ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್‌ ಪುನರಾಯ್ಕೆ?

By Kannadaprabha NewsFirst Published Sep 14, 2022, 7:29 AM IST
Highlights

ಸೆ.16ಕ್ಕೆ ಬೆಂಗಳೂರಿನಲ್ಲಿ ಪಕ್ಷದ ಆಂತರಿಕ ಚುನಾವಣೆ, ಚುನಾವಣೆ ಹೊಸ್ತಿಲಲ್ಲಿ ಹೊಸ ಅಧ್ಯಕ್ಷರ ಆಯ್ಕೆಗಿಲ್ಲ ಆಸಕ್ತಿ,  ಯಾರೂ ಸ್ಪರ್ಧಿಸದೇ ಹೋದರೆ ಅವಿರೋಧ ಆಯ್ಕೆ

ಬೆಂಗಳೂರು(ಸೆ.14):  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಆಯ್ಕೆ ಕುರಿತು ಸೆ.16 ರಂದು ಶುಕ್ರವಾರ ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ಆಂತರಿಕ ಚುನಾವಣೆ ನಡೆಯಲಿದ್ದು, ಡಿ.ಕೆ. ಶಿವಕುಮಾರ್‌ ಅವರನ್ನೇ ಮತ್ತೊಂದು ಅವಧಿಗೆ ಅವಿರೋಧವಾಗಿ ಪುನರಾಯ್ಕೆ ಮಾಡುವ ಸಾಧ್ಯತೆಯಿದೆ. ಶಾಸಕರು, ಪರಿಷತ್‌ ಸದಸ್ಯರು, ಕೆಪಿಸಿಸಿ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು ಸೇರಿದಂತೆ 479 ಮಂದಿ ಮತದಾರರು ಮತದಾನಕ್ಕೆ ಅರ್ಹರಾಗಿದ್ದಾರೆ. ಎಐಸಿಸಿಯು ನೀಡುವ ಸಂದೇಶದ ಅನುಸಾರ ಒಂದೇ ಸಾಲಿನಲ್ಲಿ ನಿರ್ಣಯ ತೆಗೆದುಕೊಂಡು ಡಿ.ಕೆ.ಶಿವಕುಮಾರ್‌ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಮಂಗಳವಾರ ಸಂಜೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ ಚರ್ಚಿಸಿದ್ದು, ಕೆಪಿಸಿಸಿ ಸದಸ್ಯರೆಲ್ಲರೂ ಸೆ.16 ರಂದು ನಡೆಯಲಿರುವ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.

ಬ್ರ್ಯಾಂಡ್‌ ಬೆಂಗಳೂರನ್ನು ಬಿಜೆಪಿ ಹಾಳು ಮಾಡಿದೆ: ಡಿ.ಕೆ. ಶಿವಕುಮಾರ್‌

ಮೂಲಗಳ ಪ್ರಕಾರ ಸೆ.16 ರಂದು ಅವಿರೋಧವಾಗಿ ಡಿ.ಕೆ. ಶಿವಕುಮಾರ್‌ ಅವರನ್ನು ಕೆಪಿಸಿಸಿ ಅಧ್ಯಕ್ಷರಾಗಿ ಪುನರ್‌ ಆಯ್ಕೆ ಮಾಡಲು ಈಗಾಗಲೇ ನಿರ್ಧರಿಸಲಾಗಿದೆ. ಒಂದು ವೇಳೆ ಅನಿರೀಕ್ಷಿತ ಬೆಳವಣಿಗೆಗಳು ನಡೆದು ಬೇರೆ ಯಾರಾದರೂ ಸ್ಪರ್ಧೆಗೆ ಆಸಕ್ತಿ ತೋರಿದರೆ ಮಾತ್ರ ಚುನಾವಣೆ ನಡೆಯಲಿದೆ. ಇಲ್ಲದಿದ್ದರೆ ಚುನಾವಣೆ ನಡೆಸದೆ ಅಧ್ಯಕ್ಷರ ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ 2 ವರ್ಷ ಪೂರ್ಣಗೊಂಡಿವೆ. ಕಾಂಗ್ರೆಸ್‌ ಬೈಲಾ ಪ್ರಕಾರ ಈಗ ನೂತನ ಕೆಪಿಸಸಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬೇಕು. ಚುನಾವಣಾ ಹೊಸ್ತಿಲಲ್ಲೆ ಅಧ್ಯಕ್ಷರ ಬದಲಾವಣೆಗೆ ಕಾಂಗ್ರೆಸ್‌ಗೆ ಆಸಕ್ತಿ ಇಲ್ಲ. ಹೀಗಾಗಿ ಶಿವಕುಮಾರ್‌ ಅವರೇ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
 

click me!