ದೇಹದಲ್ಲಿ ಶಕ್ತಿ ಇರುವರೆಗೂ ನಂಬಿದ ಜನತೆಗಾಗಿ ಹೋರಾಟ: ಎಚ್.ಡಿ.ದೇವೇಗೌಡ

By Kannadaprabha NewsFirst Published Mar 28, 2024, 10:21 AM IST
Highlights

ನನಗೆ ನಿಲ್ಲಲು ಆಗಲ್ಲ, ಆದರೆ ಬುದ್ಧಿಶಕ್ತಿಯಿದೆ. ವಾಕ್ ಚಾತುರ್ಯವಿದೆ. ಈ ದೇಹದಲ್ಲಿ ಶಕ್ತಿ ಇರುವವರೆಗೂ ನನ್ನ ನಂಬಿರುವ ಜನತೆಗಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. 

ಹಿರೀಸಾವೆ (ಮಾ.28): ನನಗೆ ನಿಲ್ಲಲು ಆಗಲ್ಲ, ಆದರೆ ಬುದ್ಧಿಶಕ್ತಿಯಿದೆ. ವಾಕ್ ಚಾತುರ್ಯವಿದೆ. ಈ ದೇಹದಲ್ಲಿ ಶಕ್ತಿ ಇರುವವರೆಗೂ ನನ್ನ ನಂಬಿರುವ ಜನತೆಗಾಗಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು. ಪಟ್ಟಣದ ಶ್ರೀ ಚೌಡೇಶ್ವರಿ ಮುಖ್ಯದ್ವಾರದ ಬಳಿ ಲೋಕಸಭೆ ಚುನಾವಣೆ ಹಿನ್ನೆಲೆ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಹೋಬಳಿ ಮಟ್ಟದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಈ ಜೀವ ಹಾಗೂ ಜೀವನ ನಾಡಿನ ಜನತೆಗೆ ಮೀಸಲು ಎಂದರು. ೬೦ ವರ್ಷಗಳ ಕಾಲ ರಾಜಕೀಯ ಹೋರಾಟ ಮಾಡಿ, ಈಗ ಬಿಜೆಪಿ ಜೊತೆ ಏಕೆ ಹೋಗಿದ್ದೀರಿ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಾರೆ. 

ವಿರೋಧಿಗಳು ನನ್ನನ್ನು ಹಂಗಿಸುತ್ತಾರೆ. ಕೇಳಲು ಅವರಿಗೆ ಅಧಿಕಾರವಿದೆ, ಕೇಳಲಿ ಬಿಡಿ. ನನಗೆ ಅದರ ಬಗ್ಗೆ ಬೇಸರವಿಲ್ಲ ಎಂದು ತಿಳಿಸಿದರು. ೧೯೯೬ ರಲ್ಲಿ ನನ್ನನ್ನು ಅಧಿಕಾರದಿಂದ ತೆಗೆದರಷ್ಟೇ, ಬೇರೆ ಏನೂ ಮಾಡಲು ಅವರಿಂದ ಆಗಲಿಲ್ಲ. ನನ್ನ ಅವಧಿಯಲ್ಲಿ ಏನೆಲ್ಲ ಯೋಜನೆಗಳನ್ನು ತಂದು ಅಭಿವೃದ್ಧಿಪಡಿಸಿದ್ದೇನೆ ಎಂಬುದು ನನಗೆ ಗೊತ್ತು. ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ತಪ್ಪು ಹಾಗೂ ಭ್ರಷ್ಟಾಚಾರ ನಡೆದಿಲ್ಲ ಎಂಬುದು ನನ್ನ ಶತ್ರುಗಳಿಗೂ ಅರಿವಿದೆ. ಆದರೆ ಮಿತ್ರರಿಗೆ ಹೇಳುವ ಯೋಗ್ಯತೆ ಇಲ್ಲ. ಸತ್ಯ ಹೇಳಲು ಆತ್ಮದಲ್ಲಿ ಯಾವುದೇ ಕಳಂಕ ಇರಬಾರದು. ಆಗ ಮಾತ್ರ ಧೈರ್ಯವಾಗಿ ಸತ್ಯ ಹೇಳಬಹುದು ಎಂದು ನಕ್ಕರು.

