ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ರಿಲೀಸ್ ಆದ ಬೆನ್ನಲ್ಲೇ ಕೆಲ ಸಚಿವರು ತಮ್ಮ ವಿರುದ್ಧದ ಸುದ್ದಿ ಬಿತ್ತರಿಸದಂತೆ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಕೋರ್ಟ್ ಅವರಿಗೆ ಬಿಗ್ ರಿಲೀಫ್ ಕೊಟ್ಟಿದೆ.
ಮೈಸೂರು, (ಮಾ.07): ತಮ್ಮ ಆಪ್ತ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣ ಹೊರಬರುತ್ತಿದ್ದಂತೆ, ಆರು ಸಚಿವರು ತಮ್ಮ ವಿರುದ್ಧ ಯಾವುದೇ ರೀತಿಯ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದವರಿಗೆ ಜಯ ಸಿಕ್ಕಿದೆ.
ಹೌದು....ತಮ್ಮ ವಿರುದ್ಧ ಮಾನಹಾನಿ ಸುದ್ದಿ ಬಿತ್ತರಿಸದಂತೆ ಕೋರ್ಟ್ ಮೆಟ್ಟಿಲೇರಿದ್ದ 6 ಸಚಿವರ ಅರ್ಜಿಯನ್ನು ಮಾನ್ಯವಾಗಿದ್ದು, ಮಾರ್ಚ್ 30ರವರೆಗೆ ಮಾನಹಾನಿ ವರದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶಿಸಿದೆ.
ರಾಸಲೀಲೆ CD ಸ್ಫೋಟ: ಕೋರ್ಟ್ ಮೆಟ್ಟಿಲೇರಿದ 6 ಸಚಿವರು, ಅಚ್ಚರಿ ಮೂಡಿಸಿದ ನಡೆ
ಸಚಿವರಾದ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಎಸ್. ಟಿ ಸೋಮಶೇಖರ್, ನಾರಾಯಣಗೌಡ, ಡಾ.ಕೆ.ಸುಧಾಕರ್ ಹಾಗೂ ಭೈರತಿ ಬಸವರಾಜ್ ತಮ್ಮ ವಿರುದ್ಧದ ಸುದ್ದಿಗಳ ಪ್ರಸಾರವನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡದಂತೆ ತಡೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನ ಸಿಸಿಹೆಚ್-20ರ ನ್ಯಾಯಾಧೀಶ ಬಿ.ಎಸ್.ವಿಜಯಕುಮಾರ್ ಅವರ ನ್ಯಾಯಪೀಠವು, ಅರ್ಜಿಯನ್ನು ಮಾನ್ಯಮಾಡಿದೆ. ಅಲ್ಲದೇ ರಾಜ್ಯದ ಎಲ್ಲಾ ಮಾಧ್ಯಮಗಳಿಗೆ 6 ಸಚಿವರ ಬಗ್ಗೆ ಯಾವುದೇ ಮಾನಹಾರಿ ವರದಿಯನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿ, ತುರ್ತು ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ ಅರ್ಜಿಯ ವಿಚಾರಣೆ ಮಾರ್ಚ್ 30ಕ್ಕೆ ಮುಂದೂಡಿಕೆ ಮಾಡಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆಯ ನಂತ್ರ, ಇನ್ನೂ ಹಲವು ಸಚಿವರ ಸಿಡಿ ಬಿಡುಗಡೆಯಾಗಲಿದೆ ಎಂದೇ ಹೇಳಲಾಗುತ್ತಿತ್ತು. ಇದೇ ಸಂದರ್ಭದಲ್ಲಿ ತಮ್ಮ ತೇಜೋವಧೆಗಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂಬುದಾಗಿ ಆರೋಪಿಸಿದಂತ ಆರು ಸಚಿವರು, ತಮ್ಮ ವಿರುದ್ಧದ ಯಾವುದೇ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗದಂತೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಏಕೆ ಕೋರ್ಟ್‌ಗೆ ಹೋಗಿದ್ದಾರೆ ಅಂತೆಲ್ಲಾ ಹಲವು ಪ್ರಶ್ನೆಗಳು ಉದ್ಭವಿಸಿವೆ.