
ಬೆಳಗಾವಿ (ಅ.19): ನನ್ನ ಬಗ್ಗೆ ತೀರ್ಪು ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಏನೂ ನ್ಯಾಯಾಧೀಶರೆ? ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಬಗ್ಗೆ ತೀರ್ಪು ನೀಡಲು ಕುಮಾರಸ್ವಾಮಿಯೂ ಜಡ್ಜ್ ಅಲ್ಲ. ಕಟೀಲ್ ಸಹ ಅಲ್ಲ ಎಂದು ತಿರುಗೇಟು ನೀಡಿದ ಅವರು, ಬಿಜೆಪಿ ನಾಯಕ ಸಿಟಿ ರವಿಗೆ ‘ಲೂಟಿ ರವಿ’ ಎಂದು ಹೆಸರು ಕೊಟ್ಟಿದ್ದೇ ಅವರ ಪಕ್ಷದವರು. ಯಾರ್ಯಾರು ಏನು ಮಾತನಾಡಿದ್ದಾರೆ ಎಂಬ ದಾಖಲೆಗಳು ನನ್ನ ಬಳಿ ಇವೆ. ಮುಂದೆ ಸಮಯ ಬರಲಿ ಎಲ್ಲವನ್ನೂ ಹೇಳುತ್ತೇನೆ ಎಂದರು.
ಮಹದಾಯಿಗೆ ಬದ್ಧ: ಹಿಂದಿನ ಬಿಜೆಪಿ ಸರ್ಕಾರ ಮಹದಾಯಿ ಯೋಜನೆ ಜಾರಿ ಆಗೇ ಬಿಟ್ಟಿತೆಂಬಂತೆ ಹುಸಿ ಸಂಭ್ರಮಾಚರಣೆ ಮಾಡಿತು. ಆದರೆ ನಮ್ಮ ಸರ್ಕಾರ ಮಹದಾಯಿ ಯೋಜನೆ ಜಾರಿಗೆ ಬದ್ಧರಾಗಿದ್ದೇವೆ. ಸದ್ಯ ಕಾವೇರಿ ನದಿ ನೀರು ವಿವಾದ ಸಂಬಂಧ ನಾವು ಮಗ್ನರಾಗಿದ್ದೇವೆ. ಮೇಕೆದಾಟು ಯೋಜನೆಯಂತೆ ಮಹದಾಯಿ ಯೋಜನೆಯನ್ನೂ ಆದ್ಯತೆ ಮೇರೆಗೆ ಜಾರಿಗೊಳಿಸಲಾಗುವುದು ಎಂದವರು ಹೇಳಿದರು. ರಾಜ್ಯದಲ್ಲಿ ಬಹುಪಾಲು ಕಾಲುವೆಗಳ ನೀರು ಕೊನೆಯ ಹಂತದ ರೈತರಿಗೆ ತಲುಪುತ್ತಿಲ್ಲ. ಈ ಸಮಸ್ಯೆ ನಿವಾರಣೆಗೆ ಪ್ರತ್ಯೇಕ ಕಾನೂನು ತರಲಾಗುವುದು ಎಂದು ಇದೇ ವೇಳೆ ಶಿವಕುಮಾರ್ ತಿಳಿಸಿದರು.
ಡಿಕೆಶಿ ಸ್ವಾಗತಕ್ಕೆ ಸಚಿವರು, ಶಾಸಕರು ಗೈರು: ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ , ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಗೈರಾದರು. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ.ಕೆ.ಶಿವಕುಮಾರ ಅವರನ್ನು ಪಕ್ಷದ ಕಾರ್ಯಕರ್ತರೇ ಹಾರ ಮತ್ತು ಗಾಂಧಿ ಟೋಪಿ ತೊಡಿಸಿ ಸ್ವಾಗತಿಸಿದರು. ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರನ್ನು ಹೊರತುಪಡಿಸಿದರೆ, ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಗೈರಾದರು.
ಜನಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಲು ಬಿಡಲ್ಲ: ಎಚ್.ಡಿ.ಕುಮಾರಸ್ವಾಮಿ
ಡಿ.ಕೆ.ಶಿ ವಿರುದ್ಧ ಮುನಿಸಿಕೊಂಡಿರುವ ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿಮಾನ ನಿಲ್ದಾಣದಲ್ಲಿ ಕಾಣಿಸಲೇ ಇಲ್ಲ. ಇಬ್ಬರು ಸಚಿವರು ಸೇರಿದಂತೆ ಜಿಲ್ಲೆಯ 11 ಶಾಸಕರು ಗೈರಾದರು. ಅಲ್ಲದೇ, ಜಲಸಂಪನ್ಮೂಲ ಇಲಾಖೆ ಕಚೇರಿಯಲ್ಲಿ ಕರೆದ ಅಧಿಕಾರಿಗಳ ಸಭೆಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರನ್ನು ಹೊರತುಪಡಿಸಿದರೆ ಜಿಲ್ಲೆಯ ಶಾಸಕರು ಗೈರಾಗಿರುವುದು ಕಂಡುಬಂದಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.