ಜಾತಿ, ಅನುಕಂಪದ ಮೇಲೆ ಮತ ಕೇಳಿಲ್ಲ: ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ

By Kannadaprabha NewsFirst Published Oct 31, 2020, 11:01 AM IST
Highlights

ಕಾಂಗ್ರೆಸ್‌ ಪಕ್ಷದ ಸಿದ್ಧಾಂತ, ಕಳೆದ ಬಾರಿಯ ಅಭಿವೃದ್ಧಿಯ ಆಧಾರದ ಮೇಲೆ ಮತಯಾಚಿಸುತ್ತಿದ್ದೇನೆ| ನಾಯಕರ ಶಕ್ತಿ, ಕಾರ್ಯಕರ್ತರ ಆಶೀರ್ವಾದವೇ ನನಗೆ ಶ್ರೀರಕ್ಷೆ: ಅಭ್ಯರ್ಥಿ ಕುಸುಮಾ| ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ| 

ಲಿಂಗರಾಜು ಕೋರಾ

ಬೆಂಗಳೂರು(ಅ.31): ಉಪ ಚುನಾವಣಾ ಕದನ ಇದೀಗ ಕ್ಲೈಮಾಕ್ಸ್‌ ಅಂತ ಮುಟ್ಟಿದೆ. ಅದರಲ್ಲೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಅತ್ಯುಗ್ರ ಸ್ಥಿತಿ ಮುಟ್ಟಿದ್ದು ಆರೋಪ-ಪ್ರತ್ಯಾರೋಪ ಮುಗಿಲು ಮುಟ್ಟಿದೆ. ಪಳಗಿದ ರಾಜಕಾರಣಿ ಬಿಜೆಪಿಯ ಮುನಿರತ್ನ ಹಾಗೂ ಆಡಳಿತಾರೂಢ ಬಿಜೆಪಿಯ ನಾಯಕರು ತಮ್ಮೆಲ್ಲ ಸಾಮರ್ಥ್ಯ ಪಣಕ್ಕಿಟ್ಟು ಮತ್ತೆ ಗೆಲ್ಲಲ್ಲು ಸಾಧ್ಯವಿರುವ ಎಲ್ಲಾ ಪಟ್ಟುಗಳನ್ನು ಪ್ರದರ್ಶಿಸತೊಡಗಿದ್ದಾರೆ.

