ಉತ್ತರ ಕನ್ನಡದಲ್ಲಿ ಬಿಜೆಪಿಗೆ ಬಲ ಇಲ್ಲ: ಡಿ.ಕೆ.ಶಿವಕುಮಾರ್

By Kannadaprabha News  |  First Published Mar 28, 2024, 10:47 AM IST

ಉತ್ತರ ಕನ್ನಡದಲ್ಲಿ ಬಿಜೆಪಿ ವೀಕ್ ಆಗಿದೆ. ಇಲ್ಲದಿದ್ದರೆ ಹಲವು ಬಾರಿ ಲಕ್ಷಾಂತರ ಮತಗಳಿಂದ ಗೆದ್ದಿದ್ದ ಅಭ್ಯರ್ಥಿಯನ್ನು ಬಿಜೆಪಿ ಈ ಬಾರಿ ಬದಲಾಯಿಸಲು ಕಾರಣವೇನು ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.


ಕುಮಟಾ (ಮಾ.28): ಉತ್ತರ ಕನ್ನಡದಲ್ಲಿ ಬಿಜೆಪಿ ವೀಕ್ ಆಗಿದೆ. ಇಲ್ಲದಿದ್ದರೆ ಹಲವು ಬಾರಿ ಲಕ್ಷಾಂತರ ಮತಗಳಿಂದ ಗೆದ್ದಿದ್ದ ಅಭ್ಯರ್ಥಿಯನ್ನು ಬಿಜೆಪಿ ಈ ಬಾರಿ ಬದಲಾಯಿಸಲು ಕಾರಣವೇನು ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಲೋಕಸಭೆ ಚುನಾವಣೆ ಪ್ರಯುಕ್ತ ಪಟ್ಟಣದ ಹವ್ಯಕ ಸಭಾಭವನದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್‌ನ ದೇವರಾಯ ನಾಯ್ಕ, ಮಾರ್ಗರೆಟ್ ಆಳ್ವಾ ಹೊರತುಪಡಿಸಿ ಉಳಿದಂತೆ ಹೆಚ್ಚಿನ ಅವಧಿಗೆ ಬಿಜೆಪಿಯೇ ಇಲ್ಲಿ ಗೆದ್ದಿದೆ. ಆದರೆ ಸದ್ಯ ಜಿಲ್ಲೆಯಲ್ಲಿ ಬಿಜೆಪಿಗೆ ಬಲ ಇಲ್ಲ. ಜನ ಬದಲಾವಣೆ ಬಯಸಿದ್ದಾರೆ ಎಂಬ ಕಾರಣಕ್ಕೆ ಅಭ್ಯರ್ಥಿಯನ್ನು ಬದಲಿಸಿದ್ದಾರೆ. ಹಾಗೆ ಎಲ್ಲೆಡೆಯೂ ಬಿಜೆಪಿ ವೀಕೇ ಆಗಿದೆ. ಪ್ರಬಲ ಇದ್ದಿದ್ದರೆ ಆಪರೇಷನ್ ಕಮಲ, ಇಡಿ ದಾಳಿಯಂತಹ ತಂತ್ರಗಳನ್ನು ಹೆಣೆಯುವ ಅಗತ್ಯವಿರಲಿಲ್ಲ. ಆದರೂ ಡಬಲ್ ಎಂಜಿನ್ ಸರ್ಕಾರ ಇದ್ದಾಗಲೇ ರಾಜ್ಯ ಕಾಂಗ್ರೆಸ್ ಪಾಲಾಯಿತು. ಕಮಲ ಯಾವತ್ತೂ ಕೆರೆಯಲ್ಲಿದ್ದರಷ್ಟೇ ಚೆಂದ. ಆದರೆ ಕೈ ಅಧಿಕಾರದಲ್ಲಿದ್ದರೆ ಮಾತ್ರ ಚೆಂದ ಎಂದರು.

