
ಮಂಡ್ಯ (ಫೆ.16): ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಿರಲಿ, ತಾಕತ್ತಿದ್ದರೆ ಅವರನ್ನು ಮುಟ್ಟಿ ನೋಡಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನವರೇನು ಬಳೆಗಳನ್ನು ತೊಟ್ಟುಕೊಂಡಿಲ್ಲ. ಅವರೂ ಶಕ್ತಿವಂತರೇ. ನಿಮ್ಮ ಗೊಡ್ಡು ಬೆದರಿಕೆಗಳಿಗೆಲ್ಲಾ ಹೆದರೋಕೆ ಇಲ್ಲಿ ಯಾರೂ ಇಲ್ಲ. ಇದು ಅಯೋಗ್ಯತನದ ಪರಮಾವಧಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು. ಮಂಡ್ಯದವರ ಗತ್ತು ಪ್ರದರ್ಶಿಸುವುದು ಮಂಡ್ಯದವರಿಗಷ್ಟೇ ಗೊತ್ತು. ಆ ಗತ್ತಿನ ನಾಟಕೀಯ ಪ್ರಯೋಗ ಇಲ್ಲಿ ನಡೆಯುವುದಿಲ್ಲ. ಸಿದ್ದರಾಮಯ್ಯನವರನ್ನು ಮುಟ್ಟುವುದಕ್ಕಿಂತ ಮೊದಲು ನನ್ನನ್ನು ಎದುರಿಸಿಕೊಂಡು ಹೋಗಿ. ಆಗ ನಿಮ್ಮ ತಾಕತ್ತು ಏನೆಂದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು. ಶಿಸ್ತು, ಸಂಸ್ಕೃತಿ ಎಂದೆಲ್ಲಾ ಉದ್ದುದ್ದ ಭಾಷಣ ಮಾಡುತ್ತೀರಿ. ಉನ್ನತ ಶಿಕ್ಷಣ ಸಚಿವರಾಗಿ ನೀವು ಕಲಿತಿರುವ ಸಂಸ್ಕೃತಿ ಇದೇನಾ. ಇದು ಗೂಂಡಾ ಸಂಸ್ಕೃತಿಯ ಪ್ರತೀಕ. ಧರ್ಮ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವುದನ್ನು ಮಂಡ್ಯದಿಂದ ಆರಂಭಿಸಲು ಹೊರಟಿದ್ದೀರಿ. ಅದರಿಂದ ಅಧಿಕಾರ ಹಿಡಿಯುವುದು ಸುಲಭದ ಮಾತಲ್ಲ ಎಂದರು.
ಸಂವಿಧಾನದ ಚೌಕಟ್ಟಿನೊಳಗೆ ರಾಜಕಾರಣ ಮಾಡಿ. ಅಭಿವೃದ್ಧಿ ವಿಚಾರ, ಜನಪರ ಕಾರ್ಯಕ್ರಮಗಳ ಕುರಿತಂತೆ ಜನರ ಮುಂದಿಡಿ. ಅದನ್ನು ಬಿಟ್ಟು ಟಿಪ್ಪು ಹೊಡೆದು ಹಾಕಿದಂತೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಿ ಎಂದರೆ ಏನರ್ಥ. ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಸಮಾಜದ ಶಾಂತಿಯನ್ನು ಕೆಡಿಸಿ ದ್ವೇಷ ಬೆಳೆಸಲು ಹೊರಟಿದ್ದೀರಾ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಒಮ್ಮೆಯೂ ರಾಜ್ಯದೊಳಗೆ ಜನಾದೇಶ ದೊರಕಿಲ್ಲ. ಆಪರೇಷನ್ ಕಮಲದ ಮೂಲಕವೇ ಅಧಿಕಾರ ಹಿಡಿದದ್ದು. ಟಿಪ್ಪುವನ್ನು ದ್ವೇಷಿಸುವವರು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿದಂತೆ ಮುಖ್ಯಮಂತ್ರಿಗಳಾಗಿದ್ದವರು ಟಿಪ್ಪುವಿನ ಪೇಟ ಹಾಕಿಕೊಂಡು ಫೋಸ್ ಕೊಡಲಿಲ್ಲವೇ. ಈ ರೀತಿಯ ಧರ್ಮಾಧಾರಿತ ರಾಜಕಾರಣ ಮಾಡುವುದೇ ಬಿಜೆಪಿಯವರು ಕುಟಿಲ ನೀತಿಯಾಗಿದೆ ಎಂದು ಟೀಕಿಸಿದರು.
ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ: ಅಶ್ವತ್ಥ್‌ಗೆ ಸಿದ್ದರಾಮಯ್ಯ ತಿರುಗೇಟು
ಅಭಿವೃದ್ಧಿ ಮತ್ತು ಆರ್ಥಿಕ ಶಿಸ್ತನ್ನು ಸಿದ್ದರಾಮಯ್ಯನವರನ್ನು ನೋಡಿ ಕಲಿಯಿರಿ. ಅನ್ನಭಾಗ್ಯ ಕಾರ್ಯಕ್ರಮ ಕೇಂದ್ರ ಸರ್ಕಾರದ ಯೋಜನೆ ಎಂದ ಬಿಜೆಪಿಯವರಿಗೆ ಸಿದ್ದರಾಮಯ್ಯನವರು, ಆ ಯೋಜನೆ ಕೇಂದ್ರದ್ದು ಎಂದ ಮೇಲೆ ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಬಿಜೆಪಿ ಇರುವ ರಾಜ್ಯಗಳಲ್ಲಿ ಅಕ್ಕಿ ಕೊಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೇನು ಉತ್ತರ ಕೊಟ್ಟಿದ್ದೀರಿ. ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೊಟ್ಟಿದ್ದು ಕಾಂಗ್ರೆಸ್ ಎಂದು ಮಾತಿನ ಈಟಿಯಿಂದ ತಿವಿದರು.
ಸಿದ್ದುರನ್ನು ಟಿಪ್ಪು ರೀತಿ ಹೊಡೆದು ಹಾಕಬೇಕು: ಸಚಿವ ಅಶ್ವತ್ಥ ನಾರಾಯಣ
ಅಭಿವೃದ್ಧಿಯನ್ನು ಮರೆತು ಭ್ರಷ್ಟಾಚಾರದಲ್ಲಿ ಮುಳುಗಿರುವ ಸಚಿವರು ತಮ್ಮಲ್ಲಿರುವ ಲೋಪಗಳನ್ನು ಮುಚ್ಚಿಕೊಳ್ಳಲು ಈ ರೀತಿಯ ಹಿಂಸಾತ್ಮಕ, ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಕೂಡಲೇ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಅಂಜನಾ, ವಿಜಯಕುಮಾರ್, ಸಿ.ಎಂ.ದ್ಯಾವಪ್ಪ, ಕೆ.ನಾಗರಾಜು, ನಯೀಂ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.