ಮೈತ್ರಿ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ ಯೋಗೇಶ್ವರ್‌ಗಿಲ್ಲ ಟಿಕೆಟ್!

By Web DeskFirst Published Nov 17, 2019, 8:25 AM IST
Highlights

ಹುಣಸೂರು ಟಿಕೆಟ್‌ ಸಿಗದೆ ಯೋಗೇಶ್ವರ್‌ಗೆ ಹಿನ್ನಡೆ| ಮೈತ್ರಿ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವ| ಹುಣಸೂರಲ್ಲಿ ಸ್ಪರ್ಧಿಸಿ ಗೆದ್ದು ಸಚಿವರಾಗುವ ಕನಸು ಕಂಡಿದ್ದರು| ಬಿಜೆಪಿಯಿಂದ ವಿಶ್ವನಾಥ್‌ ಸ್ಪರ್ಧೆ ಹಿನ್ನೆಲೆಯಲ್ಲಿ ಕೈತಪ್ಪಿದ ಟಿಕೆಟ್‌

ಬೆಂಗಳೂರು[ನ.17]: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರಿಗೆ ಉಪಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಟಿಕೆಟ್‌ ಸಿಗುವ ನಿರೀಕ್ಷೆ ಹುಸಿಯಾಗಿ ಹಿನ್ನಡೆ ಅನುಭವಿಸುವಂತಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್‌ ಸ್ಪರ್ಧಿಸಿ ಸೋಲನುಭವಿಸಿದ್ದರು. ತರುವಾಯ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವಲ್ಲಿ ಶ್ರಮವಹಿಸಿದ್ದರು. ಹುಣಸೂರು ಕ್ಷೇತ್ರದ ಶಾಸಕರಾಗಿದ್ದ ಎಚ್‌.ವಿಶ್ವನಾಥ್‌ ಉಪಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂಬ ಸುದ್ದಿ ಹಬ್ಬಿದ್ದರಿಂದ ಯೋಗೇಶ್ವರ್‌ ಟಿಕೆಟ್‌ಗಾಗಿ ಲಾಬಿ ನಡೆಸಿದರು. ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವ ತಯಾರಿ ಸಹ ನಡೆಸಿದ್ದರು. ಕ್ಷೇತ್ರದಲ್ಲಿ ಪೋಸ್ಟರ್‌ಗಳನ್ನು ಕೂಡ ಹಾಕಿಸಿಕೊಂಡಿದ್ದರು.

ಹುಣಸೂರು: ಸಿ. ಪಿ. ಯೋಗೇಶ್ವರ್ ಭಾವಚಿತ್ರವುಳ್ಳ 30 ಸಾವಿರ ಸೀರೆ ವಶ

‘ಹುಣಸೂರು ಕ್ಷೇತ್ರದ ಅಭಿವೃದ್ಧಿಗಾಗಿ ಯೋಗೇಶ್ವರ್‌’ ಎಂಬ ಬರಹದ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಚನ್ನಪಟ್ಟಣ ಕ್ಷೇತ್ರವನ್ನು ಬಿಡಲು ಮನಸು ಇಲ್ಲದಿದ್ದರೂ ಉಪ ಚುನಾವಣೆಯಲ್ಲಿ ಅವರು ಹುಣಸೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಗೆದ್ದು ಸಚಿವರಾಗುವ ಕನಸನ್ನೂ ಕಂಡಿದ್ದರು. ಇದಕ್ಕಾಗಿ ರಾಜಕೀಯ ತಂತ್ರಗಾರಿಕೆಯನ್ನು ಸಹ ರೂಪಿಸಿ, ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ಯಡಿಯೂರಪ್ಪ ಅವರಲ್ಲಿ ಸಾಕಷ್ಟುಲಾಬಿ ಸಹ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

ಆದರೆ, ಅನರ್ಹಗೊಂಡ ಶಾಸಕರ ರಾಜೀನಾಮೆ ವಿಚಾರದಲ್ಲಿ ಸಾಕಷ್ಟುಶ್ರಮಿಸಿದರೂ ಯಾವುದೇ ಪ್ರಯೋಜನವಾಗದೆ ತೀವ್ರ ಹಿನ್ನಡೆ ಅನುಭವಿಸಬೇಕಾಯಿತು. ಕೊನೆ ಕ್ಷಣದಲ್ಲಿ ಎಚ್‌.ವಿಶ್ವನಾಥ್‌ ಅವರೇ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಯೋಗೇಶ್ವರ್‌ಗೆ ಟಿಕೆಟ್‌ ತಪ್ಪಿತು. ಅಲ್ಲದೇ, ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನ ಹಿರಿಯ ಮುಖಂಡ ಜಿ.ಟಿ.ದೇವೇಗೌಡ ಪುತ್ರ ಹರೀಶ್‌ಗೌಡ ಸಹ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ವಿಶ್ವನಾಥ್‌ ಕಣಕ್ಕಿಳಿಯಲು ತೀರ್ಮಾನಿಸಿದ ಪರಿಣಾಮ ಇಬ್ಬರಿಗೂ ಕೈ ತಪ್ಪಿದೆ.

ಉಪಚುನಾವಣೆ : ಬಿಜೆಪಿ ಟಿಕೆಟ್‌ಗೆ ಯೋಗೇಶ್ವರ್ ಮಾಸ್ಟರ್ ಪ್ಲಾನ್ ?

ಟಿಕೆಟ್‌ ಸಿಗದಿದ್ದರೂ ಬಿಜೆಪಿಯಲ್ಲಿರುವುದು ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಯೋಗೇಶ್ವರ್‌ಗೆ ಅನಿವಾರ್ಯ. ಅನರ್ಹಗೊಂಡ ಶಾಸಕರನ್ನು ಸೆಳೆಯಲು ಪ್ರಮುಖ ಪಾತ್ರವಹಿಸಿದ ಹಿನ್ನೆಲೆಯಲ್ಲಿ ಬಿಜೆಪಿಯು ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

click me!