Lok Sabha Election 2024: ನಾನು ದೇವೇಗೌಡರ ಗರಡಿಯಲ್ಲಿ ಬೆಳೆದವ: ವಿ.ಸೋಮಣ್ಣ

ಅವತ್ತಿನ ಕಾಲದಲ್ಲಿಯೇ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದರು. ಆದರೆ ಅವರಿಂದ ಆಗಲಿಲ್ಲ. ಯಾಕೆಂದರೆ ನಾನು ಮಾಡುವ ಕೆಲಸದಲ್ಲಿ ಯಾವುದೇ ಲೋಪವಿರಲಿಲ್ಲ. ಜನಪರವಾದ ಕೆಲಸ ಮಾಡಿದ್ದೇನೆ. ಸತ್ಯವಾಗಿಯೇ ನಡೆದುಕೊಂಡು ಬಂದಿದ್ದೇನೆ ಎಂದು ವಿರೋಧ ಪಕ್ಷದ ನಾಯಕರಿಗೆ ಚಾಟಿ ಬೀಸಿದರು. ದೇಶದಲ್ಲಿ ಸಮಸ್ಯೆಗಳೆದುರಾದ ವೇಳೆ ಹೋರಾಡಿದ್ದೇನೆ. ನಾನು ಪ್ರಧಾನಿಯಾದ ವೇಳೆ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದೇನೆ. ಈ ದೇಶದ ಏಳು ರಾಜ್ಯಗಳಿಗೆ ಜವಾಹಾರ್ ಲಾಲ್ ನೆಹರು ಹೋಗಿರಲಿಲ್ಲ. ನಾನು ಹೋಗಿ ೬೩೦೦ ಕೋಟಿ ರು. ಅನುದಾನ ನೀಡಿ ೭ ರಾಜ್ಯಗಳ ಅಭ್ಯೂದಯಕ್ಕೆ ಕಾರಣನಾಗಿದ್ದೇನೆ ಎಂಬ ಹೆಗ್ಗಳಿಕೆ ನನಗಿದೆ ಎಂದರು.

ಇವತ್ತು ಹಾಸನ ಜಿಲ್ಲೆಯ ಜನಕ್ಕೆ ಕುಡಿಯುವ ನೀರಿಲ್ಲ.ನಾವು ಯಾವ ಸ್ಥಿತಿಯಲ್ಲಿದ್ದೇವೆ ನೀವೇ ನೋಡಿ. ತಮಿಳುನಾಡಿನ ಸಿಎಂ ಸ್ಟ್ಯಾಲಿನ್ ಅವರು ಕಾವೇರಿ ನೀರು ನಮಗೆ ಮಾತ್ರ ಬೇಕು, ಕರ್ನಾಟಕಕ್ಕೆ ಕೊಡಬಾರದು ಎಂದು ವರ್ತಿಸುವುದು ಸರಿಯಲ್ಲ. ನಾನು ದೆಹಲಿಗೆ ಹೋಗಿ ವಕೀಲರನ್ನು ಭೇಟಿ ಮಾಡಿ ಬಂದಿದ್ದೇನೆ. ಹೋರಾಟದ ಛಲವಿದೆ, ಆದರೆ ನಮಗೆ ಅಧಿಕಾರವಿಲ್ಲ. ನನಗೆ ಈಗ ೯೧ ವರ್ಷ ವಯಸ್ಸು, ದೇವರು ಇನ್ನೂ ಎಷ್ಟು ದಿನ ಆಯಸ್ಸು ಕೊಡುತ್ತಾನೋ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಿಮ್ಮ ಗ್ಯಾರಂಟಿಗಳನ್ನು ನಾನು ವಿರೋಧ ಮಾಡಲ್ಲ, ಆದರೆ ಜನಸಾಮಾನ್ಯರ ದೈನಂದಿನ ಬದುಕಿಗೆ ನೆರವಾಗುವ ಯೋಜನೆಗಳನ್ನು ಜಾರಿಗೊಳಿಸಿ. 

ದುರಂಕಾರದ ಮಾತು ಬಿಟ್ಟು, ಕೊಡುಗೆ ನೀಡಿ: ಸಿಎಂ ಸಿದ್ದರಾಮಯ್ಯಗೆ ಎಚ್‌ಡಿಕೆ ಸಲಹೆ

ಇಲ್ಲವಾದರೆ ನಾಡಿನ ಜನತೆ ಶೀಘ್ರದಲ್ಲಿಯೇ ಬೀದಿಗಿಳಿಯಬೇಕಾಗುತ್ತದೆ. ಆಗ ನಾನು ಸಹ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು. ಈ ಬಾರಿ ಮೋದಿಯವರ ಅಭಿವೃದ್ಧಿ ಹಾಗೂ ನಮ್ಮ ಕಾರ್ಯವೈಖರಿ ಪರಿಣಾಮ ಈ ಬಾರಿ ೨೦ ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಲೋಕಸಭಾ ಚುನಾವಣೆಗೆ ಸ್ವರ್ಧಿಸಿರುವ ಪ್ರಜ್ವಲ್ ರೇವಣ್ಣ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಮೊಮ್ಮಗನ ಪರವಾಗಿ ಮತಯಾಚನೆ ಮಾಡಿದರು. ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ, ಶಾಸಕ ಸಿ.ಎನ್.ಬಾಲಕೃಷ್ಣ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್.ಜಿ.ರಾಮಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪುಟ್ಟರಾಜು ಹಾಗೂ ಬಿಜೆಪಿ ಮುಖಂಡ ಶ್ರೀಕಂಠಪ್ಪ ಮಾತನಾಡಿದರು.

click me!