ಕನ್ನಡ ಬಳಕೆ ಅನಿವಾರ್ಯವೆಂಬ ವಾತಾವರಣ ಸೃಷ್ಟಿಸಿ: ಸಿದ್ದರಾಮಯ್ಯ

By Kannadaprabha News  |  First Published Oct 19, 2023, 6:03 AM IST

ಕನ್ನಡ ಆಡಳಿತ ಭಾಷೆ ಎಂದು ಘೋಷಿಸಿದ್ದರೂ ಈಗಲೂ ಅನೇಕ ಸಚಿವರು, ಅಧಿಕಾರಿಗಳು ಇಂಗ್ಲಿಷ್ ಭಾಷೆಯಲ್ಲಿ ಟಿಪ್ಪಣಿ ಬರೆಯುತ್ತಿರುವುದನ್ನು, ಕಡತ ಮಂಡಿಸುವುದನ್ನು ಕೈ ಬಿಟ್ಟು, ಕನ್ನಡವನ್ನು ಬಳಕೆ ಮಾಡಬೇಕು.


ಬೆಂಗಳೂರು (ಅ.19): ಕನ್ನಡ ಆಡಳಿತ ಭಾಷೆ ಎಂದು ಘೋಷಿಸಿದ್ದರೂ ಈಗಲೂ ಅನೇಕ ಸಚಿವರು, ಅಧಿಕಾರಿಗಳು ಇಂಗ್ಲಿಷ್ ಭಾಷೆಯಲ್ಲಿ ಟಿಪ್ಪಣಿ ಬರೆಯುತ್ತಿರುವುದನ್ನು, ಕಡತ ಮಂಡಿಸುವುದನ್ನು ಕೈ ಬಿಟ್ಟು, ಕನ್ನಡವನ್ನು ಬಳಕೆ ಮಾಡಬೇಕು, ಜತೆಗೆ ರಾಜ್ಯದಲ್ಲಿ ಕನ್ನಡ ಬಳಸುವುದು ಅನಿವಾರ್ಯ ಎಂಬಂತಹ ಕನ್ನಡದ ವಾತಾವರಣವನ್ನು ಎಲ್ಲರೂ ಸೃಷ್ಟಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ವಿಧಾನಸೌಧ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷವಾಗಿರುವ ಹಿನ್ನೆಲೆಯಲ್ಲಿ ಬರುವ ನವೆಂಬರ್‌ ಒಂದರಿಂದ ಒಂದು ವರ್ಷಗಳ ಕಾಲ ಆಚರಿಸಲಿರುವ ‘ಕರ್ನಾಟಕ ಸಂಭ್ರಮ-50’ ಲಾಂಛನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಭಾಷೆ ಕಲಿಯದಿದ್ದರೆ ಬದುಕು ನಡೆಸುವುದು ಸುಲಭವಲ್ಲ, ಆದರೆ ಕರ್ನಾಟಕದಲ್ಲಿ ಬೇರೆ ಭಾಷಿಕರು ಕನ್ನಡ ಕಲಿಯದಿದ್ದರೂ ಇಲ್ಲಿ ಜೀವನ ನಡೆಸುತ್ತಾರೆ. ಹಾಗಾಗಿ ಕರುನಾಡಿನಲ್ಲಿ ಕನ್ನಡ ಬಳಕೆ ಮಾತನಾಡುವುದು ಅನಿವಾರ್ಯ ಎಂಬಂತಹ ವಾತಾವರಣವನ್ನು ನಾವೆಲ್ಲ ಸೃಷ್ಟಿಸಬೇಕು ಎಂದರು. ಬೇರೆ ಭಾಷಿಕರು ತಮ್ಮ ಭಾಷೆಯಲ್ಲೇ ಮಾತನಾಡುತ್ತಾರೆ, ಕನ್ನಡವನ್ನು ಕಲಿಯಲು ಮುಂದಾಗುವುದೇ ಇಲ್ಲ. ಆದರೆ ನಾವು ಅವರಿಗೆ ಕನ್ನಡ ಕಲಿಸುವ ಬದಲು ಅವರ ಭಾಷೆಯಲ್ಲೇ ಮಾತನಾಡುತ್ತಿದ್ದೇವೆ. ಇದಕ್ಕೆ ನಮ್ಮಲ್ಲಿರುವ ಅತಿಯಾದ ಉದಾರತೆ ಸಹ ಕಾರಣವಾಗಿದೆ. 

