ಡಾ.ಸುಧಾಕರ್ ಬಳಿ 17 ಕೋಟಿ ಆಸ್ತಿ| ಒಂದೂವರೆ ವರ್ಷದಲ್ಲಿ 1.66 ಕೋಟಿ ಏರಿಕೆ| ಅನರ್ಹ ಶಾಸಕನ ಬಳಿ 1 ಕೇಜಿ ಚಿನ್ನಾಭರಣ
ಚಿಕ್ಕಬಳ್ಳಾಪುರ[ನ.17]: ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಮೂರನೇ ಬಾರಿಗೆ ಅದೃಷ್ಟಪರೀಕ್ಷೆಗೆ ಮುಂದಾಗಿರುವ ಅನರ್ಹ ಶಾಸಕ ಡಾ.ಸುಧಾಕರ್ ತಮ್ಮ ಕುಟುಂಬದ ಒಟ್ಟು ಆಸ್ತಿ ಮೌಲ್ಯ 17 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ .10.68 ಕೋಟಿ ಸಾಲದ ಹೊರೆಯೂ ಇರುವುದಾಗಿ ತಿಳಿಸಿದ್ದಾರೆ. 2018ರ ಚುನಾವಣೆ ವೇಳೆ ಇದ್ದದ್ದಕ್ಕಿಂತ ಸುಧಾಕರ್ ಆಸ್ತಿ 1.66 ಕೋಟಿ ಆಸ್ತಿ ಹೆಚ್ಚಳವಾಗಿದೆ.
ಶನಿವಾರ ನಾಮಪತ್ರ ಜೊತೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಸೇರಿ ಸುಧಾಕರ್ ಅವರ ಬಳಿ 2.34 ಕೋಟಿ ಮೌಲ್ಯದ 3 ಎಕರೆ 37 ಗುಂಟೆ, ಅವರ ಪತ್ನಿ ಹೆಸರಿನಲ್ಲಿ 1.17 ಕೋಟಿ ಮೌಲ್ಯದ 10.29 ಎಕರೆ ಜಮೀನು ಇದೆ. ಇನ್ನು ಚರಾಸ್ತಿಯಲ್ಲಿ ನಾನಾ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿ, ಉದ್ಯಮಗಳಲ್ಲಿ ಮಾಡಿರುವ ಹೂಡಿಕೆಗಳು ಸೇರಿವೆ.
ಮೋದಿಯನ್ನು ಹಾಡಿ ಹೊಗಳಿದ ಅನರ್ಹ ಶಾಸಕ
ಸುಧಾಕರ್ ಬಳಿ 150 ಗ್ರಾಂ ಚಿನ್ನದ ಬ್ರಾಸ್‌ಲೈಟ್, ಪ್ರೀತಿ ಅವರ ಬಳಿ 56 ಲಕ್ಷ ಮೌಲ್ಯದ 4 ವಜ್ರದ ಹಾರಗಳು ಮತ್ತು 1 ಕೆ.ಜಿ. ಬಂಗಾರದ ಆಭರಣಗಳು ಇವೆ. ಜೊತೆಗೆ 10.5 ಲಕ್ಷ ಮೌಲ್ಯದ 21 ಕೆಜಿ ಬೆಳ್ಳಿ ವಸ್ತುಗಳಿವೆ. ದಂಪತಿಯ ಬಳಿ ನಾಲ್ಕು ಕಾರು, ಒಂದು ಟ್ರ್ಯಾಕ್ಟರ್ ಇದೆ. ಸುಧಾಕರ್ ಅವರ ಬಳಿ ಪ್ರಸ್ತುತ 4.20 ಲಕ್ಷ ಮತ್ತು ಅವರ ಪತ್ನಿ ಬಳಿ 3.10 ಲಕ್ಷ ನಗದು ಇದೆ.
ಸುಧಾಕರ್ ಅವರು ಪಿಸಿಎಆರ್‌ಡಿ ಬ್ಯಾಂಕಿಗೆ 2.61 ಲಕ್ಷ ಸಾಲ ಹೊಂದಿದ್ದಾರೆ. ತಮ್ಮ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ಮತ್ತು ಪತ್ನಿಗೆ 12.33 ಲಕ್ಷ ಸೇರಿದಂತೆ ಒಟ್ಟು 15.94 ಲಕ್ಷ ಸಾಲ ಮರು ಪಾವತಿಸಬೇಕಿದೆ. ಕುಟುಂಬದ ಆಸ್ತಿಯಲ್ಲಿ ಅಗ್ರಪಾಲು ಹೊಂದಿರುವ ಸುಧಾಕರ್ ಅವರ ಪತ್ನಿ ಪ್ರೀತಿ ಅವರ ಮೇಲೆ ಇದೀಗ ದೊಡ್ಡ ಸಾಲದ ಹೊರೆ ಇದೆ. 6 ಮಂದಿ ಖಾಸಗಿ ವ್ಯಕ್ತಿಗಳು ಸೇರಿ, ಒಂದು ಸಂಸ್ಥೆಗೆ ಒಟ್ಟು 10.70 ಕೋಟಿ ಮರು ಪಾವತಿಸಬೇಕಿದೆ.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ರಣಕಹಳೆ ನಡುವೆಯೇ ಸುಧಾಕರ್ ವಿರುದ್ಧ ಭುಗಿಲೆದ್ದ ಬಂಡಾಯ
ಕಳೆದ 2018ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ 3.60 ಲಕ್ಷ ನಗದು ಹೊಂದಿದ್ದ ಅವರು ಪ್ರಸ್ತುತ ಕೇವಲ 60 ಸಾವಿರ ನಗದು ಹೆಚ್ಚಿಸಿಕೊಂಡಿದ್ದರೆ, 2.70 ಲಕ್ಷ ನಗದು ಹೊಂದಿದ್ದ ಅವರ ಪತ್ನಿ ಪ್ರೀತಿ ಅವರು 40 ಸಾವಿರ ಹೆಚ್ಚಿಸಿ 3.10 ಲಕ್ಷ ನಗದು ಹೊಂದಿದ್ದಾರೆ.
12 ಲಕ್ಷ ಸಾಲವೂ ಹೆಚ್ಚಾಗಿದೆ. ಅಲ್ಲದೆ ಕಳೆದ ಒಂದೂವರೆ ವರ್ಷದ ಹಿಂದೆ ಇದ್ದ ಸುಧಾಕರ್ ಅವರ ಚರಾಸ್ತಿ 11.87 ಕೋಟಿ ಇದ್ದರೆ, ಪ್ರಸ್ತುತ 14.89 ಕೋಟಿಗೆ ಏರಿಕೆಯಾಗಿದೆ. ಆದರೆ ಸುಧಾಕರ್ ಅವರ ಸ್ತಿರಾಸ್ತಿಯಲ್ಲಿ ಇಳಿಕೆಯಾಗಿದ್ದು, ಕಳೆದ ಒಂದೂವರೆ ವರ್ಷದ ಹಿಂದೆ 2.24 ಕೋಟಿ ಇದ್ದ ಸ್ಥಿರಾಸ್ತಿ ಪ್ರಸ್ತುತ 97 ಲಕ್ಷ ಮಾತ್ರ ಇದ್ದು, 1.37 ಕೋಟಿ ಕಡಿಮೆಯಾಗಿದೆ.