Tap to resize

Latest Videos

ದೇಹದಲ್ಲಿ ಶಕ್ತಿ ಇರುವರೆಗೂ ನಂಬಿದ ಜನತೆಗಾಗಿ ಹೋರಾಟ: ಎಚ್.ಡಿ.ದೇವೇಗೌಡ

ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ, ಧರ್ಮಯುದ್ಧಕ್ಕೆ ಪ್ರಚಾರವನ್ನು ಕುಮಟಾದಿಂದಲೇ ಆರಂಭಿಸುತ್ತಿದ್ದೇನೆ. ಇದಕ್ಕೂ ಮುನ್ನ ಈ ಭಾಗದ ಸಾಕಷ್ಟು ಪ್ರಸಿದ್ಧ ದೇವಾಲಯಗಳನ್ನು ಭೇಟಿ ನೀಡಿದ್ದು, ಆಶೀರ್ವಾದ ಪಡೆದುಕೊಂಡಿದ್ದೇನೆ. ದೇವರು ಯಾರ ಸೊತ್ತಲ್ಲ. ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಲ್ಲಿ ರಾಜಕಾರಣ ಇರಬಾರದು. ಬಿಜೆಪಿಗರು ಧರ್ಮವನ್ನು ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಇಡೀ ದೇಶವನ್ನು ಅಲ್ಲಾಡಿಸುತ್ತಿದೆ ಎಂದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಮುಂದಿನ ನಾಲ್ಕು ವರ್ಷ ಮಾತ್ರವಲ್ಲ, ನಂತರದ ಅವಧಿಗೂ ಕಾಂಗ್ರೆಸ್ ಸರ್ಕಾರ ಇರಲಿದೆ ಎಂದರು.

ರಾಜಕೀಯದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಕಾರ್ಯಕರ್ತರು ಗೆಲುವಿನ ಆತ್ಮವಿಶ್ವಾಸದೊಂದಿಗೆ ಮನೆಮನೆಗೆ ತೆರಳಿ ಹೆಮ್ಮೆಯಿಂದ ಮತ ಕೇಳಬೇಕು. ವಿದ್ಯಾವಂತೆಯಾದ ಡಾ. ಅಂಜಲಿ ನಿಂಬಾಳ್ಕರ್ ಅವರು ಗೆದ್ದು ಸಂಸತ್ತಿನಲ್ಲಿ ಈ ಕ್ಷೇತ್ರದ ಆಗುಹೋಗುಗಳಿಗೆ, ಸಮಸ್ಯೆಗಳಿಗೆ ಧ್ವನಿಯಾಗುತ್ತಾರೆ. ಈ ಲೋಕಸಭಾ ಕ್ಷೇತ್ರದ ೮ ಶಾಸಕರ ಪೈಕಿ ೫ ಕಾಂಗ್ರೆಸ್‌ನವರು. ಉಳಿದ ಮೂವರಲ್ಲಿ ಒಬ್ಬರು ಹೊಯ್ದಾಡುತ್ತಿದ್ದಾರೆ. ಅವರಿಗೆ ತಮ್ಮ ತಪ್ಪು ನಿರ್ಧಾರದ ಅರಿವಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಮಾರ್ಮಿಕವಾಗಿ ಶಾಸಕ ಶಿವರಾಮ ಹೆಬ್ಬಾರ ಕುರಿತಾಗಿ ನುಡಿದರು.

ಕಾಂಗ್ರೆಸ್‌ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಮಾತನಾಡಿ, ಇದು ಕಾಂಗ್ರೆಸ್- ಬಿಜೆಪಿ ಚುನಾವಣೆಯಲ್ಲ. ಬಡವರ ವಿರುದ್ಧ ಅದಾನಿ, ಅಂಬಾನಿಯಂಥವರ ನಡುವಿನ ಚುನಾವಣೆ. ಕಾಂಗ್ರೆಸ್ ಹೆಣ್ಣಿಗೆ ಗೌರವ ಕೊಟ್ಟ ಪಕ್ಷ. ಗ್ಯಾರಂಟಿ ಯೋಜನೆಗಳು ಇನ್ನಿತರ ಸೌಲಭ್ಯಗಳ ಮೂಲಕ ಕುಟುಂಬವೊಂದಕ್ಕೆ ತಿಂಗಳಿಗೆ ತಲಾ ₹೫೦೦೦ ಗಳಷ್ಟು ಸಹಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಉಪಯುಕ್ತತೆಯನ್ನು ಮಹಿಳೆಯರು ತಮ್ಮ ಗಂಡ-ಮಕ್ಕಳಿಗೂ ತಿಳಿಸಿ ಮತ ಹಾಕುವಂತೆ ಪ್ರೇರೇಪಿಸಬೇಕು ಎಂದರು.

