
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 27 ವರ್ಷದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಕಠಿಣ ಪೈಪೋಟಿಯ ನಡುವೆ ಪ್ರಯಾಸದ ಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಅಜ್ಜನ ರಾಜಕೀಯ ಗದ್ದುಗೆಗೆ ಮೊಮ್ಮಗ ಉತ್ತರಾಧಿಯಾಗಿದ್ದು, ಶಾಮನೂರು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಹಲವು ರಾಜಕೀಯ ಹಾಗೂ ಸಾಮಾಜಿಕ ಅಂಶಗಳು ಪ್ರಮುಖ ಪಾತ್ರವಹಿಸಿದ್ದವೆಂದು ವಿಶ್ಲೇಷಿಸಲಾಗುತ್ತಿದೆ. ಪ್ರಮುಖವಾಗಿ, ಶಾಮನೂರು ಕುಟುಂಬದ ಮೇಲಿನ ಅನುಕಂಪದ ಅಲೆ ಮತದಾರರಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಅದು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದೆ.
ಗ್ರಾಮೀಣ ಭಾಗದಲ್ಲಿ ಲಿಂಗಾಯತ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ತಿರುಗಿರುವುದು ಮತ್ತೊಂದು ಪ್ರಮುಖ ಕಾರಣವಾಗಿದೆ. ಅದೇ ರೀತಿ, ಕುರುಬ ಸಮುದಾಯದ ಮತಗಳಲ್ಲಿ ಯಾವುದೇ ವಿಭಜನೆ ಉಂಟಾಗದೇ, ಅವು ಸಹ ಕಾಂಗ್ರೆಸ್‌ಗೆ ಅನುಕೂಲಕರವಾಗಿ ಚಲಾವಣೆಯಾಗಿವೆ.
ಮುಸ್ಲಿಂ ಸಮುದಾಯದ ಸಾಂಪ್ರದಾಯಿಕ ಮತಗಳು ಸಹ ಬಹುಮಟ್ಟಿಗೆ ಕಾಂಗ್ರೆಸ್ ಪರವಾಗಿ ಹರಿದಿದ್ದು, ವಿಶೇಷವಾಗಿ ಯುವ ಮತದಾರರನ್ನು ಹೊರತುಪಡಿಸಿದರೆ ಸುಮಾರು 70 ಶೇಕಡಾ ಮತಗಳು ಕಾಂಗ್ರೆಸ್‌ಗೆ ಲಭಿಸಿದ್ದವೆಂದು ಅಂದಾಜಿಸಲಾಗಿದೆ.
ಇದರ ಜೊತೆಗೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೇತೃತ್ವದಲ್ಲಿ ರೂಪಿಸಿದ ಪ್ರಚಾರ ತಂತ್ರ ಹಾಗೂ ರಣಯೋಜನೆಗಳು ಕ್ಷೇತ್ರದಲ್ಲಿ ಪರಿಣಾಮಕಾರಿ ಆಗಿದ್ದವು. ಪ್ರಬಲ ಮುಸ್ಲಿಂ ಅಭ್ಯರ್ಥಿಯಾಗಿದ್ದ ಸಾದಿಕ್ ಫೈಲ್ವಾನ್ ಕಣದಿಂದ ಹಿಂದೆ ಸರಿದಿರುವುದು ಕೂಡ ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಿಸಿತು.
21ನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು 68,619 ಮತಗಳನ್ನು ಪಡೆದು 4,873 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ 63,746 ಮತಗಳನ್ನು ಪಡೆದರೆ, ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ 18,485 ಮತಗಳನ್ನು ಗಳಿಸಿದ್ದಾರೆ.
ಸಮರ್ಥ ಶಾಮನೂರು ಅವರ ಗೆಲುವಿನ ಬೆನ್ನಲ್ಲೇ, ಸಾದಿಕ್ ಫೈಲ್ವಾನ್ ಅವರು ಶಾಮನೂರು ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ಮತ್ತೊಂದೆಡೆ, ಬಿಜೆಪಿ ಅಭ್ಯರ್ಥಿಯ ಬೆಂಬಲಿಗರು ನಿರಾಶೆಯಿಂದ ಕಣ್ಣೀರಿಟ್ಟ ಘಟನೆಗಳು ಕಂಡುಬಂದವು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಅವರು ಈ ಸೋಲಿನ ಬಗ್ಗೆ ಪ್ರತಿಕ್ರಿಯಿಸಿ, “ಹಣಬಲ ಮತ್ತು ಮೋಸದ ಮೂಲಕ ಗೆಲುವು ಸಾಧಿಸಲಾಗಿದೆ” ಎಂದು ಆರೋಪಿಸಿದರು. ಇದೇ ವೇಳೆ, ಬಿಜೆಪಿ ಕಾರ್ಯಕರ್ತರು “2028ರಲ್ಲಿ ಮತ್ತೊಮ್ಮೆ ಶ್ರೀನಿವಾಸ್ ದಾಸ್ ಕರಿಯಪ್ಪ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿ ಮಂತ್ರಿಯನ್ನಾಗಿ ಮಾಡುತ್ತೇವೆ” ಎಂದು ಶಪಥ ಮಾಡಿದ್ದಾರೆ.
ಒಟ್ಟಿನಲ್ಲಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶವು ಕಾಂಗ್ರೆಸ್ ಪಕ್ಷಕ್ಕೆ ಪ್ರಮುಖ ರಾಜಕೀಯ ಬಲ ನೀಡಿದರೆ, ಬಿಜೆಪಿ ಪಕ್ಷಕ್ಕೆ ಆತ್ಮಪರಿಶೀಲನೆ ಮಾಡುವ ಅಗತ್ಯವನ್ನು ಉಂಟುಮಾಡಿದೆ. ವಿವಿಧ ಸಾಮಾಜಿಕ ಸಮೀಕರಣಗಳು ಹಾಗೂ ರಾಜಕೀಯ ತಂತ್ರಗಳು ಈ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದು, ಮುಂದಿನ ಚುನಾವಣೆಗೆ ದಿಕ್ಕು ತೋರಿಸುವಂತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.