ಈ ಚುನಾವಣೆ ರಾಜಕೀಯ ಧರ್ಮಯುದ್ಧ: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Oct 31, 2020, 1:20 PM IST
Highlights

ಸ್ವಾರ್ಥಕ್ಕಾಗಿ ಪಕ್ಷ, ಮತ, ಸ್ಥಾನ ಮಾರಿಕೊಂಡಿದ್ದು ರಾಜಕೀಯ ಅಧರ್ಮ| ಈ ಚುನಾವಣೆ ಬಿಜೆಪಿಗೂ ನಮಗೂ ಅಲ್ಲ, ದಳಕ್ಕೂ ನಮಗೂ ಅಲ್ಲ. ಇದು ಒಬ್ಬ ವ್ಯಕ್ತಿ ಮಾಡಿರುವ ಅನಾಚಾರ, ಅನ್ಯಾಯ, ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಕ್ಕೆ ಶಿಕ್ಷೆ ನೀಡುವ ಚುನಾವಣೆ| 

ಬೆಂಗಳೂರು (ಅ.31):  ಈ ಚುನಾವಣೆ ರಾಜಕಾರಣದ ಧರ್ಮ ಹಾಗೂ ಅಧರ್ಮದ ನಡುವಿನ ಯುದ್ಧ. ಮತದಾರ ಈ ಕ್ಷೇತ್ರವನ್ನು ತನ್ನ ಸ್ವಾರ್ಥಕ್ಕಾಗಿ ಪಕ್ಷ, ಮತ ಹಾಗೂ ಸ್ಥಾನವನ್ನು ಮಾರಿಕೊಂಡವರಿಂದ ಮುಕ್ತಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಜಾಲಹಳ್ಳಿ ವಾರ್ಡ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರ ಪರ ಬೃಹತ್‌ ರೋಡ್‌ ಶೋನಲ್ಲಿ ಅವರು ಮಾತನಾಡಿದರು. ಒಂದು ಪಕ್ಷದಲ್ಲಿ ಗೆದ್ದು, ಆ ಪಕ್ಷ ಹಾಗೂ ಮತದಾರರನ್ನು ಕೇಳದೇ ಅವರು ಕೊಟ್ಟಮತ ಹಾಗೂ ಸ್ಥಾನವನ್ನು ಮಾರಿಕೊಂಡಿರುವುದು ರಾಜಕಾರಣದ ಅಧರ್ಮ. ಒಂದು ವ್ಯಕ್ತಿಯ ಸ್ವಾರ್ಥಕ್ಕಾಗಿ ಇಂದು ಈ ಚುನಾವಣೆಯ ನಡೆಯುತ್ತಿದೆ. ಈ ಹಿಂದಿನ ತಪ್ಪಿಗೆ ನಾನು ಸೇರಿ ಕೆಲವರು ಕಾರಣಕರ್ತನಾಗಿದ್ದೇವೆ. ಈ ತಪ್ಪಿನಿಂದ ಈ ಕ್ಷೇತ್ರದಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲು. ನಿಮ್ಮ ಕಷ್ಟಕ್ಕೆ ಧ್ವನಿಯಾಗಲು ಕಾಂಗ್ರೆಸ್‌ ಪಕ್ಷ ಯುವ, ವಿದ್ಯಾವಂತ ಹಾಗೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಮತದಾರರ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

'ಕೈ'ಗೆ ಮತ ಹಾಕಿದ್ರೆ ಡಿಕೆಶಿ ಸಿಎಂ ಆಗ್ತಾರಾ? ಜೆಡಿಎಸ್‌ಗೆ ವೋಟ್ ಹಾಕಿದ್ರೆ ಎಚ್‌ಡಿಕೆ ಸಿಎಂ ಆಗ್ತಾರಾ?

ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ಕ್ಷೇತ್ರದಲ್ಲಿ ದ್ವೇಷದಿಂದ ಮಹಿಳೆಯರು, ವಿದ್ಯಾರ್ಥಿಗಳು, ಯುವಕರು, ಎಲ್ಲ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಕಿರುವ ಕೇಸುಗಳ ವಿರುದ್ಧ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಚಾರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಆಯೋಗವನ್ನೇ ರಚಿಸುತ್ತೇವೆ. ಇನ್ನು ಮುಂದೆ ಈ ಕ್ಷೇತ್ರದ ಮುಗ್ಧ ಮತದಾರರಿಗೆ ರಕ್ಷಣೆ ನೀಡಲಿಲ್ಲ ಎಂದರೆ ನಾವು ನಮ್ಮ ಕರ್ತವ್ಯಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದರು.

ಈ ಚುನಾವಣೆ ಬಿಜೆಪಿಗೂ ನಮಗೂ ಅಲ್ಲ, ದಳಕ್ಕೂ ನಮಗೂ ಅಲ್ಲ. ಇದು ಒಬ್ಬ ವ್ಯಕ್ತಿ ಮಾಡಿರುವ ಅನಾಚಾರ, ಅನ್ಯಾಯ, ದಬ್ಬಾಳಿಕೆ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದಕ್ಕೆ ಶಿಕ್ಷೆ ನೀಡುವ ಚುನಾವಣೆ. ಮತದಾರರು ಈ ಬಾರಿ ಮತ ಹಾಕುವಾಗ ಒಬ್ಬ ಹೆಣ್ಣುಮಗಳು, ವಿದ್ಯಾವಂತೆ, ಬುದ್ಧಿವಂತೆ, ಪ್ರಜ್ಞಾವಂತೆ ಆಯ್ಕೆ ಮಾಡಿದರೆ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾಳೆ. ನಿಮಗೆ ಆಗಿರುವ ಅನ್ಯಾಯಕ್ಕೆ ಧ್ವನಿಯಾಗಲು ಕುಸುಮಾ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
 

click me!