ನನ್ನನ್ನು ಸೋಲಿಸಲು ಷಡ್ಯಂತ್ರ ನಡೆದಿತ್ತು: ಶಾಸಕ ಬಿ.ಆರ್.ಪಾಟೀಲ್ ಗಂಭೀರ ಆರೋಪ

Published : Sep 19, 2025, 06:38 AM IST
BR patil

ಸಾರಾಂಶ

2023ರ ವಿಧಾನಸಭಾ ಚುನಾವಣೆ ವೇಳೆ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರನ್ನು ಗುರಿ ಮಾಡಿಕೊಂಡು ತಮ್ಮ ಕ್ಷೇತ್ರದಲ್ಲಿ ಮತದಾರರ ಹೆಸರು ತೆಗೆದುಹಾಕುವ ಪ್ರಯತ್ನ ನಡೆಸಲಾಗಿತ್ತು. ನನ್ನನ್ನು ಸೋಲಿಸವುದೂ ಇದರ ಗುರಿ ಆಗಿತ್ತು ಎಂದು ಶಾಸಕ ಬಿ.ಆರ್‌.ಪಾಟೀಲ್‌ ಆರೋಪಿಸಿದ್ದಾರೆ.

ನವದೆಹಲಿ (ಸೆ.19): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬೆನ್ನಲ್ಲೇ ಇದೀಗ ಆಳಂದ ಕ್ಷೇತ್ರದ ಶಾಸಕ ಬಿ.ಆರ್‌.ಪಾಟೀಲ್‌ ಕೂಡ, ‘2023ರ ವಿಧಾನಸಭಾ ಚುನಾವಣೆ ವೇಳೆ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರನ್ನು ಗುರಿ ಮಾಡಿಕೊಂಡು ತಮ್ಮ ಕ್ಷೇತ್ರದಲ್ಲಿ ಮತದಾರರ ಹೆಸರು ತೆಗೆದುಹಾಕುವ ಪ್ರಯತ್ನ ನಡೆಸಲಾಗಿತ್ತು. ನನ್ನನ್ನು ಸೋಲಿಸವುದೂ ಇದರ ಗುರಿ ಆಗಿತ್ತು’ ಎಂದು ಆರೋಪಿಸಿದ್ದಾರೆ.

ಮತಕಳವು ಆರೋಪಕ್ಕೆ ಸಂಬಂಧಿಸಿ ರಾಹುಲ್‌ ಗಾಂಧಿ ದೆಹಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬಿ.ಆರ್‌.ಪಾಟೀಲ್‌ ಅವರು ನಂತರ ಸುದ್ದಿಗಾರರ ಜತೆಗೆ ಮಾತನಾಡಿ, ‘ಮತದಾರರ ಪಟ್ಟಿಯಿಂದ ಹೆಸರು ತೆಗೆಯಲೆತ್ನಿಸಿದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಚಿವ ಪ್ರಿಯಾಂಕ್‌ ಖರ್ಗೆ ಮತ್ತು ನಾನು ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿ ಬಳಿ ಹೋದೆವು. ನಂತರ ಸುದ್ದಿಗೋಷ್ಠಿ ನಡೆಸಿದೆವು. ನನ್ನನ್ನು ಚುನಾವಣೆಯಲ್ಲಿ ಸೋಲಿಸಲೆಂದೇ ಈ ಷಡ್ಯಂತ್ರ ರೂಪಿಸಲಾಗಿತ್ತು. ಮತದಾರರ ಪಟ್ಟಿಯಲ್ಲಿ ಕೆಲವರ ಹೆಸರು ಡಿಲೀಟ್‌ ಮಾಡಲು ಫಾರ್ಮ್‌-7 ಬಳಸಿಕೊಂಡು ಮನವಿ ಸಲ್ಲಿಸಲಾಗಿತ್ತು’ ಎಂದು ಹೇಳಿದರು.

‘ಆರೋಪ ಕೇಳಿಬಂದ ಬಳಿಕ ರಿಟರ್ನಿಂಗ್‌ ಆಫೀಸರ್‌ ಅವರು ಮತದಾರರ ಪಟ್ಟಿಯಲ್ಲಿ ಏನಾದರೂ ವ್ಯತ್ಯಾಸ ಅಥವಾ ಗೊಂದಲ ಆಗಿದೆಯೇ ಎಂದು ಪರಿಶೀಲಿಸಿದರು. ನಂತರ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದರು. ಒಂದು ವೇಳೆ ಯಥಾಸ್ಥಿತಿ ಕಾಯ್ದುಕೊಳ್ಳದೇ ಇರುತ್ತಿದ್ದರೆ 6,994 ಮತ ಡಿಲೀಟ್‌ ಆಗುತ್ತಿತ್ತು. ಇದರಿಂದ ನಾನು ಚುನಾವಣೆಯಲ್ಲಿ ಸೋಲುವ ಸಾಧ್ಯತೆಯೂ ಇತ್ತು. ಇದು ದೊಡ್ಡ ವಿಚಾರ’ ಎಂದರು.

