ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಸಿಬಿಐ ತನಿಖೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ತೆಗೆದುಕೊಂಡು ರಾಜ್ಯದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಅಧಿಕಾರಕ್ಕೆ ಬಂದ ಮೇಲೆ ಪ್ರಕರಣ ಹಿಂದಕ್ಕೆ ಪಡೆದರೆ ಬಲಾಢ್ಯವಾಗಿದ್ದರೆ ಮಾಡಿದ್ದೆಲ್ಲ ಮಾಫಿ ಎಂದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಮಾಜಿ ಸಚಿವ ಸಿ.ಟಿ. ರವಿ
ಮೈಸೂರು(ಡಿ.02): ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿಲ್ಲ ಎನ್ನುವುದಾಗಿದ್ದರೆ ಸಿಬಿಐ ತನಿಖೆಗೆ ಮುಕ್ತ ಅವಕಾಶ ನೀಡಬೇಕಿತ್ತು ಎಂದು ಮಾಜಿ ಸಚಿವ ಸಿ.ಟಿ. ರವಿ ಸವಾಲು ಹಾಕಿದರು. ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲಿನ ಸಿಬಿಐ ತನಿಖೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ತೆಗೆದುಕೊಂಡು ರಾಜ್ಯದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಅಧಿಕಾರಕ್ಕೆ ಬಂದ ಮೇಲೆ ಪ್ರಕರಣ ಹಿಂದಕ್ಕೆ ಪಡೆದರೆ ಬಲಾಢ್ಯವಾಗಿದ್ದರೆ ಮಾಡಿದ್ದೆಲ್ಲ ಮಾಫಿ ಎಂದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಪ್ರಕರಣ ಹಿಂದಕ್ಕೆ ಪಡೆದಿರುವುದನ್ನು ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಕರಣ ಹಿಂಪಡೆಯಲು ಸಿಎಂ ಒಪ್ಪಿದ್ದು ಒಂದು ಕರಾಳ ಅಧ್ಯಾಯ. ಹಿಂಪಡಯಲು ನಿಮ್ಮ ಮೇಲೆ ನವ ದೆಹಲಿ ನಾಯಕರ ಒತ್ತಡವೂ ಇರಬಹುದು. ಆದರೆ ದುರಾದೃಷ್ಟಕರ ತೀರ್ಮಾನ ಎಂದರು.
undefined
ಜಾತಿ ಗಣತಿ ವರದಿಗೆ ಮುನ್ನವೇ ವಿರೋಧಿಸುವುದು ಎಷ್ಟು ಸರಿ : ವಿಶ್ವನಾಥ್
ಜಾತಿ ಗಣತಿ ವರದಿ ಮುಂದಿಟ್ಟುಕೊಂಡು ಮತ ಪಡೆಯುವ ಹುನ್ನಾರ ನಡೆಸಿದ್ದಾರೆ. ಜಾತಿ ಕಲಕಿ ಮತ ಎಂಬ ಮೀನು ಹಿಡಿಯುತ್ತಿದ್ದಾರ. ಜನರು ಹಿಂದೂ ಎಂದರೆ ಬಿಜೆಪಿ ಮತ ಹಾಕುತ್ತಾರೆ. ಆದ್ದರಿಂದ ನಿಮ್ಮ ಜಾತಿಗೆ ಅನ್ಯಾಯ ಆಗುತ್ತದೆ ಎಂದು ಬಿಂಬಿಸಿ ಮತ ಪಡೆಯಲು ಹೊರಟಿದ್ದಾರೆ. ಆದ್ದರಿಂದ ಅವರಲ್ಲೇ ವಿಭಿನ್ನ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ನ್ಯಾಯಮೂರ್ತಿ ಎಚ್.ಎಂ. ಕಾಂತರಾಜ ವರದಿ ಜಾರಿ ವಿಳಂಬ ವಿಷಯದಲ್ಲಿ ಸರ್ಕಾರದ ನಡೆ ಅನುಮಾನ ಮೂಡಿಸುತ್ತಿದೆ. ಕೆರೆ ಕಲಕಿ ಮೀನು ಹಿಡಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. 2014ರಲ್ಲಿ ಕಾಂಗ್ರೆಸ್ ಸರ್ಕಾರವೇ ಕಾಂತರಾಜ್ ಸಮಿತಿ ನೇಮಿಸಿತ್ತು. 3 ವರ್ಷಗಳಲ್ಲಿ ವರದಿ ಸಿದ್ಧವಾಗಿತ್ತು. ಆದರೂ ಸಹಿಗಾಗಿ ಜಾರಿ ಆಗುತ್ತಿಲ್ಲ. ಇದನ್ನು ನೋಡಿದರೆ ವರದಿ ಜಾರಿಗೊಳಿಸುವ ಉದ್ದೇಶವೇ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಎನ್ಇಪಿ ಬೆಂಬಲಿಸಿ ಕೋಟಿ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಇದನ್ನು ಬಿಜೆಪಿ ಬೆಂಬಲಿಸಿ ಕೇಂದ್ರ ಮತ್ತು ರಾಜ್ಯಪಾಲರಿಗೆ ನೀಡುತ್ತೇವೆ. ಈ ನಡುವೆ ಎಸ್ಇಪಿ ಮಾಡಲು ಹೊರಟಿರುವ ರಾಜ್ಯ ಸರ್ಕಾರ ಎನ್ಇಪಿ ಮರು ಜಾರಿಗೊಳಿಸಬೇಕು. ಎನ್ಇಪಿ ಜಾರಿಯಿಂದ ದಲಿತರು, ಹಿಂದುಳಿದವರು ಮತ್ತು ಬಡ ವಿದ್ಯಾರ್ಥಿಗಳಿಗೆ ತೊಂದರೆ ಆಗಲಿದೆ ಎಂಬುದು ಸುಳ್ಳು. ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸಲು ಹೊರ ರಾಜ್ಯದವರ ಸಮಿತಿ ರಚಿಸಲಾಗಿದೆ. ಇದರಲ್ಲಿ ಇರುವವರೆಲ್ಲರೂ ಹೊರ ರಾಜ್ಯದವರು ಎಂದು ಅವರು ಆರೋಪಿಸಿದರು.
