
ಮಡಿಕೇರಿ (ಸೆ.19): ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ನಮ್ಮ ಆಕ್ಷೇಪ ಇರುವುದೇ ಬೇರೆ ಎಂದು ಸಂಸದ ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಅವಕಾಶ ನೀಡದಂತೆ ಪ್ರತಾಪ್ ಸಿಂಹ ಸಲ್ಲಿಸಿದ್ದ ಅರ್ಜಿ ವಜಾ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಅವರು ವೈಯಕ್ತಿಕವಾಗಿ ಸಲ್ಲಿಸಿದ್ದ ಅರ್ಜಿ. ನಾವ್ಯಾರು ನ್ಯಾಯಾಲಯಕ್ಕೆ ಹೋಗಿರಲಿಲ್ಲ. ಆದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ನಮ್ಮ ಆಕ್ಷೇಪ ಇರುವುದೇ ಬೇರೆ. ಮುಷ್ತಾಕ್ ಅವರು 2023ರ ವೇದಿಕೆಯಲ್ಲಿ ಕನ್ನಡಾಂಬೆ ಬಗ್ಗೆ ಮಾತನಾಡಿದ್ದರು. ತಾಯಿ ಭುವನೇಶ್ವರಿ ವೇದಿಕೆಯಲ್ಲಿ ಅರಿಶಿನ ಕುಂಕುಮ ಧ್ವಜವಿದೆ. ನಾನು ಎಲ್ಲಿ ನಿಂತುಕೊಳ್ಳುವುದು ಎಂದು ಹೇಳಿದ್ದರು. ಹಾಗೆ ಅವಮಾನ ಮಾಡಿದ್ದಕ್ಕೆ ಅವರು ಸ್ಪಷ್ಟೀಕರಣ ಕೊಡಲಿ. ಹಿಂದೂ ಭಾವನೆಗಳಿಗೆ ಧಕ್ಕೆ ತರದೆ ಬರಲಿ ಎಂದು ಹೇಳಿದರು. ಹಿಂದೂ ಧಾರ್ಮಿಕ ವೇದಿಕೆಗಳು ಮತ್ತು ಕಾರ್ಯಕ್ರಮಗಳಲ್ಲಿ ಏನಾಗುತ್ತಿದೆ ಎಂದು ಜನರು ಗಮನಿಸುತ್ತಿದ್ದಾರೆ. ಮದ್ದೂರು, ನಾಗಮಂಗಲ ಈಗ ಚಾಮುಂಡಿಬೆಟ್ಟದಲ್ಲಿ ಏನಾಗುತ್ತಿದೆ ಎಂದು ಜನರು ಗಮನಿಸುತ್ತಿದ್ದಾರೆ ಎಂದರು.
ರಾಹುಲ್ ಗಾಂಧಿ ಆಯೋಗಕ್ಕೆ ದಾಖಲೆ ನೀಡಲಿ: ಕರ್ನಾಟಕದಲ್ಲೂ ಮತಗಳವು ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಮತ್ತೆ ಆರೋಪಕ್ಕೆ ಸಂಸದ ಯದುವೀರ್ ಒಡೆಯರ್ ತಿರುಗೇಟು ನೀಡಿದ್ದಾರೆ. ಈಗಾಗಲೇ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟವಾಗಿ ಹೇಳಿದೆ. ಅವರ ಆರೋಪಗಳಿದ್ದರೆ ಅದಕ್ಕೆ ಯಾವೆಲ್ಲಾ ಪ್ರಕ್ರಿಯೆಗಳಿವೆ ಎಂದು ಹೇಳಿದೆ. ಆ ಪ್ರಕ್ರಿಯೆಯನ್ನು ರಾಹುಲ್ ಗಾಂಧಿಯವರು ಅನುಸರಿಸಲಿ. ಚುನಾವಣಾ ಆಯೋಗದ ಮುಂದೆ ಅವರ ದಾಖಲೆಗಳನ್ನು ಮಂಡಿಸಲಿ ಎಂದು ಹೇಳಿದರು.
ದಸರಾ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿಯ ವಿವಿಧ ದೇವಾಲಯಗಳಿಗೆ ಕೊಡಗು- ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಕೋಟೆ ಮಹಾಗಣಪತಿ ದೇವಾಲಯಕ್ಕೆ ಮೊದಲು ಭೇಟಿ ನೀಡಿದರು. ನಂತರ ಶ್ರೀ ಓಂಕಾರೇಶ್ವರ ದೇವಾಲಯ, ದೇಚೂರು ಶ್ರೀ ರಾಮ ಮಂದಿರ, ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ ದೇವಾಲಯ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಪೇಟೆ ಶ್ರೀ ರಾಮ ಮಂದಿರ, ಚೌಡೇಶ್ವರಿ ದೇವಾಲಯ, ಕೋದಂಡ ರಾಮ, ಕರವಲೆ ಭಗವತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಸಂಸದ ಯದುವೀರ್, ಈ ಹಿಂದಿನಿಂದ ಬಂದ ರೀತಿಯಲ್ಲೇ ದಸರಾ ನಡೆಸಿಕೊಂಡು ಹೋಗಲಾಗುವುದು. ಈಗಾಗಲೇ ಮೈಸೂರಿನಲ್ಲೂ ದಸರಾ ಕೆಲಸಗಳು ಆರಂಭವಾಗಿದೆ ಎಂದು ತಿಳಿಸಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಸೇರಿದಂತೆ ಬಿಜೆಪಿ ಪ್ರಮುಖರು ಹಾಗೂ ವಿವಿಧ ದೇವಾಲಯ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.