ಇಂತಹ ಪ್ರಬಲ ಸ್ಪರ್ಧೆಯ ವಿರುದ್ಧ ಎದೆಗುಂದಂದೆ ದಾಪುಗಾಲಿಟ್ಟಿರುವ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ತಮ್ಮ ನೇರ ಹಾಗೂ ಸುಸಂಸ್ಕೃತ ನಡೆ ನುಡಿ ಮೂಲಕ ಕ್ಷೇತ್ರದ ಹೆಂಗಳೆಯರಲ್ಲಿ ಹೊಸ ಆಶಾಭಾವನೆ ಹುಟ್ಟಿಸಿದ್ದಾರೆ. ಸ್ಪರ್ಧೆಯು ಈ ಮಜಲು ಮುಟ್ಟಿದ್ದರಿಂದಾಗಿ ಈಗ ಜಾತಿ ಹಾಗೂ ಪ್ರಭಾವದ ಚರ್ಚೆ ಆರಂಭವಾಗಿದೆ. ತೀರಾ ವೈಯಕ್ತಿಕ ಮಟ್ಟದ ವಿಚಾರಗಳನ್ನು ಬಳಕೆ ಮಾಡಿ ಹಣಿಯುವ ವಿರೋಧಿಗಳ ತಂತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ತೋರುತ್ತಿರುವ ಪ್ರತಿ ತಂತ್ರ ಅನುಭವಿಗಳನ್ನು ಅಚ್ಚರಿಗೆ ದೂಕಿದೆ. ಜಾತಿ, ಕುಟುಂಬ ಹಾಗೂ ವೈಯಕ್ತಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿರುವ ಪ್ರತಿಸ್ಪರ್ಧಿಗಳ ತಂತ್ರಕ್ಕೆ ಕ್ಷೇತ್ರದ ಹೆಂಗರಳನ್ನು ಮುಟ್ಟುವುದೇ ಕುಸುಮಾ ಅವರ ತಂತ್ರವೇ? ತಮ್ಮ ಪತಿ ಐಎಎಸ್‌ ಅಧಿಕಾರಿ ದಿ. ಡಿ.ಕೆ.ರವಿ ಅವರ ಹೆಸರನ್ನು ಬಳಸಿದ ಬಗ್ಗೆ ಕೇಳಿ ಬಂದಿರುವ ಟೀಕೆಗೆ ಹಾಗೂ ಜಾತಿಯನ್ನು ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ಕುಸುಮಾ ಅವರ ಪ್ರತಿಕ್ರಿಯೆಯೇನು? ರಾಜಕಾರಣಕ್ಕೆ ಇಟ್ಟಮೊದಲ ಹೆಜ್ಜೆಯಲ್ಲೇ ಜೈಂಟ್‌ ಕಿಲ್ಲರ್‌ ಎನಿಸಿಕೊಳ್ಳಲು ಬಳಸುತ್ತಿರುವ ಕಾರ್ಯತಂತ್ರಗಳೇನು ಎಂಬ ಬಗ್ಗೆ ‘ಕನ್ನಡಪ್ರಭ’ಕ್ಕೆ ನೀಡಿರುವ ಸಂದರ್ಶನದಲ್ಲಿ ಕುಸುಮಾ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ

*ನೀವು ಜಾತಿ ಕಾರ್ಡ್‌, ಅನುಕಂಪದ ಮೇಲೆ ಮತ ಕೇಳುತ್ತಿದ್ದೀರೆಂಬ ಆರೋಪ ಬಿಜೆಪಿಯವರದ್ದು?

ಬಿಜೆಪಿಯವರು ಆರಂಭದಿಂದಲೂ ನನ್ನನ್ನು ಕುಗ್ಗಿಸಲು ಇಲ್ಲಸಲ್ಲದ ಆರೋಪ, ಹೆಜ್ಜೆ ಹೆಜ್ಜಗೂ ತೊಂದರೆ ಕೊಡುತ್ತಾ ಬರುತ್ತಿದ್ದಾರೆ. ನಾನು ಒಕ್ಕಲಿಗರ ಸಮುದಾಯ ಸಮುದಾಯದಲ್ಲಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ. ಆದರೆ, ನಾನು ಎಲ್ಲೂ ಜಾತಿ, ಅನುಕಂಪದ ಆಧಾರದಲ್ಲಿ ಮತ ಕೇಳಿಲ್ಲ. ಸರ್ವರನ್ನೂ ಗೌರವಿಸುವ, ಎಲ್ಲರನ್ನೂ ಒಳಗೊಳ್ಳುವ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತದ ಮೇಲೆ, ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ಮೇಲೆ ಎಲ್ಲ ವರ್ಗ, ಸಮುದಾಯದವರ ಮುಂದೆಯೂ ಕೈಮುಗಿದು ಮತಯಾಚಿಸುತ್ತಿದ್ದೇನೆ. ನಾನು ಈಗಲೂ ಡಿ.ಕೆ.ರವಿ ಅವರ ಪತ್ನಿಯೇ. ಅವರೊಟ್ಟಿಗೆ ಐದು ವರ್ಷ ಕಳೆದ ಕ್ಷಣಗಳನ್ನು ಅಳಿಸಲಾಗದು. ಅವರು ಹೆಸರು ಹೇಳುವುದು ನನ್ನ ಹಕ್ಕು. ಅದನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗದು. ಅದನ್ನು ಅನುಕಂಪ ಎನ್ನುವವರಿಗೆ ಏನು ಹೇಳುವುದು.

ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ ಕಣ್ಣೀರು

*ಕುಸುಮಾ ಅವರು ಡಿಕೆಶಿ ಸಹೋದರರನ್ನು ನಂಬಿಕೊಂಡು ಚುನಾವಣೆಗೆ ಇಳಿದಿದ್ದಾರೆ?

ನಾನು ಚುನಾವಣಾ ರಾಜಕೀಯಕ್ಕೆ ಹೊಸಬಳೇ ಆದರೆ, ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವಳು. ನನ್ನ ತಂದೆ ಮೊದಲಿಂದಲೂ ರಾಜಕೀಯದಲ್ಲಿ ಇರುವುದರಿಂದ ನಾನು ರಾಜಕೀಯವನ್ನು ಅರ್ಥಮಾಡಿಕೊಂಡು ಬೆಳೆದಿದ್ದೇನೆ. ನಮ್ಮ ಪಕ್ಷದ ಪ್ರತಿಯೊಬ್ಬ ನಾಯಕರ ಶಕ್ತಿ ಹಾಗೂ ಕಾರ್ಯಕರ್ತರ ಆಶೀರ್ವಾದವೇ ನನಗೆ ಶ್ರೀರಕ್ಷೆ. ನನ್ನ ಶಕ್ತಿ ಏನೂ ಇಲ್ಲ ಎನ್ನುವುದಾದರೆ ಬಿಜೆಪಿಯವರು ನಾವು ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಭಾಷಣಕ್ಕೆ ಅಡ್ಡಿಪಡಿಸುವ, ವಿದ್ಯುತ್‌ ಕಡಿತಗೊಳಿಸುವ ಕೆಲಸ ಏಕೆ ಮಾಡುತ್ತಿದ್ದಾರೆ ಕೇಳಿ.

*ನಿಮ್ಮ ಪ್ರಕಾರ ಏಕೆ?

ಬಹುಶಃ ಭಯ ಆರಂಭವಾಗಿರಬಹುದು. ಈ ಬಗ್ಗೆ ಅವರನ್ನೇ ಕೇಳಿ. ಬಿಜೆಪಿಯವರು ತಾವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೆ ಅವುಗಳನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಬೇಕಿತ್ತು. ಪ್ರತಿ ಹೆಜ್ಜೆಗೂ ನನಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿರಲಿಲ್ಲ. ನಾಮಪತ್ರ ಸಲ್ಲಿಸುವಾಗಲೇ ನನ್ನ ವಿರುದ್ಧ ಕೇಸು ದಾಖಲಿಸಿ ತೊಂದರೆ ಕೊಟ್ಟರು. ನಂತರ ಜಾತಿ ಕಾರ್ಡ್‌ ಆಯ್ತು, ನನ್ನ ಪತಿ ಡಿ.ಕೆ.ರವಿ ಅವರ ಹೆಸರು ಬಳಸುವ ಯೋಗ್ಯತೆ ಇಲ್ಲ ಎಂದರು. ನಂತರ ತಾಯಿ ಕಾರ್ಡ್‌ ಬಳಸುತ್ತಿದ್ದಾರೆ.

*ಹಾಗಾದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಾಗಿಲ್ಲ ಅಂತೀರಾ?

ಖಂಡಿತವಾಗಿಯೂ ಇಲ್ಲ. ಇದನ್ನು ಜನರೇ ಹೇಳುತ್ತಿದ್ದಾರೆ. ಕ್ಷೇತ್ರದ ಹಲವೆಡೆ ಜನರಿಗೆ ಕನಿಷ್ಠ ಮೂಲ ಭೂತ ಸೌಕರ್ಯಗಳೂ ದೊರೆತಿಲ್ಲ. ಪ್ರಚಾರದ ವೇಳೆ ಜನರು ಮನೆಯ ಹಕ್ಕು ಪತ್ರ, ಕುಡಿಯುವ ನೀರು, ಮಕ್ಕಳ ಶಿಕ್ಷಣ, ಉದ್ಯೋಗ, ಪಿಂಚಣಿ, ವಿಧವಾ ವೇತನ ಸೇರಿದಂತೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.

