
ಚನ್ನಪಟ್ಟಣ (ಆ.05): ಬಿಜೆಪಿ ಹಾಗೂ ಜೆಡಿಎಸ್‌ನವರದ್ದು ಪಾಪವಿಮೋಚನಾ ಯಾತ್ರೆಯಾಗಿದೆ. ಅವರು ಮಾಡಿರುವ ಎಲ್ಲಾ ಪಾಪಗಳನ್ನು ಕಳೆದುಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ. ಇದು ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ, ಭ್ರಷ್ಟಾಚಾರಿಗಳೇ ನಡೆಸುತ್ತಿರುವ ಪಾದಯಾತ್ರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ನಗರದ ಬಾಲಕರ ಸರ್ಕಾರಿ ಪಿಯು ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ಅಕ್ರಮಗಳ ಬಗ್ಗೆ ಬಿಜೆಪಿಯವರು ಮಾಧ್ಯಮಗಳಲ್ಲಿ ಪ್ರಕಟಿಸಿದ್ದ ಜಾಹೀರಾತಿನ ಬಗ್ಗೆ ಪಾದಯಾತ್ರೆ ಮಾಡುತ್ತಿರುವವರು ಉತ್ತರ ಕೊಡಬೇಕು. ಬಿಜೆಪಿ ಶಾಸಕ ಯತ್ನಾಳ್ ಅವರು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಬಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಎಂದು ಆಗ್ರಹಿಸಿದರು.
ಬಿಜೆಪಿ ಸಿಎಂಗಳು ಏಕೆ ರಾಜೀನಾಮೆ ನೀಡಲಿಲ್ಲ: ಬಿಜೆಪಿ ಅವಧಿಯಲ್ಲಿ ೨೫ ಹಗರಣಗಳಾಗಿವೆ. ಕಿಯೋನಿಕ್ಸ್ ಹಾಗೂ ಪಂಚಾಯ್ತಿಗಳಲ್ಲಿ ಹಣ ಅಕ್ರಮ ವರ್ಗಾವಣೆ ಮಾಡಿದ್ದರಲ್ಲಾ ಅದೆಲ್ಲವನ್ನು ಹೊರಗೆ ತೆಗೆಯಬೇಕು. ನಿಮ್ಮ ಅವಧಿಯಲ್ಲಿ ನಡೆದ ಪಿಎಸ್‌ಐ ಹಗರಣ ನಡೆದಾಗ ಸಿಎಂ ಹಾಗೂ ಗೃಹ ಸಚಿವರು ಏಕೆ ರಾಜೀನಾಮೆ ನೀಡಲಿಲ್ಲ? ಹಗರಣವೇ ಇಲ್ಲದ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ರಾಜೀನಾಮೆ ಕೇಳುತ್ತಿದ್ದೀರಿ. ಭೋವಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ನಡೆದಾಗ ನಿಮ್ಮ ಮುಖ್ಯಮಂತ್ರಿಗಳು, ಮಂತ್ರಿಗಳು ಯಾಕೆ ರಾಜೀನಾಮೆ ನೀಡಲಿಲ್ಲ ಎಂದು ಪ್ರಶ್ನಿಸಿದರು.
ಕರಾವಳಿ ಮತ್ತು ಮಲೆನಾಡಿಗೆ 300 ಕೋಟಿ ಅನುದಾನ ನೀಡಲು ಸಿಎಂ ಒಪ್ಪಿಗೆ: ಸಚಿವ ಕೃಷ್ಣ ಭೈರೇಗೌಡ
ನಿಮ್ಮ ಸರ್ಕಾರದ ಅಕ್ರಮಗಳ ಬಗ್ಗೆ ನಾವು ಮಾತನಾಡುವುದಕ್ಕಿಂತ ನಿಮ್ಮ ಪಕ್ಷದ ನಾಯಕರಾದ ಗೂಳಿಹಟ್ಟಿ ಶೇಖರ್, ಬಸನಗೌಡ ಪಾಟೀಲ್ ಯತ್ನಾಳ್, ಎಚ್.ವಿಶ್ವನಾಥ್ ಮಾತನಾಡಿದ್ದಾರೆ. ನಿಮ್ಮ ಸ್ನೇಹಿತರಾದ ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಉತ್ತರ ನೀಡಿ, ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಬಿಜೆಪಿ ನಾಯಕರಾದ ಮೋದಿ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ ತಿಳಿದಿದೆಯೇ. ಹಿಂದೆ ನಿನ್ನನ್ನು ಸಿಎಂ ಮಾಡಿದಾಗ ಅಪ್ಪ ಮಕ್ಕಳ ಕುರಿತು ಎಚ್ಚರದಿಂದ ಇರು ಎಂದು ಯಡಿಯೂರಪ್ಪ ಸಲಹೆ ನೀಡಿದ್ದರು.