Tap to resize

Latest Videos

ಪಂಚರಾಜ್ಯ ಚುನಾವಣೆಗಾಗಿ ಹೈಕಮಾಂಡ್‌ ನಯಾಪೈಸೆ ಕೇಳಿಲ್ಲ: ಸಿದ್ದರಾಮಯ್ಯ

ಅತಿಯಾದ ಉದಾರತೆ ಕನ್ನಡದ ಭಾಷಾ ಬೆಳವಣಿಗೆಗೆ, ಸಂಸ್ಕೃತಿ, ಸಂಪ್ರದಾಯ ದೃಷ್ಟಿಯಿಂದ ಒಳ್ಳೆಯದಲ್ಲ. ರಾಜ್ಯದ ಕೆಲವು ಭಾಗಗಳಿಗೆ ಹೋದರೆ ನಾವು ಎಲ್ಲಿದ್ದೇವೆ ಎಂಬ ಭಾವನೆ ಬರುತ್ತದೆ. ಕನ್ನಡ ಭಾಷೆಯನ್ನು ಬಳಸುವುದೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿ 50 ವರ್ಷವಾಗಿದೆ. ಕಳೆದ ವರ್ಷದಿಂದ ಈ ಸಂಭ್ರಮವನ್ನು ಆಚರಿಸಬೇಕಿತ್ತು. ಆದರೆ ಹಿಂದಿನ ಸರ್ಕಾರ ಆಚರಿಸದ ಕಾರಣ ಈ ವರ್ಷದ ನವೆಂಬರ್‌ 1ರಿಂದ ಮುಂದಿನ 1 ವರ್ಷ ಕಾಲ ರಾಜ್ಯಾದ್ಯಂತ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಆಯೋಜಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, 50 ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ಎಂಬ ಹೆಸರನ್ನು ಕೊಟ್ಟು ಹೋಗಿದ್ದಾರೆ. ಅವರನ್ನು ಸ್ಮರಿಸಿಕೊಂಡು ಈ ಕಾರ್ಯಕ್ರಮವನ್ನು ವರ್ಷವಿಡೀ ಆಚರಿಸಲು ಉದ್ದೇಶಿಸಲಾಗಿದೆ ಎಂದರು. ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, 1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದಲ್ಲಿ ಹಂಪಿಯ ವಿರುಪಾಕ್ಷ ದೇವಸ್ಥಾನದಿಂದ ಗದಗನ ವೀರ ನಾರಾಯಣಸ್ವಾಮಿ ದೇವಸ್ಥಾನದವರೆಗೆ ಕನ್ನಡ ಜ್ಯೋತಿ ಯಾತ್ರೆ ಆಯೋಜಿಸಲಾಗಿತ್ತು. ಈಗ ಅದೇ ರೀತಿ 50 ವರ್ಷಗಳ ಸಂಭ್ರಮದ ಅಂಗವಾಗಿ ನ.1ರಂದು ಯಾತ್ರೆ ನಡೆಸಲಾಗುವುದು ಎಂದು ಹೇಳಿದರು.

ಕಾನೂನು ಪದವಿಗೆ ಸೇರದಿದ್ದರೆ ನಾನು ಕುರಿ ಕಾಯುತ್ತ ಇರಬೇಕಿತ್ತು: ಸಿದ್ದರಾಮಯ್ಯ

ಲಾಂಛನ ಕಲಾವಿದ ರವಿರಾಜಗೆ 25 ಸಾವಿರ ರು. ಬಹುಮಾನ: 50 ವರ್ಷಗಳ ಕರ್ನಾಟಕ ಸಂಭ್ರಮದ ಲಾಂಛನ ರಚಿಸಿದ ಕಲಾವಿದ ರವಿರಾಜ ಜಿ. ಹುಲಗೂರು ಅವರಿಗೆ 25 ಸಾವಿರ ರು. ಗಳ ಬಹುಮಾನವನ್ನು ಮುಖ್ಯಮಂತ್ರಿಗಳು ನೀಡಿ ಗೌರವಿಸಿದರು.ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕಲಾವಿದನಿಗೆ ನೀಡುತ್ತಿರುವ ಪ್ರೋತ್ಸಾಹದ ಬಹುಮಾನ ಕಡಿಮೆಯಾಗಿದ್ದು, ಬಿಬಿಎಂಪಿಯಿಂದ ಒಂದು ಲಕ್ಷ ರು. ನೀಡುವುದಾಗಿ ಪ್ರಕಟಿಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ, ಪರಿಷತ್‌ ಸದಸ್ಯ ನಾಗರಾಜ ಯಾದವ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಎನ್‌. ಮಂಜುಳಾ ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ ಉಪಸ್ಥಿತರಿದ್ದರು.

click me!