ಸಮಿತಿ ಅಧ್ಯಕ್ಷ ಸುಖದೇವ್ ಥೋರಟ್ ಮಹಾರಾಷ್ಟ್ರದವರು. ಸಂಜಯ್ ಕೌಲ್, ಸುಧಾಂಶು ಭೂಷಣ್, ಯೋಗೇಂದ್ರ ಯಾದವ್, ಸೋಮನ್ ವಾಂಗ್ ಚುಕ್ ಹೀಗೆ ಎಲ್ಲರೂ ಹೊರ ರಾಜ್ಯದವರು. ಎಸ್ಇಪಿ ರೂಪಿಸಲು ನಮ್ಮ ರಾಜ್ಯದವರಿಗೆ ಶಕ್ತಿ ಇರಲಿಲ್ಲ ಅಂತ ರಾಜ್ಯ ಸರ್ಕಾರ ತಿಳಿದಂತಿದೆಯೇ ಎಂದು ಅವರು ಪ್ರಶ್ನಿಸಿದರು.
ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್ ಅವರ ಶಾಲೆಗಳಲ್ಲಿ ಬಡವರಿಗೆ ದಾಖಲಾತಿ ಸಿಗುತ್ತದೆಯೇ? ನಿಮ್ಮ ರಾಜಕೀಯ ದ್ವೇಷಕ್ಕಾಗಿ ಮಕ್ಕಳಿಗೆ ಮೋಸ ಮಾಡಬೇಡಿ ಎಂದು ಆಗ್ರಹಿಸಿದರು. ಬೆಂಗಳೂರು ಶಾಲೆಗಳಿಗೆ ಬೆದರಿಕೆ ಕರೆ ವಿಚಾರವಾಗಿ ಸಮಗ್ರ ತನಿಖೆ ನಡೆಸಬೇಕು. ಈ ವಿಷಯವನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು. ಉದಾಸೀನ ಮಾಡಬಾರದು. ಅಗತ್ಯ ಬಿದ್ದರೆ ಕೇಂದ್ರದ ನೆರವು ಪಡೆದು ಬೆದರಿಕೆ ಹಾಕಿದವರನ್ನು ಮಟ್ಟ ಹಾಕಬೇಕು ಎಂದರು.
ಜಾತಿ ಗಣತಿ ವರದಿ ವಿಷಯದಲ್ಲಿ ಕ್ಯಾಬಿನೆಟ್ ತೀರ್ಮಾನವೇ ಸುಪ್ರಿಂ: ಡಿಕೆಶಿಗೆ ಮಹದೇವಪ್ಪ ತಿರುಗೇಟು
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ ಕಳೆದ ಬಾರಿಗಿಂತ ಹೆಚ್ಚು ಗಳಿಕೆ ಆಗಲಿದೆ. ಕಳೆದ ಬಾರಿ ಅನೇಕ ಕಡೆ ಸೋತಿದ್ದೆವು. ಆದರೆ ಈ ಬಾರಿ ಗೆಲ್ಲುತ್ತೇವೆ. ಚುನಾವಣೆಗಳಲ್ಲಿ ಸೋತರೆ ಕಾಂಗ್ರೆಸ್ ಇವಿಎಂ ದೋಷ, ಅದೇ ಗೆದ್ದರೆ ಮೋದಿ ವಿರುದ್ಧ ಜನಾದೇಶ ಎನ್ನುತ್ತಾರೆ. ಆದರೆ ನಾವು ಯಾವುದೇ ಫಲಿತಾಂಶ ಬಂದರೂ ಸ್ವೀಕರಿಸುತ್ತೇವೆ. ಕಾಂಗ್ರೆಸ್ ಉಚಿತ ಕೊಡುಗೆ ತೋರಿಸಿ ರಾಜಕೀಯ ಲಾಭ ಪಡೆಯುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಎಂಡಿಎ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತಕುಮಾರ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ. ಗಿರಿಧರ್, ವಾಣೀಶ್ ಕುಮಾರ್, ಯೋಗಾನಂದ, ವಕ್ತಾರರಾದ ಎಂ.ಎ. ಮೋಹನ್, ಕೇಬಲ್ ಮಹೇಶ್, ಮಹೇಶ್ ರಾಜೇ ಅರಸ್, ಪ್ರದೀಪ್ ಕುಮಾರ್ ಇದ್ದರು.