ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಆಯ್ಕೆಯಾದ ಬೆನ್ನಲ್ಲೇ ಮುಂದೆ ಎದುರಾಗಬಹುದಾದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
ಬೆಂಗಳೂರು (ಜೂ.06): ಲೋಕಸಭಾ ಚುನಾವಣೆಗೆ ಚನ್ನಪಟ್ಟಣದ ಹಾಲಿ ಶಾಸಕರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಆಯ್ಕೆಯಾದ ಬೆನ್ನಲ್ಲೇ ಮುಂದೆ ಎದುರಾಗಬಹುದಾದ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸಾಧ್ಯತೆಯಿದೆ. ಕುಮಾರಸ್ವಾಮಿ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಚನ್ನಪಟ್ಟಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಬಳಿಕ ಆರು ತಿಂಗಳ ಒಳಗಾಗಿ ಚುನಾವಣೆ ನಡೆಯಲಿದೆ. ಆದರೆ, ಈಗಿನಿಂದಲೇ ಬೆಳವಣಿಗೆಗಳು ಆರಂಭವಾಗಿವೆ. ಕ್ಷೇತ್ರ ತ್ಯಾಗ ಮಾಡುವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಉಪಚುನಾವಣೆಗೆ ಕಣಕ್ಕಿಳಿಸಬೇಕು ಎಂಬ ಕೂಗು ಜೆಡಿಎಸ್ ಪಾಳೆಯದಿಂದ ಕೇಳಿಬಂದಿದೆ. ಆದರೆ, ಈ ಬಗ್ಗೆ ಇದುವರೆಗೆ ನಿಖಿಲ್ ಆಗಲಿ ಅಥವಾ ಕುಮಾರಸ್ವಾಮಿ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಕ್ಕೆ ಇನ್ನೂ ಸಮಯವೂ ಕೂಡಿ ಬಂದಿಲ್ಲ. ಆದರೆ, ಕಳೆದ ಬಾರಿ ಕುಮಾರಸ್ವಾಮಿ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಪಿ.ಯೋಗೇಶ್ವರ್ ಅವರು ಉಪಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಅಳಿಯ ಆಗಿರುವ ಡಾ.ಸಿ.ಎನ್.ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿಸುವವರೆಗೆ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ. ಹೀಗಾಗಿ, ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಗೆ ತಾವೇ ಅಭ್ಯರ್ಥಿಯಾಗಬೇಕು ಎಂಬ ಗಟ್ಟಿ ನಿಲುವನ್ನು ಹೊಂದಿದ್ದಾರೆ. ಸದ್ಯ ಇನ್ನೂ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಬಗ್ಗೆ ಉಭಯ ಪಕ್ಷಗಳಲ್ಲಿ ಯಾವುದೇ ರೀತಿಯ ಅಧಿಕೃತ ಚರ್ಚೆ ಆರಂಭವಾಗಿಲ್ಲ. ಆದರೆ, ತೆರೆಮರೆಯಲ್ಲಿ ಚರ್ಚೆಯಂತೂ ಶುರುವಾಗಿದೆ.
ನಾಡಿದ್ದು ಮೋದಿ 3.0 ಪ್ರಮಾಣ?: ಬಿಜೆಪಿಗೆ ಟಿಡಿಪಿ, ಜೆಡಿಯು ಬೆಂಬಲ ಘೋಷಣೆ
ನಿಖಿಲ್ ಸೋಲಿಗೆ ಸೇಡು ತೀರಿಸಿಕೊಂಡ ಎಚ್‌ಡಿಕೆ: ಮಂಡ್ಯದಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ, 2019 ರಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಜೊತೆಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಕಾಂಗ್ರೆಸನ್ನು ಹೀನಾಯವಾಗಿ ಮಣಿಸುವ ಮೂಲಕ ಕೈ ನಾಯಕರಿಗೆ ಮುಖಭಂಗ ಉಂಟುಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯೊಳಗೆ 7 ಮಂದಿ ಜೆಡಿಎಸ್ ಶಾಸಕರು, 3 ಮಂದಿ ವಿಧಾನ ಪರಿಷತ್ ಸದಸ್ಯರಿದ್ದು, ಜೊತೆಗೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದ ಸುಮಲತಾ ವಿರುದ್ಧ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಚುನಾವಣೆಯಲ್ಲಿ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿತ್ತು. 6 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ ಎದುರು ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ.