ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಪಕ್ಷಾಂತರ ಪರ್ವ ಜೋರಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಿ ಟಿ ರವಿ ಅಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್ ಡಿ ತಮ್ಮಯ್ಯ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.16): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲೇ ಪಕ್ಷಾಂತರ ಪರ್ವ ಜೋರಾಗಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತ ಮುಖ ಮಾಡುತ್ತಿರುವ ರಾಜಕೀಯ ನಾಯಕರ ಸಂಖ್ಯೆಯೂ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲೂ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಇದರ ಸಾಲಿಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಸಿ ಟಿ ರವಿ ಅಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್ ಡಿ ತಮ್ಮಯ್ಯ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ.
ಬಿಜೆಪಿ ಟಿಕೆಟ್ ನೀಡುವಂತೆ ಮನವಿ ನೀಡಿದ್ದ ತಮ್ಮಯ್ಯ:
ಚಿಕ್ಕಮಗಳೂರು ಮಾಜಿ ನಗರಸಭಾ ಅಧ್ಯಕ್ಷ, ಬಿ.ಜೆ.ಪಿ. ಮುಖಂಡರ ಹೆಚ್.ಡಿ. ತಮ್ಮಯ್ಯ ಬಿ.ಜೆ.ಪಿ.ಗೆ ಗುಡ್ ಬೈ ಹೇಳಿದ್ದಾರೆ. ಇಂದು ಪಕ್ಷದ ಜಿಲ್ಲಾಧ್ಯಕ್ಷರಿಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ನಾನು 2007ರಿಂದಲೂ ಬಿ.ಜೆ.ಪಿ. ಪಕ್ಷದಲ್ಲಿ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ನಿಭಾಯಿಸಿಕೊಂಡು ಬಂದಿದ್ದೇನೆ. ಆದರೆ ನನಗೆ ಈಗಿನ ರಾಜಕೀಯ ವಿದ್ಯಾಮಾನಗಳಿಂದ ಬೇಸರಗೊಂಡಿದ್ದು, ಆದ್ದರಿಂದ ಜಿಲ್ಲಾ ಪ್ರಕೋಷ್ಠಕರ ಸಂಯೋಜಕ ಸ್ಥಾನಕ್ಕೆ ಹಾಗೂ ಬಿ.ಜೆ.ಪಿ. ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ತಮ್ಮಯ್ಯ ಅವರ 15 ವರ್ಷಗಳ ಬಿ.ಜೆ.ಪಿ ಯೊಂದಿಗಿನ ನಂಟಿಗೆ ತೆರೆಬಿದ್ದಿದೆ. ಕೆಲ ತಿಂಗಳ ಹಿಂದೆ ತಮ್ಮಯ್ಯ ತನಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಟಿಕೆಟ್ ನೀಡಬೇಕು ಎಂದು ಪ್ರಬಲವಾಗಿ ಹಕ್ಕೋತ್ತಾಯ ಮಾಡಿದ್ದರು.ಮೂಲತಃ ಜೆಡಿಎಸ್ ನಲ್ಲಿದ್ದ ತಮ್ಮಯ್ಯ ನಂತರ ಕಾಂಗ್ರೆಸ್ ಸೇರಿ ಆ ಪಕ್ಚದಿಂದ ಒಂದು ಬಾರಿ ನಗರಸಭಾ ಸದಸ್ಯರಾಗಿದ್ದರು. 2007ರಲ್ಲಿ ಬಿ.ಜೆ.ಪಿ.ಗೆ ಸೇರಿದ ನಂತರ ಶಾಸಕ ಸಿ.ಟಿ.ರವಿಯವರ ಆಪ್ತವಲಯದಲ್ಲೇ ಗುರುತಿಸಿಕೊಂಡಿದ್ದರು.ಬಿ.ಜೆ.ಪಿ.ಯಿಂದ ಎರಡು ಬಾರಿ ನಗರಸಭೆಗೆ ಆಯ್ಕೆಯಾಗಿ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು.
ಕಾಂಗ್ರೆಸ್ ಕಡೆ ಮುಖಮಾಡಿದ ಮಾಜಿ ನಗರಸಭಾ ಅಧ್ಯಕ್ಷ:
ತಮ್ಮಯ್ಯ ಅವರ ನಿಲುವಿನಲ್ಲಿ ಆದ ದಿಢೀರ್ ಬದಲಾವಣೆ ಕ್ಷೇತ್ರದ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದಾ ಸಿ.ಟಿ.ರವಿಯವರ ಹಿಂದೆಯೇ ಇದ್ದು ಅವರೊಂದಿಗೆ ವೇದಿಕೆ ಏರುತ್ತಿದ್ದ ತಮ್ಮಯ್ಯ ಹಾಗೂ ಸಿ.ಟಿ.ರವಿಯವರ ನಡುವಿನ ಸಂಬಂಧ ಇತ್ತೀಚೆಗೆ ಅಷ್ಟಕಷ್ಟೇ ಆಗಿತ್ತು. ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾಗಿದ್ದ ತಮ್ಮಯ್ಯ ಕ್ಷೇತ್ರದಲ್ಲಿ ಪ್ರಬಲ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದವರು. ತಾನೂ ಕ್ಷೇತ್ರದಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬು ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ನಾನು ಸ್ವತಂತ್ರ ವ್ಯಕ್ತಿ, ಈ ಬಾರಿ ಕಾಂಗ್ರೆಸ್‌ನಿಂದ ಪ್ರಚಾರ ಮಾಡುತ್ತೇನೆ: ಹೆಚ್. ವಿಶ್ವನಾಥ್
ಸದ್ಯಕ್ಕೆ ಬಿ.ಜೆ.ಪಿ ಯಲ್ಲಿ ಆ ಕನಸು ಈಡೇರುವುದು ಕಷ್ಟವೆಂದು ಅರಿತು ಬೇರೆ ಪಕ್ಷದಿಂದ ಸ್ಪರ್ಧಿಯಾಗುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇದ್ದ ತಮ್ಮಯ್ಯ ಮತ್ತೆ ಅದೇ ಪಕ್ಷಕ್ಕೆ ಮರಳಿ ಸೇರುವ ತಯಾರಿಯಲ್ಲಿದ್ದಾರೆ. ಇಂದು ಬಿಜೆಪಿಗೆ ರಾಜೀನಾಮೆ ನೀಡಿ ಪತ್ರಕಾಗೋಷ್ಠಿ ನಡೆಸಿದ ತಮ್ಮಯ್ಯ ನಂತರ ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಜಕೀಯ ಜಿದ್ದಾಜಿದ್ದಿ: ಶುರುವಾದ ಪಕ್ಷಾಂತರ ಪರ್ವ..!
ಮೂಲಗಳ ಪ್ರಕಾರ ಅವರು ಇದೇ ಫೆಬ್ರವರಿ 19 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂದು ತಿಳಿದುಬಂದಿದೆ. ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆಯಾದರೆ ಅಲ್ಲಿ ಟಿಕೆಟ್‍ಗೆ ಬೇಡಿಕೆ ಇಡಬಹುದು. ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೇಸ್‍ನಿಂದ ಗಾಯತ್ರಿ ಶಾಂತೇಗೌಡ, ಬಿ.ಹೆಚ್. ಹರೀಶ್, ಮಹಡಿಮನೆ ಮಹೇಶ್ ಸೇರಿದಂತೆ ಪ್ರಬಲ ಆಕಾಂಕ್ಷಿಗಳಿ ರುವುದರಿಂದ ತಮ್ಮಯ್ಯಗೆ ಅವಕಾಶ ಸಿಗುವುದು ಅಷ್ಟು ಸುಲಭವಲ್ಲ ಎನ್ನಲಾಗಿದೆ. ತಮ್ಮದೇ ಆದ ಬೆಂಬಲಿಗರ ಬಳಗ ಹೊಂದಿರುವ ಮತ್ತು ಬಿ.ಜೆ.ಪಿ.ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದ ತಮ್ಮಯ್ಯ ಪಕ್ಷ ತೊರೆದಿರುವುದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ.ವಲಯದಲ್ಲಿ ಕೊಂಚ ತಳಮಳ ಸೃಷ್ಟಿಸಿದೆ.