ಕಾಂಗ್ರೆಸ್ ರಾಜ್ಯ ವಕ್ತಾರ ಸುಧೀರ ಮರಾಂಡೆ ಮಾತನಾಡಿ, ಮಾಜಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವುದಾಗಿ ಮುಕ್ತವಾಗಿ ಹೇಳಿಕೊಂಡವರಾದರೆ ಈಗ ಬಿಜೆಪಿ ಅಭ್ಯರ್ಥಿಯಾದವರು ಸಂವಿಧಾನ ಬದಲಿಸುವ ಗುರಿಯನ್ನು ಒಳಗೆ ಹೃದಯದಲ್ಲಿ ಇಟ್ಟುಕೊಂಡವರು ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಿ. ಕಸ್ತೂರಿರಂಗನ್ ವರದಿ ಸಂಬಂಧಿತ ಎಲ್ಲ ೫ ಸಭೆಗಳಿಗೂ ಸಂಸದರಾದ ಅನಂತಕುಮಾರ ಹೆಗಡೆ, ಶೋಭಾ ಕರಂದ್ಲಾಜೆ, ಪ್ರತಾಪಸಿಂಹ ಇವರ್‍ಯಾರೂ ಹಾಜರಾಗದೇ ಜಿಲ್ಲೆಯ ಜನತೆಗೆ ಅನ್ಯಾಯವೆಸಗಿದ್ದಾರೆ. ಬಿಜೆಪಿ ಸಮಾಜದಲ್ಲಿ ಬೆಂಕಿ ಹಚ್ಚಿದರೆ, ಕಾಂಗ್ರೆಸ್ ಮನೆಮನೆಯಲ್ಲಿ ಉಚಿತ ಬೆಳಕು ಹಚ್ಚುತ್ತದೆ ಎಂದರು.

Lok Sabha Election 2024: ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವ: ವಿ.ಸೋಮಣ್ಣ

ಸಚಿವ ಮಂಕಾಳು ವೈದ್ಯ ಮಾತನಾಡಿ, ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಿತ್ತೂರು ಖಾನಾಪುರ ಭಾಗಕ್ಕೆ ಯಾವತ್ತೂ ಅಭ್ಯರ್ಥಿ ಪ್ರತಿನಿಧಿತ್ವ ಸಿಕ್ಕಿಲ್ಲ. ಹೀಗಾಗಿ ಇದೊಂದು ಅವಕಾಶವನ್ನು ಕಾಂಗ್ರೆಸ್ ನೀಡಿದೆ. ಈ ಬಗ್ಗೆ ಬಿಜೆಪಿಗರು ಮಾಡುವ ಗೊಂದಲಕ್ಕೆ ಬೆಲೆ ಕೊಡಬೇಡಿ. ಸಂಸತ್‌ನಲ್ಲಿ ಜಿಲ್ಲೆಯ ಹೆಸರು ಯಾವುದೇ ವಿಚಾರಕ್ಕೂ ಪ್ರಸ್ತಾಪವಾಗಿಲ್ಲ. ಜಿಲ್ಲೆಯ ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈಗಾಗಲೇ ಅನಂತಕುಮಾರ ಹೆಗಡೆ ಅವರ ಅವಧಿಯಲ್ಲಿ ೩೦ ವರ್ಷಗಳನ್ನು ವ್ಯರ್ಥವಾಗಿ ಕಳೆದುಕೊಂಡಿದ್ದೇವೆ. ಬಿಜೆಪಿಯ ಸುಳ್ಳುಗಳಿಗೆ ಕೊನೆಯಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಜನರ ಖಾತೆಗೆ ಸಂದಾಯವಾಗಿದೆ. ನಮ್ಮ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಗೆಲ್ಲಬೇಕು ಎಂದರು.

click me!