ಮುನಿರತ್ನಗೆ ಜನರು ತಕ್ಕಪಾಠ ಕಲಿಸುತ್ತಾರೆ: ಡಿ.ಕೆ.ಸುರೇಶ್‌

*ಪಳಗಿದ ರಾಜಕಾರಣಿ ಮುನಿರತ್ನ ಅವರನ್ನು ಎದುರಿಸಲು ನಿಮ್ಮ ಕಾರ್ಯತಂತ್ರಗಳೇನು?

ನಾನು ನನ್ನ ಎದುರಾಳಿ ಯಾರು, ಎಷ್ಟು ಪ್ರಭಾವಿ, ಎಷ್ಟು ಶಕ್ತಿ ಶಾಲಿ ಎಂದು ಯೋಚಿಸುತ್ತಿಲ್ಲ. ಅದನ್ನು ಯೋಚಿಸುತ್ತಾ ಕೂತರೆ ನನ್ನ ಕೈಯಲ್ಲಿ ಬೇರೆ ಏನೂ ಮಾಡಲಾಗಲ್ಲ. ಕಾಂಗ್ರೆಸ್‌ ತತ್ವ ಸಿದ್ಧಾಂತರದ ಮೇಲೆ ಚುನಾವಣೆ ಎದುರಿಸುತ್ತಿದ್ದೇನೆ. ನಾನು ಯಾವುದೇ ನಿರೀಕ್ಷೆ ಇಟ್ಟುಕೊಂಡು ಚುನಾವಣಾ ರಾಜಕೀಯಕ್ಕೆ ಬಂದಿಲ್ಲ. ನಾನೊಬ್ಬ ನೊಂದ ಮಹಿಳೆಯಾಗಿ ಜನ ಸೇವೆಯಲ್ಲಿ ನನ್ನ ನೋವು ಕಳೆಯಲು ನಿರ್ಧರಿಸಿ ರಾಜಕೀಯ ಪ್ರವೇಶಿಸಿದ್ದೇನೆ. ನನ್ನ ತಂದೆಯವರ ಜನಸೇವೆ ಮತ್ತು ನನ್ನ ಪತಿ ಡಿ.ಕೆ.ರವಿ ಅವರ ಸಾರ್ವಜನಿಕ ಸೇವೆಯೇ ನನಗೆ ಪ್ರೇರಣಿ.

*ರಾಜಕೀಯದಲ್ಲಿ ನಿಮ್ಮ ಭವಿಷ್ಯ ಈ ಚುನಾವಣಾ ಫಲಿತಾಂಶ ಅವಲಂಭಿಸಿದೆಯೇ?

ಫಲಿತಾಂಶ ಏನೇ ಬರಲಿ ನಾನು ಸದಾ ಕ್ಷೇತ್ರದ ಜನರ ಜೊತೆಗೆ ಇರುತ್ತೇನೆ. ಅವರ ಕಷ್ಟನಷ್ಟಗಳಲ್ಲಿ ಭಾಗಿಯಾಗುತ್ತೇನೆ. ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ನಿರಂತರ ಪ್ರಚಾರ ನಡೆಸಿ ಜನರ ಸಮಸ್ಯೆ ಆಲಿಸಿ ಜನರ ದೃಷ್ಟಿಯಲ್ಲಿ ನಾನೊಂದು ಬ್ರಾಂಡ್‌ ಆಗಿದ್ದೇನೆ. ಯಾವುದೇ ನಿರೀಕ್ಷೆ ಇಟ್ಟುಕೊಂಡು ನಾನು ರಾಜಕೀಯಕ್ಕೆ ಬಂದಿಲ್ಲ. ಕ್ಷೇತ್ರದಲ್ಲೇ ಜನರೊಟ್ಟಿಗಿದ್ದು ಅವರ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇನೆ.
 

click me!