
ಚನ್ನಪಟ್ಟಣ (ಸೆ.04): ‘ಉತ್ತಮ ಮಳೆಯಾಗಲು ನಾನೇ ಕಾರಣ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಹಾಗಿದ್ದ ಮೇಲೆ ಮಳೆಹಾನಿಗೂ ಅವರೇ ಕಾರಣ ಅಲ್ಲವೇ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಲೆಳೆದಿದ್ದಾರೆ. ಪಟ್ಟಣದಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಮೂಡ್ ಬಂದಂತೆ ಮಾತನಾಡುತ್ತಾರೆ. ಹೀಗಾಗಿ ಅವರ ಮಾತಿಗೆ ಅಷ್ಟುಗೌರವವಿಲ್ಲ. ಅವರದು ತೂಕದ ಮಾತಲ್ಲ, ಅಸಂಬದ್ಧವಾಗಿ ಮಾತನಾಡುತ್ತಾರೆ.
ಹೀಗಾಗಿ ಅವರ ಎಲ್ಲ ಆರೋಪಗಳಿಗೆ ಉತ್ತರ ಕೊಡುವುದರಲ್ಲಿ ಅರ್ಥವಿಲ್ಲ ಎಂದು ವಾಗ್ದಾಳಿ ನಡೆಸಿದರು. ಇನ್ನು ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಆಡಳಿತ ವೈಫಲ್ಯವೇ ಕಾರಣ. ಮೋಜು, ಮಸ್ತಿಯಲ್ಲಿ ನಿರತರಾಗಿದ್ದ ಅವರು ಉತ್ತಮ ಆಡಳಿತ ನೀಡದ ಕಾರಣ ಸರ್ಕಾರ ಬಿದ್ದುಹೋಯಿತು. ಯಾರೋ ನಾಲ್ಕು ಜನ ಸೇರಿ ಸರ್ಕಾರ ಬೀಳಿಸಲು ಅದೇನು ಕಡ್ಡಿ ಮೇಲೆ ನಿಂತಿತ್ತೆ? ಈ ಮಾತನ್ನು ಮೊದಲೇ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದರು.
ಎಚ್‌ಡಿಕೆ ಕುಟುಂಬ ನಂಗೆ ಬ್ಲಾಕ್ಮೇಲ್ ಮಾಡಿ ಹಣ ಪಡೆದಿತ್ತು: ಯೋಗೇಶ್ವರ್
ಎಚ್ಡಿಕೆ ಸರ್ಕಾರ ಪತನಕ್ಕೆ ಆಡಳಿತ ವೈಫಲ್ಯ ಕಾರಣ: ಮಾಜಿ ಸಿಎಂ ಕುಮಾರಸ್ವಾಮಿ ಅವರ ಸರ್ಕಾರ ಪತನಕ್ಕೆ ಆಡಳಿತ ವೈಫಲ್ಯವೇ ಕಾರಣ. ಮೋಜು, ಮಸ್ತಿಯಲ್ಲಿ ನಿರತರಾಗಿದ್ದ ಅವರು, ಉತ್ತಮ ಆಡಳಿತ ನೀಡದ ಕಾರಣ ಸರ್ಕಾರ ಬಿದ್ದುಹೋಯಿತೆ ಹೊರತು ಬೇರಾರಯವ ಕಾರಣದಿಂದಲೂ ಅಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ ನೀಡಿದರು. ನಗರದ ಪೇಟೆಚೇರಿಯಲ್ಲಿ ಮಳೆ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಯಾರೋ ನಾಲ್ಕು ಜನ ಸೇರಿ ಸರ್ಕಾರ ಬೀಳಿಸಲು ಅದೇನು ಕಡ್ಡಿ ಮೇಲೆ ನಿಂತಿತ್ತೆ.
ಈ ಮಾತನ್ನು ಅವರು ಮೊದಲೇ ಏಕೆ ಹೇಳಲಿಲ್ಲ ಎಂದು ಪ್ರಶ್ನಿಸಿದ ಅವರು, ಅವರೀಗ ನನ್ನ ಮೇಲೆ ಬೊಟ್ಟು ಮಾಡುವುದರಲ್ಲಿ ಅರ್ಥವಿಲ್ಲ. ಸರ್ಕಾರ ಏಕೆ ಬಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ವೋಟಿನ ರಾಜಕಾರಣ ಮಾಡಲು ಬಂದಿಲ್ಲ. ಪ್ರಚಾರಕ್ಕಾಗಿಯೂ ಕೆಲಸ ಮಾಡುತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಲು ನಿಂತಿದ್ದೇವೆ. ಕುಮಾರಸ್ವಾಮಿಯದು ಹಿಟ್ ಅನ್ ರನ್ ಕೇಸ್. ಏನೋ ಒಂದು ಮಾತನಾಡುವುದು, ಓಡಿಹೋಗುವುದು. ಅವರು ಬಹಿರಂಗ ಚರ್ಚೆಗೆ ಬಂದರೆ ಮಾತನಾಡಬಹುದು ಎಂದು ಸವಾಲು ಹಾಕಿದರು.
