆ ಇದೆಯೇ?. ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಿಸ್ಟರ್ ಮೋದಿ ಎನ್ನುತ್ತಾರೆ. ದೇವೇಗೌಡ, ಯಡಿಯೂರಪ್ಪ ಅವರಿಗೆ ಗೌರವದಿಂದ ಮಾತಾಡಿದ್ದಾರಾ?. ಕಾಂಗ್ರೆಸ್ ಸೇರುವ ಮೊದಲು ಸೋನಿಯಾ ಗಾಂಧಿ ಅವರನ್ನು ಏಕವಚನದಿಂದ ಸಂಬೋಧಿಸುತ್ತಿದ್ದರು. ಆದರೆ, ಸಿದ್ದರಾಮಯ್ಯನವರ ಬೆಂಬಲಿಗರು, ಬಾಲಬಡುಕರು ನನಗೆ ಏಕವಚನ, ಬಹುವಚನ ವ್ಯಾಕರಣ ಹೇಳಿಕೊಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
2024ರಲ್ಲಿ ನನ್ನ ವಿರುದ್ಧ ಅಭ್ಯರ್ಥಿ ಯಾರು ಎಂಬುದನ್ನು ಸಿದ್ದರಾಮಯ್ಯ ಘೋಷಿಸಿದರೆ, ನಿಗಮ-ಮಂಡಳಿ ಸ್ಥಾನಗಳಿಗೆ ಅಧ್ಯಕ್ಷರನ್ನು ನೇಮಿಸಿದರೆ ಪ್ರತಿಭಟನೆಗಳು ನಿಲ್ಲುತ್ತವೆ. ಸಿದ್ದರಾಮಯ್ಯನವರ ಮೇಲೆ ಪ್ರಭಾವ ಬೀರಲು ಅವರ ಬೆಂಬಲಿಗರು ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವಂತೆ ಹೇಳುತ್ತಿದ್ದೇನೆ. ಮರಕ್ಕೆ ಕಲ್ಲೆಸೆದರೆ ಮಾವಿನ ಕಾಯಿ ಉದುರುತ್ತದೆ. ಆದರೆ, ಪ್ರತಾಪ ಸಿಂಹನಿಗೆ ಕಲ್ಲೆಸೆದರೆ ಹಣ್ಣಲ್ಲ, ತಿರುಗಿ ಕಲ್ಲೇ ಬರುತ್ತದೆ. ಹಾಗಾಗಿ, ಸಿದ್ದರಾಮಯ್ಯನವರು ತಮ್ಮ ಬಾಲ ಬಡುಕರಿಗೆ ಬುದ್ಧಿ ಹೇಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.