ನೀನು ರಾಜ್ಯಪಾಲರ ಮೂಲಕ ಅವರನ್ನು ಜೈಲಿಗೆ ಕಳುಹಿಸಿದೆ. ಈಗ ಅವರನ್ನೇ ತಬ್ಬಾಡುತ್ತಿದ್ದೀಯಾ? ಎಂದು ಲೇವಡಿ ಮಾಡಿದರು. ಯಡಿಯೂರಪ್ಪನವರೇ ಕಣ್ಣೀರು ಹಾಕುತ್ತಾ ರಾಜೀನಾಮೆ ಕೊಟ್ಟಿದ್ದು ಏಕೆ? ಅವರಿಂದ ರಾಜೀನಾಮೆ ಕೊಡಿಸಿದ್ದು ಯಾರು ಎಂದು ಹೇಳಿ. ನಿಮ್ಮ ಮತ್ತು ಬೊಮ್ಮಾಯಿ ಅವರ ಕಾಲದ ಹಗರಣಗಳ ಪಟ್ಟಿ ಇದೆ. ಕೋವಿಡ್ ಸಮಯದಲ್ಲಿ ಹೆಣದ ಮೇಲೆ ಹಣ ಮಾಡಿದಿರಿ. ಆಗ ಯೋಗೇಶ್ವರ್, ಕುಮಾರಸ್ವಾಮಿ ಜನರ ಕಷ್ಟಕ್ಕೆ ಸ್ಪಂದಿಸಲಿಲ್ಲ. ಆ ಸಮಯದಲ್ಲಿ ಈ ಭಾಗದ ಜನರ ನೆರವಿಗೆ ನಿಂತವರು ಡಿ.ಕೆ.ಸುರೇಶ್ ಹಾಗೂ ಎಸ್.ರವಿ ಎಂದರು.
ಇಂದ್ರಜಿತ್, ಲಂಕೇಶ್ ಅವರ ಪುತ್ರ ಅಂತ ಮುಂಚೆ ಗೊತ್ತಿರಲಿಲ್ಲ: ಗೌರಿ ಟ್ರೈಲರ್ ಲಾಂಚ್‌ನಲ್ಲಿ ಕಿಚ್ಚ ಸುದೀಪ್ ಮಾತು!
ಟೂರಿಂಗ್ ಟಾಕೀಸ್ ಮುಂದುವರಿಸಿ: ಕುಮಾರಸ್ವಾಮಿ ಅವರೇ ನೀವು ನಿಮ್ಮ ಟೂರಿಂಗ್ ಟಾಕೀಸ್ ರಾಜಕಾರಣ ಮಾಡಿ ನಮ್ಮ ಅಭ್ಯಂತರವಿಲ್ಲ. ಮಧುಗಿರಿ, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚನ್ನಪಟ್ಟಣ ಮಾಡಿ, ಮುಂದೆ ಕನಕಪುರಕ್ಕೂ ಬನ್ನಿ. ಕೆಲವರು ನಿಮ್ಮನ್ನು ತಿರಸ್ಕರಿಸಿದ್ದಾರೆ. ಮತ್ತೆ ಕೆಲವರು ಗೆಲ್ಲಿಸಿದ್ದಾರೆ. ಎಲ್ಲಾ ದಿನ ಒಂದೇ ಆಗಿರುವುದಿಲ್ಲ ಜನ ತೀರ್ಮಾನ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಕೇಂದ್ರ ಸರ್ಕಾರ ನಿನಗೆ ಎರಡು ಖಾತೆ ನೀಡಿದೆ, ನೀನು ೧೦ ಸಾವಿರ ಜನರಿಗೆ ಕೆಲಸ ಕೊಡುವ ಕಾರ್ಖಾನೆ ಆರಂಭಿಸುತ್ತೇನೆಂದು ಹೇಳಿಕೆ ನೀಡಿದ್ದೀಯ, ನಮ್ಮ ಸರ್ಕಾರದಿಂದ ನಾವು ಸಹಕಾರ ನೀಡುತ್ತೇವೆ. ನೀವು ಎಲ್ಲೆಲ್ಲಿ ಅಂಗಡಿ ಇಟ್ಟಿದ್ದೀರಿ ನನಗೆ ಗೊತ್ತಿದೆ. ನೀನು ಅಧಿಕಾರದಲ್ಲಿದ್ದಾಗ ನಿನ್ನ ಜನರಿಗೆ ಒಂದು ಮನೆ, ನಿವೇಶನ ನೀಡಲಿಲ್ಲ. ನಿಮ್ಮ ಕಾರ್ಯಕರ್ತರಿಗೆ ಅಧಿಕಾರ ನೀಡಲಿಲ್ಲ. ನೀನು ನಿನ್ನ ಕುಟುಂಬ ಮಾತ್ರ ಅಧಿಕಾರ ಅನುಭವಿಸಿದ್ದೇ ಆಯ್ತು. ಯಡಿಯೂರಪ್ಪನವರು ಸದನದಲ್ಲಿ ನಿನ್ನ ಬಗ್ಗೆ ಮಾಡಿರುವ ಭಾಷಣದ ಬಗ್ಗೆ ನೀನು ಉತ್ತರ ಕೊಡು ಸಾಕು ಎಂದು ಸವಾಲೆಸೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.