ಗುತ್ತಿಗೆದಾರರ ಉದ್ಧಾರಕ್ಕೆ ಕೆಲಸ: ಕೇವಲ ನಾಲ್ಕು ಜನ ಗುತ್ತಿಗೆದಾರರನ್ನು ಉದ್ಧಾರ ಮಾಡಲು ಕುಮಾರಸ್ವಾಮಿ ನಿಂತಿದ್ದಾರೆ. ರಸ್ತೆ ಕಾಮಗಾರಿಯನ್ನು ನಾಗರಾಜು ಎಂಬ ಒಬ್ಬ ಗುತ್ತಿಗೆದಾರನಿಗೆ ಕಾಮಗಾರಿ ಕೊಡಿಸಲಾಗಿದೆ. ಆತನಿಂದ ಕುಮಾರಸ್ವಾಮಿ 24% ಕಿಕ್ ಬ್ಯಾಕ್ ಪಡೆದಿದ್ದಾರೆ. ಗುತ್ತಿಗೆದಾರರ ತಿಕ್ಕಾಟದಿಂದ ಕಣ್ವ ರಸ್ತೆ ಕಾಮಗಾರಿ ನಿಂತಿದೆ. ನಾನು ಮುಂದೆ ಒಂದು ಲಿಸ್ಟ್ ಬಿಡುಗಡೆ ಮಾಡ್ತೇನೆ. ಸರ್ಕಾರದ ಮಟ್ಟದಲ್ಲಿ ತನಿಖೆ ಮಾಡಿಸುತ್ತೇನೆ. ವಿಚಾರಣೆಗೆ ಒಳಪಡಿಸುತ್ತೇನೆ ಎಂದು ಕಿಡಿಕಾರಿದರು.
ಎಚ್ಡಿಕೆ ಅವಕಾಶವಾದಿ: ಕುಮಾರಸ್ವಾಮಿ ಅವಕಾಶವಾದಿ ಎಂದು ಜನರಿಗೆ ಮನವರಿಕೆ ಆಗಿದೆ. ನಾಲ್ಕು ಜನ ಗುತ್ತಿಗೆದಾರರು ಬಿಟ್ಟರೇ ಜೆಡಿಎಸ್‌ನಲ್ಲಿ ಅವರನ್ನು ನಂಬಲು ಯಾರು ಇಲ್ಲ. ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇನೆ ಎಂದು ಎಲ್ಲಿ ಹೇಳಿದ್ದೆ ಎನ್ನುತ್ತಾರೆ. ಆದರೆ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿರುವ ದಾಖಲೆ ಇದೆ. ಕುಮಾರಸ್ವಾಮಿ ಫಮ್‌ರ್ ಆಗಿ ಮಾತನಾಡುವುದಿಲ್ಲ, ಕಮಿಟ್ಮೆಂಟ್ ಇಲ್ಲ ಎಂದು ಕಿಡಿಕಾರಿದರು.
ಆಟದ ವಸ್ತವಾದ ಚನ್ನಪಟ್ಟಣ ತಹಶೀಲ್ದಾರ್ ಹುದ್ದೆ, 24 ಗಂಟೆಯಲ್ಲಿ ಇಬ್ಬರು ತಹಶೀಲ್ದಾರ್ ವರ್ಗಾವಣೆ
ಪ್ಯಾಕೇಜ್‌ಗಾಗಿ ಮನವಿ: ತಾಲೂಕಿನ ಮಳೆ ಹಾನಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಸಂತ್ರಸ್ತರಿಗೆ ತಕ್ಷಣಕ್ಕೆ ಮೊದಲ ಕಂತಿನಲ್ಲಿ 10 ಸಾವಿರ ಬಿಡುಗಡೆ ಮಾಡಲಾಗಿದೆ. ತಾಲೂಕು ಆಡಳಿತ ನೆರೆ ಹಾವಳಿಯ ಅಂದಾಜು ವರದಿ ಸಲ್ಲಿಸಿದ ಮೇಲೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ದೊರಕಲಿದೆ ಎಂದರು. ಪೇಟೆಚೇರಿಯ 200 ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟುಆಹಾರ ಪದಾರ್ಥ ಕಿಟ್‌ಗಳನ್ನು ಹಂಚಲಾಯಿತು. ಬಮೂಲ್ ಮಾಜಿ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ಕಾರ್ಯದರ್ಶಿ ಪ್ರೇಮ್‌ಕುಮಾರ್, ಗ್ರಾಪಂ ಸದಸ್ಯರಾದ ಪ್ರಸನ್ನ, ರಾಜೇಶ್, ಮುಖಂಡ ಜಯಕುಮಾರ್ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.