ಅಶೋಕ್ ಅವರೇ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೀರಿ. ಪ್ರಸ್ತುತ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಏನಾದರೂ ಹೇಳುವುದಿದ್ದರೆ ಇಲ್ಲವೇ ಕೇಳುವುದಿದ್ದರೆ ಅವರ ಮುಂದೆ ಹೋಗಿ. ಹಾದಿ ಬೀದಿಯಲ್ಲಿ ಅರ್ಥಹೀನವಾಗಿ ಮಾತನಾಡಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು(ಆ.06): ‘ನಮಗೆ ಪ್ರಶ್ನೆ ಕೇಳುವ ಮೊದಲು ನಿಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರ, ವಿದ್ರೋಹ, ಸ್ವಜನ ಪಕ್ಷಪಾತದಂತಹ ಗಂಭೀರ ಆರೋಪಗಳಿಗೆ ಉತ್ತರಿಸುವ ಧೈರ್ಯ ತೋರಿಸಿ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಅವರು, ‘ಅಶೋಕ್ ಅವರೇ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೀರಿ. ಪ್ರಸ್ತುತ ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಏನಾದರೂ ಹೇಳುವುದಿದ್ದರೆ ಇಲ್ಲವೇ ಕೇಳುವುದಿದ್ದರೆ ಅವರ ಮುಂದೆ ಹೋಗಿ. ಹಾದಿ ಬೀದಿಯಲ್ಲಿ ಅರ್ಥಹೀನವಾಗಿ ಮಾತನಾಡಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ’ ಎಂದಿದ್ದಾರೆ.
ಸಚಿವರು, ಶಾಸಕರಿಂದಲೇ ಸಿದ್ದರಾಮಯ್ಯ ಬೆನ್ನಿಗೆ ಚೂರಿ: ಬಿ.ವೈ.ವಿಜಯೇಂದ್ರ
‘ಇನ್ನು ನಮಗೆ ಪ್ರಶ್ನೆ ಕೇಳುವ ಮೊದಲು ಯತ್ನಾಳ್ ಅವರು ನಿರಂತರವಾಗಿ ನಿಮ್ಮ ಪಕ್ಷದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಮಾಡುತ್ತಿರುವ ಗಂಭೀರ ಸ್ವರೂಪದ ಆರೋಪಗಳಿಗೆ ಉತ್ತರಿಸುವ ಧೈರ್ಯ ತೋರಿಸಿ. ಯತ್ನಾಳ್ ಅವರು ಇಂತಹ ಗಂಭೀರ ಆರೋಪ ಮಾಡಿದ ನಂತರವೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇದನ್ನು ನೋಡುತ್ತಿದ್ದರೆ ಯತ್ನಾಳ್ ಆರೋಪದಲ್ಲಿ ಸತ್ಯಾಂಶ ಇರುವುದನ್ನು ಪಕ್ಷದ ಹೈಕಮಾಂಡ್ ಒಪ್ಪಿಕೊಂಡಂತಿದೆ’ ಎಂದು ಟೀಕಿಸಿದ್ದಾರೆ.