‘ಚುನಾವಣಾ ಆಯೋಗಕ್ಕೆ ನನ್ನ ಮತದಾರರನ್ನು ಡಿಲೀಟ್‌ ಮಾಡಲು ಅರ್ಜಿ ಸಲ್ಲಿಸಲಾಗಿತ್ತೇ ಹೊರತು ಪ್ರತಿಸ್ಪರ್ಧಿಗಳ ಮತದಾರರನ್ನಲ್ಲ. ನನಗೆ ಹೆಚ್ಚಿನ ಬೆಂಬಲ ಇರುವ ಪ್ರದೇಶಗಳಲ್ಲಿ ನನ್ನ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ಹಲ್ಲೆಗಳನ್ನೂ ನಡೆಸಲಾಗಿತ್ತು. ಅಲ್ಪಸಂಖ್ಯಾತರು, ಪರಿಶಿಷ್ಟರು ಮತ್ತು ಹಿಂದುಳಿದವರನ್ನೇ ಗುರಿಯಾಗಿಸಿಕೊಂಡು ಮತದಾರರ ಹೆಸರು ಡಿಲೀಟ್‌ಗೆ ಪ್ರಯತ್ನಿಸಲಾಗಿತ್ತು. ಯಾಕೆಂದರೆ ಇವರೆಲ್ಲ ಕಾಂಗ್ರೆಸ್‌ ವೋಟ್‌ ಬ್ಯಾಂಕ್‌’ ಎಂದು ಬಿ.ಆರ್‌.ಪಾಟೀಲ್‌ ಆರೋಪಿಸಿದರು.

ಈ ಕುರಿತು ಸಮಗ್ರ ತನಿಖೆ ನಡೆಸಿದರೆ ಇನ್ನಷ್ಟು ಮಾಹಿತಿ ಹೊರಬರಬಹುದು. ಆದರೆ, ಈ ಕುರಿತು ತನಿಖೆ ನಡೆಯುತ್ತಿಲ್ಲ. ನಾನು ಈ ಬಗ್ಗೆ ಅಧಿಕಾರಿಗಳ ಜತೆಗೆ ಮಾತನಾಡುತ್ತೇನೆ ಎಂದರು. ಈ ಕುರಿತು ರಿಟರ್ನಿಂಗ್‌ ಆಫೀಸರ್‌ ಅವರೇ ಖುದ್ದು ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಎಫ್‌ಐಆರ್‌ ಕೂಡ ದಾಖಲಾಗಿದೆ. ರಿಟರ್ನಿಂಗ್‌ ಆಫೀಸರ್‌ ಅವರು ಚುನಾವಣಾ ಆಯೋಗದ ಭಾಗ. ತಾವು ಸಲ್ಲಿಸಿದ ದೂರಿಗೆ ಸಂಬಂಧಿಸಿ ಅವರೇ ಉತ್ತರ ನೀಡಬೇಕಿದೆ ಎಂದು ಶಾಸಕ ತಿಳಿಸಿದರು.

ಷಡ್ಯಂತ್ರ ಕುರಿತು ತನಿಖ

ಈ ಆರೋಪ ಕುರಿತು ಕೇಂದ್ರ ಚುನಾವಣಾ ಆಯೋಗವು ಯಾವುದೇ ಉತ್ತರ ನೀಡದ ಕಾರಣ ಅವರ ಮೇಲೆಯೇ ಶಂಕೆ ಮೂಡುತ್ತಿದೆ. ಯಾರು ಇದರ ಹಿಂದಿದ್ದಾರೆ, ಯಾರು ಈ ಷಡ್ಯಂತ್ರ ರೂಪಿಸಿದ್ದಾರೆ ಎಂಬ ಕುರಿತು ತನಿಖೆ ಆಗಬೇಕಿದೆ ಎಂದು ಪಾಟೀಲ್‌ ಆಗ್ರಹಿಸಿದರು. ಇದೇ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರು ಮತಕಳ್ಳರನ್ನು ರಕ್ಷಿಸುತ್ತಿದ್ದಾರೆ ಎಂಬ ರಾಹುಲ್‌ ಗಾಂಧಿ ಆರೋಪಕ್ಕೆ ಸಂಬಂಧಿಸಿದ ಪ್ರಶ್ನೆಗೆ, ಹೌದು, ಅವರು ಹೇಳಿದ್ದು ನಿಜ ಎಂದು ಪಾಟೀಲ್‌ ಪ್ರತಿಕ್ರಿಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